ಅತ್ಯಧಿಕ ಮಳೆ ಸುರಿದರೂ ನೀರಿಗೆ ತತ್ವಾರ

ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಬಿದ್ದ ಸ್ಥಳ - ಚಿರಾಪುಂಜಿ. ಆಗಸ್ಟ್ ೧೮೮೦ರಿಂದ ಜುಲೈ ೧೮೮೧ರ ವರೆಗೆ ಬಿದ್ದ ಮಳೆ ೨೨,೯೮೭ ಮಿಮೀ. ಗಿನ್ನೆಸ್ ಪುಸ್ತಕದಲ್ಲಿ ಇನ್ನೊಂದು ದಾಖಲೆಯೂ ಚಿರಾಪುಂಜಿಯ ಹೆಸರಿನಲ್ಲಿದೆ: ಒಂದೇ ದಿನದಲ್ಲಿ ಅತ್ಯಧಿಕ ಮಳೆ ಬಿದ್ದ ಸ್ಥಳ ಅದು. ೧೯೭೪ರ ಅದೊಂದು ದಿನ ಪ್ರಳಯವಾದಂತೆ ಮಳೆ ಹೊಯ್ದಿತ್ತು - ೨,೪೫೫ ಮಿಮೀ.
"ಹೌದು, ಅದೊಂದು ಕಾಲವಿತ್ತು. ಮಳೆ ಶುರುವಾಯಿತೆಂದರೆ ಆಕಾಶವೇ ಕಳಚಿ ಬಿದ್ದಂತೆ ಮಳೆ ಹೊಯ್ಯುತ್ತಿತ್ತು. ಮೂರು ದಿನ ಸುರಿದರೂ ಮಳೆ ನಿಲ್ಲದಿದ್ದರೆ, ಅದು ಒಂಭತ್ತು ದಿನಗಳ ವರೆಗೆ ಎಡೆಬಿಡದೆ ಸುರಿಯುವ ಮಳೆ ಎಂದು ನಮಗೆ ಗೊತ್ತಾಗುತ್ತಿತ್ತು. ಆಗ ಮುಂದಿನ ಬೆಳೆಗಾಗಿ ಹೊಲಗಳಲ್ಲಿ ನೆಡುವ ಕೆಲಸ ಶುರು ಮಾಡುತ್ತಿದ್ದೆವು" ಎಂದು ನೆನಪು ಮಾಡಿಕೊಳ್ಳುತ್ತಾರೆ, ೭೫ ವರುಷಗಳ ಮುದುಕ.
ಚಿರಾಪುಂಜಿಯಿಂದ ಕೆಲವು ಕಿಮೀ ದೂರದ ಹಳ್ಳಿ ಟಿರ್ನಾದಲ್ಲಿ ತನ್ನ ಬಾಲ್ಯದ ದಿನಗಳಲ್ಲಿ ಹಾಗೆ ಮಳೆ ಹೊಯ್ಯುತ್ತಿದ್ದ ನೆನಪುಗಳು ಅವನಲ್ಲಿ ಮಾಸಿಲ್ಲ. ಆಗ ಮಳೆಗಾಲದಲ್ಲಿ ಕಿತ್ತಳೆ, ಗೆಣಸು, ವೀಳ್ಯದೆಲೆ ಬಳ್ಳಿ, ಕಾಫಿ ಗಿಡಗಳು, ಕೇನೆ ಗೆಡ್ಡೆಗಳು ಇವನ್ನೆಲ್ಲ ನೆಡುತ್ತಿದ್ದರಂತೆ. "ಆಗ ನಮಗೆ ಈಗಿನಂತೆ ಆಹಾರದ ಚಿಂತೆ ಇರಲಿಲ್ಲ. ಈಗ ಎಲ್ಲವೂ ತಲೆಕೆಳಗಾಗಿದೆ," ಎನ್ನುತ್ತಾನೆ ಆ ಹಿರಿಯ ಆಕಾಶ ದಿಟ್ಟಿಸುತ್ತಾ.
ಹೌದು, ಈಗ ಎಲ್ಲವೂ ತಲೆಕೆಳಗಾಗಿದೆ. ಗೌಹಾತಿಯ ಪ್ರಾದೇಶಿಕ ಹವಾಮಾನ ಕೇಂದ್ರದ ದಾಖಲೆಗಳ ಪ್ರಕಾರ, ಕಳೆದ ದಶಕದಲ್ಲಿ ಚಿರಾಪುಂಜಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ ೧೧,೦೭೦ ಮಿಮೀ. ೨೦೦೬ರಲ್ಲಿ ಬಿದ್ದ ಮಳೆ ಕೇವಲ ೮,೭೩೦ ಮಿಮೀ. ಅಂದರೆ ಸರಾಸರಿ ಮಳೆಗಿಂತಲೂ ಶೇಕಡಾ ೩೫ ಕಡಿಮೆ.
ಚಿರಾಪುಂಜಿಯಲ್ಲಿ ಜೂನಿನಿಂದ ಸಪ್ಟಂಬರ್ ವರೆಗೆ ಮಳೆಗಾಲ. ಬಂಗಾಳ ಕೊಲ್ಲಿಯಿಂದ ಬಾಂಗ್ಲಾದೇಶ ಹಾದು ಬರುವ ಮುಂಗಾರು ಮಾರುತಗಳ ಬಿರುಸು ಜೋರು. ಯಾಕೆಂದರೆ, ಬಾಂಗ್ಲಾದೇಶದಲ್ಲಿ ಪರ್ವತಗಳಿಲ್ಲ. ಹಾಗಾಗಿ ಮಳೆಮೋಡಗಳ ತೇವಾಂಶದ ಬಹುಪಾಲು ಮೇಘಾಲಯದ ಪರ್ವತಗಳ ಮೇಲೆಯೇ ಬೀಳುತ್ತದೆ. ಆದರೂ ೭೦,೦೦೦ ಜನಸಂಖ್ಯೆಯಿರುವ ಚಿರಾಪುಂಜಿಯಲ್ಲಿ ವರುಷದಿಂದ ವರುಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಇತ್ತೀಚೆಗಿನ ವರುಷಗಳಲ್ಲಿ ಬೇಸಗೆಯಲ್ಲಿ ಅಲ್ಲಿ ನೀರಿಗೆ ತತ್ವಾರ.
ಯಾಕೆ ಹೀಗಾಯಿತು? ಚಿರಾಪುಂಜಿಯ ಬೆಟ್ಟಗಳ ಕಾಡುಗಳನ್ನು ಕಡಿದು ನಾಶ ಮಾಡಿದ್ದರಿಂದಾಗಿ. ಅಲ್ಲಿ ಬೀಳುವ ಮಳೆಯ ರಭಸ ತಗ್ಗಿಸಲು ಮತ್ತು ಬಿದ್ದ ಮಳೆ ನೀರಿಂಗಿಸಲು ನೆರವಾಗಲು ಅಲ್ಲಿ ಮರಗಳೇ ಇಲ್ಲ. ಅಲ್ಲಿ ಬೀಳುವ ಮಳೆ ಕಡಿಮೆಯೇನಲ್ಲ. ಆದರೆ ಅದೆಲ್ಲವೂ ಬೆಟ್ಟಗುಡ್ಡಗಳಿಂದ ರಭಸವಾಗಿ ಇಳಿದು ಪಕ್ಕದ ಬಾಂಗ್ಲಾದೇಶಕ್ಕೆ ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಪರ್ವತಗಳಿಂದ ಇಳಿದು ಬರುವ ಹಲವಾರು ನೀರಿನ ತೊರೆಗಳು ಚಳಿಗಾಲದಲ್ಲಿಯೇ ಬತ್ತಿ ಹೋಗುತ್ತವೆ.
ಅಲ್ಲಿ ಈಗ ನೀರಿಗೆ ಎಂತಹ ತತ್ವಾರ? ಕೆಲವು ಸ್ಥಳಗಳಲ್ಲಿ ಸರಕಾರ (೨೫ ವರುಷಗಳ ಮುಂಚೆ) ಹಾಕಿದ ಪೈಪುಗಳಿಂದ ಕುಡಿಯುವ ನೀರು ತರಲಿಕ್ಕಾಗಿ ಜನ ಕೆಲವು ಕಿಲೋಮೀಟರ್ ನಡೆದು ಹೋಗುತ್ತಾರೆ. ಆ ನೀರೂ ಶುದ್ಧವಾಗಿಲ್ಲ.
ನೀರಿನ ಕೊರತೆಯಿಂದಾಗಿ ಅಲ್ಲಿ ಕೃಷಿಯೂ ಕ್ಷೀಣಿಸುತ್ತಿದೆ. ಜನರು ಕೃಷಿ ತೊರೆದು ಕಲ್ಲಿದ್ದಲು, ಸುಣ್ಣದ ಕಲ್ಲಿನ ಗಣಿಗಳಲ್ಲಿ ಹಾಗೂ ಕಲ್ಲಿನ ಕ್ವಾರಿಗಳಲ್ಲಿ ದಿನಗೂಲಿಗೆ ದುಡಿಯುತ್ತಿದ್ದಾರೆ. ಜನಸಾಮಾನ್ಯರ ಬದುಕೇ ಬಿಗಡಾಯಿಸುತ್ತಿದೆ. ಇವೆಲ್ಲದರ ನಡುವೆ ಅಲ್ಲಿನ ಜನರೀಗ ತಮ್ಮ ಊರಿಗೆ ಬ್ರಿಟಿಷರಿತ್ತ ಚಿರಾಪುಂಜಿ ಎಂಬ ಹೆಸರನ್ನೇ ತೊರೆದಿದ್ದಾರೆ. ತಮ್ಮೂರನ್ನು ಸೊಹ್ರಾ ಎಂಬ ಪುರಾತನ ಹೆಸರಿನಿಂದಲೇ ಕರೆಯುತ್ತಿದ್ದಾರೆ - ಹಳೆಯ ನೆನಪುಗಳನ್ನು ಜೀವಂತವಾಗಿಡಲೋ ಎಂಬಂತೆ.
ಹೇಗಿದ್ದ ಸೊಹ್ರಾ ಹೇಗಾಯಿತು! ಸಂಪನ್ನ ಮಳೆ ಮತ್ತು ಶುದ್ಧ ಮಳೆನೀರು - ಇವು ಈಗಲೂ ಸೊಹ್ರಾಕ್ಕೆ ಭೂಮಿಯ ಕೊಡುಗೆ. ಆದರೆ ಅಲ್ಲಿನ ಜನ ಕೈಗೆ ಬಂದ ಭಾಗ್ಯ ಕೈಬಿಟ್ಟು ಬಳಲುತ್ತಿದ್ದಾರೆ.
ನಮ್ಮ ನಮ್ಮ ಊರುಗಳಲ್ಲಿಯೂ ಹೀಗಾಗುತ್ತಿದೆಯೇ? ಒಮ್ಮೆ ಯೋಚಿಸಿ. ಮಳೆ ನೀರು ಆಕಾಶದಿಂದ ಬೀಳುವ ಭಾಗ್ಯ. ನಮ್ಮ ಜಾಗದಲ್ಲಿ ಬೀಳುವ ಮಳೆಯ ಹನಿಹನಿಯನ್ನೂ ಕೊಯ್ಲು ಮಾಡುವ, ಮಳೆ ನೀರಿಂಗಿಸುವ ವ್ಯವಸ್ಥೆ ಮಾಡಿದ್ದೇವೆಯೇ? ನಿಮಗೆ ನೀವೇ ಕೇಳಿಕೊಳ್ಳಿ. ಅತ್ಯಧಿಕ ಮಳೆ ಬೀಳುತ್ತಿದ್ದ ಸೊಹ್ರಾದಲ್ಲಿ ಈಗ ನೀರಿಗೆ ತತ್ವಾರ. ಇನ್ನಾದರೂ ನಾವು ಪಾಠ ಕಲಿಯಬೇಡವೇ?