ತಟ್ಟೆ, ಲೋಟ ತಯಾರಿಗೆ ಹುಲ್ಲು, ನಾರು ಸೈ
ದೇಶದ ರಾಜಧಾನಿ ಡೆಲ್ಲಿಯಲ್ಲಿ ಎಲ್ಲರಿಗೂ ಉಸಿರುಗಟ್ಟುತ್ತಿದೆ. ಅಲ್ಲಿ ಎಲ್ಲೆಡೆ ಹೊಗೆ ತುಂಬಿದೆ. ಬಹುಪಾಲು ಜನರು ಮೂಗಿಗೆ ಕವಚ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈಗ ಐದಾರು ವರುಷಗಳಿಂದ, ಇಂತಹ ಅಸಹನೀಯ ಪರಿಸ್ಥಿತಿ ಅಕ್ಟೋಬರ್ – ನವಂಬರ್ ತಿಂಗಳುಗಳಲ್ಲಿ ಮರುಕಳಿಸುತ್ತಿದೆ.
ಇದಕ್ಕೆ ಮುಖ್ಯ ಕಾರಣ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ, ಭತ್ತದ ತೆನೆ ಕೊಯ್ಲಿನ ನಂತರ ಉಳಿಯುವ ಹುಲ್ಲಿಗೆ ಬೆಂಕಿ ಕೊಟ್ಟು ಸುಡುತ್ತಿರುವುದು. ಕೆಲಸದಾಳುಗಳಿಂದ ಅಥವಾ ಯಂತ್ರಗಳಿಂದ ಆ ಹುಲ್ಲನ್ನು ಕೊಯ್ಯುವ ವೆಚ್ಚ ಭರಿಸಲು ತಯಾರಿಲ್ಲದ ರೈತರು ಅದನ್ನು ಸುಟ್ಟು ಹಾಕುತ್ತಾರೆ. ರೈತರ ಈ ಅಭ್ಯಾಸವನ್ನು ನಿಲ್ಲಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ; ಅವುಗಳಿಂದ ಹೆಚ್ಚೇನೂ ಪ್ರಯೋಜನವಾಗಿಲ್ಲ. ಸರಕಾರಗಳ ವಿನಂತಿ ಮತ್ತು ದಂಡಕ್ಕೆ ಬೆಲೆಯಿಲ್ಲದಂತಾಗಿದೆ. ಹೊಲದ ಹುಲ್ಲು ಕತ್ತರಿಸುವ ಯಂತ್ರಗಳಿಗೆ ಸಬ್ಸಿಡಿ ನೀಡುವ ಕೇಂದ್ರ ಸರಕಾರದ ಯೋಜನೆಯೂ ನೆಲ ಕಚ್ಚಿದೆ. ಹಾಗಾಗಿ, ಡೆಲ್ಲಿ ಮತ್ತು ಸುತ್ತಲಿನ ಉತ್ತರ ಭಾರತದ ವಿಶಾಲ ವಲಯದಲ್ಲಿ ವಿಷಭರಿತ ಹೊಗೆಮಂಜು ಕವಿದಿದೆ.
ಇಂತಹ ಪರಿಸ್ಥಿತಿಯಲ್ಲಿ, ಹುಲ್ಲಿನಿಂದ ಬಹು-ಉಪಯೋಗಿ ತಟ್ಟೆ-ಲೋಟ ತಯಾರಿಸುವ ಮೂರು ಆವಿಷ್ಕಾರಗಳು ಆಶಾದಾಯಕ ಬೆಳವಣಿಗೆ.
ಐಐಟಿ, ಹೊಸದಿಲ್ಲಿಯ ಮೂವರು ಪದವೀಧರರು ಒಂದು ಯಂತ್ರ ರೂಪಿಸಿದ್ದಾರೆ. ಇದು, ರೈತರು ಹುಲ್ಲು ಕತ್ತರಿಸಲು ಪ್ರೇರಣೆ ಆದೀತು. ಅಂಕುರ್ ಕುಮಾರ್, ಕನಿಕ ಪ್ರಜಾತತ್ ಮತ್ತು ಪ್ರಚೀರ್ ದತ್ತ – ಇವರು ರೂಪಿಸಿದ ಆ ಯಂತ್ರ ಭತ್ತದ ಹುಲ್ಲನ್ನು ನಾರಿನ ವಸ್ತುವಾಗಿ ಪರಿವರ್ತಿಸುತ್ತದೆ. ತಟ್ಟೆ, ಲೋಟ ಉತ್ಪಾದಿಸುವ ಘಟಕಗಳಿಗೆ ಈ ನಾರಿನ ವಸ್ತು ಉತ್ತಮ ಕಚ್ಚಾಮಾಲು. ಭತ್ತದ ಹುಲ್ಲಿನಲ್ಲಿ ಸಿಲಿಕಾ ಅಂಶ ಅಧಿಕ; ಇದರಿಂದಾಗಿ ಭತ್ತದ ಹುಲ್ಲು ಕೊಳೆಯುವುದು ನಿಧಾನ.
“ನಮ್ಮ ಯಂತ್ರ ಪರಿಸರಸ್ನೇಹಿ ರಾಸಾಯನಿಕ ಬಳಸಿ, ಭತ್ತದ ಹುಲ್ಲಿನಿಂದ ಸಿಲಿಕಾವನ್ನು ಬೇರ್ಪಡಿಸುತ್ತದೆ; ಆಗ ಭತ್ತದ ಹುಲ್ಲು ಮೆದುವಾಗಿ, ಬೇರೆ ಬಳಕೆಗೆ ಸೂಕ್ತವಾಗುತ್ತದೆ” ಎನ್ನುತ್ತಾರೆ ಅಂಕುರ್ ಕುಮಾರ್. ಆ ರಾಸಾಯನಿಕದ ವಿವರ ಅವರು ನೀಡುವುದಿಲ್ಲ; ಯಾಕೆಂದರೆ, ಅವರ ಘಟಕ ಕ್ರಿಯಾ ಲ್ಯಾಬ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.
ಆ ಯಂತ್ರವು ಒಂದು ಟನ್ ಭತ್ತದ ಹುಲ್ಲನ್ನು ೫೦೦ ಕಿಗ್ರಾ ಪಲ್ಪ್ ಆಗಿ ಪರಿವರ್ತಿಸುತ್ತದೆ. ಪಲ್ಪನ್ನು ಕಿಲೋಕ್ಕೆ ರೂ.೪೫ ದರದಲ್ಲಿ ಮಾರಬಹುದು. ಒಂದು ಎಕ್ರೆಯ ಭತ್ತದ ಹುಲ್ಲಿನಿಂದ ತಯಾರಿಸಿದ ಪಲ್ಪನ್ನು ಮಾರಿ ರೂ.೫,೦೦೦ ಆದಾಯ ಗಳಿಸಲು ಸಾಧ್ಯ. ಈಗ ವಿನಾಶಕಾರಿ ಪ್ಲಾಸ್ಟಿಕ್ ಬಳಕೆಗೆ ಸರಕಾರದ ನಿರ್ಬಂಧಗಳು ಮತ್ತು ನಿಷೇಧಗಳಿಂದಾಗಿ, ಪರಿಸರಸ್ನೇಹಿ ತಟ್ಟೆ, ಲೋಟ ಹಾಗೂ ಪ್ಯಾಕಿಂಗ್ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ, ಹುಲ್ಲಿನ ಪಲ್ಪನ್ನು ಕಚ್ಚಾಮಾಲಾಗಿ ಬಳಸಿ, ಅವನ್ನು ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಸಾಧ್ಯವೆಂದು ಈ ಮೂವರು ಅನ್ವೇಷಕರು ಮಾಹಿತಿ ನೀಡುತ್ತಾರೆ.
ಭಾರತದಲ್ಲಿ ಪರಿಸರಸ್ನೇಹಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಗಮನಿಸಿದವರಲ್ಲಿ ಒಬ್ಬಾಕೆ, ಫಾರ್ಮಕಾಲಜಿ ಪದವೀಧರೆಯಾದ ರೇಹಾ ಸಿಂಘಾಲ್. ಫೈಜರ್ ಎಂಬ ಔಷಧಿ ಕಂಪೆನಿಯ ಮಾರಾಟ ಅಧಿಕಾರಿಯಾಗಿ ಬ್ರಿಟನಿನಲ್ಲಿ ಕೆಲಸ ಮಾಡುತ್ತಿದ್ದರು ಸಿಂಘಾಲ್.
ಆಕೆ ದೆಹಲಿಯಲ್ಲಿ ನೆಲೆಸಲು ಬಂದದ್ದು ಹತ್ತು ವರುಷಗಳ ಮುಂಚೆ. ಭಾರತದಲ್ಲಿ ಕಸ ನಿರ್ವಹಣೆಗೆ ಪ್ರಾಮುಖ್ಯತೆ ಇಲ್ಲವೆಂದು ಗಮನಿಸಿದ ಅವರು ೨೦೦೯ರಲ್ಲಿ ಇಕೋವೇರ್ ಎಂಬ ಘಟಕ ಸ್ಥಾಪಿಸಿದರು. ಇದು ಬಳಸಿ ಎಸೆಯುವ ತಟ್ಟೆ, ಲೋಟ ಇತ್ಯಾದಿ ಉತ್ಪಾದಿಸುತ್ತಿದೆ. “ಪ್ಲಾಸ್ಟಿಕ್ ಅಗ್ಗದ ವಸ್ತು. ಆದ್ದರಿಂದ ಬಳಸಿ ಎಸೆಯುವ ಕಟ್ಲೆರಿ ತಯಾರಿಕೆಗೆ ಪ್ಲಾಸ್ಟಿಕನ್ನೇ ಜಾಸ್ತಿ ಬಳಸುತ್ತಾರೆ. ಪ್ಲಾಸ್ಟಿಕಿನ ಏಕಸ್ವಾಮ್ಯ ಮುರಿಯಬೇಕು ಮತ್ತು ಜನರ ಧೋರಣೆಗೆ ಸವಾಲು ಹಾಕಬೇಕು ಎಂಬುದು ನನ್ನ ಉದ್ದೇಶವಾಗಿತ್ತು” ಎಂದು ವಿವರಿಸುತ್ತಾರೆ ರೇಹಾ ಸಿಂಘಾಲ್. ಈಗ ದೇಶದ ಉದ್ದಗಲದಲ್ಲಿ ೨೭ ವಿತರಕರನ್ನು ಹೊಂದಿರುವ ಇಕೋವೇರಿನ ವಾರ್ಷಿಕ ವಹಿವಾಟು ರೂಪಾಯಿ ಹತ್ತು ಕೋಟಿ.
ಮುಂಬೈಯ ಪಪ್ಪೊಕೊಂ ಗ್ರೀನ್-ವೇರ್ ಬಳಸಿ ಎಸೆಯುವ ತಟ್ಟೆ, ಲೋಟ ಇತ್ಯಾದಿ ಉತ್ಪಾದಿಸುವ ಇನ್ನೊಂದು ಕಂಪೆನಿ. ಅದು ಕಚ್ಚಾಮಾಲಾಗಿ ಬಳಸುವುದು ಕಬ್ಬಿನ ಉಳಿಕೆ (ಬ್ಯಾಗಸ್), ಬಿದಿರಿನ ನಾರು, ಗೋಧಿಹುಲ್ಲು ಇತ್ಯಾದಿ ಜೈವಿಕ ಕಸಗಳನ್ನು. “ನಾವು ಭಾರತದ ಬೇರೆಬೇರೆ ಸ್ಥಳಗಳಿಂದ ಮತ್ತು ಥೈಲೆಂಡಿನಿಂದ ಕಚ್ಚಾಮಾಲನ್ನು ತರಿಸುತ್ತೇವೆ” ಎನ್ನುತ್ತಾರೆ ಕಂಪೆನಿಯ ಸ್ಥಾಪಕರಾದ ಅಭಿಷೇಕ್ ಅಗರ್ವಾಲ್.
“ನಮ್ಮ ದೇಶದಲ್ಲಿ ಬರ್ಗರ್ ಕಿಂಗ್, ಸ್ಟಾರ್-ಬಕ್ಸ್, ಮೆಕ್-ಡೊನಾಲ್ಡ್ ರೆಸ್ಟೊರೆಂಟುಗಳು ಮತ್ತು ಫೈವ್-ಸ್ಟಾರ್ ಹೋಟೆಲುಗಳಾದ ಮರ್ರಿಯೊಟ್ಟ್ ಹಾಗೂ ಹಿಲ್ಟನ್, ನಮ್ಮ ಉತ್ಪನ್ನಗಳನ್ನು ಯಾವಾಗಲೂ ಖರೀದಿಸುತ್ತಾರೆ. ದುಬೈ, ಪೋರ್ಚುಗಲ್, ಶ್ರೀಲಂಕಾ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳಿಗೂ ನಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ” ಎಂದು ಅವರು ಮಾಹಿತಿ ನೀಡುತ್ತಾರೆ. ಏಳು ವರುಷಗಳಲ್ಲೇ ಅವರ ಕಂಪೆನಿಯ ವಹಿವಾಟು ಹತ್ತು ಪಟ್ಟು ಹೆಚ್ಚಾಗಿರುವುದು ಅದರ ಬೆಳವಣಿಗೆಯ ವೇಗದ ಸೂಚಕ.
ಪರಿಸರಸ್ನೇಹಿ ಕಟ್ಲೆರಿಯನ್ನು ಮುಂದಿನ ಹಂತಕ್ಕೆ ಏರಿಸಿದ, ಅಂದರೆ ಸೇವನಾಯೋಗ್ಯ ಕಟ್ಲೆರಿಯಾಗಿ ಮಾಡಿದ ಹೆಗ್ಗಳಿಕೆ ಹೈದರಾಬಾದಿನ ಬಾಕಿಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯದ್ದು. “ನಾವು ಜೋಳ, ಅಕ್ಕಿ ಮತ್ತು ಗೋಧಿಹುಡಿಗಳ ಮಿಶ್ರಣದಿಂದ ತಯಾರಿಸಿ, ಬಿಸಿ ನೀರಿನಲ್ಲಿ ರೂಪಿಸಿ, ಅಚ್ಚುಗಳಲ್ಲಿ ಬೇಯಿಸಿ ನಮ್ಮ “ತಿನ್ನಬಹುದಾದ ಕಟ್ಲೆರಿ”ಯನ್ನು ಸಿದ್ಧಗೊಳಿಸುತ್ತೇವೆ” ಎಂದು ವಿವರಿಸುತ್ತಾರೆ ನಾರಾಯಣ ಪೀಸಪಟಿ. ಇಕ್ರಿಸಾಟ್ (ಇಂಟರ್-ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್-ಸ್ಟಿಟ್ಯೂತ್ ಫಾರ್ ಸೆಮಿ-ಏರಿಡ್ ಟ್ರೊಪಿಕ್ಸ್) ಸಂಸ್ಥೆಯ ಮಾಜಿ ಸಂಶೋಧಕರಾದ ಅವರು ಈ ಕಂಪೆನಿಯನ್ನು ಸ್ಥಾಪಿಸಿದ್ದು ೨೦೧೦ರಲ್ಲಿ. ಈ ಕಂಪೆನಿ ತಯಾರಿಸುವ ಮೂರು ವಿಧದ ಚಮಚಗಳಲ್ಲಿ ಆಹಾರ ಸೇವಿಸಿದ ನಂತರ ಆ ಚಮಚಗಳನ್ನೇ ತಿನ್ನಬಹುದು!
ಪರಿಸರಸ್ನೇಹಿ ತಟ್ಟೆ, ಲೋಟ, ಚಮಚ ಇವೆಲ್ಲ ಒಳ್ಳೆಯ ಐಡಿಯಾ. ಆದರೆ, ಅವುಗಳ ದುಬಾರಿ ಬೆಲೆಯಿಂದಾಗಿ ಅವು ಜನಪ್ರಿಯವಾಗುತ್ತಿಲ್ಲ ಅನಿಸುತ್ತದೆ. ಉದಾಹರಣೆಗೆ, ಪ್ಲಾಸ್ಟಿಕ್ ಲೋಟದ ಬೆಲೆ ಕೇವಲ ಎರಡು ರೂಪಾಯಿ ಆಗಿದ್ದರೆ ಪರಿಸರಸ್ನೇಹಿ ಲೋಟದ ಬೆಲೆ ೧೦ ರೂಪಾಯಿ!
ಅದೇನಿದ್ದರೂ ಬದಲಾವಣೆಯ ಗಾಳಿ ಬೀಸುತ್ತಿದೆ. ಜೂನ್ ೨೦೧೮ರಲ್ಲಿ ಮಹಾರಾಷ್ಟ್ರ ಸರಕಾರ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜ್ಯಾರಿಗೆ ತಂದಾಗಿನಿಂದ ಹೆಚ್ಚೆಚ್ಚು ಜನರು ಪರಿಸರಸ್ನೇಹಿ ಕಟ್ಲೆರಿಗಳನ್ನು ಬಳಸಲು ಶುರು ಮಾಡಿದ್ದಾರೆ. ಹಾಗೆಯೇ, ಮನೆಬಾಗಿಲಿಗೆ ಆಹಾರ ತಲಪಿಸುವ ಸ್ವಿಗ್ಗಿ ಮತ್ತು ಜೊಮಾಟೊ ಕಂಪೆನಿಗಳು ತಮ್ಮ ಗ್ರಾಹಕರಿಗೆ ಪ್ಲಾಸ್ಟಿಕ್ ಕಟ್ಲೆರಿ ನಿರಾಕರಿಸುವ ಅವಕಾಶ ಒದಗಿಸಿವೆ. ಭಾರತದ ಅತಿ ದೊಡ್ಡ ಆಹಾರ ಸರಬರಾಜು ಕಂಪೆನಿಯಾದ ಐಆರ್ಸಿಟಿಸಿ (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಮ್ ಕಾರ್ಪೊರೇಷನ್) ಎಲ್ಲ ಪ್ರೀಮಿಯಮ್ ರೈಲುಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್ ಮತ್ತು ಕಪ್ಗಳ ಬಳಕೆ ನಿಲ್ಲಿಸಲಿದೆ; ಬದಲಾಗಿ ಪರಿಸರಸ್ನೇಹಿ ವಸ್ತುಗಳಿಂದ ತಯಾರಿಸಿದವನ್ನು ಒದಗಿಸಲಿದೆ. ಇವೆಲ್ಲ ಪರಿಸರನಾಶ ಕಡಿಮೆ ಮಾಡಿ, ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಧನಾತ್ಮಕ ಹೆಜ್ಜೆಗಳು.
ಫೋಟೋ ಕೃಪೆ: ಇಕೋವೇರ್ ವೆಬ್-ಸೈಟ್