ಮರೆಯಾಗುತ್ತಿದೆ ಮಂದಸ್ಮಿತ

ಮರೆಯಾಗುತ್ತಿದೆ ಮಂದಸ್ಮಿತ

ಚಿತ್ರ

ತುಂಬಾ ಜನ ಸರ್ವೇ ಸಾಮಾನ್ಯವಾಗಿ ಯಾವಾಗಲೂ ಹೇಳುವಂತಹ ಮಾತು "ನಾವು ಪ್ರತಿದಿನ ನಗುತ್ತಾ ಇರ್ಬೇಕು ಅಂತ ಅಂದುಕೊಳ್ಳುತ್ತೇವೆ ಆದರೆ ಅದು ಸಾಧ್ಯವಾಗಲ್ಲಾ". ಇನ್ನೂ ಕೆಲವರು ಹೇಳುವ ಮಾತು "ನಾವು ತುಂಬಾ ನಗ್ತಾ ಇದ್ರೆ ಮುಂದೆ ಏನೋ ಕಾದಿದೆ ಅಂತ".
ಈಗ ನಾವೆಲ್ಲ ಕಾರ್ಪೊರೇಟ್ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಎಲಾರದ್ದು ತುಂಬಾ busy ಜೀವನ, ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ ಅವರಿಬ್ಬರೂ ಮಾತಡೋಕು ಕೂಡ ವಾರಾಂತ್ಯ ಕಾಯಬೇಕಾದ ಪರಿಸ್ಥಿತಿ. ಇನ್ನು ಕೆಲಸದ ಸಮಯದಲ್ಲಿ ಟಾರ್ಗೆಟ್ ಬೆನ್ನು ಹತ್ತಿ ಓಡುತ್ತಾ ಇರುತ್ತೇವೆ. ಕೆಲಸಕ್ಕೆ ಹೋಗುವಾಗ ಮನೆಗೆ ಬರುವಾಗ ಟ್ರಾಫಿಕ್ ನೆನೆಸಿಕೊಂಡರೆ ಏನಿದು ಜೀವನ ಅನಿಸದೆ ಇರದು. ಇಂಥ ಜೀವನದಲ್ಲಿ ನಗು ಎಲ್ಲಿಂದ ಹುಡುಕೋದು? ಕೆಲವರಿಗೆ ಈ ಪ್ರಶ್ನೆ ಕೇಳಿಕೊಳ್ಳೊದಕ್ಕೂ ಕೂಡ ಸಮಯವಿರೋಲ್ಲ.
ಹಿಂದಿನ ಕಾಲದಲ್ಲಿ ಅವಶ್ಯಕತೆಗೆ ತಕ್ಕಷ್ಟು ದುಡಿದು ಉಳಿದ ಸಮಯನ ತಮ್ಮ ವೈಯಕ್ತಿಕ ಜೀವನಕ್ಕೆ ಕೊಡುತ್ತಿದ್ದರು ಅಂದರೆ ತಂದೆ, ತಾಯಿ, ಹೆಂಡತಿ, ಮಕ್ಕಳು ಇವರ ಜೊತೆ ಕಾಲ ಕಳೆಯಲು. ಆದರೆ ಈಗ ದುಡಿಮೆಯ ಅರ್ಥವೇ ಬದಲಾಗಿ ಹೋಗಿದೆ. "ಅತೀ ಆದರೆ ಅಮೃತವೂ ವಿಷವೇ" ಎಂಬ ಮಾತಿದೆ, ಇದು ಎಲ್ಲದಕ್ಕೂ ಅನ್ವಯಿಸುತ್ತದೆ.
ನಗು ದೊರೆಯುವ ವಸ್ತುವಲ್ಲ, ಅದು ಎಲ್ಲರೊಳಗೆ ಇರುವಂತದ್ದು. ಒಂದೇ ಮಾತಿನಲ್ಲಿ ಹೇಳುವುದಾದರೆ, ನಗು ದೇವರು ನಮಗೆ ನೀಡಿರುವ "ಸಂಜೀವಿನಿ". ತಿಳಿದವರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ "ಮಗುವಿನ ಮಂದಹಾಸ ಸಾಯುವವನನ್ನೂ ಕೂಡ ಬದುಕಿಸಬಲ್ಲದು". ಅಂತಹ ನಗುವನ್ನೆ ಇಂದು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮೆದುಳಿನಲ್ಲಿ ಕೆಲಸದ ಒತ್ತಡ ಎಷ್ಟಿದೆ ಎಂದರೆ, ನಮ್ಮ ಪ್ರೀತಿ ಪಾತ್ರರನ್ನು ದೂರ ಮಾಡಿಕೊಳ್ಳುವಷ್ಟು. ಇದಕ್ಕೆ ಒಂದು ಚಿಕ್ಕ ಉದಾಹರಣೆ, ಕೆಲಸದ ಒತ್ತಡದಿಂದ ಮನೆಗೆ ಬಂದಾಗ ನಮ್ಮ ಮಗು ನಮ್ಮ ಹತ್ತಿರ ಪ್ರೀತಿಯಿಂದ ಬಂದರೂ ದೂರ ತಳ್ಳುತ್ತೇವೆ.
ಕಾಲ ಕಳೆದಂತೆ ಅವಶ್ಯಕತೆ ಇಲ್ಲದ್ದು ನಶಿಸಿ ಹೋಗುತ್ತವೆ ಅಂತಾರೆ, ಹಾಗೆ ನಮ್ಮ ನಗು ನಶಿಸಿ ಹೋಗಬಾರದು. ಯಾವುದೇ ಕೆಲಸ ಮಾಡಿದರು ಖುಷಿಯಿಂದ ಮಾಡಿ. ಮುಖದಮೇಲೆ ಮಂದಹಾಸ ಇದ್ದರೆ ಯಾವ ಅಲಂಕಾರವೂ ಬೇಕಾಗಿಲ್ಲ. ಮಂದಹಾಸ ಇರುವ ಮಗುವನ್ನು ಎಲ್ಲರೂ ಎತ್ತಿ ಮುದ್ದಾಡುವರು, ಅದಿಲ್ಲದ ಮಗು ಎಷ್ಟೇ ಮುದ್ದಾಗಿದ್ದರು ಎತ್ತಿಕೊಳ್ಳುವುದು ಕಷ್ಟ. ಜೀವನದಲ್ಲಿ ನೆಮ್ಮದಿ, ಖುಷಿ ಇಲ್ಲ ಎಂದರೆ, ಎಷ್ಟು ದುಡ್ಡು ಆಸ್ತಿ ಇದ್ದರೂ ಅದು ವ್ಯರ್ಥ. ನೆಮ್ಮದಿಯ ಉಸಿರಾಟದಿಂದ ಮುಖದಲ್ಲಿ ಮೂಡುವ ಮಂದಹಾಸವೇ "ಮಂದಸ್ಮಿತ". ಈ ಮಂದಸ್ಮಿತ ಎಲ್ಲರ ಜೀವನದಲ್ಲಿ ಇರಲಿ ಎಂಬುದೇ ನನ್ನ ಈ ಬರಹದ ಮುಖ್ಯ ಉದ್ದೇಶ.
ನಿಮ್ಮ ಪ್ರಶಾಂತ...

Rating
Average: 5 (1 vote)