ಪಂಜೆ ಮಂಗೇಶರಾಯರ ಮಕ್ಕಳ ಸಾಹಿತ್ಯ
ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಂದ ಕಲಿತ ಹಾಡುಗಳು ಹಲವು. ಅವುಗಳಲ್ಲಿ ಮರೆಯಲಾಗದ ಕವಿತೆ, “ಹಾವಿನ ಹಾಡು". “ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ! ಬಾ ಬಾ ಬಾ ಬಾ ಬಾ ಬಾ ಬಾ ಬಾ” ಎಂದು ಆರಂಭವಾಗುವ ಈ ಹಾಡು ನಮ್ಮ ನಾಲಗೆಯಲ್ಲಿ ನಲಿದಾಡುತ್ತಿತ್ತು. ಇದಕ್ಕೆ ಕಾರಣ ಪ್ರತಿಯೊಂದು ಪದ್ಯದ ಕೊನೆಗೂ ಇರುವ ಹಾವಾಡಿಗನ ಪುಂಗಿಯ ನಾದದ ಸೊಗಸಾದ ಅನುಕರಣೆ. ಇದು ಪಂಜೆ ಮಂಗೇಶರಾಯರು ರಚಿಸಿದ ಸುಪ್ರಸಿದ್ಧ ಮಕ್ಕಳ ಕವನ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡದ ಹಿರಿಯ ಸಾಹಿತಿಗಳ ಪ್ರಸಿದ್ಧ ಹಾಗೂ ಅಲಭ್ಯವಾದ ಕೃತಿಗಳನ್ನು ಪುನರ್ ಮುದ್ರಿಸುವ ಯೋಜನೆಯ ಅನುಸಾರ ೨೦೦೬ರಲ್ಲಿ ಈ ಪುಸ್ತಕ ಪ್ರಕಟಿಸಿದ್ದರಿಂದಾಗಿ ಪಂಜೆಯವರ ಮಕ್ಕಳ ಸಾಹಿತ್ಯವೆಲ್ಲ ಒಂದೆಡೆ ಸಿಗುವಂತಾಯಿತು.
ಹೊಸಗನ್ನಡ ಸಾಹಿತ್ಯದ ಪ್ರವರ್ತಕರು ಎನ್ನುವಾಗ ಪಂಜೆ ಮಂಗೇಶರಾಯರ ಹೆಸರು ಮುಂಚೂಣಿಗೆ ಬಂದೇ ಬರುತ್ತದೆ. ೧೯ನೆಯ ಶತಮಾನದ ಹಿರಿಯ ಸಾಹಿತಿಯಾದ ಪಂಜೆಯವರು ಕನ್ನಡದ ಸಣ್ಣ ಕತೆಗಳ ಜನಕರೆಂದು ಪ್ರಸಿದ್ಧರು. ಅವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಜನಕರೂ ಹೌದು. ಮಕ್ಕಳ ಮನಸ್ಸನ್ನು, ಅವರ ಶಬ್ದಪ್ರಪಂಚದ ಇತಿಮಿತಿಗಳನ್ನು ಚೆನ್ನಾಗಿ ತಿಳಿದಿದ್ದ ಪಂಜೆಯವರು ಮಕ್ಕಳಿಗಾಗಿ ರಚಿಸಿದ ಸಮೃದ್ಧ ಸಾಹಿತ್ಯ, ಈ ಪುಸ್ತಕದ ೩೦೦ ಪುಟಗಳಲ್ಲಿ ತುಂಬಿಕೊಂಡಿದೆ.
ಆಡುಭಾಷೆಯ ಪದಗಳ ಬಳಕೆ, ಲಯಬದ್ಧ ರಚನೆ ಹಾಗೂ ಸರಳ ವರ್ಣನೆ ಮೂಲಕ ವಿಷಯವನ್ನು ಮಕ್ಕಳಿಗೆ ಮನದಟ್ಟಾಗುವಂತೆ ಹೇಳುವುದರಲ್ಲಿ ಪಂಜೆಯವರು ಪರಿಣತರು. ಕನ್ನಡಕ್ಕೆ ಮನ್ನಣೆ ಇಲ್ಲದಿದ್ದ ಕಾಲಘಟ್ಟದಲ್ಲಿ, ಆಡುಮಾತಿನ ಪ್ರಭಾವಿ ನುಡಿಗಟ್ಟುಗಳನ್ನು ಬಳಸಿ, ಎಲ್ಲ ಕಾಲದಲ್ಲಿಯೂ ಮಕ್ಕಳಿಗೆ ಖುಷಿ ಕೊಡುವ ಕತೆಕವನಗಳನ್ನು ಸೃಷ್ಟಿಸಿ, ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ ಹೆಗ್ಗಳಿಕೆ ಅವರದು. ಅವರ ಬಾಲಗೀತೆಗಳಂತೂ ವರ್ಣರಂಜಿತ ಚಿತ್ರಣ ಹಾಗೂ ಗೇಯಗುಣಗಳಿಂದಾಗಿ ಕನ್ನಡದ ಮಕ್ಕಳ ನಾಲಗೆಯಲ್ಲಿ ನಲಿದಾಡುವಂತಾಯಿತು.
“ಹೊಸಗನ್ನಡ ಸ್ವತಂತ್ರವಾಗಿ ಕಣ್ತೆರೆದು ಲೋಕವನ್ನು ನೋಡಬೇಕು, ತನಗೆ ಕಾಣುವ ಲೋಕ ಜೀವನವನ್ನು ಚಿತ್ರಿಸಬೇಕು ಎಂದು ತೊಡಗಿದ ಕಾಲದಲ್ಲಿ ಪಂಜೆಯವರು ಇಂಗ್ಲಿಷ್ ಸಾಹಿತ್ಯವನ್ನು ಪ್ರೀತಿಯಿಂದ ಓದಿದ್ದವರು. ಯುರೋಪಿನ ಇತರ ಭಾಷಾ ಸಾಹಿತ್ಯಗಳ ಸಂಪರ್ಕ ಇಂಗ್ಲಿಷಿನಿಂದ ಅವರಿಗೆ ಉಂಟಾಗಿತ್ತು. ಬೇಸಿಲ್ ಮಿಷನ್ ಪ್ರೆಸ್ಸಿನ ಜರ್ಮನ್ ಮೇಧಾವಿಗಳ ಸಂಪರ್ಕವಿತ್ತು. ಶಬ್ದಮಣಿ ದರ್ಪಣದ ಒಂದು ಆವೃತ್ತಿಯನ್ನು ಹೊಸದಾಗಿ ಅಚ್ಚು ಮಾಡಿದ ಸಂದರ್ಭದಲ್ಲಿ ಸೂತ್ರಗಳಿಗೆ ಇಂಗ್ಲಿಷಿನ ಸಂಕ್ಷಿಪ್ತ ಸಾರಸೂಚಿಕೆಗಳನ್ನೂ ಟಿಪ್ಪಣಿಗಳನ್ನೂ ಬರೆಯುವುದರಲ್ಲಿ ನೆರವಾದವರು. ಹಾಗೆಯೇ ಅವರು ಪಠ್ಯ ಪುಸ್ತಕಗಳನ್ನು ತಯಾರಿಸುವುದರಲ್ಲಿಯೂ ಮಕ್ಕಳಿಗೆ ಪ್ರಿಯವಾಗಬಲ್ಲ ಗೀತೆಗಳನ್ನೂ ಪದ್ಯಗಳನ್ನೂ ಇತರ ಪಾಠಗಳನ್ನೂ ಭಾಷಾಂತರವಾಗಿಯೊ ಸ್ವಂತವಾಗಿಯೊ ರೂಪಿಸಿದರು. ಅವರ ಭಾವಮೈದುನರಾದ ಬೆನಗಲ್ ರಾಮರಾಯರ - ಸುವಾಸಿನಿ ಪತ್ರಿಕೆಗೆ ಇವರೇ ಜೀವನಾಡಿ. ಅಲ್ಲಿನ ಸಂಪಾದನೆಯ ಕೆಲಸವೆಲ್ಲ ಬಹುಮಟ್ಟಿಗೆ ಇವರದೇ. ….. ಆ ಉತ್ಸಾಹ, ನಗೆ, ಶ್ರದ್ಧೆ, ಆ ಕಲ್ಪನಾಸಾಹಸ, ನುಗ್ಗಿ ಒಲಿಸುವ ಒಂದು ಸಹಜ ಸಜ್ಜನತೆ ಮತ್ತು ಚಾಕಚಕ್ಯ ಉಳ್ಳ ಅವರಂಥವರನ್ನು ನಾನು ಬೇರೆಲ್ಲಿಯೂ ಕಂಡಿಲ್ಲ" ಎಂದು ಪಂಜೆಯವರ ವ್ಯಕ್ತಿತ್ವ ಹಾಗೂ ಸಾಹಿತ್ಯಸಾಧನೆಯನ್ನು ದಾಖಲಿಸಿದ್ದಾರೆ, ಕನ್ನಡದ ಇನ್ನೊಬ್ಬ ಹಿರಿಯ ಸಾಹಿತಿ ವಿ. ಸೀತಾರಾಮಯ್ಯನವರು. (ಪಂಜೆಯವರ ಪದ್ಯಗಳು - ಸಂಪುಟ ೧ರ ಪರಿಚಯ ಬರಹದಲ್ಲಿ.)
ಅದೇ ಬರಹದಲ್ಲಿ ಪಂಜೆಯವರ ಕವಿತೆಗಳ ಬಗ್ಗೆ ಅವರ ಮೆಚ್ಚುಗೆ ಹೀಗೆ ವ್ಯಕ್ತವಾಗಿದೆ: “.... ಚೆದರಿ ಕಾಣೆಯಾಗಿದ್ದ (ಪಂಜೆಯವರ) ಪದ್ಯಗಳೆಲ್ಲ - ಒಂದು ಕಡೆ ಈಗ ದೊರೆಯುವಂತಾಗಿದೆ. ಕಳೆದ ಶತಮಾನದ ಕಡೆಯ ಭಾಗದ ಇವುಗಳಲ್ಲಿ ಈ ಶತಮಾನದ ಮೊದಲ ೩೦ - ೪೦ ವರ್ಷಗಳ ಮಾತು, ಶೈಲಿ, ರೀತಿ, ಪ್ರಕಾರಗಳ ಮಾದರಿಗಳಿವೆ. ದಕ್ಷಿಣ ಕನ್ನಡದ ಜಾಯಮಾನವಿದೆ. ಪದ್ಯಗಳ ರಚನೆಯನ್ನು ನೋಡಿದರೆ ಸರಳತೆ, ಶಬ್ದಾರ್ಥ ಸೌಂದರ್ಯ, ಭಾವ, ಕಾಂತಿ, ಭಾಷೆಯ ಬಳಕೆಯಲ್ಲಿ ಸುಭಗತೆ, ಕಲ್ಪನಾವಿಲಾಸ ಮುಂತಾದವನ್ನೂ ಹೊಮ್ಮಿಸುತ್ತದೆ. ಅಚ್ಚ ಭಾವಗೀತೆಗಳ ಜೊತೆಗೆ ದೇಶಪ್ರೇಮ ಪ್ರಕಾಶಗೊಳ್ಳುತ್ತದೆ. ಮಾರ್ಮಿಕವಾಗಿ ಕೆಲವು; ಸ್ಫುಟವಾಗಿ ಕೆಲವು, ಸಾಮಾಜಿಕ ಅಸಮತೆ, ಅನ್ಯಾಯ, ನಮ್ಮ ನಾಡಿನ ವೀರಪುರುಷರ ಕಥೆ, ಆದರ್ಶ ಜೀವನ, ಸ್ಫೂರ್ತಿಯುತವಾಗಿ ರೂಪಿತವಾಗಿವೆ. “ದೊಂಬರ ಚೆನ್ನಿ” ಪದವೊ ಅಥವಾ ಇನ್ನಾವ ಆಟ ವಿನೋದವೊ ಎಲ್ಲ ವಯಸ್ಸಿನ ಮಕ್ಕಳನ್ನೂ ಹೇಗೆ ರಂಜಿಸುತ್ತವೆ ಎಂಬುದನ್ನು ಕಾಣಬಹುದು. ...... ಕೊಡಗಿನ ವೀರಗೀತೆಯೆನ್ನಬಹುದಾದ “ಹುತ್ತರಿ ಹಾಡ"ನ್ನು ಕೊಂಕಣಿ ಮಾತಾಡುವ …. (ಪಂಜೆಯವರು) ರಚಿಸಿದರೆಂಬುದು ಹೊಸಗನ್ನಡದ ಒಂದು ಪವಾಡ. ಅದಕ್ಕೆ ಸರಿತೂಗುವ ಹಾಡನ್ನು, ರಚನಾ ಸಾಮರ್ಥ್ಯವನ್ನು, ಹಾರ್ದತೆ ಕಾವುಗಳನ್ನು ನಾವು ಬೇರೆಲ್ಲಿಯೂ ಕಾಣೆವು. …. ಇನ್ನು “ತೆಂಕಣ ಗಾಳಿಯಾಟ”ದ ಸೊಗಸು ಏಕೈಕ; ಅನ್ಯಾದೃಶ. ಅದರ ಶುದ್ಧ ಕಾವ್ಯ ಸಂಪತ್ತಿ, ಅಚ್ಚಳಿಯದ ಸೌಭಾಗ್ಯ ಸೌಂದರ್ಯ ಲಯಗಾನವುಳ್ಳದ್ದು. ಕನ್ನಡದಲ್ಲಿ ಅದರ ಸಮಕ್ಕೆ ಬರುವ ಪದ್ಯಗಳು ಅಪರೂಪ.”
ಕನ್ನಡದ ಮಕ್ಕಳಿಗೆ ಈ ಪುಸ್ತಕ ಒಂದು ಅಚ್ಚರಿಯ ಖಜಾನೆ. ಕನ್ನಡದ ಮಕ್ಕಳು ಇಂಗ್ಲಿಷಿನ ಬೆಂಬತ್ತಿರುವ ಈ ಕಾಲಘಟ್ಟದಲ್ಲಿ ಈ ಪುಸ್ತಕದ ಸುಲಲಿತವಾದ, ಮನಮುಟ್ಟುವ ಕತೆಕವಿತೆಗಳನ್ನು ತಮ್ಮ ಮಕ್ಕಳಿಗೆ ಕೇಳಿಸುವುದು, ಕಲಿಸುವುದು, ಆ ಮೂಲಕ ಕನ್ನಡದ ಸವಿಯನ್ನು ಮಕ್ಕಳಿಗೆ ಉಣಿಸುವುದು ಕನ್ನಡನಾಡಿನ ಎಲ್ಲ ಹೆತ್ತವರು ಮಾಡಲೇ ಬೇಕಾದ ಕೆಲಸ.