ಕಲೆ ಕಲಾವಿದ ಮತ್ತು ಲೆಕ್ಕಾಚಾರ....

ಕಲೆ ಕಲಾವಿದ ಮತ್ತು ಲೆಕ್ಕಾಚಾರ....

ಕಲಾವಿದ ಎನ್ನುವ ಪದಕ್ಕೆ ಉಚಿತ ಸೇವೆ ಎನ್ನುವುದೇ ಸಮನಾರ್ಥಕ ಪದ ಎಂದು ತಿಳಿದುಕೊಂಡಂತಿದೆ ಕೆಲವರು.ಮೊನ್ನೆಯೇಕೋ ಕಿಶೋರ್ ಕುಮಾರ್ ಕುರಿತು ಗೆಳೆಯರೊಬ್ಬರು ಮಾತನಾಡುತ್ತಿದ್ದರು.ಆತನೊಬ್ಬ ಅದ್ಭುತ ಗಾಯಕ ಎನ್ನುವುದು ಎಲ್ಲರೂ ಒಪ್ಪುತ್ತಿದ್ದರಾದರೂ ಆತ ಭಯಂಕರ ಲೆಕ್ಕಾಚಾರದ ಮನುಷ್ಯ,ಮನಿ ಮೈಂಡೆಡ್ ಎನ್ನುವುದು ಅವರ ಅಭಿಪ್ರಾಯ.ತಪ್ಪೇನು ಎಂದರೆ ನನ್ನ ಮುಖವನ್ನೇ ದುರುದುರು ನೋಡಿದರು.ಹಣಕಾಸಿನ ವಿಷಯದಲ್ಲಿ ಕಿಶೋರ್ ಕುಮಾರರವರ ಕಟ್ಟುನಿಟ್ಟು ಗೊತ್ತಿಲ್ಲದ್ದೇನಲ್ಲ.ಆತ ಹಾಡುವ ಮುನ್ನ ದುಡ್ಡು ಬಂತಾ ಇಲ್ಲವಾ ಎಂಬುದು ಖಚಿತಪಡಿಸಿಕೊಂಡೇ ಹಾಡು ಶುರುಮಾಡುತ್ತಿದ್ದರು ಎಂಬ ಮಾತೊಂದಿತ್ತು.ಕೆಲವೊಮ್ಮೆ ಹಣ ಬರುವುದು ತಡವಾದಾಗ ಕೊನೆಯ ಕ್ಷಣದವರೆಗೆ ಕಾದು ಅವರ ಮ್ಯಾನೇಜರ್ ಕೈಗೆ ದುಡ್ಡು ಬಂತು ಎಂದು ಖಚಿತಪಡಿಸಿದ ನಂತರವಷ್ಟೇ ಹಾಡು ಹಾಡುತ್ತಿದ್ದರು ಎನ್ನುವ ಸುದ್ದಿಯೂ ಇತ್ತು.ಹಾಗೆ ನೋಡಿದರೆ ಎಸ್ಪಿಬಿಯ ಕುರಿತಾಗಿಯೂ ಇಂಥಹ ಮಾತುಗಳಿವೆ.ಈ ದಂತಕತೆಗಳ ಕುರಿತಾದ ಈ ಕತೆಗಳು ಸತ್ಯ ಹೌದೋ ಅಲ್ಲವೋ ಎನ್ನುವುದು ನಮಗೆ ಖಚಿತವಾಗಿ ಗೊತ್ತಿಲ್ಲ.ಆದರೆ ಅವರುಗಳು ಹಾಗೆ ಮಾಡಿದ್ದರೂ ತಪ್ಪೇನಿಲ್ಲ ಎನ್ನುವುದು ನನ್ನ ಅಭಿಪ್ರಾಯ.

’ವಿಚಿತ್ರ ನೋಡಿ,ನಾನು ದುಡ್ಡು ಕೇಳಿದಾಕ್ಷಣ ಆಯೋಜಕರಿಗೆ ಕಸಿವಿಸಿಯಾಗುತ್ತದೆ.ಭಯಂಕರ ಧನಪಿಶಾಚಿ ಎನ್ನುತ್ತಾರೆ ಜನ ನನ್ನನ್ನ.ಇವರ ತರ್ಕವೇ ನನಗೆ ಅರ್ಥವಾಗುವುದಿಲ್ಲ.ನನ್ನ ಕಾರ್ಯಕ್ರಮವನ್ನು ಆಯೋಜಿಸಿ ಅದರಿಂದ ಲಾಭ ಪಡೆದು ಇವರುಗಳು ಕಾರುಗಳಲ್ಲಿ ಓಡಾಡಬಹುದು.ಆದರೆ ನಾನು ಮಾತ್ರ ಕಲೆ ಎಂದರೆ ಸೇವೆ ಎನ್ನುವ ಮನೋಭಾವದಲ್ಲಿಯೇ ಇರಬೇಕು ಎನ್ನುವುದು ಇವರ ಅರ್ಥವಾ..? ನಾಳೆ ನನ್ನ ಆರೋಗ್ಯ ಹದತಪ್ಪಿದರೆ ನಾನು ಮಾಡಿದ ಕಲಾ ಸೇವೆಯನ್ನು ಪರಿಗಣಿಸಿ ವೈದ್ಯರು ನನಗೆ ಉಚಿತ ಸೇವೆಯೊದಗಿಸುತ್ತಾರಾ..’?ಎನ್ನುತ್ತ ವ್ಯಂಗ್ಯವಾಗಿ ವೇದಿಕೆಯೊಂದರಲ್ಲೇ ಪ್ರಸಿದ್ಧ ಮರಾಠಿ ಗಾಯಕ ಮಹೇಶ್ ಕಾಳೆ ನುಡಿದಿದ್ದರಂತೆ.ಮಹೇಶ್ ಕಾಳೆಯವರ ಮಾತಿಗೆ ನನ್ನದೂ ಸಹಮತಿಯಿದೆ.ಇಷ್ಟಕ್ಕೂ ಕಲಾವಿದನೊಬ್ಬ ಹಣವನ್ನು ಕೇಳಿದರೆ ಅದೊ೦ದು ದೊಡ್ಡ ಅಪರಾಧದಂತಾಡುವುದು ಏಕೋ ಅರ್ಥವಾಗದು.ಪೂರ್ವನಿಯೋಜಿತ ಚ್ಯಾರಿಟಿಯ ಕಾರ್ಯಕ್ರಮವಲ್ಲದಿದ್ದರೇ ಕಲಾವಿದ ಕೇಳುವ ಮೊದಲೇ ಸಂಭಾವನೆಯನ್ನೊದಗಿಸುವುದು ಆಯೋಜಕರ ಕರ್ತವ್ಯವಲ್ಲವಾ..? ಕಲಾವಿದನ ಹೆಸರಲ್ಲಿ ಕಲಾಭಿಮಾನಿಗಳಿಂದ ದುಡ್ಡು ಬಸಿದುಕೊಂಡು ತಾವು ಸಾಕಷ್ಟು ಸಂಪಾದಿಸಿಕೊಂಡುಬಿಡುವ ಆಯೋಜಕರಿಗೆ ಕಲಾವಿದನ ಸಂಭಾವನೆಯ ಕುರಿತು ಅಸಮಾಧಾನವೇಕೋ..?

ಆಯೋಜಕರು ಬಿಡಿ,ನಮ್ಮ ನಡುವೆಯೇ ಅನೇಕರು ಕಲಾವಿದ ಬಾಯಿಬಿಟ್ಟು ದುಡ್ಡು ಕೇಳುವುದೇ ದೊಡ್ಡ ಪ್ರಮಾದವೇನೋ ಎ೦ಬ೦ತೆ ವರ್ತಿಸಿಬಿಡುವುದು ನಿಜಕ್ಕೂ ಅರ್ಥವಾಗದ ಸಂಗತಿ ನನಗೆ.ಒಬ್ಬ ಪೂರ್ಣ ಪ್ರಮಾಣದ,ವೃತ್ತಿಪರ ಕಲಾವಿದನಿಗೆ ಅವನ ಕಲೆಯೇ ಜೀವನಾಧಾರ.ಅವನು ತನ್ನ ಸ್ವಂತ ಪ್ರತಿಭೆಯನ್ನು ನಂಬಿ ಬದುಕು ಕಟ್ಟಿಕೊಳ್ಳಲು ಹೊರಟವನು. ಪೂರ್ಣ ಪ್ರಮಾಣದ ನಟನಟಿಯರು,ಗಾಯಕಗಾಯಕಿಯರು,ಬರಹಗಾರರು ಹೀಗೆ ಎಲ್ಲರೂ ಹೊಟ್ಟೆಪಾಡಿಗಾಗಿ ತಮ್ಮತಮ್ಮ ಕಲೆಯ ಮೇಲೆ ಅವಲಂಬಿತರೇ.ಹಾಗಿರುವಾಗ ದುಡ್ಡುಕಾಸಿನ ವಿಚಾರದಲ್ಲಿ ಅವರು ಕಟ್ಟುನಿಟ್ಟಾಗಿರುವುದು ಖಂಡಿತವಾಗಿಯೂ ಅವಶ್ಯಕ ಮತ್ತು ಅನಿವಾರ್ಯ.ಏನೇ ಕಲಾಸೇವೆಯೆಂದರೂ ದಿನದ ಕೊನೆಯಲ್ಲಿ ಕೈಯಲ್ಲೊಂದಿಷ್ಟು ಕಾಸು ಆಡದಿದ್ದರೆ ಕಲಾವಿದನ ಹೊಟ್ಟೆ ತುಂಬದು ಎನ್ನುವುದು ವಾಸ್ತವ.ಅದರಲ್ಲೂ ಕಲಾಜಗತ್ತಿನಲ್ಲಿ ಇರುವ ನಯವ೦ಚಕರ ಹರಾಮುಖೋರರ ಸ೦ಖ್ಯೆಯೇನೋ ಕಡಿಮೆಯಿಲ್ಲ.ಚೆನ್ನಾಗಿ ದುಡಿಸಿಕೊಂಡು ಮುಂದೇನೋ ದೊಡ್ಡದು ಕಾದಿದೆ ನಿನಗೆ,ಅದಕ್ಕಾಗಿ ಇದೊಂದು ಸಣ್ಣ ಪ್ರಾಕ್ಟೀಸು ಎಂದೆಲ್ಲ ನುಡಿದು ಕಲಾವಿದ ಬದುಕನ್ನು ಆಪೋಶನ ತೆಗೆದುಕೊಂಡಿರುವ ತಿಮಿಂಗಲುಗಳಿಗೂ ಇಲ್ಲಿ ಕೊರತೆಯಿಲ್ಲ.ಹಾಗೆ ದುಡ್ದು ಕೇಳುವುದಕ್ಕೆ ಮುಜುಗರಪಟ್ಟುಕೊಂಡು ಅಥವಾ ಇಂದಲ್ಲ ನಾಳೆ ಬಂದೀತು ದುಡ್ಡು ಎಂಬ ನಿರ್ಲಕ್ಷ್ಯದ ಧೋರಣೆಯಿಂದ ದಿನಗಳನ್ನು ತಳ್ಳಿ ಬದುಕಿನ ಕೊನೆಗಾಲದಲ್ಲಿ ಒಪ್ಪತ್ತಿನ ಕೂಳಿಗೂ ಪರದಾಡಿದ ನಟನಟಿಯರನ್ನ ಅದೆಷ್ಟು ಜನರನ್ನು ಕಂಡಿಲ್ಲ ನಾವು..? ವಸ್ತುಸ್ಥಿತಿ ಹೀಗಿರುವಾಗ ತನಗೆ ಬರಬೇಕಾದ ದುಡ್ಡಿನ ಬಗ್ಗೆ ವ್ಯಕ್ತಿಯೊಬ್ಬ ಕೊಂಚ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಪರಾಧ ಹೇಗಾದೀತು..?ಹೋಗಲಿ ಪಡೆದುಕೊಂಡ ಹಣಕ್ಕೆ ತಕ್ಕ ಪ್ರತಿಫಲ ಕೊಡದಿದ್ದರೇ ಆತನನ್ನು ವಂಚಕನೆನ್ನೋಣ, ಮೋಸಗಾರನೆನ್ನೋಣ.ಸಂಭಾವನೆಗೆ ತಕ್ಕ ಪರಿಶ್ರಮವಿರದೇ ಹೋದಾಗ ಕಲಾವಿದನನ್ನು ಜರಿಯೋಣ.ಆದರೆ ಅದೆಷ್ಟು ಸಲ ಹಾಗಾಗಿದೆ..? ’ಥತ್..ಈ ಹಾಡನ್ನು ಕಿಶೋರ್ ಕೆಟ್ಟದಾಗಿ ಹಾಡಿದ್ದಾರೆ, ಛೇ ಛೇ ಎಸ್ಪಿಬಿಗೆ ಈ ಹಾಡಿಗೆ ಲಕ್ಷ ರೂಪಾಯಿ ಕೊಟ್ಟರೂ ಬಹಳ ಭಾವರಹಿತವಾಗಿ ಹಾಡಿದ್ದಾರೆ..’ಎಂದೆನ್ನಿಸಿದ್ದು ಯಾವಾಗ..?ಇಲ್ಲವಾದಲ್ಲಿ ತಮ್ಮ ಕೆಲಸದಲ್ಲಿ ನಿಷ್ಠೆಯಿಂದಿರುವವರು,ತಮ್ಮ ಆದಾಯದ ಕುರಿತು ನಿಷ್ಠುರರಾಗಿರುವುದರಲ್ಲಿ ತಪ್ಪೇನಿದೆ..?

ಕಲೆ ಕಲಾವಿದ ಎನ್ನುವುದೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದರೂ ಬದುಕಿನ ಲೆಕ್ಕಾಚಾರಿಯೊಬ್ಬ ಕೆಟ್ಟವನಾಗುವುದೇಕೋ ನನಗರ್ಥವಾಗದ ಮಾತು.ಎಲ್ಲರ ಬದುಕಿನಲ್ಲಿಯೂ ಒಂದಷ್ಟು ಕನಸುಗಳಿವೆ,ಬಯಕೆ ಸಂಭ್ರಮಗಳಿವೆ.ಕೆಲವರಿಗೆ ಚಿಕ್ಕವು,ಕೆಲವರದ್ದು ದೊಡ್ಡವು.ಬದುಕಿನ ಈ ಆಯಾಮಗಳಿಗೆ ಹಣ ಅತ್ಯಂತ ಪ್ರಮುಖ ಎನ್ನುವುದು ನಾವು ಒಪ್ಪಿದರೂ ಒಪ್ಪದಿದ್ದರೂ ಸತ್ಯವೇ.ಹಾಗಿರುವಾಗ ಅವನ್ಯಾರೋ ದುಡ್ಡಿನ ಲೆಕ್ಕಾಚಾರದ ಮನುಷ್ಯ ಎಂದಾಕ್ಷಣ ನಮಗೇಕೆ ಕಸಿವಿಸಿಯಾಗಬೇಕು..?ಅವನೊಬ್ಬ ದುಷ್ಟ ಎಂದೇಕೆ ಅನ್ನಿಸಬೇಕು..? ಹಣ ಗಳಿಸಿವುದೇ ದೊಡ್ಡ ಅಪರಾಧ,ಬಡತನವೇ ಸರ್ವಶ್ರೇಷ್ಠವೆನ್ನುವ ಭ್ರಮೆಗಳಿಂದ ನಾವು ಹೊರಬರುವುದು ಯಾವಾಗ..?

ಚಿಕ್ಕವನಾಗಿದ್ದಾಗ ಭಾರತ ಬಡದೇಶವೆಂಬ ಮಾತು ಕೇಳಿದಾಗಲೆಲ್ಲ ಮೈಯುರಿಯುತ್ತಿತ್ತು.ನನ್ನ ದೇಶ ಬಡ ರಾಷ್ಟ್ರವಲ್ಲವೆನ್ನುವ ಅಹಂಕಾರವೊಂದು ಸಿಡಿದು ನಿಲ್ಲುತ್ತಿತ್ತು.ಈಗ ಅನ್ನಿಸುತ್ತದೆ.ಭಾರತ ಬಡದೇಶವಾಗಿದ್ದರೆ ಅದಕ್ಕೆ ಕಾರಣ ನಾವುಗಳೇ.ಬಡತನದೆಡೆಗಿನ ವಿನಾಕಾರಣ ಪ್ರೀತಿ,ಸಿರಿವಂತಿಕೆಯೆಡೆಗಿನ ಅಕಾರಣ ದ್ವೇಷ ನಮ್ಮದು.ಪ್ರಜ್ಞೆಯೇ ಬಡವಾಗಿರುವಾಗ ದೇಶ ಸಿರಿವಂತವಾಗುವುದು ಹೇಗೆ ಅಲ್ಲವೇ..?