ನೀಲಗಿರಿಯ ಸಾವಯವ ಸ್ಟ್ರಾಬೆರಿ ತೋಟ
ಹಾರ್ಟ್-ಬೆರಿ ಫಾರ್ಮಿಗೆ ಉದಕಮಂಡಲದಿಂದ ವಾಹನದಲ್ಲಿ ಸುಮಾರು ಅರ್ಧ ಗಂಟೆಯ ಹಾದಿ. ಈ ಸಾವಯವ ಸ್ಟ್ರಾಬೆರಿ ಫಾರ್ಮ್ ನೀಲಗಿರಿ ಜಿಲ್ಲೆಯ ಮಾದರಿ ಪಾರ್ಮ್ ಆಗಿ ಬೆಳೆಯುತ್ತಿದೆ.
ಐದು ಎಕರೆ ವಿಸ್ತಾರದ ಹಾರ್ಟ್-ಬೆರಿ ಫಾರ್ಮ್ ಶೋಲಾ ಅರಣ್ಯದ ನಡುವಿನಲ್ಲಿದೆ. ಹಲವು ಕೆರೆಗಳೂ ತೊರೆಗಳೂ ಇರುವ ಈ ಫಾರ್ಮಿನಲ್ಲಿ ಎತ್ತಕಂಡರತ್ತ ಹಸುರು. ಅಲ್ಲಿ ಕರಡಿಗಳು, ಚಿರತೆಗಳು, ಕಾಡುಕೋಣಗಳು ಮತ್ತು ಹುಲಿ ಪ್ರತಿ ದಿನ ಕಾಣಿಸುತ್ತಲೇ ಇರುತ್ತವೆ.
ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಸುಮಾರು ಏಳು ವರುಷ ದುಡಿದವರು ಬಾಬು ರಾಜಶೇಖರನ್. ಅನಂತರ ತನ್ನ ಬಾಲ್ಯದ ದಿನಗಳನ್ನು ಕಳೆದ ನೀಲಗಿರಿಗೆ ಮರಳಿದರು. ಅಲ್ಲಿ ಕೃಷಿಯಲ್ಲಿ ತೊಡಗಲು ನಿರ್ಧರಿಸಿ, ಮೂರು ವರುಷಗಳ ಮುಂಚೆ ಅವರು ಆರಂಭಿಸಿದ ಸ್ಟ್ರಾಬೆರಿ ತೋಟವೇ ಹಾರ್ಟ್-ಬೆರಿ ಫಾರ್ಮ್.
ಸ್ಟ್ರಾಬೆರಿ ತೋಟ ಬೆಳೆಸುವ ನನ್ನ ನಿರ್ಧಾರಕ್ಕೆ ಕಾರಣ ಸಸ್ಯಗಳ ಒಡನಾಟದಿಂದ ನನಗೆ ಸಿಗುವ ಖುಷಿ. ಇದಕ್ಕೆ ಪ್ರೇರಣೆ ನನ್ನ ತಾಯಿ ಮತ್ತು ತಂದೆ. ನನ್ನ ತಾಯಿಯದು ಹೂತೋಟ ಬೆಳೆಸುವುದರಲ್ಲಿ ಎತ್ತಿದ ಕೈ. ನನ್ನ ತಂದೆ ತಮಿಳುನಾಡು ಸರಕಾರದ ಕೃಷಿ ಇಂಜಿನಿಯರಿಂಗ್ ಇಲಾಖೆಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿದ್ದವರು ಎನ್ನುತ್ತಾರೆ ರಾಜಶೇಖರನ್.
ತೋಟ ಮಾಡಲು ಅವರು ಆಯ್ಕೆ ಮಾಡಿದ್ದು ನಿರ್ಲಕ್ಷಿಸಿದ್ದ ಹಳೆಯ ಟೀ ಎಸ್ಟೇಟನ್ನು. “ಇಲ್ಲಿ ರಾಸಾಯನಿಕ ಗೊಬ್ಬರಗಳ ಹಾವಳಿ ಇರಲಿಲ್ಲ. ಶುದ್ಧ ನೀರು ಸಮೃದ್ಧವಾಗಿದೆ. ವಿವಿಧ ಕಾಡುಪ್ರಾಣಿಗಳಿವೆ. ಹಾಗಾಗಿ ಇದನ್ನೇ ಆಯ್ಕೆ ಮಾಡಿದೆ” ಎಂದು ವಿವರಿಸುತ್ತಾರೆ ಅವರು.
ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಹೇರಳವಾಗಿ ಬಳಸಬೇಕಾಗಿಲ್ಲ ಎಂಬುದನ್ನು ಆ ಪ್ರದೇಶದ ರೈತರಿಗೆ ತೋರಿಸಿಕೊಡಬೇಕು ಎಂಬುದು ಅವರ ಇರಾದೆ. ಅದು, ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಅವರು ಸ್ಟ್ರಾಬೆರಿ ತೋಟ ಬೆಳೆಸುವ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಕಳೆದ ಮೂರು ವರುಷಗಳಲ್ಲಿ ಹಲವು ಸವಾಲುಗಳನ್ನು ರಾಜಶೇಖರನ್ ಎದುರಿಸಬೇಕಾಯಿತು.
“ನಾನು ಮೊದಲು ನೆಟ್ಟ ಸ್ಟ್ರಾಬೆರಿ ಸಸಿಗಳಲ್ಲಿ ಹಲವು ಸಸಿಗಳು ಬೇರುಹುಳದಿಂದ ನಾಶವಾದವು” ಎಂದು ನೆನಪು ಮಾಡಿಕೊಳ್ಳುತ್ತಾರೆ ರಾಜಶೇಖರನ್. ಅನಂತರ ಈ ಬಗ್ಗೆ ಸಂಶೋಧನೆಯನ್ನೇ ಮಾಡಿ, ಬೇರುಹುಳಗಳನ್ನು ನಾಶ ಮಾಡುವ ನಿಮಟೋಡನ್ನು ಪತ್ತೆ ಮಾಡಿದರು. ಇವನ್ನು ತೋಟದ ಮಣ್ಣಿನಲ್ಲಿ ಬೆಳೆಯಲು ಬಿಟ್ಟು, ಯಾವುದೇ ರಾಸಾಯನಿಕ ಪೀಡೆನಾಶಕ ಪ್ರಯೋಗಿಸದೆ, ಬೇರುಹುಳಗಳನ್ನು ನಿಯಂತ್ರಿಸಿದರು.
ಸಂಪೂರ್ಣ ಸಾವಯವ ಪದ್ಧತಿಯ ಸ್ಟ್ರಾಬೆರಿ ತೋಟದ ಬಗ್ಗೆ ತಿಳಿದ ಬಹುರಾಷ್ಟ್ರೀಯ ಕಂಪೆನಿಯೊಂದು ಇತ್ತೀಚೆಗೆ ರಾಜಶೇಖರನ್ ಅವರನ್ನು ಸಂಪರ್ಕಿಸಿತು. ಇಲ್ಲಿ ಬೆಳೆದ ಸ್ಟ್ರಾಬೆರಿಗಳಲ್ಲಿ ಯಾವುದೇ ಪೀಡೆನಾಶಕ ಅಥವಾ ರಾಸಾಯನಿಕದ ಉಳಿಕೆ ಇಲ್ಲವೆಂದು ಖಚಿತ ಪಡಿಸಿಕೊಂಡಿತು. ಅನಂತರ ಇಡೀ ತೋಟದ ಇಳುವರಿ ಖರೀದಿಸಲು ಮುಂದಾಯಿತು.
ಆ ಕಂಪೆನಿಗೆ, ಶಿಶು ಆಹಾರ ಉತ್ಪಾದನೆಗಾಗಿ ಸ್ಟ್ರಾಬೆರಿಗಳು ಬೇಕಾಗಿದ್ದವು. “ನನಗೆ ನಿಜಕ್ಕೂ ಅದೊಂದು ದೊಡ್ಡ ವಹಿವಾಟು. ಶಿಶು ಆಹಾರದಲ್ಲಿ ಬಳಸಲು ಯೋಗ್ಯವಾದ ಸುರಕ್ಷಿತ ಸ್ಟ್ರಾಬೆರಿ ಬೆಳೆಸಿದ್ದೇನೆಂದು ಪರಿಣತ ಕೃಷಿವಿಜ್ನಾನಿಗಳು ಖಚಿತ ಪಡಿಸಿದ್ದು ದೊಡ್ಡ ಸಂಗತಿ” ಎನ್ನುತ್ತಾರೆ ರಾಜಶೇಖರನ್. ಈಗ ಅವರು ಬೆಂಗಳೂರು, ಚೆನ್ನೈ ಮತ್ತು ನೀಲಗಿರಿಯ ಕೆಲವು ಸ್ಥಳಗಳಿಗೆ ಸ್ಟ್ರಾಬೆರಿ ಕಳಿಸಿ ಕೊಡುತ್ತಾರೆ.
“ಇತರ ಕೃಷಿಕರೂ ಸಾವಯವ ಕೃಷಿ ಶುರು ಮಾಡಲು ಪ್ರೇರಣೆಯಾಗಬೇಕು ಎಂಬುದೇ ನನ್ನ ಗುರಿ. ಅದೃಷ್ಟ ಕೂಡಿ ಬಂದರೆ ಮುಂದಿನ ನಾಲ್ಕು ವರುಷಗಳಲ್ಲಿ ನೀಲಗಿರಿಯ ೩೦೦ – ೪೦೦ ಕೃಷಿಕರು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಿದ್ದಾರೆ” ಎಂದು ತನ್ನ ಯೋಜನೆಯನ್ನು ರಾಜಶೇಖರನ್ ಹಂಚಿಕೊಳ್ಳುತ್ತಾರೆ.
ರಾಜಶೇಖರನ್ ತೋಟದ ಕೆಲವು ಕೆಲಸಗಾರರೂ ಅವರ ಸಲಹೆಯಂತೆ ತಮ್ಮ ಜಮೀನಿನಲ್ಲಿ ಈಗಾಗಲೇ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ತೊಡಗಿದ್ದಾರೆ. ಅವರಲ್ಲೊಬ್ಬರು ಜಿ. ಸಿದ್ಧರಾಜ್. ಜೀವಾಮೃತ ತಯಾರಿಸುವ ವಿಧಾನ ಕಲಿಸಿ ಕೊಟ್ಟವರು ರಾಜಶೇಖರನ್ ಎಂಬುದನ್ನು ನೆನೆಯುತ್ತಾರೆ. “ತರಕಾರಿಗಳು, ಬಾಳೆಹಣ್ಣು, ಪಪ್ಪಾಯಿ ಇವುಗಳ ಸಿಪ್ಪೆ ಇತ್ಯಾದಿ ಬಳಸಿ, ಜೀವಾಮೃತ ತಯಾರಿಸಿದೆ. ಅದನ್ನು ನನ್ನ ಜಮೀನಿನ ಗಿಡಗಳಿಗೆ ಹಾಕಿದಾಗ, ಉತ್ತಮ ಫಲಿತಾಂಶ ಸಿಕ್ಕಿದೆ” ಎನ್ನುತ್ತಾರೆ ಸಿದ್ಧರಾಜ್.
ರಾಜಶೇಖರನ್ ಅವರ ಐದೆಕ್ರೆ ಜಮೀನಿನ ಮೂರೆಕ್ರೆ ಕಾಡುಪ್ರಾಣಿಗಳ ನೆಲೆ. ಜೊತೆಗೆ ವಿವಿಧ ಕೀಟಗಳು, ಕಪ್ಪೆಗಳು ಮತ್ತು ಹಕ್ಕಿಗಳ ಆವಾಸಸ್ಥಾನ. “ಈ ಕಪ್ಪೆಗಳು ಮತ್ತು ಹಕ್ಕಿಗಳು ಹಲವಾರು ಪೀಡೆಕೀಟಗಳನ್ನು ತಿಂದು, ಅವನ್ನು ನಿಯಂತ್ರಿಸಲು ನನಗೆ ಸಹಾಯ ಮಾಡುತ್ತವೆ. ಪ್ರಕೃತಿಗೆ ಹಾನಿಯಾಗದಂತೆ ಕೃಷಿ ಮಾಡಿದರೆ, ಅಲ್ಲಿನ ಜೀವಿಗಳು ಮತ್ತು ಕಾಡುಪ್ರಾಣಿಗಳ ಮೇಲಾಗುವ ದುಷ್ಪರಿಣಾಮಗಳು ಅತ್ಯಲ್ಪ ಎಂಬುದಕ್ಕೆ ಇದೇ ಪುರಾವೆ” ಎನ್ನುತ್ತಾರೆ ರಾಜಶೇಖರನ್.
“ನೀಲಗಿರಿಯ ಜಿಲ್ಲಾಧಿಕಾರಿ ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆ” ಎಂದು ಮಾಹಿತಿ ನೀಡುತ್ತಾರೆ ರಾಜಶೇಖರನ್. ಅದೇನಿದ್ದರೂ, ಸಾವಯವ ಕೃಷಿ ವ್ಯಾಪಕವಾಗ ಬೇಕಾದರೆ ಇನ್ನಷ್ಟು ಪ್ರಯತ್ನ ಮತ್ತು ಪ್ರಚಾರ ಅಗತ್ಯ ಎಂಬುದವರ ಅಭಿಪ್ರಾಯ. ತಮ್ಮೆಲ್ಲರ ಪ್ರಯತ್ನದಿಂದಾಗಿ ಕೆಲವು ವರುಷಗಳಲ್ಲಿ ಸಾವಯವ ಕೃಷಿ ನೀಲಗಿರಿಯಲ್ಲಿ ಬೇರೂರ ಬೇಕೆಂಬುದು ಅವರ ಆಶಯ.