ಮಕ್ಕಳಚಿತ್ರವೆಂದು ಕಡೆಗಣಿಸದಿರಿ,ಅಲ್ಲಿಯೂ ಇರಬಹುದು ಚಂದದ ಸಿದ್ದಾಂತ...!!

Submitted by gururajkodkani on Thu, 05/09/2019 - 17:49

'ಅವೆಂಜರ್ಸ್ ಎಂಡ್ ಗೇಮ್' ನನಗೆ ಆ ಸರಣಿಯಲ್ಲಿ ತುಂಬ ಇಷ್ಟದ ಸಿನಿಮಾವೇನಲ್ಲ.ಆ ಸರಣಿಯ ಉಳಿದ ಕೆಲವು ಸಿನಿಮಾಗಳಷ್ಟು ಅಧ್ಭುತವಾಗಿ ಈ ಸಿನಿಮಾ ಬಂದಿಲ್ಲವೆನ್ನುವುದು ನನ್ನ ಭಾವನೆ.ಆದರೂ ಎಂಡ್ ಗೇಮಿನ ಅದೊಂದು ಸನ್ನಿವೇಶ ಮಾತ್ರ ತುಂಬ ಕಾಡಿಬಿಡುತ್ತದೆ ಕೊನೆಯಲ್ಲಿ.ಮಹಾ ಖಳನಾಯಕ ಥಾನೋಸ್ ,ಜಗತ್ತಿನ ಎಲ್ಲ ಶಕ್ತಿಗಳನ್ನು ಒಟ್ಟುಗೂಡಿಸಿ ಇನ್ನೇನು ಜಗತ್ತನ್ನೇ ಮಾಯಮಾಡಬೇಕೆಂದುಕೊಳ್ಳುವ ಹಂತದಲ್ಲಿ ,ಎದುರಿಗೆ ಹೋರಾಡುತ್ತ ನಿಂತಿರುವ ನಾಯಕನತ್ತ ನೋಡಿ ಸಣ್ಣಗೆ ನಕ್ಕು,'I am inevitable.' ಎನ್ನುತ್ತಾನೆ.ಆದರೆ ಅಲ್ಲೊಂದು ಸಣ್ಣ ತಿರುವಿದೆ,ಅದ್ಯಾವ ಹಂತದಲ್ಲೋ ನಾಯಕ ,ಖಳನಾಯಕನ ಕೈಯಲ್ಲಿದ್ದ ಶಕ್ತಿಯನ್ನು ಕಿತ್ತುಕೊಂಡಿದ್ದಾನೆ.ಅದೀಗ ನಾಯಕನ ಕೈಯಲ್ಲಿದೆ.ತನ್ನ ಕೈಯಲ್ಲಿನ ತಾಂತ್ರಿಕ ಕೈಗವಸಕ್ಕೆ ವಿಶ್ವದ ಶಕ್ತಿಗಳನ್ನೆಲ್ಲ ಸೇರಿಸಿಕೊಂಡ ನಾಯಕ ,'and i....am......iron man' ಎಂದುಲಿದು ಚಿಟಿಕೆ ಹೊಡೆಯುತ್ತಾನೆ.ಆ ಕ್ಷಣಕ್ಕೆ ಥ್ಯಾನೋಸ್ ಸೇರಿದಂತೆ ಅವನ ಸೈನ್ಯವೆಲ್ಲ ಪ್ರಪಂಚದಿಂದ ಪುಡಿಪುಡಿಯಾಗಿ ಮಾಯವಾಗಿ ಹೋಗುತ್ತದೆ.

ಈ ದೃಶ್ಯವೇಕೋ ಭಾವುಕವಾಗಿ ಬಹಳ ಹೊತ್ತಿನವರೆಗೂ ಹಿಡಿದಿಟ್ಟುಬಿಟ್ಟಿತ್ತು ನನ್ನನ್ನು.ನೆಚ್ಚಿನ ಸೂಪರ್ ಹೀರೋ ಮುಗಿದುಹೋದನೆನ್ನುವ ಕಾರಣಕ್ಕೆ ಅದೇ ದೃಶ್ಯ ಲಕ್ಷಾಂತರ ಅಭಿಮಾನಿಗಳನ್ನು ಕಾಡಿದೆಯಾದರೂ ನನ್ನನ್ನು ಅದು ಕಾಡಿದ್ದು ಬೇರೆಯದ್ದೇ ಕಾರಣಕ್ಕೆ.ಅವಾಸ್ತವಿಕ ಕತೆಯೊಂದರ ಭಾಗವಾದರೂ ಬದುಕಿನ ಸರಳ ಸತ್ಯವೊಂದನ್ನು ಅದೆಷ್ಟು ಚಂದವಾಗಿ ಅನಾವರಣಗೊಳಿಸಿಬಿಟ್ಟಿತ್ತಲ್ಲ ಆ ದೃಶ್ಯ..? ಬದುಕಿನ ಕಷ್ಟಗಳು ಅಕ್ಷರಶ: ಥಾನೋಸ್‌ನಂತೆ ಅಲ್ಲವಾ..? 'ಅನಿವಾರ್ಯ,ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ' ಎನ್ನುತ್ತಲೇ ನಮ್ಮೆದುರು ಬಂದು ನಿಲ್ಲುತ್ತವೆ.ಸೋಲಬಾರದು ನಾವು.ಧೈರ್ಯ,ಆತ್ಮವಿಶ್ವಾಸ ,ಮನೋಸ್ಥೈರ್ಯದಂಥಹ ನಮ್ಮೊಳಗಿನ ಶಕ್ತಿಯನ್ನೊಡಗೂಡಿ ಎದುರಿಸಿ ನಿಲ್ಲಬೇಕು.ಗಟ್ಟಿಯಾಗಿ ನಿಂತು ಹೋರಾಡಿ ಕಷ್ಟದೆದುರಿಗಿನ 'ಉಕ್ಕಿನ ಮನುಷ್ಯ'ನಾದಾಗ ಮಾತ್ರ ಕಷ್ಟಗಳು ಚಿಟಿಕೆ ಹೊಡೆಯುವುದರಲ್ಲಿ ಮಾಯವಾಗುತ್ತವೆ.ಥೇಟು ಸಿನಿಮಾದಂತೆ.

ಹೀಗೆ ಆಂಗ್ಲ ಅತಿವಾಸ್ತವದ ಸಿನಿಮಾಗಳಲ್ಲಿ ಚಂದದ ದೃಶ್ಯವನ್ನೋ,ಸಂಭಾಷಣೆಯನ್ನೋ,ಏಕೋಕ್ತಿಯನ್ನೋ ಗಮನಿಸುತ್ತಿರುವುದು ಇದೇ ಮೊದಲಲ್ಲ.ಇಂತಹ ಸಿನಿಮಾಗಳನ್ನು ನೋಡುವಾಗಲೆಲ್ಲ ಆಗಾಗ ಈ ಬಗೆಯ ಸಂಭಾಷಣೆ ನಾನು ಕೇಳಿದ್ದಿದೆ.ಪ್ರತಿ ಸಿನಿಮಾದಲ್ಲೂ ಒಂದಿಲ್ಲೊಂದು ಮನಮುಟ್ಟುವ ಸಂಭಾಷಣೆಗೆ ತಲೆದೂಗಿದ್ದಿದೆ.ಮೊದಲ ಬಾರಿಗೆ ಹೀಗೊಂದು ಸಂಭಾಷಣೆ ಕೇಳಿದ್ದು 'ಸ್ಪೈಡರ್ ಮ್ಯಾನ್' ಸಿನಿಮಾದಲ್ಲಿ.ಅನಿರೀಕ್ಷಿತವಾಗಿ ವಿಕಿರಣಪೀಡಿತ ಜೇಡದ ಕಡಿತಕ್ಕೊಳಗಾಗುವ ಪೀಟರ್ ಪಾರ್ಕರ್,ಸ್ಪೈಡರ್‌ಮ್ಯಾನ್ ಆಗಿ ಬದಲಾಗುತ್ತಾನೆ.ಸಣ್ಣದ್ದೊಂದು ಅಹಂಕಾರಕ್ಕೆ ಬಲಿಯಾಗಿ ,ಯಾರನ್ನೋ ನಿರ್ಲಕ್ಷಿಸಿ ತನ್ನ ಮಾವನನ್ನು ಕಳೆದುಕೊಂಡು ಬಿಡುತ್ತಾನೆ.ತನ್ನ ಮಾವನ ಸಾವಿಗೆ ಪರೋಕ್ಷವಾಗಿ ತಾನೇ ಕಾರಣ ಎಂದು ಗೊತ್ತಾದಾಗ ಆಘಾತಕ್ಕೊಳಗಾಗುವ ಸ್ಪೈಡಿಗೆ ತನ್ನ ಮಾವ ಹೇಳಿದ್ದ ,'With great power,comes great responsibility' ಎನ್ನುವ ಸಾಲುಗಳು ನೆನಪಾಗುತ್ತವೆ.ಮೊದಲ ಸಲ ಸಿನಿಮಾದಲ್ಲಿ ಆ ಏಕೊಕ್ತಿ ಕೇಳಿದಾಗ ನನಗೆ ಹದಿನಾರು ವರ್ಷ ವಯಸ್ಸು.ಕೇಳಿದ ಮೊದಲ ಮೈ ಜುಮ್ಮೆನ್ನಿಸಿತ್ತು ಸಂಭಾಷಣೆ.'ದೊಡ್ಡ ಅಧಿಕಾರ ಅಥವಾ ಶಕ್ತಿಯೊಂದರ ಹಿಂದೆ ದೊಡ್ಡ ಜವಾಬ್ದಾರಿಯೂ ಬರುತ್ತದೆ' ಎನ್ನುವ ಸಾಲುಗಳನ್ನು ನಮ್ಮನ್ನಾಳುವವರು ಅರ್ಥ ಮಾಡಿಕೊಂಡಿದ್ದರೆ ಎಷ್ಟು ಚಂದವಿತ್ತು ಎಂದು ಆವತ್ತಿಗೂ ಇವತ್ತಿಗೂ ಅನ್ನಿಸಿದ್ದಿದೆ. 'ಬುದ್ದಿವಂತಿಕೆ ನಮಗಿರುವ ಸವಲತ್ತು,ಇದನ್ನು ಸಾಧ್ಯವಾದಷ್ಟು ಜನರ ಒಳಿತಿಗೆ ಬಳಸಿಕೊಳ್ಳಬೇಕು' ಎನ್ನುವ ಸಾಲು ಸಹ ಇದೇ ಸಿನಿಮಾದ ಎರಡನೇ ಭಾಗದ್ದು.

ಅವೆಂಜರ್ ಸರಣಿಯಲ್ಲಂತೂ ಇಂತಹ ಸಾಲು ಸಾಲು ಸಂಭಾಷಣೆಗಳು ತುಂಬಿವೆ.ಮೊದಲ ಸಿನಿಮಾದ ಕೊನೆಯ ಹಂತದಲ್ಲಿ ,'Thats my secret captain, I am always angry' ಎನ್ನುವ ಬ್ರುಸ್ ಬ್ಯಾನರ್,ಮರುಕ್ಷಣವೇ ದೈತ್ಯ ಹಲ್ಕ್ ಆಗಿ ಬದಲಾಗುತ್ತಾನಲ್ಲ,ಕೊಂಚ ಹಿಡಿತವಿದ್ದರೆ ನಮ್ಮ ನ್ಯೂನತೆಗಳೇ ನಮ್ಮ ಶಕ್ತಿಗಳಾಗಿ ಬದಲಾಗಬಹುದು ಎನ್ನುವ ಸಿದ್ಧಾಂತವನ್ನು ಆ ದೃಶ್ಯ ಪ್ರತಿಪಾದಿಸಿತೆನ್ನುವುದು ನನ್ನ ನಂಬಿಕೆ. Age of ultron ಸಿನಿಮಾದ ಒಂದು ಹಂತದಲ್ಲಿ,'The city is flying,were fighting an army of robots and i have a bow and arrow.Nothing of this makes sense ಎನ್ನುತ್ತಾನೆ ಹಾಕ್ ಐ.ಉಳಿದವರಿಗೆ ಹೋಲಿಸಿದರೆ ಬಾಣ ಬಿಲ್ಲು ಹಿಡಿದು ಹೋರಾಡುವವನಾಗಿರುವ ತಾನು ದುರ್ಬಲನೆನ್ನಿಸಿಕೊಂಡಿದ್ದರೂ ಸೋಲೊಪ್ಪದ ಧೈರ್ಯಶಾಲಿಯ ಸಿದ್ಧಾಂತ ಅವನದ್ದು.ಇದೇ ಒಂದು ಸಿನಿಮಾದಲ್ಲಿ ,' ನಿನ್ನ ರಕ್ಷಣಾ ಕವಚ ತೆಗೆದುಬಿಟ್ಟರೆ ನಿನ್ನ ಅಸ್ತಿತ್ವವೇನು..' ಎಂದು ಕ್ಯಾಪ್ಟನ್ ಅಮೇರಿಕಾ ಕೇಳಿದಾಗ,' ಮೇಧಾವಿ,ಸಿರಿವಂತ ಮತ್ತು ಪರೋಪಕಾರಿ' ಎಂದುತ್ತರಿಸುತ್ತಾನಲ್ಲ ಐರನ್ ಮ್ಯಾನ್.ಮನುಷ್ಯನ ಕೃತ್ರಿಮತೆಯ ಮುಖವಾಡ ಕಳಚಿಟ್ಟಾಗ ಕಾಣುತ್ತದಲ್ಲ ವ್ಯಕ್ತಿತ್ವ,ಅದು ಮಾತ್ರವೇ ಮನುಷ್ಯ ಬದುಕಿನ ನಿಜವಾದ ಸಾಧನೆ ಎನ್ನುವ ಸಿದ್ಧಾಂತವನ್ನು Iron Man ಪಾತ್ರದಾರಿ ಜ್ಯೂ. ರಾಬರ್ಟ್ ಡೌನಿ ಪ್ರತಿಪಾದಿಸಿದನಾ..? ನನಗಂತೂ ಹಾಗನ್ನಿಸಿತು.

ಇವು ಈ ಕ್ಷಣಕ್ಕೆ ನನಗೆ ನೆನಪಾದ ಕೆಲವು ಸಂಭಾಷಣೆಗಳಷ್ಟೇ.ಸೂಕ್ಷ್ಮ ವಾಗಿ ಗಮನಿಸಿದರೆ ಇಂಥಹ ಸಾಲುಸಾಲು ಮನೋಜ್ಞ ಸಂಭಾಷಣೆಗಳನ್ನು ಮಾರ್ವಲ್ ಕಾಮಿಕ್ಸ್ ಸಿನಿಮಾಗಳಲ್ಲಿ ನಾವು ಕೇಳಬಹುದು. ಆದರೆ ನಮ್ಮಲ್ಲೊಂದು ಪೂರ್ವಾಗ್ರಹವಿದೆ. ಅನೇಕರು ಇಂಗ್ಲಿಷು ಅತಿವಾಸ್ತವದ ಸಿನಿಮಾಗಳೆಂದರೆ,ಸೂಪರ್ ಹೀರೊಗಳ ಕತೆಗಳೆಂದರೆ ಮೂಗು ಮುರಿಯುತ್ತಾರೆ.ಚಿಕ್ಕಮಕ್ಕಳಿಗೆ ಮಾತ್ರ ಅವು ಸೀಮಿತ ಎನ್ನುವಂತಾಡುತ್ತಾರೆ‌.ಅಂಥವರಿಗೊಂದು ಮಾತು,ಈ ಸಿನಿಮಾಗಳನ್ನು ಅವುಗಳ ಕತೆಗಾಗಿಯೋ,ಅಲ್ಲಿರಬಹುದಾದ ಅತಿವಾಸ್ತವಿಕ ಕಲ್ಪನೆಯ ರೋಮಾಂಚಕ ಸನ್ನಿವೇಶಕ್ಕಾಗಿಯೊ ವೀಕ್ಷಿಸಬೇಡಿ. ಆದರೆ ಒಂದು ಯಶಸ್ವಿ ಫ್ಯಾಂಟಸಿ ಸಿನಿಮಾದಲ್ಲಿ ಎಲ್ಲ ರೋಮಾಂಚನದ ನಡುವೆಯೇ ಚಂದದ ಸಂಭಾಷಣೆಯನ್ನು,ಸನ್ನಿವೇಶಗಳನ್ನೂ ಸೇರಿಸಿರುತ್ತಾನೆ ನಿರ್ದೇಶಕ.ಬದುಕಿನ ಅನೇಕ ಕ್ಲಿಷ್ಟಕರ ಫಿಲಾಸಫಿಗಳನ್ನು ಬಹಳ ಸುಲಭವಾಗಿ ಏಕೋಕ್ತಿಗಳಲ್ಲಿ ಹೇಳಿಬಿಟ್ಟಿರುತ್ತಾನೆ ಸಿನಿಮಾದ ಸೃಷ್ಟಿಕರ್ತ.ಅವುಗಳಿಗೋಸ್ಕರವಾದರೂ ಈ ಸಿನಿಮಾಗಳನ್ನು ನೋಡಿ.ಮಕ್ಕಳು ರೋಮಾಂಚನದ ಖುಷಿ ಅನುಭವಿಸಲಿ.ಅವರೊಟ್ಟಿಗೆ ಸಣ್ಣದ್ದೊಂದು ಸಿದ್ಧಾಂತವನ್ನು ಸುಲಭವಾಗಿ ಅರಿತುಕೊಂಡ ಸಂತಸ ನಿಮಗಿರಲಿ ಅಲ್ಲವಾ...?