ನೆನಪಿನಂಗಳದ ಮಧುರ ಪುಟಗಳಿಂದ ಎಸ್. ಜೆ. ಸಿ. ಇ.

ನೆನಪಿನಂಗಳದ ಮಧುರ ಪುಟಗಳಿಂದ ಎಸ್. ಜೆ. ಸಿ. ಇ.

ಅದು 2011 ರ ಸಮಯ, ಆಗ ತಾನೇ ಡಿಪ್ಲೊಮಾ ಮುಗಿಸಿ ಮುಗಿಲೆತ್ತರದ ಬಯಕೆಗಳ ಗೂಡಾಗಿದ್ದ ಮನಸ್ಸು,
ಬಯಸಿದ್ದು ಇಂಜಿನಿಯರ್ ಆಗಬೇಕೆಂದು. ಕಾಲೇಜು ದಿನಗಳ ತುಂಟತನಗಳ ನಡುವೆ, ಭವಿಷ್ಯದ ಕನಸಿನ
ಕೂಸಿಗೆ ಕೂವಾಲಿ ಎಣೆಯುತ್ತಾ, ಮನಸ್ಸು ಚಿಟ್ಟೆಯಂತೆ ಹರಿದಾಡುತ್ತಿದ್ದ ವಯಸ್ಸು.

Sre Jayachamarajendra College of Engineering(SJCE),Mysoru

ದಾರಿಗಳೇ ತೋಚದೆ ಒಳಗೊಳಗೇ ಕೊಸರುತಿದ್ದ ಮನಸಿಗೆ, ಆಕಸ್ಮಿಕವಾಗಿ ಒಲಿದದ್ದು
ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು(ಎಸ್. ಜೆ. ಸಿ. ಇ.).
 
ನನ್ನೂರಿನಿಂದ  ಸುಮಾರು 150 ಕಿ ಮೀ  ದೂರದ ಅರಮನೆ ನಗರಿ ಮೈಸೂರಿನ,
ಹಚ್ಚ ಹಸಿರಿನ ಮಡಿಲಲ್ಲಿರುವ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು,
ನಿರ್ಮಲ ವಾತಾವರಣದ ಮದ್ಯೆ, ಶೈಕ್ಷಣಕವಾಗಿ ತನ್ನದೇ ಶೈಲಿಯಲ್ಲಿ ಛಾಪು ಮೂಡಿಸುತ್ತಿರುವ
ಕಾಲೇಜುಗಳಲ್ಲಿ ಮುಂದೆ ನಿಲ್ಲುತ್ತದೆ.

 
ಸುತ್ತಲೂ ಹಸಿರು ಚೆಲುವಿನ ಸಿಂಗಾರದ ನಡುವೆ, ಮದುವಣಗಿತ್ತಿಯಂತೆ ಅಲಂಕೃತಗೊಂಡು
ಹೂರಾಶಿಯ ಸೊಬಗನ್ನು ಆವರಿಸಿ, ನೆರಳಿನ ಮನೆಗಳಂತೆ ಕಂಗೊಳಿಸುವ ಚಿಕ್ಕ ಚಿಕ್ಕ ರಸ್ತೆಗಳು.
ರಸ್ತೆಯ ಅಂಚಿನಲ್ಲಿ ಹಸಿರು ಹಾಸಿಗೆಯ ಮೇಲೆ, ಮನಸೋತು ಕುಳಿತಂತೆ ಕಂಗೊಳಿಸುವ ಏಕಾಂತದ
ಆಸನಗಳು. ಹಸಿ ಬಿಸಿಯ ಮನಸ್ಸಿನ ಚಂಚಲತೆಗೆ ಸಿಲುಕಿ, ಸುರುಳಿ ಸುತ್ತುವ ಹದಿ ಹರೆಯದ ಜೀವಗಳು.
ಚೆಲುವು ತುಂಬಿದ ಹುಡುಗಿಯರ ಸೊಬಗಿಗೆ ಬೆರಗಾಗಿ, ಮನಸೂರೆಗೊಳ್ಳುವ ಪ್ರೇಮಾಂಕುರದ ಭಾವಗಳು.
ಇದೆಲ್ಲದರ ನಡುವೆ ಮಾನಸಿಕ ಮಡಿವಂತಿಕೆಯ, ನಿಲುವಿನ ಹಿಂದಿನ ತೀರ ಕಾಣದ ದೂರದ ಕನಸುಗಳು.
 
ಆ ಸುಂದರ ವಾತಾವರಣದ ಮಡಿಲಲ್ಲಿ, ಮನಸ್ಸು ಮಗುವಾಗಿ, ಮುಗಿಲೇರುವ ಚಿಟ್ಟೆಯಂತಾಗಿ,
ಮನಸೇ ಒಪ್ಪಿಕೊಳ್ಳಲಾಗದಷ್ಟು ನಿಜವಾದದ್ದು ಸಂಶಯವೇ ಸರಿ.

 
ಒಂದೆಡೆ ಕಾಲೇಜಿನ ರಮ್ಯತೆಯ ನಡುವಿನ ಬಿಡುವಿಲ್ಲದ ಓಡಾಟ, ಓಡಾಟದ ನಡುವೆ ಕಣ್ಣಿಗೆ
ಖುಷಿ ಕೊಡುತ್ತಿದ್ದ ಚೆಲುವೆಯರ ಸೌಂದರ್ಯದ ಸಿಹಿಯೂಟ, ಪ್ರೇಮ ನಿವೇದನೆಗೆ ಅನುದಿನವೂ
ಆತೊರೆಯುತ್ತಿದ್ದ ಯುವ ಮನಸ್ಸುಗಳ ಅಲೆದಾಟ, ಸ್ನೇಹಿತರ ಜೊತೆ ಕಳೆದ ಮರೆಯಲಾಗದ
ಅನುಭವದ ಸಿಹಿಪಾಠ. ಇನ್ನೊಂದೆಡೆ ಮೈಸೂರು ನಗರದ ಪ್ರಶಾಂತ ವಾತಾವರಣ, ಎಷ್ಟು
ನೋಡಿದರೂ ಮತ್ತೆ ಮತ್ತೆ ನೋಡಬೇಕೇನಿಸುತ್ತಿದ್ದ ಅರಮನೆಯ ಚೆಲುವು, ಕಂಗಳ ಅಂಚಿನಲ್ಲಿ
ಕನ್ನಡಿಯಾಗಿ ಉಳಿದ ಬೆಟ್ಟದ ತುದಿಯಿಂದ ಕಂಗೊಳಿಸುತ್ತಿದ್ದ ಮನಮೋಹಕ ಸೊಬಗು
ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತಿತ್ತು.
 
ಹರೆಯದ ವಯಸಿನ  ತಿಳಿ ಭಾವನೆಗಳ ಜೊತೆಗೆ, ಆಸೆಗಳ ಜೇನುಗೂಡಾಗಿದ್ದ ಮನಸ್ಸು, ಏಕಾಂತದ
ಬಿಗುಡನ್ನ ಬಿಟ್ಟು ಕನಸಿನೂರಿನ ಕವಿತೆಯಾಗಿ, ಸುಂದರ ತಾಣದ ತೆರೆ ಮರೆಯ ಚೆಲುವನ್ನು
ಸವಿದು,ಕಾಲ ಕಲಿಸಿದ ಸಿಹಿ ಪಾಠಗಳನ್ನು ನೆನಪುಗಳ ಬುತ್ತಿಯಲಿ ಇನ್ನೂ ಹಸಿರಾಗಿಯೇ ಉಳಿಸಿದೆ.
 
ಈ ಎಲ್ಲಾ ಸಿಹಿನೆನಪುಗಳ ಹಬ್ಬದೂಟ ದ ನಡುವೆ,  ಸಂತೋಷದ ಕ್ಷಣಗಳೇ ಕಣ್ಣಂಚಲ್ಲಿ
ಉಳಿದು,ನೆನಪಿನ ಮಧುರ ಪುಟಗಳನ್ನು ತಿರುವುಹಾಕಿ ನೋಡಿದಾಗ ಸದಾ ನೆನಪಾಗುವುದು
ನನ್ನ ಹೆಮ್ಮೆಯ "ಎಸ್. ಜೆ. ಸಿ. ಇ."
 
-ವೆಂಕಟೇಶ ಗೋವಿಂದ್
 
 
 
 

Rating
No votes yet