ಪ್ರೀತಿ ವಿಶ್ವಾಸಗಳಿಗೆ ಮಲ್ಲಿಗೆ ಕಂಪು
ಈಗಾಗಲೇ ಹೇಳಿದಂತೆ ನಮ್ಮ ಮನೆಯೊಂದನ್ನು ಬಿಟ್ಟರೆ ಉಳಿದೆಲ್ಲ ಮನೆಗಳು ಕ್ರಿಶ್ಚಿಯನ್ ಸಮುದಾಯದವರದು. ನನ್ನ ಅಮ್ಮನಿಗೆ ತುಂಬಾ ಚೆನ್ನಾಗಿ ಅವರ ಕೊಂಕಣಿ ಭಾಷೆ ಬರುತ್ತಿತ್ತು. ಆದ್ದರಿಂದ ಅವರ ಸ್ನೇಹಕ್ಕೆ ಭಾಷೆಯೂ ಕಾರಣವೇ? ಹೌದಲ್ಲ ಭಾಷೆ ಕಲಿತಷ್ಟು ಒಳ್ಳೆಯದೇ. ಈ ಎಲ್ಲಾ ಮನೆಯವರದ್ದು ಮುಖ್ಯವಾಗಿ ತೋಟಗಾರಿಕೆ. ಅದರಲ್ಲೂ ಮಲ್ಲಿಗೆ ಕೃಷಿ. ಜೊತೆಗೆ ಅಬ್ಬಲಿಗೆ (ಕನಕಾಂಬರ). ನಡುನಡುವೆ ಔಷಧೀಯ ಗಿಡಗಳಾದ ಲೋಳೆಸರ (ಅಲೊವಿರಾ) ಅರಶಿನ, ಮಜ್ಜಿಗೆ ಸೊಪ್ಪು, ತುಳಸಿ, ಸಂಬಾರಪತ್ರೆ ಇತ್ಯಾದಿ. ನಮ್ಮ ಅಗತ್ಯಕ್ಕೆ ಇವುಗಳು ಬೇಕೆಂದಾಗ ತಾಜಾ ಆಗಿ ಪುಕ್ಕಟೆಯಾಗಿ ಸಿಗುತ್ತಿತ್ತು. ಹಾಗೆಯೇ ಈ ತೋಟಗಳ ಬದುವಿನಲ್ಲಿ, ಹಿತ್ತಲ ಮೂಲೆಗಳಲ್ಲಿ ತೆಂಗು, ಮಾವು, ಹಲಸು, ಪೇರಳೆ, ಸಪೋಟ (ಚಿಕ್ಕು), ಚಕ್ಕೋತ, ಪಪ್ಪಾಯ ಮರಗಳು. ಆಯಾಯ ಹಣ್ಣುಗಳಾದಾಗ ಪ್ರತಿಯೊಂದು ಮನೆಯಿಂದಲೂ ನಮಗೆ ಸಿಗುತ್ತಿತ್ತು. ಇವಲ್ಲದೆ ಬಿಂಬುಳಿ, ದಾರೆಹುಳಿ, ಬಾಂಬೆನೆಲ್ಲಿ, ಕರಿಬೇವುಗಳು ಕೂಡಾ ಅಗತ್ಯಕ್ಕೆ ತಕ್ಕಂತೆ ಬೇಡಿ ಪಡಕೊಳ್ಳುತ್ತಿದ್ದೆವು ಪುಕ್ಕಟೆಯಾಗಿ. ಅಂದರೆ ಅವುಗಳಿಗೆ ಬೆಲೆಯಿರಲಿಲ್ಲವೇ? ಖಂಡಿತಾ ಇತ್ತು. ಅದೇ ಪ್ರೀತಿ, ವಿಶ್ವಾಸ. ನಾವು ಪಡಕೊಳ್ಳುವವರು ಏನೋ ಖುಷಿಯಿಂದಲೇ ಪಡೆಯುತ್ತೇವೆ. ಆದರೆ ಕೊಡುವವರು? ಅವರು ಕೂಡಾ ಪ್ರೀತಿಯಿಂದಲೇ ಕೊಡುತ್ತಿದ್ದರು. ಹೇಗೆ ಗೊತ್ತು ಎನ್ನುವಿರಾ? ನಾನೇ ಹೋಗಿ ತರುತ್ತಿದ್ದವಳು ತಾನೇ? ಮನೆಯ ಹಿರಿಯ ಮಗಳಾಗಿ ಆ ಕೆಲಸ ನಾನೇ ಮಾಡುತ್ತಿದ್ದುದರಿಂದ ಆ ಸತ್ಯ ನನ್ನ ಅನುಭವ.
ಇಂತಹ ಒಂದು ಆತ್ಮೀಯವಾದ ಮನೆ ಅಮ್ಮನ ಸ್ನೇಹಿತೆ ಲೂಸಿ ಬಾಯಿಯವರದ್ದು, ಅವರ ಅತ್ತೆ ನನ್ನ ಅಮ್ಮನಿಗೆ ಅಮ್ಮ ನಿದ್ದಂತೆ. ನಮ್ಮ ಮನೆಯಂಗಳದ ಎದುರಿಗೆ ಮಣ್ಣಿನ ಗೋಡೆ ದಾಟಿದರೆ ಅವರ ಮನೆ ಹಿತ್ತಿಲು, ಮಲ್ಲಿಗೆ ತೋಟ. ಮನೆಯಲ್ಲಿದ್ದುದು ಅತ್ತೆ ಸೊಸೆಯರಿಬ್ಬರು. ಮನೆಯ ಯಜಮಾನಿತಿ ಅತ್ತೆಯವರನ್ನು ಅಮ್ಮನೂ ಸೇರಿದಂತೆ ನಾವೆಲ್ಲರೂ ಮಾಯಿ ಎಂದೇ ಕರೆಯುತ್ತಿದ್ದೆವು. ಹೀಗೆ ಕರೆದುದರಿಂದಲೋ ಏನೋ ಅವರ ನಿಜವಾದ ಹೆಸರೇ ನನಗೆ ತಿಳಿದಿಲ್ಲ. ಅವರ ಮಗ ಆಗಲೇ ಕುವೈಟ್‍ನಲ್ಲಿ ಉದ್ಯೋಗದಲ್ಲಿದ್ದರು. ಅತ್ತೆ ಸೊಸೆ ಮಲ್ಲಿಗೆಯ ಕೃಷಿಯೊಂದಿಗೆ ತಮ್ಮ ಖರ್ಚಿಗೆ ಎನ್ನುವಂತೆ ದನ ಸಾಕಿಕೊಂಡಿದ್ದರು. ಪ್ರಾರಂಭದ ಕೆಲವು ವರ್ಷ ಅವರ ಮನೆಯಲ್ಲಿ ಮಕ್ಕಳು ಇಲ್ಲದೆ ಇದ್ದಾಗ ನಾವೇ ಅವರಿಗೆ ಮಕ್ಕಳಿದ್ದಂತೆ. ಅಜ್ಜಿ ಮಾರ್ಕೆಟ್‍ಗೆ ಹೋಗಿ ಹಣ್ಣು ಹಂಪಲು ತರುತ್ತಿದ್ದರು. ಒಮ್ಮೊಮ್ಮೆ ನಮಗೂ ಅದರಲ್ಲಿ ಪಾಲು ಇರುತ್ತಿತ್ತು. ಹಾಗೆಯೇ ಅವರಿಗೆ ಅವಸರದಲ್ಲಿ ಏನಾದರೂ ವಸ್ತು ಬೇಕಾದಾಗ ನಾನೇ ಅಂಗಡಿಗೆ ಹೋಗಿ ತಂದುಕೊಡುತ್ತಿದ್ದೆ. ಅದನ್ನು ಈಗಲೂ ಲೂಸಿಬಾಯಿ ನೆನಪಿಸಿಕೊಳ್ಳುತ್ತಾರೆ. ಅತ್ತೆ ಸೊಸೆಯರಿಬ್ಬರೂ ತಮ್ಮ ಗುಟ್ಟಿನ ವಿಚಾರಗಳನ್ನು ನನ್ನ ಅಮ್ಮನಲ್ಲಿ ವಿಶ್ವಾಸದಿಂದ ಪ್ರತ್ಯೇಕವಾಗಿ ಹೇಳುತ್ತಿದ್ದರೆ, ಇಬ್ಬರ ಗುಟ್ಟನ್ನೂ ರಟ್ಟು ಮಾಡದೆ ಅಮ್ಮ ಅವರಿಬ್ಬರ ಅಸಮಾಧಾನ, ಬೇಸರಗಳನ್ನು ಸರಿಪಡಿಸುತ್ತಿದ್ದರು. ಲೂಸಿಬಾಯಿ ಗುಟ್ಟಾಗಿ ಗಂಡನಿಗೆ ಪತ್ರ ಬರೆದು ನನ್ನ ಕೈಯಲ್ಲಿ ಅಂಚೆಗೆ ಹಾಕಲು ಕೊಡುತ್ತಿದ್ದುದೂ ಇತ್ತು. ಮುಂದೆ ಅವರ ಮನೆಯಲ್ಲೂ ಇಬ್ಬರು ಮಕ್ಕಳು ಸ್ಟಾನಿ ಮತ್ತು ಮೆಲ್ವಿನ್ ನಮ್ಮ ಜೊತೆಯ ಪುಟ್ಟ ಮಕ್ಕಳಾಗಿ ಬೆಳೆಯುತ್ತಿದ್ದರು. ನಾಗರಪಂಚಮಿ ನಮಗೆ ಮೊದಲ ಹಬ್ಬವಾದರೆ ಅವರಿಗೆ ಸಪ್ಟೆಂಬರ್ 8ರ ತೆನೆಹಬ್ಬ. ನಾಗರ ಪಂಚಮಿಗೆ ಅವರ ಮನೆಯಿಂದ ಅರಶಿನ ಎಲೆ ತಂದು ಕಡುಬು ಮಾಡಿದರೆ ಅವರಿಗೂ ಕಡುಬು ಕೊಡುವುದು ಕ್ರಮವೇ ಆಗಿತ್ತು. ಸೆಪ್ಟಂಬರ್ 8ರ ತೆನೆ ಹಬ್ಬ ಒಂದರ್ಥದಲ್ಲಿ ಪ್ರಕೃತಿಯನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸುವ ಹಬ್ಬವೆಂದರೂ ಸರಿ. ನಮ್ಮಲ್ಲಿ `ಹೊಸ ಅಕ್ಕಿ ಊಟ' ಎಂಬುದನ್ನು ಮಾಡುವಂತೆ, ಕೊಡಗಿನವರ `ಹುತ್ತರಿ ಹಬ್ಬ'ದಂತೆ, ಕೇರಳದವರ `ಓಣಂ'ನಂತೆ. ಅಂದು ಚರ್ಚ್‍ನಿಂದ ಬೆಳಗ್ಗೆ ಕಬ್ಬು ಮತ್ತು ಭತ್ತದ ತೆನೆಗಳನ್ನು ತಂದು ಹಬ್ಬ ಮಾಡುವುದು ಅವರ ಕ್ರಮ. ಹಾಗೆಯೇ ಅಂದಿನ ಅಡುಗೆ ಪೂರ್ತಿಯಾಗಿ ತರಕಾರಿ ಊಟ. ಶುದ್ಧ ಸಸ್ಯಾಹಾರ, ಅವರದೇ ತೋಟಗಳಲ್ಲಿ ಆಗಿರುವ ಬೆಂಡೆ, ಅಲಸಂಡೆ, ಮುಳ್ಳು ಸೌತೆ, ಹರಿವೆ ದಂಟುಗಳೊಂದಿಗೆ ಕಡಲೆಯ ಮೇಲೋಗರಗಳು, ಜೊತೆಗೆ ಪಾಯಸದ ಊಟ. ಊಟಕ್ಕಿಂತ ಮೊದಲು ಎಲ್ಲರೂ ತೆನೆಯಿಂದ ತೆಗೆದ ಭತ್ತದ ಕಾಳುಗಳನ್ನು ಅರೆದು ಕಾಯಿ ಹಾಲು, ಬೆಲ್ಲ ಸೇರಿಸಿ ಮಾಡಿದ ಹಾಲನ್ನು ಸಣ್ಣ ಬಟ್ಟಲಲ್ಲಿ ಹಿಡಿದುಕೊಂಡು ದೇವರ ಮಂಟಪದ ಎದುರು ಪ್ರಾರ್ಥನೆ ಸಲ್ಲಿಸುತ್ತಾರೆ. ನಾವೂ ಅವರ ಜೊತೆ ಹೀಗೆ ಹಾಲು ಹಿಡಿದು ದೇವರಿಗೆ ಕೃತಜ್ಞತೆ ಸಲ್ಲಿಸಿ, ಸಮೃದ್ಧಿಯನ್ನು ಹಾರೈಸಿ ಬಳಿಕ ಎಲ್ಲರೂ ಬಾಳೆಯೆಲೆಯಲ್ಲಿ ಊಟ ಮಾಡುವುದು ತುಂಬಾ ಖುಷಿಯಾದ ಸಂದರ್ಭ. ಈ ಹಬ್ಬಕ್ಕೆ ಒಂಬತ್ತು ದಿನಗಳ ಮೊದಲು ಮನೆ ಮಕ್ಕಳು ದಿನಾ ಬೆಳಗ್ಗೆ ಬಣ್ಣ ಬಣ್ಣದ ಹೂಗಳನ್ನು ಬಟ್ಟಲಲ್ಲಿಟ್ಟು ಚರ್ಚ್‍ಗೆ ಕೊಂಡು ಹೋಗಿ ಅಲ್ಲಿ ಕನ್ಯಾ ಮರಿಯಮ್ಮಳಿಗೆ ಅರ್ಪಿಸುತ್ತಿದ್ದರು. ಈ ದೃಶ್ಯ ನೋಡಲು ಬಹಳ ಸುಂದರ. ಸ್ಟ್ಯಾನಿ ಮತ್ತು ಮೆಲ್ವಿನ್ ಹೀಗೆ ಹೂಕೊಂಡು ಹೋಗುವ ವೇಳೆ ಅವರ ಮನೆಯ ಹೂಗಳ ಜೊತೆ ನಮ್ಮ ಮನೆಯ ಹೂಗಳು ಅವರ ದೇವರಿಗೆ ಸಲ್ಲುತ್ತಿತ್ತು. ಇವರ ಮನೆಯಲ್ಲಿ ಹಬ್ಬಕ್ಕಾಗಿ ಮಾಡುವ ಇಡ್ಲಿಯ ರುಚಿ ಬೇರೆಯೇ, ನಮ್ಮ ಮನೆಯ ಕಡುಬಿಗಿಂತ ಭಿನ್ನವಾದುದು. ನಮ್ಮ ತಿಂಡಿ ತಿನಿಸುಗಳು ರುಚಿಯೇ. ಆದರೆ ಅವರ ತಿಂಡಿ ತಿನಸುಗಳೂ ಅಪರೂಪದ್ದಾಗಿದ್ದು ಅವುಗಳೂ ನಮಗೆ ಇಷ್ಟವೇ. ನಮ್ಮ ಅಷ್ಟಮಿಯ ಹಬ್ಬ. ಚೌತಿಯ ಹಬ್ಬಗಳಿಗೆ ಸುತ್ತಲ ಮನೆ ಮಂದಿಗೆಲ್ಲ ಕಡುಬು, ಉಂಡೆ, ಚಕ್ಕುಲಿ, ಕಬ್ಬುಗಳನ್ನು ನಾವು ಊಟ ಮಾಡುವ ಮೊದಲು ಕೊಟ್ಟು ಬರುತ್ತಿದ್ದೆವು. ನಮ್ಮ ಹಬ್ಬದ ಊಟಕ್ಕೆ ಲೂಸಿಬಾಯಿ ಮನೆಯಿಂದ ನಮ್ಮ ಜೊತೆಗೆ ಮಕ್ಕಳು. ಒಮ್ಮೊಮ್ಮೆ ಲೂಸಿಬಾಯಿ, ಮಾಯಿ ಕೂಡಾ ಸೇರಿಕೊಳ್ಳುತ್ತಿದ್ದರು. ಹೀಗೆ ಯಾವುದೇ ಹಬ್ಬವಾಗಲೀ ನಮ್ಮ ಮನೆಗಳಲ್ಲಿ ಹಬ್ಬದ ವಾತಾವರಣ, ಹಬ್ಬದ ಅಡುಗೆ ಎಲ್ಲರ ಮನೆಯಲ್ಲಿ ಇರುತ್ತಿತ್ತು. ಕ್ರಿಶ್ಚಿಯನ್ನರಿಗೆ ನಮ್ಮ ಹಾಗೆ ಹಲವು ಹಬ್ಬಗಳಿರುತ್ತಿರಲಿಲ್ಲ. ಇನ್ನೊಂದು ಹಬ್ಬ ವಿಶೇಷವಾದುದು ಕ್ರಿಸ್ಮಸ್ ಹಬ್ಬ. ಅಂದು ಅವರು ಮನೆ ಮನೆಗೆ ನೀಡುವ `ಕುಸ್ವಾರ್'ನ್ನು ನಾವು ಕಾಯುತ್ತಿದ್ದರೆ ಆಶ್ಚರ್ಯವಿಲ್ಲ. ಯಾಕೆಂದರೆ ಅವೆಲ್ಲವು ಕ್ರಿಸ್ಮಸ್ ಹಬ್ಬದಿಂದಲೇ ತಿನ್ನಲು ಸಿಗುವಂತಹುದು. ಆ `ಕುಸ್ವಾರ್'ನ ಟ್ರೇಯಲ್ಲಿ ನೇಂದ್ರಬಾಳೆ, ಖರ್ಜೂರ, ಕಿತ್ತಳೆ, ಚಕ್ಕೋತಗಳೊಂದಿಗೆ ಮನೆಯಲ್ಲಿ ತಯಾರಿಸಿದ ಚಕ್ಕುಲಿ, ಅಕ್ಕಿಲಾಡು ಇನ್ನಿತರ ತಿಂಡಿಗಳು ಇರುತ್ತಿದ್ದುವು. ಈ ತಿಂಡಿಗಳನ್ನು ನಾವು ತಯಾರಿಸುತ್ತಿರಲಿಲ್ಲ. ಇನ್ನೊಂದು ಸಂದರ್ಭ ಎಂದರೆ ಚರ್ಚ್ ಹಬ್ಬ. ಬುಧವಾರದಂದು ಸಾಮಾನ್ಯವಾಗಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ ಅದನ್ನು ಮುಗಿಸಿ ಬರುವಾಗ ಸಂತೆಯಿಂದ ತರುವ ಖರ್ಜೂರ, ಚರುಮುರಿ (ಮಂಡಕ್ಕಿ) ಜೊತೆಗೆ ವಿಶೇಷವಾದ ಪೆಪ್ಪರ್‍ಮಿಂಟು ಅವರ ಭಾಷೆಯಲ್ಲಿ `ತಮ್ಡೆಗುಳ್ಯೊ' ಅಂದರೆ ಕೆಂಪುಗೋಲಿ ಇವುಗಳನ್ನು ನಾವು ಕೂಡಾ ಕಾಯುತ್ತಿದ್ದೆವು.
ಲೂಸಿಬಾಯಿಯ ಮನೆ ಮತ್ತು ನಮ್ಮ ಮನೆಯಲ್ಲಿ ದಿನನಿತ್ಯದಲ್ಲಿ ಏನು ವಿಶೇಷ ಅಡುಗೆಯಾದರೂ ಎರಡೂ ಮನೆಗಳಲ್ಲಿ ಹಂಚಿ ತಿನ್ನುತ್ತಿದ್ದೆವು. ಹಾಗೆಯೇ ನಾವು ಆಟ ಆಡಲು ಹೋಗುತ್ತಿದ್ದ ಮನೆಯೂ ಅದುವೇ. ನಮ್ಮ ಆಟ ಅಂದರೆ ಚಿಕ್ಕ ಮಕ್ಕಳನ್ನು ರಮಿಸುವುದು. ಮುಂದೆ ಅವರು ದೊಡ್ಡವರಾದಾಗ ನಮ್ಮ ಮನೆಗೆ ಆಟಕ್ಕೆ ಬರುತ್ತಿದ್ದರು. ಕಣ್ಣು ಮುಚ್ಚಾಲೆ ಮತ್ತು ಲಗೋರಿ ಆಟ ಮಾತ್ರ ನಮ್ಮ ಆಟಗಳಾಗಿದ್ದುವು. ನಾವು ಬೆಳೆದು ದೊಡ್ಡವರಾದಂತೆ ಅವರೂ ಶಾಲೆಗೆ ಹೋಗಹತ್ತಿದರು. ನಾನು ಪಿಯುಸಿ ಓದುವ ವೇಳೆಗೆ ಏಳನೆಯ ತರಗತಿಯಲ್ಲಿದ್ದ ಸ್ಟ್ಯಾನಿಗೆ ಕಷ್ಟವಾದ ಪಾಠಗಳನ್ನು ಮುಖ್ಯವಾಗಿ ಲೆಕ್ಕ ಹೇಳಿ ಕೊಡುತ್ತಿದ್ದೆ. ಅವನು ಪರೀಕ್ಷೆಯಲ್ಲಿ ಒಳ್ಳೆ ಅಂಕಗಳೊಂದಿಗೆ ಪಾಸಾದ. ಇದಕ್ಕೆ ಉಡುಗೊರೆಯಾಗಿ ಅವನ ತಂದೆ ನನಗೆ ಕುವೈಟ್‍ನಿಂದ ರಿಸ್ಟ್ ವಾಚ್ ತಂದು ಕೊಟ್ಟರು. ಅದು ನನ್ನ ಮೊದಲ ವಾಚ್. ಅಂದಿನ ದಿನಗಳಲ್ಲಿ ಕಾಲೇಜಿಗೆ ಹೋಗುವ ಹೊತ್ತಿಗೆ ಎಲ್ಲರೂ ವಾಚ್ ಕಟ್ಟಿಕೊಳ್ಳುತ್ತಿದ್ದರು. ನನಗೂ ಆಸೆ ಇತ್ತು. ಆದರೆ ಸಾಧ್ಯವಿರಲಿಲ್ಲ. ಈಗ ಅದು ಹೀಗೆ ದೊರೆತಾಗ ಹೆಮ್ಮೆ ಅನಿಸಿತು. ಬಂಗಾರ ಬಣ್ಣದ ವಾಚ್‍ಗೆ ಬಂಗಾರ ಬಣ್ಣದ ಸ್ಟ್ರಾಪ್ ಇದ್ದು ಬಹಳ ಆಕರ್ಷಕವಾಗಿತ್ತು. ಅದು ಸುಮಾರು 12 ವರ್ಷಗಳಷ್ಟು ಕಾಲ ನನ್ನ ಜೊತೆಯಲ್ಲಿತ್ತು. ನಾವು ಅಂದು ಇದ್ದ ಮನೆಯನ್ನು ಅನಿವಾರ್ಯವಾಗಿ ಬಿಟ್ಟು ಬೇರೆ ಕಡೆ ಹೋಗಬೇಕಾಯ್ತು. ಜುಜೇಫಿನ್ ಫೆರ್ನಾಂಡಿಸರ ಮೊಮ್ಮಕ್ಕಳಿಗೆ ಆಸ್ತಿ ಪಾಲಾಯ್ತು. ನಮ್ಮ ಮನೆ ಹಿತ್ತಿಲು ಪಡೆದ ಅವರ ಹಿರಿಯ ಮೊಮ್ಮಗ ಆ ಜಾಗವನ್ನು ಮಾರಾಟ ಮಾಡಬೇಕಾಯ್ತು. ನಮ್ಮನ್ನೇ ಖರೀದಿಸುವಂತೆ ಕೇಳಿಕೊಂಡರು. ನಮ್ಮಿಂದ ಅದು ಸಾಧ್ಯವಿರಲಿಲ್ಲ. ನಾವು ದೂರ ಹೋದರೂ ಲೂಸಿಬಾಯಿಯ ಮನೆಯ ಸ್ನೇಹ ಮತ್ತು ಹಬಿನಮ್ಮನ ಮನೆಯ ಸ್ನೇಹ ದೂರವಾಗಲಿಲ್ಲ. ಫೋನು ಇಲ್ಲದ ಆ ಕಾಲದಲ್ಲೂ ಅಪರೂಪಕ್ಕೊಮ್ಮೆ ಭೇಟಿಯಾಗಿ ಸ್ನೇಹ, ಆತ್ಮೀಯತೆ ಉಳಿಸಿ ಕೊಂಡಿದ್ದರು ಅಮ್ಮ. ಅಮ್ಮ ಹೀಗೆ ಅವರ ಆಪ್ತರನ್ನು ಸ್ನೇಹಿತರನ್ನು ಭೇಟಿಯಾಗಬೇಕಾದರೆ ಮಕ್ಕಳಲ್ಲಿ ನಾನೇ ಜೊತೆಗಾರಳಾಗಿ ಇರುತ್ತಿದ್ದುದು ವಿಶೇಷವಾದ ಸಂದರ್ಭ ಎಂದು ತಿಳಿಯುತ್ತೇನೆ. ಇಂತಹ ಕಾರಣಗಳಿಂದಲೇ ನನ್ನ ಜಗತ್ತು ವಿಶಾಲವಾಗಿದೆ. ಜಾತಿ ಧರ್ಮಗಳನ್ನು ಮೀರಿದ ಮನುಷ್ಯತ್ವದ ಬೆಲೆ ಅರಿವಾಗಿದೆ. ನೆರೆಯಲ್ಲಿದ್ದವರು ಬಂಧುಗಳಿಗಿಂತ ಹತ್ತಿರದವರು ಎನ್ನುವುದು ಅನುಭವದ ಸತ್ಯವಲ್ಲವೇ?
ಇಂತಹ ನೆರೆಯ ಆತ್ಮೀಯರಲ್ಲಿ ಒಬ್ಬರಾಗಿದ್ದ ಇನ್ನೊಂದು ಮನೆ ಮೇರಿ ಬಾಯಿಯವರದ್ದು. ಮೇರಿ ಬಾಯಿ ಅವಿವಾಹಿತೆ. ಅವರು ಸೀರೆ ಉಡುತ್ತಿರಲಿಲ್ಲ. ಲಂಗ, ರವಕೆ ಹಾಕಿಕೊಳ್ಳುತ್ತಿದ್ದರು. ಚರ್ಚ್‍ಗೆ ಹೋಗುವಾಗಲೂ ಅದೇ ರೀತಿಯ ಉಡುಪು. ಅವರ ತಮ್ಮ ಪೊಲೀಸ್ ಆಗಿದ್ದರು. ಅವರು ಕೂಡಾ ಅವಿವಾಹಿತರು. ಇವರಿಬ್ಬರ ವಯಸ್ಸಾದ ತಾಯಿ ಇದ್ದರು. ಮಲ್ಲಿಗೆ ಹೂ ಕೊಯ್ದು ಕೊಡಲು ಅಥವಾ ಮಲ್ಲಿಗೆ ತೋಟಕ್ಕೆ ನೀರು ಹಾಕಲು ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಮೇರಿ ಬಾಯಿಗೆ ನನ್ನ ಅಮ್ಮ ನೆರವಾಗುತ್ತಿದ್ದರು. ಪೊಲೀಸ್ ಮಾವನಿಗೆ ನಾನು ಎಂದರೆ ಬಹಳ ವಾತ್ಸಲ್ಯ. ದಿನಾ ಬೆಳಗ್ಗೆ ಎದ್ದು ಅವರು ಅವರ ಹಿತ್ತಲಲ್ಲಿ ಬಾವಿಯಿಂದ ನೀರು ಎಳೆಯುತ್ತಿದ್ದರೆ ನಾನು ನಮ್ಮ ಹಿತ್ತಲಲ್ಲಿ ಬಾವಿಕಟ್ಟೆಯ ಬಳಿಯಿದ್ದ ಒಗೆಯುವ ಕಲ್ಲಿನ ಮೇಲೆ ನಿಂತು ಗಟ್ಟಿಯಾಗಿ ಮಾತನಾಡುತ್ತಿದ್ದೆವು. ಅದು ಬಹಳ ತಮಾಷೆಯ ಮಾತುಗಳಾಗಿ ಇರುತ್ತಿತ್ತು. ನಾನು ಇನ್ನೂ ಒಂದು ಎರಡನೆಯ ತರಗತಿಯಲ್ಲಿದ್ದ ದಿನಗಳು. ಅವರು ನನ್ನ ಜತೆ ಮಾತನಾಡುತ್ತಾ `ನಾವು ಮದುವೆಗೆ ಹೋಗೋಣ ಎನ್ನುತ್ತಿದ್ದರು'. `ಎಲ್ಲಿ' ಎಂದಾಗ ಅದೇ ನಮ್ಮ ಗುಡ್ಡದ ತುದಿಯಲ್ಲಿ ಕೊರಗರ ಗುಡಿಸಲುಗಳಿತ್ತಲ್ಲಾ `ಅಲ್ಲಿ ನಾಳೆ ಮದುವೆ, ನಾನೂ ನೀನೂ ಜೊತೆಯಾಗಿ ಹೋಗೋಣ' ಎಂದು ಹಾಸ್ಯ ಮಾಡುತ್ತಿದ್ದುದು ನೆನಪಿದೆ. ಹೀಗೆ ನನ್ನ ಮನೆಯ ಸುತ್ತಮುತ್ತಲಿನ ಮನೆ ಮಂದಿಯಲ್ಲೆಲ್ಲಾ ಮಾತನಾಡುತ್ತಾ ಬೆಳೆದ ನಾನು ಉಪನ್ಯಾಸಕಿಯಾದಾಗ, ಪ್ರಾಂಶುಪಾಲೆಯಾದಾಗ ಇವರೆಲ್ಲಾ ಸಂತೋಷ ಪಟ್ಟವರು. ನಮ್ಮ ಹುಡುಗಿ ಎಂದು ಹೆಮ್ಮೆಪಟ್ಟವರು. ಇಂದು ಪೊಲೀಸ್ ಮಾವ ಇಲ್ಲ. ಆದರೆ ಅವರ ನಗುಮೊಗದ ಆ ಹಾಸ್ಯದ ಮಾತುಗಳು ನೆನಪಾಗುತ್ತಲೇ ನನ್ನ ಮುಖ ಅರಳುತ್ತದೆ. ಇಂತಹ ನೆನಪುಗಳು ತುಂಬಿರುವ ಬದುಕು ಸಂತೃಪ್ತವಲ್ಲವೇ? ಅವರ ತೋಟದ ಕಸಿಮಾವಿನ ಹಣ್ಣುಗಳು, ಪಪ್ಪಾಯ ಬಾಯಲ್ಲಿ ನೀರೂರಿಸುತ್ತವೆ ಎಂದರೆ ಸುಳ್ಳಲ್ಲ. ಈಗ ಅವರ ಮನೆಯಲ್ಲಿ ಮುಂದಿನ ಪೀಳಿಗೆಯ ನನ್ನ ಓರಗೆಯ ಅವರ ಅಣ್ಣನ ಮಗಳಿದ್ದಾಳೆ. ಭೇಟಿಯಾದರೆ ಅದೇ ಹಳೆಯ ಆತ್ಮೀಯತೆಯ ಕ್ಷಣಗಳು ನಮ್ಮ ಪಾಲಿಗೆ. ಐರಿಬಾಯಿ ಮನೆಯವರು ನಮ್ಮ ಇನ್ನೊಂದು ನೆರೆಯವರು. ನಮ್ಮ ಮನೆಯ ಹಾದಿಯಲ್ಲಿದ್ದ ಈ ಮನೆಯಲ್ಲಿ ನಾಯಿಯೊಂದು ಇತ್ತು. ನನಗೆ ನಾಯಿಯೆಂದರೆ ಬಹಳ ಭಯ. ಅದನ್ನು ಸಾಮಾನ್ಯವಾಗಿ ಕಟ್ಟಿ ಹಾಕುತ್ತಿದ್ದರು. ಒಂದು ವೇಳೆ ಬಿಟ್ಟಿದ್ದರೆ ನಾನು ಓಣಿ ತುದಿಯಲ್ಲೇ ನಿಂತು ಯಾರಾದರೂ ಬರುವ ವರೆಗೆ ಕಾದು ಅವರ ಜೊತೆಗೆ ಹೋಗುತ್ತಿದ್ದೆ. ಇವರ ಮನೆಯಲ್ಲೂ ಮಲ್ಲಿಗೆ ತೋಟ, ಮಾವಿನ ಮರಗಳು. ಇವರ ಮನೆಯಿಂದ ಉಪ್ಪಿನ ಕಾಯಿಗೆ ಮಾವಿನ ಕಾಯಿ ತರುತ್ತಿದ್ದೆವು. ಹೀಗೆ ನಮ್ಮ ಮನೆಯ ಸುತ್ತಲೂ ಮಲ್ಲಿಗೆ ತೋಟದ ಪರಿಮಳ. ಮಾವು ಹಲಸಿನ ಸವಿ ಬಾಯ್ತುಂಬ. ಈ ಕಾರಣದಿಂದಲೇ ನಮ್ಮ ನೆರೆಯವರ ಪ್ರೀತಿ ವಿಶ್ವಾಸಗಳಿಗೂ ಪರಿಮಳ ಮತ್ತು ಸಿಹಿ ತುಂಬಿತ್ತು.