ಅಂತರ್ಜಲಕ್ಕೆ ಕೊರೆವ ಕನ್ನ - ಕೊಳವೆ ಬಾವಿ
ಒಂದು ಬೋರ್ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್ವೆಲ್ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ್ಣ ಭಟ್. ಅವರು ದಕ್ಷಿಣ ಕನ್ನಡದ ಪುತ್ತೂರು ಹತ್ತಿರದ ಇಡ್ಕಿದು ಗ್ರಾಮದ ಅಮೃತ ಸಿಂಚನ ರೈತರ ಸೇವಾ ಒಕ್ಕೂಟದ ಅಧ್ಯಕ್ಷರು.
"ವರ್ಷದಲ್ಲಿ ಆರು ತಿಂಗಳ ಕಾಲ, ಕರೆಂಟು ಇರುವಾಗೆಲ್ಲ, ಸುಮಾರು ೬೦ ಅಡಿ ವ್ಯಾಸದ ಪೈಪ್ ಲೈನ್ ಬಳಸಿ ಎತ್ತಬಹುದಾದಷ್ಟು ನೀರನ್ನು ನಮ್ಮ ಗ್ರಾಮದಲ್ಲಿ ಬೋರ್ವೆಲ್ಗಳಿಂದ ಮೇಲೆತ್ತುತ್ತೇವೆ. ಯೋಚಿಸಿ ನೋಡಿ. ಇಷ್ಟು ನೀರನ್ನು ಭೂಮಿಗೆ ಪುನಃ ತುಂಬಿ ಕೊಡಲು ಸಾಧ್ಯವೇ?" ಎಂದವರು ಕೇಳುವಾಗ ನಮ್ಮ ತಲೆಗೆ ಮಿಂಚು ಹೊಡೆದಂತಾಗುತ್ತದೆ.
೧೯೬೦ರ ದಶಕದ ವರೆಗೆ ನಮ್ಮ ದೇಶದಲ್ಲಿ ಬೋರ್ವೆಲ್ಗಳ ಹಾವಳಿ ಇರಲಿಲ್ಲ. ಅನಂತರ ಜನಸಂಖ್ಯಾ ಹೆಚ್ಚಳ, ವಾಣಿಜ್ಯ ಬೆಳೆಗಳ ಕೃಷಿ, ನಗರಗಳ ಬೆಳವಣಿಗೆಗಳಿಂದಾಗಿ ನೀರಿನ ಬೇಡಿಕೆ ಹೆಚ್ಚಿತು. ನೀರಿನ ಸಮಸ್ಯೆಗೆ ಬೋರ್ವೆಲ್ ಪರಿಹಾರ ಎಂದು ಜನ ಭಾವಿಸಿದರು.
ಆರಂಭದಲ್ಲಿ ೧೦೦ - ೧೫೦ ಅಡಿಗಳ ಆಳದಲ್ಲಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿತ್ತು. ವರುಷಗಳು ಸರಿದಂತೆ ಹೆಚ್ಚೆಚ್ಚು ಆಳಕ್ಕೆ ಬೋರ್ ಕೊರೆಯಬೇಕಾಯಿತು. ೩೦೦ ಅಡಿಗಳಲ್ಲ, ೫೦೦ ಅಡಿ ಆಳಕ್ಕೆ ಬೋರ್ ಕೊರೆದರೂ ನೀರು ಸಿಗಲಿಲ್ಲ. ಇನ್ನೂ ಆಳಕ್ಕೆ ಬೋರ್ ಕೊರೆದದ್ದೇ ಕೊರೆದದ್ದು. ಕೊನೆಕೊನೆಗೆ ಕರ್ನಾಟಕದ ಚಿತ್ರದುರ್ಗ ಹಾಗೂ ತಮಿಳುನಾಡಿನ ಕೊಯಂಬತ್ತೂರು ಇಂತಹ ಪ್ರದೇಶಗಳಲ್ಲಿ ೧,೦೦೦ ಅಡಿಗಳಿಗಿಂತ ಹೆಚ್ಚು ಆಳಕ್ಕೆ ಬೋರ್ ಕೊರೆದರೂ ನೀರು ಸಿಗದಿದ್ದಾಗ ಜನರಿಗೆ ತಾವು ಮಾಡಿದ ತಪ್ಪಿನ ಅರಿವಾಗತೊಡಗಿತು.
ಜಿದ್ದಿಗೆ ಬಿದ್ದವರಂತೆ ಭೂಮಿಯಾಳದ ನೀರಿಗೆ ಕೈಹಾಕಿದ್ದರಿಂದಾಗಿ ಸಾವಿರಾರು ತೆರೆದ ಬಾವಿಗಳು ಬತ್ತಿದವು. (ಅವುಗಳ ನೀರಿನ ಸೆಲೆಯನ್ನು ಹತ್ತಿರದಲ್ಲಿ ಕೊರೆದ ಆಳದ ಕೊಳವೆಬಾವಿ ಕಬಳಿಸಿತ್ತು.) ಇನ್ನಷ್ಟು ಆಳದ ಬೋರ್ವೆಲ್ ಕೊರೆದಾಗ, ಹಳೆಯ ಬೋರ್ವೆಲ್ಗಳೂ ಬರಿದಾದವು. ಬೋರ್ವೆಲ್ಗಳಿಂದ ಅಗಾಧ ಪ್ರಮಾಣದಲ್ಲಿ ನೀರು ಮೇಲೆತ್ತಿದ್ದರಿಂದಾಗಿ ಅಂತರ್ಜಲ ಮಟ್ಟವೇ ಕುಸಿಯಿತು. ಭಾರತದ ರಾಜಧಾನಿ ದೆಹಲಿಯಲ್ಲಿ ಒಂದು ದಶಕದಲ್ಲಿ ಅಂತರ್ಜಲ ಮಟ್ಟ ೪ರಿಂದ ೧೦ ಮೀಟರ್ ಕುಸಿಯಿತು.
ಇಡ್ಕಿದು ಗ್ರಾಮದಲ್ಲಿ ಆದದ್ದು ಇದೇ ಅನಾಹುತ. ಅಲ್ಲಿರುವ ಕೊಳವೆಬಾವಿಗಳು ೩೬೪. ಎಪ್ಪತ್ತರ ದಶಕದ ಮುಂಚೆ ಭತ್ತ ಪ್ರಧಾನ ಬೆಳೆ. ಅದರ ನೀರಾವರಿಗೆ ತೊರೆಗಳ ಇಲ್ಲವೆ ಕಟ್ಟಗಳ ನೀರು ಸಾಕಾಗುತ್ತಿತ್ತು. ಕ್ರಮೇಣ ಭತ್ತದ ಗದ್ದೆಗಳಲ್ಲಿ ಅಡಿಕೆ ತೋಟ ಎದ್ದಿತು. ಅಡಿಕೆಯ ಬೆಲೆ ಏರಿದಂತೆ ಕೊಳವೆಬಾವಿಗಳ ಮತ್ತು ಸಬ್ ಮರ್ಸಿಬಲ್ ಪಂಪುಗಳ ಸಂಖ್ಯೆ ಏರಿತು. ೨೦೦೧ರಲ್ಲಿ ಈ ಹುಚ್ಚಿನ ದುಷ್ಪರಿಣಾಮಗಳು ನಿಚ್ಚಳ. ಕೊಳವೆಬಾವಿಗಳಲ್ಲಿ ೧೦% ಬತ್ತಿ ಹೋದವು. ಅಲ್ಲಿನ ೩೦೩ ತೆರೆದ ಬಾವಿಗಳಲ್ಲಿ ಬೇಸಗೆ ಕೊನೆಯ ವರೆಗೆ ನೀರು ಉಳಿಯುತ್ತಿದ್ದದ್ದು ಕೇವಲ ೧೧% ಬಾವಿಗಳಲ್ಲಿ. ’ಅಮೃತ ಸಿಂಚನ’ದ ಮುಂದಾಳುತನದಲ್ಲಿ ಮನೆಮನೆ ಸಮೀಕ್ಷೆ ನಡೆಸಿ ಸಂಗ್ರಹಿಸಿದ ಈ ಎಲ್ಲ ಮಾಹಿತಿ ಊರ ಜನರ ಮುಂದಿಟ್ಟಾಗ ಜನ ಎಚ್ಚರಾದರು. ಮಳೆಕೊಯಿಲಿಗೆ ಟೊಂಕ ಕಟ್ಟಿದರು. ಹಲವು ಮನೆಗಳಲ್ಲಿ ಜಲಸಂರಕ್ಷಣೆಯ ಕಾಯಕ ಆರಂಭ. ಈಗ ಇಡ್ಕಿದು ಕನ್ನಡನಾಡಿನಲ್ಲಿ ಜಲಜಾಗೃತಿಗೆ ಹೆಸರಾದ ಗ್ರಾಮ.
ಇತರ ಗ್ರಾಮಗಳಲ್ಲಿ ಹಾಗೂ ನಗರಗಳ ಜನರಲ್ಲಿ ಕೂಡ ಜಲಜಾಗೃತಿ ಆಗಬೇಕಾದರೆ ಏನು ಮಾಡಬೇಕು? ಒಂದು ಕ್ಷಣ ಚಿಂತಿಸೋಣ. ಈ ಭೂಮಿ ನೂರಾರು ಅಡಿ ಆಳದಲ್ಲಿ ನೀರನ್ನು ಯಾಕೆ ಜೋಪಾನವಾಗಿಡುತ್ತದೆ? ಭೂಮಿಯ ಜೀವಿಗಳಿಗೆಲ್ಲ ಆಪತ್ಕಾಲದಲ್ಲಿ ಜೀವಜಲ ಸಿಗಲಿ ಎಂಬ ಕಾರಣಕ್ಕಾಗಿ ಅಲ್ಲವೇ? ಅಂತರ್ಜಲ ನಮ್ಮ ಆಪತ್ ಧನ. ನಿಜಕ್ಕೂ ಅದು ಮುಂದಿನ ಪೀಳಿಗೆಗಳ ಗುಪ್ತ ನೀರ ಖಜಾನೆ. ಆದರೆ ನಾವು ಕೊಳವೆ ಬಾವಿ ಕೊರೆದು ಅದಕ್ಕೇ ಕನ್ನ ಹಾಕುತ್ತಿದ್ದೇವೆ. ಇರಲಿ, ನಮ್ಮ ತುರ್ತಿಗಾಗಿ ಆಪತ್ ಧನ ಬಳಸಿಕೊಂಡರೆ, ಅನಂತರ ಅದನ್ನು ಸರಿದೂಗಿಸುವ ಜವಾಬ್ದಾರಿ ನಮ್ಮದೇ ಅಲ್ಲವೇ? ಅದಕ್ಕಾಗಿ, ಕೊಳವೆಬಾವಿ ಹಾಗೂ ತೆರೆದಬಾವಿಗಳ ಜಲಮರುಪೂರಣಕ್ಕೆ ಮುಂದಾಗೋಣ.