ನಾನು ಓದಿದ ಒಂದು ಹೊಸ ಕಾದಂಬರಿ

ನಾನು ಓದಿದ ಒಂದು ಹೊಸ ಕಾದಂಬರಿ

ನಾನು ಇತ್ತೀಚಿಗೆ ಬೆಂಗಳೂರಿನಲ್ಲಿ ನಾಲ್ಕು ದಿನ ಇರಬೇಕಾಗಿ ಬಂದಾಗ ಗಾಂಧಿ ಬಜಾರ್ ನ ಅಂಕಿತ ಪುಸ್ತಕದಂಗಡಿಗೆ ಹೋಗಿ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ ಅವುಗಳಲ್ಲಿ ಎರಡನ್ನು ಬೆಂಗಳೂರಿನಲ್ಲಿ ಓದಿ ಮುಗಿಸಿದೆ ಒಂದು ಪುಸ್ತಕದ ಬಗ್ಗೆ ನನಗೆ ಏನೂ ನೆನಪು ಉಳಿದಿಲ್ಲ.

ಇನ್ನೊಂದರ ಬಗ್ಗೆ ಒಂದೆರಡು ಈಗಲೇ ಬರೆದು ಬಿಡುತ್ತೇನೆ ಮರೆಯುವ ಮೊದಲು !

ಈ ಕಾದಂಬರಿಯ ಲೇಖಕರು ಸುಪ್ರಸಿದ್ಧ ಹೊಸ ಬರಹಗಾರರು. ಅವರ ಹೆಸರು ನಾನು ಇಲ್ಲಿ ಹೇಳುವುದಿಲ್ಲ. ಹಿಂದೊಮ್ಮೆ ಅವರ ಒಂದು ಕಾದಂಬರಿಯನ್ನು ಓದಿದ್ದೆ.

ಈ ಕಾದಂಬರಿಯ ಹೆಸರು ನನಗೆ ಮರೆತು ಹೋಗಿದೆ. ಇರಲಿ, ಓದಿದ ಸಂಗತಿಯನ್ನು ಇಲ್ಲಿ ದಾಖಲಿಸುವೆ.

ಕಥೆ ಹೇಳುವಾತ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಮಲಗಿದ್ದಾನೆ. ಅವನಿಗೆ ಅಲ್ಲಿಯ ಟೆರರಿಸ್ಟ್ ದಾಳಿಯೊಂದರಲ್ಲಿ ಕಾಲಿಗೆ ಗುಂಡು ಬಡಿದಿದೆ. ಮಲಗಿದಲ್ಲಿಂದಲೇ ಅವನು ಒಂದು ಪತ್ರ ಬರೆಯುತ್ತಿದ್ದಾನೆ. ಅದು ಅವನು ಕಟ್ಟಿಕೊಂಡವಳಿಗೋ ಇಟ್ಟುಕೊಂಡವಳಿಗೋ ಅನ್ನುವುದೂ ಈಗ ನೆನಪಿಲ್ಲ. ಈ ಸಂಬಂಧಗಳನ್ನು ತಮ್ಮ ಪತ್ರದಲ್ಲಿ ನೆನೆಯುತ್ತಾನೆ . ಇಂಥ ಸಂಬಂಧಗಳ ಹಿನ್ನೆಲೆಯಾಗಿ ತನ್ನ ತಾಯಿ, ತಂದೆ ಮತ್ತು ತಂದೆ ಇಟ್ಟುಕೊಂಡ ಸಂಬಂಧಗಳ ಕುರಿತು , ಮತ್ತು ಆ ಬಗ್ಗೆ ತಾಯಿ ನಡೆದುಕೊಂಡ ರೀತಿ ಇವುಗಳನ್ನು , ಮತ್ತು ತನ್ನ ಹೆಂಡತಿ ತಾನು ಇನ್ನೊಬ್ಬ ಹೆಂಗಸಿನೊಡನೆ ಸಂಬಂಧ ಇಟ್ಟುಕೊಂಡಿರುವದನ್ನು ಅರಿತ ಮೇಲೆ ನಡೆದುಕೊಂಡ ರೀತಿ ಇವುಗಳನ್ನು ಕುರಿತು ವಿಚಾರ ಮಾಡುತ್ತಾನೆ.
ತಾನು ಕ್ಷತ್ರಿಯ ಎಂದು ಗುರುತಿಸಿಕೊಳ್ಳುವಿಕೆ ಮತ್ತು ಬ್ರಾಹ್ಮಣ ಮತ್ತು ಕ್ಷತ್ರಿಯ ಹೆಂಗಸರು ಗಂಡನ ಇಂಥ ವ್ಯವಹಾರಗಳ ಬಗ್ಗೆ ಯೋಚಿಸುವ ಮತ್ತು ನಡೆದುಕೊಳ್ಳುವ ರೀತಿಗಳಲ್ಲಿ ವ್ಯತ್ಯಾಸಗಳನ್ನು ಇಲ್ಲಿ ಚರ್ಚಿಸಿದ್ದಾನೆ.
ಬ್ರಾಹ್ಮಣ (ಅಥವಾ ಲಿಂಗಾಯತ ) ಹೆಂಗಸರು ತಮ್ಮ ಗಂಡನ ಹೊರ ಸಂಬಂಧಗಳನ್ನು ಒಪ್ಪುವುದಿಲ್ಲವಂತೆ , ಅದೇ ಕ್ಷತ್ರಿಯ ವರ್ಗದ ಹೆಂಗಸರು ಅದನ್ನು ಸಹಜವೆಂಬಂತೆ ಸ್ವೀಕರಿಸುತ್ತಾರಂತೆ.

ಕಾದಂಬರಿಯ ಬರಹದ ರೀತಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಯೇ ಹೊರತು ನನಗೆ ಏನೂ ವಿಶೇಷವಾದದ್ದು ದೊರಕಲಿಲ್ಲ. ಈ ಕಾದಂಬರಿಯನ್ನು ನಾನು ಇದ್ದ ನೆಂಟರ ಮನೆಯಲ್ಲಿಯೇ ಬಿಟ್ಟು ಬಂದೆ. ಈ ಕಾದಂಬರಿಯಲ್ಲಿ ಮುಜುಗರ ಉಂಟುಮಾಡುವ ಒಂದು ಪುಟ ಇರುವುದಾದರೂ ಈ ಕನ್ನಡ ಕಾದಂಬರಿಯನ್ನು ಓದುವವರು ಯಾರು? ಹಿರಿಯರು ಓದಿದರೆ ಏನೂ ತೊಂದರೆ ಇಲ್ಲ. ಇನ್ನು ಮಕ್ಕಳು ? ಕನ್ನಡವನ್ನು, ಅದೂ ಕನ್ನಡ ಕಾದಂಬರಿಯನ್ನು ಓದುವ ಮಕ್ಕಳು ಯಾರು ಇದ್ದಾರೆ ಸ್ವಾಮಿ, ಈ ಕಾಲದಲ್ಲಿ?

Rating
No votes yet