ಮಿನುಗುವ ಬಲೂನು

Submitted by Hanumesh on Fri, 06/14/2019 - 20:03

ಇರುಳ ಭೇದಿಸಲು ರಸ್ತೆಗಿಳಿದಿದೆ
ಚುಕ್ಕಿಗಳ ಮೆತ್ತಿಕೊಂಡು.
ಕಗ್ಗತ್ತಲ ಹಾದಿ ಸವೆಸಬಲ್ಲದೆ
ಬಡತನವ ಮೆಟ್ಟಿಕೊಂಡು.

ಹೊರಟಿದೆ ಭೀಮನ ಗದೆಯಂತೆ, ಆದರಿಲ್ಲಿ
ಬಡಕಲು ದೇಹದ ಭುಜವೇರಿ
ಹೊತ್ತವನ ಹಸಿವ ಹೆಡೆಮುರಿಕಟ್ಟಲು
ಎಡಬಿಡದೆ ಅಲೆದಿದೆ ಊರುಕೇರಿ.

ಸೌರಮಂಡಲವೆ ಮಹಾವಿಷ್ಣುವಿನ
ಹೆಗಲೇರಿ ನಡೆದಿರುವಂತೆ.
ಸರ್ವತಾರಾಗಣಗಳು ಯಾಗಯಜ್ಞ
ಮಾಡಿ ಒಂದಾದಂತೆ.

ಅಂಧಕಾರವ ಸೀಳಿ
ಕುಚೇಲನ ಕನಸುಗಳ ನನಸು ಮಾಡಲು
ಹೊರಟಿದೆ ಮಿನುಗುವ ಬಲೂನು
ಹಾರಲಾಗದ ಬಲೂನು
ಮಿನುಗುವ ಬಲೂನು...

ಚಿತ್ರ: @a&c_creations ಇನ್ಸ್ಟಾಗ್ರಾಮ್