ಕಗ್ಗ ದರ್ಶನ – 48 (1)
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ
ಕೋಟಿ ನಟರಾಂತಿಹರು ಚಿತ್ರಪಾತ್ರಗಳ
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ
ನೋಟಕರು ಮಾಟಕರೆ - ಮಂಕುತಿಮ್ಮ
ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚಿತ್ರವಿಚಿತ್ರ ಪಾತ್ರಗಳನ್ನು ಧರಿಸಿ (ಆಂತು) ನಟಿಸುತ್ತಿದ್ದಾರೆ ೭೦೦ ಕೋಟಿಗಳಿಗಿಂತ ಅಧಿಕ ನಟರು. ಹೀಗೆ ನಡೆಯುತ್ತಿರುವ ನಾಟಕಕ್ಕೆ ಕಥೆಯಿಲ್ಲ; ಆರಂಭವೂ ಇಲ್ಲ, ಮುಕ್ತಾಯವೂ ಇಲ್ಲ. ಈ ನಾಟಕ ನೋಡುವವರೂ ಇದರ ನಟರು (ಆಟಕರು) ಆಗಿರುವುದೇ ಇದರ ವಿಶೇಷ ಎಂದು ನಮ್ಮ ಬದುಕನ್ನು ಒಂದು ಮಹಾನ್ ನಾಟಕಕ್ಕೆ ಹೋಲಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ನಮ್ಮ ದೇಶವನ್ನು ಆಳಿದ ಮಹಾರಾಜರನ್ನು ನೆನೆಯೋಣ. ಸಾಮ್ರಾಟ್ ಅಶೋಕ, ಹರ್ಷವರ್ಧನ, ಕೃಷ್ಣದೇವರಾಯ ಮತ್ತಿತರ ಮಹಾರಾಜರು. ಇವರ ಒಬ್ಬೊಬ್ಬರ ಆಳ್ವಿಕೆಯೂ ಮಹಾನ್ ನಾಟಕದ ಒಂದು ಅಂಕದಂತಿತ್ತು. ರಷ್ಯಾ, ಫ್ರಾನ್ಸ್, ಬ್ರಿಟನ್, ಜರ್ಮನಿ ಹಾಗೂ ಇತರ ವಿದೇಶಗಳಲ್ಲಿಯೂ ಒಬ್ಬೊಬ್ಬ ರಾಜ ಅಥವಾ ರಾಣಿಯ ಆಳ್ವಿಕೆಯ ಅವಧಿಯೂ ಆ ನಾಟಕದ ಒಂದು ಭಾಗವಾಗಿತ್ತು. ಸಿಂಧೂ ನಾಗರಿಕತೆ, ದಕ್ಷಿಣ ಅಮೇರಿಕದ ಇಂಕಾ ನಾಗರಿಕತೆ, ಈಜಿಪ್ಟಿನ ಫಾರೋಗಳ ಅವಧಿಯ ನಾಗರಿಕತೆ – ಇವೆಲ್ಲವೂ ಈ ಮುಗಿಯದ ನಾಟಕದ ಮಹತ್ವದ ಅಧ್ಯಾಯಗಳು.
ಕೈಗಾರಿಕಾ ಕ್ರಾಂತಿಯ ನಂತರ, ಪ್ರಪಂಚದ ನಾಟಕ ಹೆಚ್ಚೆಚ್ಚು ವರ್ಣಮಯ. ವಾಹನಗಳು, ರೈಲುಗಳು ಹಾಗೂ ಮಾನವನನ್ನು ಆಕಾಶಯಾನದ ಯುಗಕ್ಕೆ ಒಯ್ದ ವಿಮಾನಗಳಿಂದಾಗಿ ಈ ನಾಟಕ ಇನ್ನಷ್ಟು ರಂಗುರಂಗು. ರಾಕೆಟ್ ಮತ್ತು ಉಪಗ್ರಹಗಳ ಉಡ್ಡಯನ, ಮಾನವನ ಚಂದ್ರಯಾನ ಹಾಗೂ ಬಾಹ್ಯಾಕಾಶಯಾನ, ಸೌರಮಂಡಲದ ಇತರ ಗ್ರಹಗಳಿಗೆ ವಾಹನಗಳ ಯಾನ – ಇವೆಲ್ಲ ಈ ನಾಟಕದ ರಂಗಸ್ಥಳವನ್ನೇ ವಿಸ್ತರಿಸಿದವು.
ಈಗ ಜಗತ್ತಿನ ವ್ಯವಹಾರಗಳನ್ನು ಗಮನಿಸಿದರೆ, ಬ್ರಹ್ಮಾಂಡ ರಂಗಸ್ಥಳದ ವಿವಿಧ ಆಯಾಮಗಳು ತೆರೆದುಕೊಳ್ಳುತ್ತವೆ. ನಮ್ಮನ್ನು ಕ್ಷಣಕ್ಷಣವೂ ದಂಗುಬಡಿಸುವ ಈ ನಾಟಕದ ಬೆಳವಣಿಗೆಗಳಿಂದ ಹೊರಹೊಮ್ಮುವ ಸಂದೇಶ ಏನು? ಈ ನಾಟಕದ ಪ್ರತಿಯೊಂದು ಅಂಕವೂ ಮುಕ್ತಾಯವಾಗುತ್ತಲೇ, ಹೊಸ ಅಂಕ ಶುರು. ನಾಗರಿಕತೆಗಳು ಅಳಿದಿವೆ. ಸಾಮ್ರಾಜ್ಯಗಳು ಪತನವಾಗಿವೆ. ಸಮುದಾಯಗಳು ನಾಶವಾಗಿವೆ. ವಂಶಗಳು ನಿರ್ವಂಶವಾಗಿವೆ. ಕ್ಷಣಕ್ಷಣವೂ ವ್ಯಕ್ತಿಗಳು ನಾಟಕದ ರಂಗಸ್ಥಳದಿಂದ ಶಾಶ್ವತವಾಗಿ ಕಣ್ಮರೆಯಾಗುತ್ತಿದ್ದಾರೆ. ಆದ್ದರಿಂದಲೇ, ಈ ನಾಟಕದ ಪಾತ್ರಧಾರಿಗಳು ತಮ್ಮ ಪಾತ್ರ ಮುಗಿದಾಗ ರಂಗಸ್ಥಳದಿಂದ ನಿರ್ಗಮಿಸಲು ತಯಾರಾಗಿರಬೇಕು, ಅಲ್ಲವೇ?