ಆ ನನ್ನ ಮನಸ್ಸು

ಆ ನನ್ನ ಮನಸ್ಸು

       ಅನಾಮಿಕ ಬೆರಳ ಉಂಗುರದ ಹೊಳಪು ಕುಂದಿದೆ...ಎರಡು ತಿಂಗಳ ಹಿಂದೆಯೇ ನಿಶ್ಚಿತವಾದರೂ, ಅರ್ಥವಾಗುತ್ತಿಲ್ಲ ನೀನೇಕೆ ಜೊತೆಗಿಲ್ಲವೆಂದು. ವಿರಹದ ವೇದನೆಯೆಂದರೆ ಏನೆಂದು ತಿಳಿಸುವ ಪರಿಯೇ...? ನಿನ್ನ ಕಾಣದೆ, ನೋಡದೆ, ಸುಳಿವೇ ಇಲ್ಲದೆ ನನ್ನಿನಿಯನೇ ನನಗಿಲ್ಲವೆಂಬ ದುಃಖ ಬೇರೂರಿದೆ. ಬಿರುಗಾಳಿಯಂತಹ ಈ ಆವೇಗ ನನ್ನಿಂದ ತಡೆಯಲಸಾಧ್ಯವಾಗಿದೆ. ನೀನು ಸಿಗದೇ ಇದ್ದಿದ್ದರೆ ನನಗಾವ ಚಿಂತೆಯೂ ಕಾಡುತ್ತಿರಲಿಲ್ಲ. ಈಗ ಸಿಕ್ಕಿದರೂ ಸಿಗದಂತೆ ಮರೆಯಾದರೆ, ಕಣ್ಣಿದ್ದೂ ಕಾಣದಂತಲ್ಲವೆ...? ಯಾರ ಬಳಿ ಹೇಳಿ ಕಳುಹಿಸಲಿ, ನಿನಗಾಗಿ ಬಕಪಕ್ಷಿಯಂತೆ ಕಾದಿಹೆನು ನಾನೆಂದು. ಬೇಜಾರಿನ ಈ ಮನತರಂಗಗಳು ಕಂಗಳಲ್ಲಿ ಅಬ್ಭರಿಸುತ್ತಿವೆ. ನನ್ನ ಅಂತರಂಗದ ಆಕಾಶ ಖಾಲಿ ಖಾಲಿ ಎನಿಸುತ್ತಿದೆ. ಕಾರ್ಮೋಡ ಕವಿದು ಮಳೆ ಹನಿಹಾಕದೇ, ಕೇವಲ ಗುಡುಗು-ಸಿಡಿಲುಗಳಿಂದು ಮನಕಲುಕುತ್ತಿದೆ. ಈ ನಡುವೆ ತಂಪಿನ ಒಂದು ಮಳೆಹನಿಗಾಗಿ ಹಾತೊರೆಯುತ್ತಿರುವ ನನ್ನ ಮನದಂಗಳವ ನಿನ್ನ ಪ್ರೀತಿಯ ಹನಿಗಳಿಂದ ತಂಪೆರೆಯುವ ಸಮಯ ಬರುವುದೇ...? ಬತ್ತುತ್ತಿರುವ ನನ್ನ ಮನಸ್ಸು ಮತ್ತೆ ಚಿಗುರೊಡೆಯುವುದೇ...?
       ಎಂದೆಲ್ಲ ಭಾವನೆಗಳು ಭರದಲ್ಲಿ ಸಂಚರಿಸುತ್ತಿರುವಾಗಲೇ ಅವನು ಬರುವ ಸುದ್ದಿಯೊಂದು ನನ್ನ ಕರ್ಣಗಳನ್ನು ನಿಮಿರಿಸಿತು. ಯಾವುದೋ ಕೆಲಸದ ಸಲುವಾಗಿ ನಾನಿರುವಲ್ಲಿಗೆ ಬಂದು ನನ್ನ ಭೇಟಿಯಾಗುವನೆಂಬ ವಿಷಯ ತಿಳಿದಾಗಲೇ ನನ್ನ ಕಾಲುಗಳು ಭೂಮಿಯನ್ನು ಬಿಟ್ಟು ಕೈಗಳೆರಡಕ್ಕೂ ರೆಕ್ಕೆ ಬಂದ ಅನುಭವವಾಗಿತ್ತು. ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದ ಆ ಭವನಕ್ಕೆ ತೆರಳಿ ಹಿಂಬದಿಯ ಕುರ್ಚಿಯಲ್ಲಿ ಕುಳಿತೆ. ಅವನು ಮುಂದೆಲ್ಲೋ ಕುಳಿತ್ತಿದ್ದ ಅನುಭವವಾಗಿತ್ತು. ನನ್ನ ಪಕ್ಕದಲ್ಲೇ ಇದ್ದ ಗೆಳತಿಯರು ಅವನು ಅಲ್ಲಿರುವುದನ್ನು ಖಚಿತಪಡಿಸಿದ್ದರು. ಯಾವ ಯೋಚನೆಗಳೂ ಇಲ್ಲದೆ ಅವನದೇ ಜಪದಲ್ಲಿದ್ದ ನಾನು ಕಾರ್ಯಕ್ರಮ ಮುಗಿಯುವುದನ್ನೇ ಕಾಯುತ್ತಿದ್ದೆ. ಕೊನೆಯ ಚಪ್ಪಾಳೆಗಳ ಪ್ರತಿಧ್ವನಿಗಳು ಮುಗಿಯುವ ಮುನ್ನವೇ ಅಲ್ಲಿಂದ ಎದ್ದು ಹೊರನೆಡೆದೆ. "ಅರೆರೆ ಅವನ ನಗುವ, ನೋಡಿ ಜಗವೆ ಮರೆವ" ಎಂದು ಗುನುಗುನಿಸುತ್ತಾ, ಅವನೇ ನನ್ನ ಬಳಿ ಬರುವನೆಂದು ತಿಳಿದ ನಾನು ಒಂದು ಕಡೆ ನಿಂತಿದ್ದೆ. ಕ್ಷಣಗಳಲ್ಲಿ ಹಿಂದೆಯಿಂದ ನನ್ನವನ ಧ್ವನಿ "ಯಾರೋ ನನಗಾಗಿಯೇ ಹಾಡು ಹಾಡಿದಂತಿದೆ" ಎಂದು. ನನ್ನ ಬಲಗಣ್ಣ ಓರೆ ದೃಷ್ಟಿಯಲ್ಲಿ ಕಂಡ ಅವನ ಚಹರೆ ಇಂದಿಗೂ ಅಚ್ಚಳಿಯದ್ದಂತಿದೆ. ಆರು ಹೆಜ್ಜೆ ಅಂತರದಲ್ಲಿ ಮುಗುಳು ನಗುತ್ತಾ ನಿಂತಿದ್ದ ನನ್ನ ಸುಂದರಶ್ಯಾಮನ ಕಣ್ತುಂಬ ನೋಡುತ್ತಲೇ, ಮೂರೇ ಹೆಜ್ಜೆಯಲ್ಲಿ ಅವನ ಬಳಿ ಜಿಗಿದೆ. ಸುತ್ತಲಿರುವ ಜನರಿಂದ ಮುಜುಗರವಾಗುವುದೇನೋ ಎಂಬ ಭಯದಲ್ಲಿ ನನ್ನ ತಡೆಯಲೆತ್ನಿಸಿದರೂ, ಅವನೇ ಪ್ರಪಂಚವಾಗಿರುವ ನನ್ನಪ್ಪುಗೆಯ ಬಿಗಿಯಲ್ಲಿ ಮುಳುಗಿದನು ನನ್ನ ಸೂರ್ಯ... 

Rating
No votes yet