ಕಗ್ಗ ದರ್ಶನ – 46 (2)
ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ-
ನಿಳೆಗೆ ಬೇಸರ ತರುವ ದಿನದಿನದ ಮಾತು
ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ
ಗಳಿಸುವವೊಲ್ ಯತ್ನಿಸಲೆ – ಮರುಳ ಮುನಿಯ
ರಭಸದಿಂದ ಸುರಿಯುವ ಮಳೆಯ ಹೊಡೆತಕ್ಕೆ ಸಿಲುಕಿ, ಹಳೆಯ ಮನೆ ಬೀಳುವುದು ಜಗತ್ತಿಗೆ ಬೇಸರ ಹಾಗೂ ನೋವು ತರುವ ದಿನದಿನದ ಮಾತು. ಅಳಿದ ಮನೆಯನ್ನು ಮತ್ತೆ ಕಟ್ಟಿ, ಅಲ್ಲಿ ಬದುಕುತ್ತಿದ್ದ ಜನರ ಬಾಳಿನಲ್ಲಿ ಬೆಳಕು ಬರುವಂತಾಗಲು, ಅವರಿಗೆ ಹೊಸಬದುಕು ನೀಡಲು ಪ್ರಯತ್ನಿಸು ಎಂಬ ಸಂದೇಶ ನೀಡುತ್ತಾರೆ ಮಾನ್ಯ ಡಿವಿಜಿ.
ಮಾನವ ಮಾಡುವ ಯುದ್ಧಗಳಿಂದಾಗುವ ಅನಾಹುತಗಳು ಒಂದೆಡೆ; ಪ್ರಾಕೃತಿಕ ವಿಕೋಪಗಳಿಂದ ಆಗುವ ಪ್ರಾಣಹಾನಿ ಮತ್ತು ಸೊತ್ತು ಹಾನಿ ಇನ್ನೊಂದೆಡೆ. ಎರಡರಿಂದಲೂ ತತ್ತರಿಸಿ ಹೋಗುತ್ತದೆ ಜನಸಾಮಾನ್ಯರ ಬದುಕು. ಕಳೆದ ೧೭ ವರುಷಗಳಲ್ಲಿ ಭಾರತದಲ್ಲಿ ಅತಿ ದೊಡ್ಡ ಭೂಕಂಪ ಸಂಭವಿಸಿದ್ದು ೨೬-೧-೨೦೦೧ರಂದು ಗುಜರಾತಿನಲ್ಲಿ. ಅದರಲ್ಲಿ ಸತ್ತವರ ಸಂಖ್ಯೆ ೨೦,೦೮೫. ಈ ಅವಧಿಯಲ್ಲಿ ಅತ್ಯಂತ ಜಾಸ್ತಿ ಪ್ರಾಣಹಾನಿಯಾದದ್ದು ೨೬-೧೨-೨೦೦೪ರ ಭೂಕಂಪ ಮತ್ತು ಸುನಾಮಿಯಲ್ಲಿ. ಅದರಿಂದಾಗಿ ಇಂಡೋನೇಷ್ಯಾದ ಸುಮಾತ್ರದಲ್ಲಿ ಮೃತರಾದವರು ೨.೩೦ ಲಕ್ಷಕ್ಕಿಂತ ಅಧಿಕ. ೮-೧೦-೨೦೦೫ರಂದು ಪಾಕಿಸ್ಥಾನದಲ್ಲಿ ಭೂಕಂಪಕ್ಕೆ ಬಲಿಯಾದವರು ಸುಮಾರು ೮೭,೦೦೦ ಜನರು. ಅನಂತರ, ಚೀನಾದ ಪೂರ್ವ ಸಿಚುಆನಿನಲ್ಲಿ ೧೨-೫-೨೦೦೮ರಂದು ಭೂಕಂಪದಿಂದಾಗಿ ಕೊನೆಯುಸಿರು ಎಳೆದವರ ಸಂಖ್ಯೆ ೬೯,೧೯೭. ಈ ಅವಧಿಯ ಅತ್ಯಂತ ಭೀಕರ ಭೂಕಂಪ ಸಂಭವಿಸಿದ್ದು ಹಾಯಿತಿ ದ್ವೀಪದಲ್ಲಿ ೧೨-೧-೨೦೧೦ರಂದು. ಅದಕ್ಕೆ ಬಲಿಯಾದವರು ಸುಮಾರು ೧,೬೦,೦೦೦ ಜನರು. ೧೧-೩-೨೦೧೧ರಂದು ಜಪಾನಿನ ಹೊನ್ಷುನನ್ನು ಮೂರು ಬಾರಿ ನಡುಗಿಸಿದ ಭೂಕಂಪ ಕಬಳಿಸಿದ್ದು ೧೮,೧೮೪ ಜನರ ಪ್ರಾಣಗಳನ್ನು. ೨೫-೪-೨೦೧೫ರಂದು ಪಕ್ಕದ ನೇಪಾಳದ ಭೂಕಂಪದಲ್ಲಿ ಅಸು ನೀಗಿದವರು ೯,೦೧೮ ಜನರು. ಇತ್ತೀಚೆಗೆ, ೧೨-೧೧-೨೦೧೭ರಂದು ಇರಾನ್-ಇರಾಕ್ ಗಡಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ತೀರಿಕೊಂಡವರು ೫೪೦ ಜನರು.
ಅಬ್ಬ, ಎಂತಹ ದುರಂತಗಳು! ಇವಿಷ್ಟೇ ಅಲ್ಲ; ೨೦೦೧ರಿಂದೀಚೆಗೆ, ಇವಲ್ಲದೆ ಇತರ ಹಲವಾರು ಭೂಕಂಪಗಳು ಮತ್ತು ಚಂಡಮಾರುತಗಳಿಗೆ ಸಾವಿರಾರು ಜನರು ಬಲಿಯಾಗಿದ್ದಾರೆ. ನೂರಾರು ಕುಟುಂಬಗಳು ನಿರ್ನಾಮವಾಗಿವೆ. ಅವರಿಗೆ ಹೊಸ ಮನೆಗಳನ್ನೇನೋ ಕಟ್ಟಿ ಕೊಡಬಹುದು. ಆದರೆ, ಅವರ ಬದುಕನ್ನು ಪುನಃ ಕಟ್ಟುವುದು ಸುಲಭದ ಕೆಲಸವೇ? ಇದನ್ನು ಸವಾಲಾಗಿ ಸ್ವೀಕರಿಸಿ, ಹಲವಾರು ಸಂಘಸಂಸ್ಥೆಗಳು ಅವರಿಗೆ ಹೊಸಬದುಕು ನೀಡಲು ದುಡಿಯುತ್ತಿವೆ. ಈ ಕಾಯಕದ ಅಗಾಧತೆ ಗಮನಿಸಿದಾಗ, ಡಿವಿಜಿಯವರ ಸಂದೇಶಕ್ಕೆ ಹೊಸ ಅರ್ಥ ಮೂಡುತ್ತದೆ, ಅಲ್ಲವೇ?