ಬದುಕು ಸಹ ಒಂದು ಚುನಾವಾ ಕರ್ತವ್ಯದಂಥದ್ದು...

ಬದುಕು ಸಹ ಒಂದು ಚುನಾವಾ ಕರ್ತವ್ಯದಂಥದ್ದು...

ಚುನಾವಣಾ ಕರ್ತವ್ಯದ ದಿನ ಆ ಶಾಲೆಗೆ ಹಾಜರಾದರೆ ಅದಾಗಲೇ ಅಲ್ಲಿ ದಟ್ಟವಾಗಿದ್ದ ಜನಜಂಗುಳಿ.ನನ್ನ ಪೋಲಿಂಗ್ ಸ್ಟೇಷನ್ ನಂಬರ್ ಹುಡುಕೋಣವೆನ್ನುತ್ತ ಹೊರಟರೇ ನೋಟಿಸು ಬೋರ್ಡಿನೆದುರು ಜನಜಾತ್ರೆ.ನನಗೆ ಅದೇ ಶಾಲೆ ಮಸ್ಟರಿಂಗ್ ಸೆಂಟರ್ ಆಗಿ ಸಿಕ್ಕಿರುವುದು ಎರಡನೇ ಸಲ.ಅಲ್ಲಿನ ಅದ್ವಾನದ ಪರಿಚಯ ಅದಾಗಲೇ ಇತ್ತಾದರೂ ಈ ಸಲವಾದರೂ ಸರಿಯಾಗಿರಬಹುದೆನ್ನುವ ನನ್ನ ಊಹೆ ಭ್ರಮೆಯಾಗಿಯೇ ಉಳಿದಿತ್ತು.ಹೇಗೋ ಜನರ ನಡುವೆ ತೂರಿಕೊಂಡು ನನ್ನ ಪೋಲಿಂಗ್ ಪಾರ್ಟಿ ನಂಬರಿನ ಕೋಣೆಯ ಸಂಖ್ಯೆಯನ್ನು ಪಡೆದುಕೊಂಡು ಕೋಣೆಯತ್ತ ನಡೆದೆ.ಅಲ್ಲಿಗೆ ಹೋದರೇ ಕೋಣೆಯ ಸಂಖ್ಯೆಯೇ ತಪ್ಪಾಗಿದೆ,ನಿಮ್ಮದು ಎದುರಿಗಿನ ಕಟ್ಟಡದಲ್ಲಿನ ಕೋಣೆ ಎಂದರು ಅಲ್ಲಿ ಅದಾಗಲೇ ಬಂದು ಕೂತಿದ್ದವರು.ಆಯೋಜಕರಿಗೆ ಮನಸ್ಸಿನಲ್ಲಿಯೇ ಒಂದಷ್ಟು ಶಾಪ ಹಾಕಿ ನನ್ನ ಕೋಣೆಗೆ ಹೋಗಿ ಕೂತೆ.

ಎಲೆಕ್ಷನ್ ಡ್ಯೂಟಿ ಎನ್ನುವುದು ಅದ್ವಾನಗಳ ಸಂತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿರುವುದರಿಂದ ಒಂದಷ್ಟು ಜನ ಅಲ್ಲಿಲ್ಲಿ ಗೊಣಗುತ್ತಾರಾದರೂ ,ಹೆಚ್ಚಿನವರು ಇದರ ಹಣೆಬರಹವೇ ಇಷ್ಟು ಎಂದುಕೊಂಡು ಸುಮ್ಮನಾಗುತ್ತಾರೆ.ಬೆಳಿಗ್ಗೆ ಹೋಗಿ ಕೂತರೆ ಸಂಜೆಯ ಐದು ಗಂಟೆಯ ಹೊತ್ತಿಗೆ ಇವಿಎಮ್ ಯಂತ್ರವನ್ನು ವಿವಿಪ್ಯಾಟ್‌ನೊಂದಿಗೆ ಕೈಗಿಟ್ಟು ಒಂದೈವತ್ತು ಬಗೆಯ ಅರ್ಜಿಗಳನ್ನೂ ಕೊಟ್ಟು ವಾಹನದಲ್ಲಿ ಕೂರಿಸಿ ಶಾಲೆಯೊಂದಕ್ಕೆ ಬಿಟ್ಟು ಬಂದರು.

ನಿರೀಕ್ಷೆಯಂತೆ ಗಲೀಜು ಶಾಲೆ.ಕೊಳಕಾದ ಶೌಚಾಲಯಗಳು.ಶೌಚಾಲಯದಲ್ಲಿ ನೀರು ಇತ್ತೆನ್ನುವುದು ನಮ್ಮ ಅದೃಷ್ಟವೆನ್ನಬಹುದು.ಸಂಜೆಯ ಹೊತ್ತಿಗೆ ಎಲ್ಲವನ್ನೂ ಹೊಂದಿಸಿಟ್ಟುಕೊಂಡಾಯಿತು.ಸಂಜೆಗೆ ಊಟದ ವ್ಯವಸ್ಥೆಯಿದೆ ಎಂದಿದ್ದ ಮೇಲಾಧಿಕಾರಿ ಸಂಜೆಯ ಹೊತ್ತಿಗೆ ರಾತ್ರಿ ಊಟದ ವ್ಯವಸ್ಥೆಯಿಲ್ಲ ಎಂದುಬಿಟ್ಟರು.ಮನೆಯಿಂದ ತಂದಿದ್ದ ರೊಟ್ಟಿಗಳನ್ನು ತಿಂದದ್ದಾಯ್ತು.ಜೊತೆಗಿದ್ದವರು ಅಲ್ಲಿಯೇ ಸಮೀಪವಿದ್ದ ಹೋಟೆಲ್ಲೊಂದರಲ್ಲಿ ಊಟ ಮಾಡಿ ಬಂದರು.ಊಟ ಮಾಡಿ ರಾತ್ರಿ ಹತ್ತುಗಂಟೆಗೆಲ್ಲ ಮಲಗಿಬಿಟ್ಟರೇ ಸುತ್ತಮುತ್ತಲಿನವರು ಹತ್ತೇ ನಿಮಿಷಕ್ಕೆ ಗೊರಕೆ.

ನಾನು ಮುಖ್ಯ ಚುನಾವಣಾಧಿಕಾರಿ.ಸಿಕ್ಕಾಪಟ್ಟೆ ಟೆನ್ಷನ್, ಸುತ್ತಮುತ್ತಲಿನವರ ಗೊರಕೆ, ಧೂಳು ಧೂಳು ನೆಲ,ಮೈ ತುಂಬ ಕಚ್ಚುತ್ತಿದ್ದ ಸೊಳ್ಳೆಗಳು,ಮೈ ಮೇಲೆಯೇ ಹರಿದಾಡುತ್ತಿದ್ದ ಜಿರಳೆಗಳು ಹೀಗೆ ಎಲ್ಲ ಕಂಟಕಗಳೂ ಒಟ್ಟಾಗಿ ಒಂದರೇಕ್ಷಣವೂ ನಿದ್ರೆ ಬಾರದ ಪರಿಸ್ಥಿತಿ.ಹೇಗೋ ಕಷ್ಟಪಟ್ಟು ಒದ್ದಾಡುತ್ತ ಬೆಳಗಿನ ನಾಲ್ಕು ಗಂಟೆಯವರೆಗೆ ಉರುಳಾಡಿದ್ದಾಯ್ತು.ಬೆಳಗ್ಗೆದ್ದರೆ ಕೊಂಚವೂ ನಿದ್ರೆಯಿಲ್ಲದ ಸ್ಥಿತಿಗೆ ಒಂದೆರಡು ಸಲ ದೇಹ ಜೋಲಿ ಹೊಡೆಯಿತು.ಸುಧಾರಿಸಿಕೊಂಡು ಕೆಟ್ಟ ಕೊಳಕು ಶೌಚಾಲಯಗಳಲ್ಲಿ ಒಬ್ಬರ ಹಿಂದೊಬ್ಬರೊಂತೆ ಮುಖ ತೊಳೆದುಕೊಂಡು ಹೊರಗೆ ಬಂದು ತಯಾರಾಗಿ ಮತ್ತೊಮ್ಮೆ ಮೇಜುಗಳನ್ನು ಸರಿಪಡಿಸಿಕೊಳ್ಳುವಷ್ಟರಲ್ಲಿ ಸಮಯ ಆರು ಗಂಟೆಯಾಗಿತ್ತು.ಅದು ಅಣಕು ಮತದಾನದ ಸಮಯ.ಪ್ರತಿ ಚುನಾವಣೆಯಲ್ಲಿಯೂ ಅಣುಕು ಮತದಾನವೆನ್ನುವ ಪ್ರಕ್ರಿಯೆಯೊಂದಿರುತ್ತದೆ.ಮತದಾನಕ್ಕೂ ಮುನ್ನ ಇವಿಎಮ್ ಯಂತ್ರಗಳಲ್ಲಿ ಯಾವ ದೋಷವೂ ಇಲ್ಲವೆಂದೂ,ಒತ್ತಿದ ಮತ ಆಯಾ ಅಭ್ಯರ್ಥಿಗೆ ಮಾತ್ರವೇ ಸರಿಯಾಗಿ ಬೀಳುತ್ತಿದೆಯೆನ್ನುವುದನ್ನು ಆಯಾ ಪಕ್ಷದ ಅಭ್ಯರ್ಥಿಗಳ ಪ್ರತಿನಿಧಿಗೆ ಖಚಿತಪಡಿಸುವ ವಿಧಾನವದು.ನಿಯಮದಂತೆ ಆರು ಗಂಟೆಗೆ ಶುರುವಾಗುವ ಆ ಪ್ರಕ್ರಿಯೆ ಸರಿಯಾಗಿ ಏಳುಗಂಟೆಗೆ ಮುಗಿಯಬೇಕು. ಹಾಗಾಗಿ ಅಣುಕು ಮತದಾನವನ್ನಾರಂಭಿಸಲು ಮತಯಂತ್ರದ ಬಟನ್ನು ಅದುಮಿದರೆ ಯಂತ್ರ ಶುರುವಾಗಲೇ ಇಲ್ಲ...!!

ಕೆಟ್ಟಿತಲ್ಲ ಕೆಲಸ ಎಂದುಕೊಂಡೆ.ಹಿಂದಿನ ದಿನವಷ್ಟೇ ಸರಿಯಾಗಿದ್ದ ಯಂತ್ರಕ್ಕೆ ಏನಾಯಿತು ಎಂದುಕೊಂಡು ಮತ್ತೆ ಮೂರು ಬಾರಿ ಪರೀಕ್ಷಿಸಿದರೂ ಯಂತ್ರ ತುಟಿ ಪಿಟಕ್ಕೆನ್ನದು.ಸಮಯ ಬೇರೆ ಅದಾಗಲೇ ಆರುವರೆಯಾಗಿತ್ತು.ತಕ್ಷಣಕ್ಕೆ ಮೇಲಾಧಿಕಾರಿಗೆ ಫೋನಾಯಿಸಿ ವಿಷಯ ಅರುಹಿದೆ.ಆತ ನನ್ನ ಕೇಂದ್ರಕ್ಕೆ ಧಾವಿಸಿದ ಮೊದಲು ನಾನೇ ಏನೋ ತಪ್ಪು ಮಾಡಿದ್ದೇನೆ ಎಂಬಂತೆ ಕಿರುಚಿದ.ನಂತರ ಅವನೇ ಸ್ವತ: ಕೂತು ಪರೀಕ್ಷಿಸಿದರೂ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸದು.ಸಮಯ ಏಳರ ಗಡಿ ದಾಟಿತ್ತು.ಯಂತ್ರ ಸರಿಯಾದ ನಂತರ ಅಣುಕು ಮತದಾನ ಖಡ್ಡಾಯ.ಆದರೆ ಅಷ್ಟರಲ್ಲಾಗಲೇ ಜನರು ಬಂದು ಕೇಂದ್ರದ ಹೊರಗೆ ಕಾಯುತ್ತಿದ್ದಾರೆ.ಹತ್ತೇ ನಿಮಿಷಕ್ಕೆ ಸಹನೆ ಕಳೆದುಕೊಂಡು ಕೂಗಾಡುತ್ತಿದ್ದಾರೆ.ಆ ಸಮಯದಲ್ಲಿ ಮತಗಟ್ಟೆಯ ಅಧಿಕಾರಿಗಳಿಗಾಗುವ ಮಾನಸಿಕ ಒತ್ತಡವಿದೆಯಲ್ಲ,ಅದು ಅನುಭವಿಸಿದವರಿಗೆ ಮಾತ್ರ ಗೊತ್ತು.ಕೊನೆಗೆ ಯಂತ್ರವನ್ನೇ ಬದಲಿಸಿ ಮತದಾನ ಆರಂಭಿಸುವ ಹೊತ್ತಿಗೆ ಸಮಯ ಎಂಟಾಗಿತ್ತು.ಕಾಯುತ್ತಿದ್ದ ಜನರ ಸರತಿ ಸಂಖ್ಯೆಯಲ್ಲಿ ಎಂಬತ್ತು ದಾಟಿತ್ತು.ಬೆಳಗಿನ ಹತ್ತರವರೆಗೆ ಒಂದು ಗುಟುಕು ನೀರೂ ಕುಡಿಯಲಾಗದಷ್ಟು ಗಡಿಬಿಡಿ.ಆನಂತರ ಕೊಂಚ ನಿರಾಳವಾಯಿತೆಂದಾಗ ನನ್ನ ಸಹಾಯಕ ಸಿಬ್ಬಂಧಿಗೆ ತಿಂಡಿ ತಿನ್ನುವಂತೆ ಹೇಳಿ ಅವರ ಕಾರ್ಯವನ್ನು ನಾನು ನಿರ್ವಹಿಸತೊಡಗಿದೆ.ಅದೇನು ದುರಾದೃಷ್ಟವೋ,ಅವರುಗಳ ಉಪಹಾರ ಮುಗಿಸುವಷ್ಟರಲ್ಲಿ ಮತ್ತೆ ಜನಜಂಗುಳಿ.ನನಗೆ ತಿಂಡಿ ತಿನ್ನುವುದಿರಲಿ,ನೀರು ಕುಡಿಯುವುದಕ್ಕೂ ಸಮಯವಾಗಲಿಲ್ಲ.

ನಿಯೋಜಿತ ಸಮಯಕ್ಕೆ ಮತದಾನ ಮುಗಿದಿತ್ತು.ಎಲ್ಲ ವಿಧಿವಿಧಾನಗಳನ್ನು ಮುಗಿಸಿ ಪೆಟ್ಟಿಗೆಗಳನ್ನು ,ಅಗತ್ಯ ದಾಖಲೆಗಳನ್ನು ಪ್ಯಾಕ್ ಮಾಡಿ ತಯಾರಾಗುವಷ್ಟರಲ್ಲಿ ಸಮಯ ಏಳುಗಂಟೆ.ಅಕ್ಷರಶ: ಪ್ರಳಯರೂಪಿ ಮಳೆ ನಮ್ಮ ಕೇಂದ್ರವಿದ್ದ ಪ್ರದೇಶದಲ್ಲಿ.ಕನಿಷ್ಟ ಪಕ್ಷ ಸಮೀಪದಲ್ಲಿದ್ದ ಬಸ್ಸನ್ನೇರಿ ಕುಳಿತುಕೊಳ್ಳುವುದು ಸಹ ಶಕ್ಯವಾಗದು.ಅದಲ್ಲದೇ ಮಳೆಯಲ್ಲಿ ನಡೆದರೆ ಮತಯಂತ್ರಕ್ಕೆ ಕಟ್ಟಿದ ನಂಬರ್ ಟ್ಯಾಗ್ ನೆನೆದು ಯಡವಟ್ಟಾಗುವ ಭಯ. ಮಲಗಲು ತಂದಿದ್ದ ಬೆಡ್‌ಶೀಟನ್ನೇ ಇವಿಎಮ್ ಯಂತ್ರಕ್ಕೆ ಸುತ್ತಿ ಮಳೆಯಲ್ಲಿ ನೆನೆಯುತ್ತ ಬಸ್ಸನ್ನೇರಿದ್ದಾಯ್ತು.ಯಂತ್ರಗಳನ್ನು ಮರಳಿಸುವ ಕೇಂದ್ರದಲ್ಲಿಯೂ ಮಳೆಯಲ್ಲಿ ನೆನೆಯುತ್ತ ನಡೆದು ಬೆಡ್ ಶೀಟ್‌ನಲ್ಲಿ ಸುತ್ತಿದ್ದ ಮತಯಂತ್ರವನ್ನು ಅಧಿಕಾರಿಗಳ ಕೈ ಗೊಪ್ಪಿಸುವ ಹೊತ್ತಿಗೆ ಸಮಯ ಹೆಚ್ಚುಕಡಿಮೆ ನಡುರಾತ್ರಿ.

ಇದು ನನ್ನೊಬ್ಬನ ಕತೆಯಲ್ಲ,ಬಹುತೇಕ ಎಲ್ಲ ಮತಗಟ್ಟೆ ಅಧಿಕಾರಿಗಳೂ ಅನುಭವಿಸುವ ಪ್ರತಿಸಲದ ಪಡಿಪಾಟಲು.ಹಳ್ಳಿಗಳ ಅಧಿಕಾರಿಗಳ ಪಾಡಂತೂ ಅಕ್ಷರಶ: ನರಕ.ಅಲ್ಲಿನ ಜನ ನಮಗಿಂತಲೂ ಹೆಚ್ಚು ಕಷ್ಟ ಅನುಭವಿಸಿರುತ್ತಾರೆ

ಇಷ್ಟಾಗಿಯೂ ನಾನಿಲ್ಲಿ ಹೇಳಹೊರಟಿರುವುದು ಚುನಾವಣಾಧಿಕಾರಿಗಳ ದುರಂತದ ಕತೆಯಲ್ಲ.ನನಗೆ ಆಶ್ಚರ್ಯವೆನ್ನಿಸುವುದು ನಮ್ಮ ಮನಸ್ಥಿತಿಯ ಬಗ್ಗೆ.ಮನೆಗೆ ಬಂದವನು ಸುಮ್ಮನೇ ಒಂದರ್ಧ ಗಂಟೆಗಳ ಕಾಲ ಕುಳಿತು ಆಲೋಚಿಸಿದೆ.ಬಾಕಿ ದಿನಗಳಲ್ಲಿ ನನಗೆ ಸಮಯಕ್ಕೆ ಸರಿಯಾಗಿ ತಿಂಡಿಯಾಗದಿದ್ದರೆ,ಊಟವಾಗದಿದ್ದರೆ ಹೊಟ್ಟೆಯಲ್ಲಿ ಸಂಕಟವಾದಂತೆನ್ನಿಸಿ ಉರಿ ಶುರುವಾಗುತ್ತದೆ.ಅಪರೂಪಕ್ಕೆ ಕೋಪವೂ ಬರುವುದುಂಟು.ನಿದ್ರೆಯಂತೂ ಬಿಡಿ,ದಿನಕ್ಕೆ ಆರುಗಂಟೆಗೆ ಕಮ್ಮಿ ನಿದ್ರೆಯಾದರೆ ದಿನವಿಡಿ ತೂಕಡಿಕೆಯೇ.ಸ್ನಾನವಾಗದೇ ಹೋದರೆ ಅದೊಂದು ಕಿರಿಕಿರಿ.ಅಕಾಲಿಕ ಮಳೆಯಲ್ಲಿ ನೆನದರೆ ಶೀತವೋ,ಜ್ವರವೋ ಏನೋ ಒಂದು.

ಆದರೆ ವಿಚಿತ್ರ ನೋಡಿ,ಚುನಾವಣೆಯ ಆ ಎರಡು ದಿನಗಳ ಕಾಲ ನನ್ನ ಪರಿಸ್ಥಿತಿ ತೀರ ವಿಭಿನ್ನ.ಹಿಂದಿನ ರಾತ್ರಿ ಒಂದರೆಕ್ಷಣವೂ ನಿದ್ರೆಯಿಲ್ಲ.ರಾತ್ರಿ ತಿಂದ ಮೂರು ರೊಟ್ಟಗಳ ಹೊರತು ಮಾರನೇಯ ಪೂರ್ತಿ ದಿನ ಊಟ ತಿಂಡಿಯಿಲ್ಲ.ಎರಡು ದಿನಕ್ಕೆ ಸೇರಿ ಒಂದರ್ಧ ಲೀಟರು ನೀರು ಕುಡಿದಿರಬಹುದು.ಅಷ್ಟಾಗಿಯೂ ಚುನಾವಣೆಯ ದಿನ ಪೂರ್ತಿ ಎನರ್ಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು ದೇಹ.ಯಾರಾದರೂ ಮತಯಂತ್ರದ ಬಳಿ ತುಂಬ ಹೊತ್ತು ನಿಂತರೆ ಚಕ್ಕನೇ ಮನಸಿಗೊಂದು ಎಚ್ಚರಿಕೆ.ಮೊಬೈಲು ಇದೆಯಾ ಎನ್ನುವುದರ ಕುರಿತು ಕಣ್ಣಿನಲ್ಲಿಯೇ ಸ್ಕ್ಯಾನಿಂಗ್.ಮತದಾನದ ಪ್ರಕ್ರಿಯೆ ಮುಗಿದು ದಣಿದ ದೇಹವನ್ನ ಜೋರು ಮಳೆಯಲ್ಲಿ ನೆನೆಸಿದ್ದೂ ಆಯಿತು.

ಎಲ್ಲ ಅವ್ಯವಸ್ಥೆಗಳನ್ನು ಮುಗಿಸಿ ಮನೆಗೆ ಬಂದು ಸ್ನಾನ ಮಾಡಿ ಊಟದ ನಂತರ ದಿಂಬಿಗೆ ತಲೆಕೊಟ್ಟರೇ ದಣಿದ ದೇಹಕ್ಕೆ ಸಾವಿನಂಥಹ ನಿದ್ರೆ.ಬೆಳಿಗ್ಗೆಯೆದ್ದರೆ ಕೊಂಚ ದಣಿವಿನ ಶೇಷ ಉಳಿದಿತ್ತೆನ್ನುವುದನ್ನು ಬಿಟ್ಟರೆ ತೊಂದರೆಯೆನೂ ಇರಲಿಲ್ಲ.ರಾತ್ರಿಯೇ ತಮ್ಮನ ಮದುವೆಗೆಂದು ಊರಿನ ರೈಲು ಏರಿದ್ದೆ ನಾನು.ಎರಡು ದಿನದ ಕರ್ತವ್ಯ ಮುಗಿಸುವಷ್ಟರಲ್ಲಿ ಹೆಣವಾಗಿ ಹೋಗಿರುತ್ತೇನೆ ಎಂಬ ನನ್ನದೇ ಭ್ರಮೆಯನ್ನು ದಾಟಿ ಕೈಯಲ್ಲಿ ಮಣಭಾರದ ಬ್ಯಾಗು ಹಿಡಿದು ರೈಲು ನಿಲ್ದಾಣದಲ್ಲಿ ಓಡುತ್ತಿದ್ದೆ

ಬಹುಶ: ಈ ಚುನಾವಣಾ ಕರ್ತವ್ಯ ದಿಂದ ನಾನು ಕಲಿತಿರಬಹುದಾದ ಬಹುದೊಡ್ಡ ಪಾಠವೊಂದೇ.ನಮ್ಮ ದೇಹ ನಾವಂದುಕೊಂಡಷ್ಟು ದುರ್ಬಲವಲ್ಲ,ದೌರ್ಬಲ್ಯವೇನಿದ್ದರೂ ಮನಸಿನದ್ದೇ.ನಮ್ಮನ್ನು ಬೆದರಿಸುವುದು ನಮ್ಮ ದುರ್ಬಲ ಮನಸ್ಸೇ.ಗಂಟೆ ಕಾಲ ತಿಂಡಿಗೆ ತಡವಾದರೆ ದೇಹವನ್ನು ದುರ್ಬಲವಾಗಿಸುವ ಮನಸೇ ದಿನಗಟ್ಟಲೇ ನಿದ್ರೆ ಆಹಾರಗಳಿಲ್ಲದಿದ್ದರೂ ಗಟ್ಟಿಯಾಗಿ ನಿಲ್ಲಿಸುವುದು.ಮನಸನ್ನು ಗಟ್ಟಿಯಾಗಿಸಿಬಿಟ್ಟರೆ ಬದುಕಿನ ದುರ್ಭರಗಳೆಲ್ಲವೂ ನಗಣ್ಯವೇ.ಚೈತನ್ಯ ದೇಹದ್ದಾದರೂ ಚೈತನ್ಯದ ಹಿಂದಿನ ಶಕ್ತಿ ಮತ್ತದೇ ಮನಸು.ಇಲ್ಲಿ ಚುನಾವಣಾ ಕರ್ತವ್ಯದ್ದೊಂದು ಉದಾಹರಣೆಯಷ್ಟೇ.ಬದುಕಿನ ಪ್ರತಿ ದುರ್ಬಲ ಕ್ಷಣವೂ ಒಂದು ಚುನಾವಣಾ ಕರ್ತವ್ಯವೇ.ಮನಸ್ಸೆನ್ನುವ ಮಾಂತ್ರಿಕನನ್ನು ಅಣಿಗೊಳಿಸಿಬಿಟ್ಟರೆ ಯಶಸ್ಸೆನ್ನುವುದು ನಮ್ಮ ಪಾದದಡಿಯ ಧೂಳು ಅಲ್ಲವಾ..?