ಕಗ್ಗ ದರ್ಶನ – 46 (1)

ಕಗ್ಗ ದರ್ಶನ – 46 (1)

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ?
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ?
ಬಿದ್ದ ಮನೆಯನು ಕಟ್ಟೊ - ಮಂಕುತಿಮ್ಮ
ಬಿದ್ದದ್ದನ್ನು ಎತ್ತಿ ನಿಲ್ಲಿಸುವುದೇ ಮಾನವನ ಮೃತ್ಯುಂಜಯತೆ ಎಂದು ಈ ಮುಕ್ತಕದಲ್ಲಿ ಘೋಷಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆಕಾಶದಿಂದ ಸುರಿಯುವ ಮಳೆ ಭೂಮಿಯನ್ನು ಮತ್ತೆಮತ್ತೆ ಶುದ್ಧಗೊಳಿಸುವುದಿಲ್ಲವೇ? ಗದ್ದೆಯ ಬೆಳೆಯನ್ನು ಕೊಯ್ದ ನಂತರ, ಅದು ಪುನಃ (ಮಗುಳ್ದು) ಫಸಲು ಕೊಡುವುದಿಲ್ಲವೇ? ಎಂಬುದಾಗಿ ಪ್ರಕೃತಿಯ ಉದಾಹರಣೆಗಳನ್ನು ಪ್ರಶ್ನೆಗಳ ಮೂಲಕ ಎತ್ತಿ ತೋರಿಸುತ್ತಾರೆ. ಮನೆ ಕುಸಿದು ನೆಲಕ್ಕೆ ಬಿದ್ದರೆ ಕೈಕಟ್ಟಿ ಕೂರಬೇಡ; ಅದನ್ನು ಮತ್ತೆ ಕಟ್ಟು ಎಂಬ ಸಂದೇಶ ಇದರಲ್ಲಿದೆ.
ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೇರಿಕಾದ ವಿಮಾನಗಳು ಅಣುಬಾಂಬುಗಳನ್ನು ಎಸೆದ ಕಾರಣ ಆ ನಗರಗಳು ಧ್ವಂಸವಾದವು. ಜಪಾನ್ ಸೈನ್ಯ ಶರಣಾಯಿತು. ಜಪಾನ್ ದೇಶದ ಕತೆ ಮುಗಿಯಿತೆಂದೇ ಹಲವರು ಭಾವಿಸಿದರು. ಆದರೆ ಜಪಾನಿನ ಜನರು ತಮ್ಮ ದೇಶವನ್ನು ಮತ್ತೆ ಮುಂಚೂಣಿಗೆ ತರಲು ಸಂಕಲ್ಪ ಮಾಡಿದರು. ಎರಡೇ ದಶಕಗಳಲ್ಲಿ ಆ ಎರಡು ನಗರಗಳನ್ನು ಪುನರ್ ನಿರ್ಮಿಸಿ, ಜಗತ್ತೇ ನಿಬ್ಬೆರಗಾಗುವ ಸಾಧನೆ ಮಾಡಿದರು.
ಫ್ರಾನ್ಸ್ ಮತ್ತು ರಷ್ಯಾದಲ್ಲಿ ರಕ್ತಕ್ರಾಂತಿ ನಡೆಯಿತು. “ಮುಂದೇನು” ಎಂಬ ಪ್ರಶ್ನೆ ಅಲ್ಲಿನ ಜನತೆಯ ಮುಂದಿತ್ತು. ಸಮರ್ಥ ನಾಯಕತ್ವ ಆ ಎರಡೂ ದೇಶಗಳನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿತು. ಕೆಲವೇ ದಶಕಗಳಲ್ಲಿ ಆ ದೇಶಗಳು ಅಗಾಧ ಅಭಿವೃದ್ಧಿ ಸಾಧಿಸಿದವು.
ಒಂದನೆಯ ಮತ್ತು ಎರಡನೆಯ ಮಹಾಯುದ್ಧ ಆರಂಭಿಸಿದ ದೇಶ ಜರ್ಮನಿ. ದೂರದರ್ಶಿತ್ವ ಮತ್ತು ಮಾನವೀಯತೆ ಇಲ್ಲದ ನಾಯಕರಿಂದಾಗಿ ಆ ದೇಶ ಮಹಾಯುದ್ಧಕ್ಕಿಳಿದು, ಇತರ ದೇಶಗಳ ಸೈನ್ಯಗಳೊಂದಿಗೆ ಭೀಕರ ಹೋರಾಟ ನಡೆಸಿತು. ಅಂತಿಮವಾಗಿ ಎರಡೂ ಯುದ್ಧಗಳಲ್ಲಿ ಜರ್ಮನಿ ಸೋತಾಗ, ಆ ದೇಶ ನುಚ್ಚುನೂರಾಗಿತ್ತು. ಆದರೆ, ಅಲ್ಲಿಯ ಜನರ ಮನೋಬಲ ದೊಡ್ಡದು. ಅವರು ತಮ್ಮ ದೇಶವನ್ನು ಮತ್ತೆ ಪ್ರಗತಿಯ ಹಾದಿಗೆ ತಂದರು. ದೇಶಗಳ ನೆಲೆಯಲ್ಲಿ ಬಿದ್ದ ಮನೆಯನ್ನು ಮತ್ತೆ ಕಟ್ಟುವುದೆಂದರೆ ಇದೇ ಅಲ್ಲವೇ?