ನನ್ನೂರು ನನ್ನ ಜನ - ೩ ನನ್ನೂರಿನ ಹೆಮ್ಮೆಯ ಮಂದಿ

ನನ್ನೂರು ನನ್ನ ಜನ - ೩ ನನ್ನೂರಿನ ಹೆಮ್ಮೆಯ ಮಂದಿ

ನನ್ನೂರಿನಲ್ಲಿ ಡಾಕ್ಟರ್‍ಗಳಲ್ಲದೆ ವಕೀಲರೂ ಇದ್ದರು. ಅವರ ಜೊತೆಗೆ ನಮ್ಮ ಅಥವಾ ನನ್ನೂರಿನ ಮಂದಿಗೆ ಯಾವ ವ್ಯವಹಾರಗಳು ಇಲ್ಲವೆಂದರೂ ಸರಿಯೇ. ಯಾಕೆಂದರೆ ನಮ್ಮೂರಲ್ಲಿ ಆಸ್ತಿಯ ಬಗೆಗಿನ ವಿವಾದಗಳಾಗಲೀ, ಹೊಡೆತ ಬಡಿತಗಳಾಗಲೀ, ಕೊಲೆ ಯಾಗಲೀ ನಡೆದುದರ ನೆನಪೇ ನನಗೆ ಇಲ್ಲ. ಇಂದಿಗೂ ಕೆಲ ಮನೆ ಹಿತ್ತಿಲುಗಳು ಖಾಲಿ ಬಿದ್ದಿದ್ದರೂ ಅದು ವ್ಯಾಜ್ಯಗಳ ಕಾರಣದಿಂದ ಅಲ್ಲ. ಆ ಮನೆಗಳ ಹಿರಿಯರು ಕಾಲದೊಂದಿಗೆ ಸೇರಿ ಹೋಗಿದ್ದಾರೆ. ಅವರ ಮಕ್ಕಳು, ಮರಿಮಕ್ಕಳು ಪರ ಊರುಗಳಲ್ಲಿ, ಪರ ದೇಶಗಳಲ್ಲಿ ಉದ್ಯೋಗಗಳ ಕಾರಣಗಳಿಂದ ನೆಲೆಸಿದ್ದಾರೆ. ಈ ಕಾರಣಗಳಿಂದ ವಕೀಲರಿಗೆ ಊರಿನ ಜನರ ನಡುವಿನ ವ್ಯವಹಾರಗಳಿಲ್ಲದಿದ್ದರೂ ಅವರ ಮಕ್ಕಳು ನಮ್ಮ ಊರಿನ ಶಾಲೆಗಳಲ್ಲಿಯೇ ಕಲಿಯುತ್ತಿದ್ದುದರಿಂದ ನಮಗೆ ಅವರ ಪರಿಚಯವಿತ್ತಷ್ಟೆ. ಹಾಂ, ಅಂದ ಹಾಗೆ ಆ ದಿನಗಳಲ್ಲಿ ಡಾಕ್ಟರರ, ವಕೀಲರ, ಶ್ರೀಮಂತರ ಮಕ್ಕಳು ಕೂಡಾ ಮುನಿಸಿಪಲ್ ಶಾಲೆಗೇ ಬರುತ್ತಿದ್ದರು. ಬಡವರ ಮಕ್ಕಳು, ದಲಿತರ ಮಕ್ಕಳು ಎಲ್ಲರೂ ಸೇರಿ ಒಟ್ಟಾಗಿ ಕಲಿಯುತ್ತಿದ್ದ ಆ ದಿನಗಳು ನಿಜವಾಗಿಯೂ ಸಮಾನತೆಯ ದಿನಗಳು. ಜತೆಗೆ ಆ ಶಾಲೆಗಳು ಕನ್ನಡ ಮಾಧ್ಯಮದವುಗಳು. ಹಿರಿಯರಂತೆ ಮಕ್ಕಳೂ ತಮ್ಮ ಶ್ರೀಮಂತಿಕೆಯ ಸೋಂಕು ಇಲ್ಲದವರು. ಅಂದು ವೈದ್ಯರಾಗಲೀ, ವಕೀಲರಾಗಲೀ ಅಥವಾ ಕಂಟ್ರಾಕ್ಟರಾಗಲೀ ಯಾರ ಮನೆಯಲ್ಲೂ ಕಾರುಗಳಿಲ್ಲದ ದಿನಗಳು. ಮುಂದೆ ಕಾರುಗಳು ಬಂದಾಗಲೂ ಮಕ್ಕಳನ್ನು ಯಾರೂ ಶಾಲೆಗೆ ಕಾರುಗಳಲ್ಲಿ ಕರೆತರುತ್ತಿರಲಿಲ್ಲ. ಅವರು ಎಲ್ಲರಂತೆ ಉಳಿದ ಮಕ್ಕಳ ಜೊತೆ ಮಾತಾಡಿಕೊಂಡು, ಓಡಾಡಿಕೊಂಡು  ಹೋಗುತ್ತಿದ್ದ  ದಿನಗಳನ್ನು ಎಣಿಸಿಕೊಂಡರೆ ಇಂದಿನ ಅಸಮಾನತೆಯ ಬೀಜ ಎಲ್ಲಿಂದ ಬಂತು? ಬಡವ ಶ್ರೀಮಂತ ಎಂಬ ಭೇದ, ಜಾತಿಗಳೊಳಗೆ ಹೊರ ನೋಟದ ಅಂತರ ಕಡಿಮೆಯಾದರೂ ಅಂತರಂಗದೊಳಗೆ ಇರುವ ತಾರತಮ್ಯ ಹಿರಿಯರಿಂದಲೇ ಮಕ್ಕಳಿಗೆ ರವಾನೆಯಾಗುತ್ತಿರುವ ರೀತಿ, ಧರ್ಮ ಧರ್ಮಗಳೊಳಗೆ ಭೇದ ಭಾವಗಳೆಲ್ಲಾ ಶಾಲೆಯಲ್ಲಿ ಸಮವಸ್ತ್ರ ಧರಿಸಿಯೂ ಕಂಡೂ ಕಾಣದಂತೆ ಗೋಚರಿಸುತ್ತಿದೆಯಲ್ಲಾ? ಯಾಕೆ ಹೀಗಾಯ್ತು? ಕಾಲಾಯ ತಸ್ಮೈ ನಮಃ ಎಂದಷ್ಟೇ ಉತ್ತರವೇ? ಇರಲಿ.
ಅಂದು ನಮ್ಮ ಊರಲ್ಲಿ ಒಬ್ಬರು ಶ್ರೀಮಂತರು ಆರ್.ಕೆ. ಗುರ್ಜರ್. ಅವರ ಬಳಿ ಚಿಕ್ಕದಾದ ಕಾರು ಇತ್ತು. ಅವರ ಮಕ್ಕಳು ಒಮ್ಮೊಮ್ಮೆ ಬಹು ಅಪರೂಪವಾಗಿ ಶಾಲೆಗೆ ಕಾರಿನಲ್ಲಿ ಬರುತ್ತಿದ್ದರು. ಆರ್.ಕೆ. ಗುರ್ಜರ್ ಅವರು ವಾರ್ಡ್ ಕೌನ್ಸಿಲರ್ ಚುನಾವಣೆಗೆ ಅಂದಿನ ಜನಸಂಘದಿಂದ ನಿಂತವರು. ಅವರ ಎದುರಿಗೆ ಕಾಂಗ್ರೆಸ್ ಪಕ್ಷದಿಂದ ಉಮೇದ್ವಾರರಾಗಿದ್ದು ಗೆದ್ದವರು ಪಿ.ಎಫ್. ರೊಡ್ರಿಗಸ್‍ರವರು. ಇವರು ಮುಂದೆ ಕರ್ನಾಟಕ ಸರಕಾರದ ಶಾಸಕರಾಗಿ, ಬಳಿಕ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿಯೂ ಆಯ್ಕೆಗೊಂಡವರು. ನಾವು ವಿದ್ಯಾರ್ಥಿಗಳು ನಮ್ಮ ಶಾಲೆಗಳಿಗೆ ಸಂಬಂಧಿಸಿದಂತೆ ಗಣ್ಯರ ಸಹಿ ಬೇಕಾದಾಗೆಲ್ಲ ರೊಡ್ರಿಗಸ್‍ರ ಹೆಂಚಿನ ಮನೆಗೆ ಹೋಗುತ್ತಿದ್ದೆವು. ಅವರ ಅಕ್ಕ ಬಹಳ ಶಿಸ್ತಿನ ಮಹಿಳೆ. ಅವರು ನಮಗೆ ಬೇಕಾದ ಕೆಲಸಗಳನ್ನು ಮಾಡಿಸಿ ಕೊಡುತ್ತಿದ್ದರು. ರೊಡ್ರಿಗಸ್‍ರು ನಗುಮೊಗದ ದೃಢಕಾಯದ ಎತ್ತರ ನಿಲುವಿನವರಾದಂತೆಯೇ ಗಹಗಹಿಸಿ ನಗುತ್ತಾ ಮಾತನಾಡುತ್ತಿದ್ದುದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ವೃತ್ತಿಯಲ್ಲಿ ವಕೀಲರಾದ ರೊಡ್ರಿಗಸ್‍ರಲ್ಲಿ ಅವರ ವೃತ್ತಿಗೆ ಸಂಬಂಧಿಸಿದ ವ್ಯವಹಾರಗಳಂತೂ ನಮಗೆ ಇರುವುದಕ್ಕೆ ಸಾಧ್ಯವೇ ಇಲ್ಲ. ಇಂದಿನ ಮಂತ್ರಿಗಳನ್ನು ಕಂಡಾಗಲಂತೂ ರೊಡ್ರಿಗಸ್‍ರು ಅತ್ಯಂತ ಸಜ್ಜನಿಕೆಯ ವ್ಯಕ್ತಿ, ಸರಳ ವ್ಯಕ್ತಿ ಎಂದನ್ನಿಸುತ್ತದೆ.
ಇಂದಿನ ಪರಿಭಾಷೆಯಲ್ಲಿ ಉದ್ಯಮಿಗಳು ಎನ್ನುವುದಕ್ಕೆ ಘನಸ್ತಿಕೆಯ, ಶ್ರೀಮಂತಿಕೆಯ ಪರಿವೇಶವಿದೆ. ಹಾಗೆಯೇ ಯಾವುದೇ ವ್ಯಾಪಾರ ವ್ಯವಹಾರಗಳನ್ನು ಒಟ್ಟು ಸೇರಿಸಿ ‘ಬಿಸಿನೆಸ್’ ಎಂಬ ಶಬ್ದದೊಂದಿಗೆ ಸೇರಿಸಲಾಗುತ್ತದೆ. ಅಂದು ಈ ಬಿಸಿನೆಸ್ ಎಂಬ ಶಬ್ದದ ಬಳಕೆ ಇಲ್ಲದೆಯೇ ಜೀನಸಿನ ಅಂಗಡಿ ವ್ಯವಹಾರ, ಹೊಟೇಲ್ ವ್ಯವಹಾರ, ಕಟ್ಟಡಗಳ ನಿರ್ಮಾಣ, ಸಣ್ಣ ಸಣ್ಣ ಅಂಗಡಿಗಳಲ್ಲಿನ ವ್ಯಾಪಾರ, ಕ್ಷೌರದಂಗಡಿ, ಸೈಕಲ್ ರಿಪೇರಿ, ನೇಕಾರಿಕೆ, ಸೋಡಾ ಅಂಗಡಿ, ಅವಲಕ್ಕಿ ತಯಾರಿ, ಎತ್ತಿನ ಗಾಡಿಯಲ್ಲಿ ಸಾಗಣೆ ವ್ಯವಹಾರ, ಇಸ್ತ್ರಿ ಅಂಗಡಿ, ಹೂವಿನ ಮಾರಾಟ, ಹಾಲಿನ ಮಾರಾಟ, ತರಕಾರಿ ಮಾರಾಟ ಹೀಗೆ ತಮ್ಮದೇ ಆದ ಸ್ವಂತ ದುಡಿಮೆಯನ್ನಿಟ್ಟುಕೊಂಡ ಹಲವರು ಇದ್ದರು. ಇವರೆಲ್ಲರು ಊರಿನ ಗಣ್ಯರೇ ಸರಿ. ಇನ್ನುಳಿದಂತೆ ಹಲವರು ಈ ಮೇಲಿನವರೊಂದಿಗೆ ಸಹಾಯಕರಾಗಿ ದುಡಿಯುವವರು ಗಂಡಸರು, ಹೆಂಗಸರು ಈ ಊರ ಮಂದಿ. ಇದಲ್ಲದೆ ಅಧ್ಯಾಪಕ, ಅಧ್ಯಾಪಿಕೆಯರಾಗಿರುವವರು ಇದ್ದಂತೆಯೇ  ಅಂಚೆ ಕಚೇರಿಯಲ್ಲಿ ಅಂಚೆ ಪೇದೆಗಳಾಗಿ ಕೆಲಸ ಮಾಡುವವರೂ ಇದ್ದರು. ಶಾಲೆಗಳಲ್ಲಿ ಜವಾನರಾಗಿಯೂ ಮಹಿಳೆಯರು ಆ ಕಾಲದಲ್ಲೇ ನೇಮಕಗೊಂಡಿದ್ದರು. ಇಂತಹ ಅವಕಾಶವಿಲ್ಲದ ಇನ್ನಷ್ಟು ಮಂದಿ ಮಹಿಳೆಯರು ಗೇರುಬೀಜ, ಏಲಕ್ಕಿ, ಅಡಿಕೆ ಮಂಡಿಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಇನ್ನು ಕೆಲವರು ಮರ ಹತ್ತಿ ಶೇಂದಿ ತೆಗೆಯುವ ಸ್ವಂತ ಕಾಯಕದೊಂದಿಗೆ, ಇತರರ ಮನೆಯ ತೆಂಗಿನ ಕಾಯಿ ಕೀಳುವ ಕೆಲಸ ಮಾಡುತ್ತಿದ್ದರು. ಇಂತಹವರಲ್ಲಿ ಒಬ್ಬ ವ್ಯಕ್ತಿಯ  ಸ್ವಂತ ದುಡಿಮೆಯ ದಾರಿ ನನಗೆ ಬಹಳವಾಗಿ ನೆನಪಾಗುತ್ತಿದೆ. ಅವರೇ ಚಂದಪ್ಪಣ್ಣ. ಕಾರಣವಿಷ್ಟೇ. ಅವರ ನೆರವು ನನ್ನ ಮನೆಗೆ ಬಹಳಷ್ಟು ಬಾರಿ ಆಗಿದೆ. ಕಾಯಿ ಕೀಳುವ ವೃತ್ತಿಯೊಂದಿಗೆ ಅವರು ಬಾವಿಗಿಳಿದು ಕೊಡಪಾನ ಎತ್ತಿಕೊಡುವುದನ್ನು ರೂಢಿಸಿಕೊಂಡಿದ್ದರು. ಆಗ ಊರಲ್ಲೆಲ್ಲಾ ತೆರೆದ ಬಾವಿಗಳಿದ್ದು ಕೊಡಪಾನಗಳು ಬಾವಿಗೆ ಬೀಳುವ ಸಂದರ್ಭಗಳು ಹೆಚ್ಚು ಇರುತ್ತಿತ್ತು. ಹಗ್ಗ ಹಳತ್ತಾಗಿ ನೀರು ಸೇದುವಾಗ ತುಂಡಾಗಿ ಹಗ್ಗ ಸಹಿತ ಕೊಡಪಾನ ಬಾವಿಯೊಳಗೆ. ಇಲ್ಲವಾದರೆ ತುಂಟ ಮಕ್ಕಳು ಕಿತಾಪತಿ ಮಾಡಿ ಕೊಡಪಾನ ಬಾವಿಗೆ ಹಾಕಿದ್ದೂ ಉಂಟು. ಆಗ ಚಂದಪ್ಪಣ್ಣನ ಮನೆಗೆ ಓಡಬೇಕಿತ್ತು. ಅವರು ತನ್ನಲ್ಲಿರುವ ‘ಪಾತಾಳಗರಡಿ’ ಎಂಬ ಕೊಕ್ಕೆ ಹಾಕಿ ಎಳೆವ ಪ್ರಯತ್ನ ಮಾಡಿಯೂ ಬಾರದಿದ್ದರೆ ಬಾವಿಗಿಳಿದು ಕೊಡಪಾನ ಎತ್ತಿ ತರುತ್ತಿದ್ದರು. ಆಗೆಲ್ಲಾ ಶಾಲೆಯಲ್ಲಿ ಮತ್ತು ಮನೆಯಲ್ಲಿ ಅಮ್ಮ ಹೇಳುತ್ತಿದ್ದ ‘ಕೊಡಲಿಯೂ ರಾಮನೂ’ ಕತೆ ನೆನಪಾಗುತ್ತಿತ್ತು. ಚಂದಪ್ಪಣ್ಣನ ಸಾಹಸವನ್ನು ನೆನಪಿಸಿಕೊಂಡರೆ ಇಂದಿನ ‘ಸ್ಪೈಡರ್‍ಮ್ಯಾನ್’ ಎನ್ನುವ ಕಾಲ್ಪನಿಕ ವ್ಯಕ್ತಿಯನ್ನು ನಾನು ಆಗಲೇ ನೋಡಿದ್ದೇನೆ ಅನ್ನಿಸುತ್ತದೆ. ಮುಂದೆ ಮಂಗಳೂರು ಮುನಿಸಿಪಾಲಿಟಿ ಆಗ ಊರಲ್ಲಿ ಹರಡುತ್ತಿದ್ದ ಪೈಲೇರಿಯಾ (ಆನೆಕಾಲು) ರೋಗದ ಕಾರಣದಿಂದ ತೆರೆದ ಬಾವಿಗಳನ್ನೆಲ್ಲಾ ಮುಚ್ಚಿಸಿ ಕುಡಿಯಲು ನಳ್ಳಿ ನೀರು ಒದಗಿಸಿತು. ಅದೇ ಸಂದರ್ಭದ ದಿನಗಳಲ್ಲಿ ತನ್ನ ಅಗತ್ಯ ಊರಿಗಿಲ್ಲ ಎನ್ನುವಂತೆ ಚಂದಪ್ಪಣ್ಣ ನಿಧನರಾದುದು ಅಚ್ಚಳಿಯದೆ ಉಳಿದಿದೆ.
ನಮ್ಮೂರಿನಲ್ಲಿ ಮೂರು ಜೀನಸಿನ ಅಂಗಡಿಗಳಿದ್ದುವು. ಕಾವೂರು ಕ್ರಾಸ್‍ನಲ್ಲಿದ್ದ ಕಮಲಾಕ್ಷ ನಾಯಕರ ಅಂಗಡಿ, ಬಾಳಿಗಾ ಸಹೋದರರ ಬಾಳಿಗಾ ಸ್ಟೋರ್ಸ್, ಇನ್ನೊಂದು ಕಾಪಿಕಾಡಿನಲ್ಲಿರುವ ತಾರಾನಾಥ ನಾಯಕರ ಅಂಗಡಿ. ಇವುಗಳಲ್ಲಿ ಕಮಲಾಕ್ಷ ನಾಯಕರ ಅಂಗಡಿ ಕೆಎಸ್ಸಾರ್ಟಿಯ ಬಸ್ಸು ನಿಲ್ದಾಣದಿಂದಾಗಿ ಕೆಡವಲಾಯಿತು. ಉಳಿದೆರಡು ಅಂಗಡಿಗಳನ್ನು ಈಗಲೂ ಅದೇ ಮನೆಗಳವರು ನಡೆಸುತ್ತಿದ್ದಾರೆ. ಸಕ್ಕರೆ, ಸೀಮೆಎಣ್ಣೆ ಸಿಗದೆ ಇದ್ದ ದಿನಗಳಲ್ಲಿ ಈ ಮೂರೂ ಅಂಗಡಿಗಳವರು ನಾನು ಹೋಗಿ ಕೇಳಿದಾಗ ಮಾಷ್ಟ್ರ ಮನೆಗೆ ಎನ್ನುವ ಕಾರಣದಿಂದ ಕೊಡುತ್ತಿದ್ದುದನ್ನು ಮರೆಯಲಾರೆ. ಕಮಲಾಕ್ಷ ನಾಯಕರು ನನ್ನ ಅಜ್ಜನ ಕಿರಿಯ ಸ್ನೇಹಿತರು. ಬಾಳಿಗಾ ಸ್ಟೋರ್ಸ್‍ನಿಂದ ನಮ್ಮ ಅಪ್ಪನ ಓದಿನ ಬಿಡಾರದ ಕಾಲದಲ್ಲೇ ವ್ಯವಹಾರ ಆರಂಭವಾಗಿತ್ತು. ಅಲ್ಲಿಯೇ ಕೆಲಸ ಮಾಡುತ್ತಿದ್ದ ತಾರಾನಾಥರು ಮುಂದೆ ಕಾಪಿಕಾಡಿನಲ್ಲಿ ಸ್ವಂತ ಅಂಗಡಿ ತೆರೆದಾಗ ನಮ್ಮ ಮನೆಗೆ ಅಲ್ಲಿಂದಲೇ ಅಕ್ಕಿ ಕಾಳು ಬೇಳೆ ಎಣ್ಣೆ, ಬೆಲ್ಲ ಎಂಬಂತೆ ಎಲ್ಲ ವಸ್ತುಗಳು ತಿಂಗಳಿಗೊಮ್ಮೆ ವರ್ತನೆಯಂತೆ ಮನೆಗೆ ಕಳುಹಿಸಿಕೊಡುತ್ತಿದ್ದರು. ನಾನು ಶಾಲೆಗೆ ಹೋಗಲು ಶುರು ಮಾಡಿದ ನಂತರ ತಿಂಗಳ ಸಾಮಾನಿನ ಪಟ್ಟಿ ಕೊಡುವ ಕೆಲಸ ನನ್ನದು. ಮುಂದಿನ ತಿಂಗಳು ಸಾಮಾನು ಪಟ್ಟಿ ಕೊಡುವಾಗಲಷ್ಟೇ ನನಗೆ ತಿಳಿಯುತ್ತಿತ್ತು. ಹಿಂದಿನ ತಿಂಗಳ ಹಣ ಬಾಕಿಯಾಗಿದೆ ಕೊಟ್ಟಿಲ್ಲ ಅಂತ. ಅಮ್ಮ ಹೇಳಿ ಕಳುಹಿಸುತ್ತಿದ್ದರು. “ಅಪ್ಪನಿಗೆ ಸಂಬಳವಾಗಿಲ್ಲ. ಮುಂದಿನ ತಿಂಗಳು ಒಟ್ಟಿಗೆ ಕೊಡುತ್ತಾರೆ ಅಂತ’ ಹೀಗೆ ಎಷ್ಟು ಬಾರಿ ಹೇಳಿದ್ದೆನೋ ಏನೋ? ಏನೂ ಗೊಣಗದೆ ‘ಆಯ್ತು’ ಎನ್ನುವ ತಾರಾನಾಥರು ‘ನಿನ್ನ ಅಪ್ಪನಿಗೆ ಯಾವಾಗ ಸಂಬಳವಾಗುವುದೋ’ ಎಂದು ಅಪರೂಪಕ್ಕೊಮ್ಮೊಮ್ಮೆ ಕೇಳುವುದಿತ್ತು. ಆದರೆ ಯಾವಾಗಲೂ ನಮಗೆ ಕೊಡುವುದಿಲ್ಲ ಎಂಬ ಮಾತು ಆಡಿದವರಲ್ಲ. ಅತ್ಯಂತ ಶಿಸ್ತಿನ ಮನುಷ್ಯರಾಗಿದ್ದ ಅವರು ಅಂಗಡಿಯಲ್ಲಿ ಹೆಂಗಸರು, ಹುಡುಗಿಯರು ಬಂದರೆ ಅವರನ್ನು ಕಾಯಿಸದೆ ಬೇಗ ಬೇಗ ಸಾಮಾನು ಕೊಟ್ಟು ಕಳುಹಿಸುತ್ತಿದ್ದುದು ಅವರ ವೈಶಿಷ್ಟ್ಯ. ಅಂಗಡಿಯಲ್ಲಿ ಯಾರೂ ಕೆಲಸ ಇಲ್ಲದೆ ಹರಟೆ, ಪೋಲಿ ಮಾತುಗಳನ್ನಾಡುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಅದೇ ಬಾಳಿಗಾ ಸ್ಟೋರ್ಸ್‍ನಲ್ಲಿ ಊರಿನ ಮಂದಿಯ ಬಗ್ಗೆ ಅಂಗಡಿಯ ಕೆಲಸಗಾರರು, ಬಂದ ಗ್ರಾಹಕರು ಹಗುರವಾಗಿ ಮಾತನಾಡುತ್ತಿದ್ದುದನ್ನು ಕೇಳಿಯೇ ಅಲ್ಲಿ ಹೋಗಲು ಮನಸ್ಸಾಗುತ್ತಿರಲಿಲ್ಲ. ಇಲ್ಲೊಂದು ವಿಶೇಷತೆಯನ್ನು ಹೇಳಬೇಕು. ತಾರಾನಾಥ ನಾಯಕರು ಕಟ್ಟಾ ಆರೆಸ್ಸೆಸ್ ಮತ್ತು ಜನಸಂಘ. ನಮ್ಮ ಅಪ್ಪ ಶುದ್ಧ ಕಾಂಗ್ರೆಸಿಗ, ಗಾಂಧೀವಾದಿ. ಆದರೆ ಇವರಿಬ್ಬರಲ್ಲಿದ್ದ ಪರಸ್ಪರ ಗೌರವ, ವಿಶ್ವಾಸಗಳಿಗೆ ರಾಜಕೀಯ ಎಂದೂ ಚ್ಯುತಿ ಬಂದಿರಲಿಲ್ಲ. ಇಂದು ರಾಜಕೀಯ ಪಕ್ಷಗಳಿಂದಾಗಿ ಮನೆಯೊಳಗೇ ಬಿಕ್ಕಟ್ಟು ಉಂಟಾಗುವ ಸಂದರ್ಭಗಳನ್ನು ನೋಡಿದರೆ ಅಸಹ್ಯವಾಗುತ್ತದೆ. ಪ್ರಜಾಪ್ರಭುತ್ವ ಎಂದರೆ ಭಿನ್ನಾಭಿಪ್ರಾಯಗಳಿದ್ದೂ ಸಹಿಷ್ಣುತೆ ಯನ್ನು ಕಾಯ್ದುಕೊಳ್ಳಬೇಕೆನ್ನುವ ಸಾಮಾನ್ಯ ಸೂತ್ರ ತಿಳಿಯದ ಇಂದಿನ ರಾಜಕಾರಣಿ ಗಳನ್ನು, ಅವರ ಬೆಂಬಲಿಗರನ್ನು ಕಂಡರೆ ಹೇಸಿಗೆ ಎನಿಸುತ್ತದೆ. ಬಸವಣ್ಣನವರು ಹೇಳಿದ ‘ಅನ್ಯರಿಗೆ ಅಸಹ್ಯ ಪಡಬೇಡ’ ಎಂದರೆ ಇನ್ನೊಬ್ಬರನ್ನು ಸಹಿಸಿಕೊಳ್ಳುವ ಗುಣ ಅಂದರೆ ಸಹಿಷ್ಣುತೆ ಒಂದು ಜೀವನಮೌಲ್ಯ ಎಂದು ಭಾವಿಸುವುದಕ್ಕೆ ತಾರಾನಾಥ ನಾಯಕರು ಸಾಕ್ಷಿಯಾಗಿದ್ದರು. ಹಾಗೆಯೇ ಅಂಗಡಿಯಂತಹ ಅಂಗಡಿಯಲ್ಲಿ ಸಭ್ಯತೆಯನ್ನು ಕಾಯ್ದುಕೊಂಡವರು. ಒಬ್ಬ ವ್ಯಕ್ತಿ ಎಲ್ಲಿಯೇ ಇರಲಿ, ಏನೇ ಕೆಲಸ ಮಾಡಲಿ ಅವನ ಜೀವನ ಧರ್ಮ ಮತ್ತು ಮನುಷ್ಯ ಪ್ರೀತಿ ಎಲ್ಲಕ್ಕಿಂತ ಮಿಗಿಲು. ಮಕ್ಕಳಿಲ್ಲದ ಅವರು ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದುದು ಭಾವಗಳ ಮೂಲಕ, ಮಾತಿನ ಮೂಲಕವಲ್ಲ. ಆ ಕಾರಣದಿಂದಲೇ ಇಂದಿಗೂ ಅವರ ಮಡದಿ ತೋರುವ ಆತ್ಮೀಯತೆಯ ಹಿಂದೆ ಆ ದಂಪತಿಗಳ ಮನೋಧರ್ಮ ಎದ್ದು ಕಾಣುತ್ತಿದೆ. ಇಂತಹ ಪ್ರೀತಿ ವಿಶ್ವಾಸಗಳ ಗಳಿಕೆಗೆ ನನ್ನ ಅಪ್ಪ ಅಮ್ಮ ನಮಗೆ ಕಲಿಸಿದ ಜೀವನ ಧರ್ಮವೇ ಕಾರಣ ಎಂದು ತಿಳಿಯುತ್ತೇನೆ.
ನನ್ನೂರಿನ ಜನರಿಗೆ ಹೊಟೇಲಿನ ಅನುಭವಕ್ಕೆ ನಾಲ್ಕು ಹೊಟೇಲುಗಳಿದ್ದವು. ಕಾಫಿಕಾಡಿನಲ್ಲಿದ್ದ ಸುಂದರ ಭಟ್ಟರ ದುರ್ಗಾಭವನ, ಬಿಜೈ ಚರ್ಚ್ ಎದುರುಗಡೆಯಲ್ಲಿದ್ದ ಶ್ರೀಮತಿ ಭವನ ಹಾಗೂ ಬಾಳಿಗಾ ಸ್ಟೋರ್ಸ್ ಬಳಿಯ ಈಗಲೂ ಇರುವ ಗಂಗಯ್ಯ ಪೂಜಾರಿಯವರ ಹೊಟೇಲು ಮತ್ತು ಕಾವೂರು ಕ್ರಾಸ್ ಬಳಿಯ ಕ್ರಿಶ್ಚಿಯನ್ ದಂಪತಿ ನಡೆಸುತ್ತಿದ್ದ ಊಟದ ಹೊಟೇಲು. ದುರ್ಗಾಭವನದಿಂದ ನಮ್ಮ ಮನೆಗೆ ಅಮ್ಮನಿಗೆ ಅಸೌಖ್ಯವಾದಾಗ ದೋಸೆ ಕಟ್ಟಿಕೊಂಡು ಬರುತ್ತಿದ್ದೆ. ಆ ದೋಸೆಯ ರುಚಿ ಹಾಗೂ ಅದರ ಚಟ್ನಿಯನ್ನು ಮರೆಯಲಾರೆ. ಅದು ಯಾವುದರಿಂದ ಮಾಡುತ್ತಿದ್ದರು ಎನ್ನುವುದೇ ತಿಳಿದಿರಲಿಲ್ಲ. ನಾನು ಅಡುಗೆ ಶುರು ಮಾಡಿದ ಕಾಲದಲ್ಲಿ ತಿಳಿದದ್ದು ಅದು ಮೈದಾ ಉದ್ದಿನ ದೋಸೆ ಮತ್ತು ಕರಿಬೇವಿನ ಚಟ್ನಿ ಎಂದು. ಬಹಳ ರುಚಿ ರುಚಿಯಾದ ಚಟ್ಟಂಬಡೆ, ಅಂಬಡೆ, ನೀರುಳ್ಳಿ ಬಜೆ, ಗೋಳಿಬಜೆ, ಹಲ್ವಾಗಳನ್ನು ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಇವುಗಳನ್ನು ತಿನ್ನಲು ಆಸೆಯಾದರೆ ಯಾರಾದರೂ ನಮ್ಮ ಮನೆಗೆ ಅತಿಥಿಗಳಾಗಿ ಬರಬಾರದೇ ಎಂದು ಬೇಡಿಕೊಳ್ಳುತ್ತಿದ್ದುದೂ ಇತ್ತು. ಸುಮ್ಮಸುಮ್ಮನೆ ಚಪಲಕ್ಕಾಗಿ ಹೊಟೇಲ್ ತಿಂಡಿ ತರುತ್ತಿರಲಿಲ್ಲ. ಅಪ್ಪನೊಂದಿಗೆ ಯೆಯ್ಯಾಡಿಯ ಭಜನಾ ಮಂದಿರದ ಪುರಾಣ ವಾಚನ ಕಾರ್ಯಕ್ರಮ ಮುಗಿಸಿ ಹಿಂದಿರುಗುವಾಗ ಶ್ರೀಮತಿ ಭವನದಲ್ಲಿ ಅನೇಕ ಬಾರಿ ಭಕ್ತಜನರೊಂದಿಗೆ ಚಹಾ, ತಿಂಡಿಗಳನ್ನು ತಿಂದ ಸಂತೋಷ ಮರೆಯಲುಂಟೇ? ಹೀಗೆ ನನ್ನೂರಿನ ಮಂದಿ ತಮ್ಮ ಬದುಕಿನೊಂದಿಗೆ ಇತರರ ಬದುಕನ್ನೂ ಬದುಕಿದವರು. ಇದಕ್ಕಾಗಿಯೇ ಇವರೆಲ್ಲ ನನ್ನೂರಿನ ಹೆಮ್ಮೆಯ ಮಂದಿ.