ನನ್ನೂರಿಗೆ ಆಧುನಿಕತೆಯ ಪ್ರವೇಶ

Submitted by kvcn on Sat, 08/17/2019 - 22:33

ನನ್ನೂರಿನ ಬಗ್ಗೆ ಹೇಳುವಾಗ ಇನ್ನೊಂದು ಅಂಶ ಬಹಳ ಮುಖ್ಯ ವಾದುದು. ಪ್ರಕೃತಿ ಸಹಜವಾದ ಬದುಕು ಆಧುನಿಕತೆಯ ಕಡೆಗೆ ಹೊರಳುತ್ತಿದ್ದ ಕಾಲ. ಶುಚಿತ್ವಕ್ಕೆ ಮಹತ್ವ ಬಂದ ಕಾಲವೂ ಹೌದು. ಮಡಿವಂತಿಕೆ ಹಾಗೂ ಶುಚಿತ್ವಕ್ಕೆ ಸಂಬಂಧವಿದೆಯಾದರೂ ಎರಡೂ ಒಂದೇ ಅಲ್ಲ. ಶುಚಿತ್ವ ಇದ್ದಲ್ಲಿ ಮಡಿವಂತಿಕೆಯ ಅಗತ್ಯವೇ ಇರುವುದಿಲ್ಲ. ಮಡಿವಂತಿಕೆ ಇದ್ದಲ್ಲಿ ಶುಚಿತ್ವ ಇರಲೇಬೇಕೆಂಬ ನಿಯಮ ಇದ್ದಂತೆಯೂ ಇಲ್ಲ. ಯಾಕೆ ಈ ವಿಷಯ ಎಂದರೆ ಅಂದು ವಿಶಾಲವಾದ ಬಯಲು, ಹಿತ್ತಲು, ಗುಡ್ಡೆಗಳಿದ್ದ ದಿನಗಳು. ಇವುಗಳೇ ಜನರ ದೇಹ ಬಾಧೆಗಳಿಗೆ, ಸಹಜ ಪ್ರಕೃತಿ ನಿಯಮಗಳಿಗೆ ತಾಣಗಳಾಗಿತ್ತು. ಇವುಗಳಲ್ಲಿ ಜಾತಿ ಭೇದ, ಧರ್ಮ ಭೇದ, ಲಿಂಗ ಭೇದ ಅಥವಾ ಶ್ರೀಮಂತರು ಬಡವರು ಎಂಬ ಭೇದವೂ ಇಲ್ಲದೆ ಎಲ್ಲರೂ ಬಯಲಲ್ಲೇ ತಮ್ಮ ಶೌಚಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲಿ ಕಕ್ಕಸು ಮಾಡಿ ಹೊಲಸು ಮಾಡುತ್ತಿರಲಿಲ್ಲ. ಈ ಕಾರಣದಿಂದಲೇ ನನ್ನ ಮನೆ ಹಾಗೂ ಸುತ್ತಮುತ್ತಲಲ್ಲಿ ಎಲ್ಲೂ ಮಲ ಹೊರುವ ಪದ್ಧತಿ ಇರಲಿಲ್ಲ. ಆದರೆ ಲಾಲ್‍ಬಾಗ್‍ನಂತಹ ಪ್ರದೇಶಗಳು ಅದಾಗಲೇ ಪೇಟೆ ಅನ್ನಿಸಿಕೊಂಡಿದ್ದು ಅಲ್ಲಿ ವಿಶಾಲವಾದ ಬಯಲು, ಹಿತ್ತಿಲು ಗಳಿದ್ದರೂ ಮನೆಗಳಿಗೆ, ಬಿಡಾರದ ಮನೆಗಳಿಗೆ ಸಾಲಾಗಿ ಕಟ್ಟಿಸಿದ ತೆರೆದ ಗುಂಡಿಯ ಕಕ್ಕಸುಗಳಿದ್ದವು. ಇವುಗಳಿಂದ ಪ್ರತಿ ದಿನವೂ ಕಕ್ಕಸು ಬಾಚಿ ಒಯ್ಯಲು ಮುನಿಸಿಪಾಲಿಟಿಯಿಂದ ನೇಮಕವಾದ ಹೆಂಗಸರು, ಗಂಡಸರು ಬರುತ್ತಿದ್ದರು. ಈ ಅಶುಚಿಯ ಕೆಲಸಕ್ಕೆ ಹಿಂದೂಗಳೆಂದೇ ಕರೆಯಿಸಿಕೊಳ್ಳುತ್ತಿದ್ದವರು ಅಂದರೆ ಹಿಂದೂ ಧರ್ಮದ  ವರ್ಣನೀತಿಯಂತೆ   ಪಂಚಮರೆನ್ನಿಸಿಕೊಂಡವರು.
ಮಾತ್ರವಲ್ಲ ಅವರನ್ನು ಅಸ್ಪøಶ್ಯರೆಂದು ಎಂದು ಭಾವಿಸಲಾಗುತ್ತಿತ್ತು. ಅವರ ಕುರಿತಾದ ಅಸ್ಪøಶ್ಯತೆ ಯಾವ ರೀತಿಯದ್ದೆಂದು ನನಗೆ ತಿಳಿಯದೆ ಇದ್ದರೂ ಅವರು ಮನೆಯೊಳಗೆ ಬರುವಂತಿರಲಿಲ್ಲ. ಬಯಲು ಶೌಚಾಲಯದಿಂದ ಸಾಂಕ್ರಾಮಿಕ ಕಾಯಿಲೆಗಳು ಬರುತ್ತವೆ ಎನ್ನುವುದು ನಿಜವಾದರೂ ಹೀಗೆ ಮಲ ಹೊರಿಸುವುದು ಸಮಾಜದ ಮಾನಸಿಕ ಕಾಯಿಲೆಯೇ ಅಲ್ಲವೇ? ನಮ್ಮಂತೆಯೇ ಮನುಷ್ಯರಾಗಿದ್ದವರು ಇತರರ ಮಲ ಹೊತ್ತು ಸಾಗುವುದನ್ನು ನೋಡಲು ಕಷ್ಟವೆನಿಸುತ್ತಿತ್ತು. ತೆರೆದ ಗುಂಡಿಯಲ್ಲಿ ಕಕ್ಕಸು ಮಾಡುವುದೇ ಅಸಹ್ಯ, ಹಿಂಸೆ ಅನ್ನಿಸುತ್ತಿತ್ತು ನನಗೆ. ಈ ಕಾರಣಕ್ಕೆ ನಾನು ಲಾಲ್‍ಬಾಗ್‍ನ ಅಜ್ಜಿ ಮನೆಯಲ್ಲಿ ರಾತ್ರಿ ಉಳಿಯುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ. ಅನಿವಾರ್ಯವಾಗಿ ಉಳಿದರೂ ಮರುದಿನಕ್ಕೆ ಹೊಟ್ಟೆನೋವು ಬಂದು ನನ್ನ ಮನೆಗೆ ಓಡಿ ಬರುತ್ತಿದ್ದೆ. ಮುಂದೆ ಮಂಗಳೂರಲ್ಲಿ ಮಲ ಹೊರುವುದಕ್ಕೆ ನಿಷೇಧ ಬಂದುದು ಸಂತೋಷದ ವಿಚಾರವೇ. ಆದರೂ ಇಂದಿಗೂ ನನ್ನ ರಾಜ್ಯದ, ದೇಶದ ಮೂಲೆ ಮೂಲೆಗಳಲ್ಲಿ ಆಗಾಗ ಪತ್ರಿಕೆ, ಮಾಧ್ಯಮಗಳಲ್ಲಿ ಓದುವ, ಕೇಳುವ ಸುದ್ದಿ ನಮ್ಮ ಅಮಾನವೀಯತೆಗೆ ಸಾಕ್ಷಿ. ಜೊತೆಗೆ ಇನ್ನೂ ಬಯಲಲ್ಲೇ ಶೌಚಕಾರ್ಯಗಳು ನಡೆಯುತ್ತಿವೆ ಎನ್ನುವುದು ಕೂಡಾ ನಮ್ಮ ದೇಶದ ಜನರ ಆರೋಗ್ಯದ ಹಿನ್ನೆಲೆಯಲ್ಲಿ ಗಂಭೀರವಾದ ವಿಷಯವೇ. ಇಂದಿನ ಪ್ರಧಾನಮಂತ್ರಿಯವರ ಸ್ವಚ್ಛ ಭಾರತದ ಪರಿಕಲ್ಪನೆ ಈ ನಿಟ್ಟಿನಲ್ಲಿ ಪೂರ್ಣವಾಗಿ ಸಾಕಾರಗೊಳ್ಳಲಿ, ಕೇವಲ ಜಾಹೀರಾತಿಗೆ ಮಾತ್ರ ಸೀಮಿತವಾಗದಿರಲಿ ಎಂದು ಹಾರೈಸುತ್ತೇನೆ. ಹಾಗೆಯೇ ಮಲ ಎತ್ತುವ ಕಾರ್ಯ ಮಾಡುತ್ತಿರುವವರಿಗೆ ಆಯಾಯ ಊರಿನಲ್ಲಿ ಈ ಕೆಲಸ ಮಾಡುವುದಿಲ್ಲ ಎಂದು ಪ್ರತಿಭಟಿಸುವ ಧೈರ್ಯ ಬರಲಿ ಎಂದು ಆಶಿಸುತ್ತೇನೆ. ಹಾಗೆಯೇ ಅಂತಹ ಊರಿನ ಜನರು ಮೂಗುಳ್ಳ, ಮನಸ್ಸುಳ್ಳ ಮನುಷ್ಯ ರಾಗಲಿ ಎಂದು ವಿನಂತಿಸುತ್ತೇನೆ.
ನನ್ನೂರಿಗೆ ಡಾಮರು ರಸ್ತೆ ಇರಲಿಲ್ಲ. ಮಣ್ಣಿನ ಕಚ್ಚಾ ರಸ್ತೆಯಲ್ಲಿ ಕೇವಲ ಬೆರಳೆಣಿಕೆಯ ಒಂದು ಕೈ ಬೆರಳೂ ಅಲ್ಲದ ಮೂರೇ ಮೂರು ಎತ್ತಿನ ಗಾಡಿಗಳು ಸಾಮಾನು ಸಾಗಾಟಕ್ಕಾಗಿ ಈ ರಸ್ತೆಯಲ್ಲಿ ಓಡಾಡುತ್ತಿತ್ತು. ದಿನಾ ಬೆಳಗ್ಗೆ ಬಂದರಿಗೆ ಹೋಗಿ ನಮ್ಮೂರಿನ ಜಿನಸಿನ ಅಂಗಡಿಗಳಿಗೆ ಅಕ್ಕಿ, ಬೆಲ್ಲ, ಎಣ್ಣೆ, ಉಪ್ಪು, ಕಾಳು ಬೇಳೆಗಳು, ದನ, ಕರು, ಎಮ್ಮೆಗಳಿಗೆ ತೆಂಗಿನಕಾಯಿ ಹಿಂಡಿ ಮತ್ತು ನೆಲಗಡಲೆ ಹಿಂಡಿ ಊರಿನ ಜನರಿಗೆ ಬೇಕಾದ ವಸ್ತುಗಳನ್ನು ತರುತ್ತಿತ್ತು. ಈ ಗಾಡಿಗಳ ಮಾಲಕರು ಅಂದರೆ ಕಾಪಿಕಾಡು ಬಾಳೆಬೈಲಿನ ಐತಪ್ಪಣ್ಣ (ಎಂದು ನೆನಪು), ಇನ್ನೊಬ್ಬರು ದೇರೆಬೈಲು ರಂಗಪ್ಪಣ್ಣ ಹಾಗೂ ಬಾಳಿಗಾ ಸ್ಟೋರ್ಸ್ ಬಳಿಯ ಸಾಹೇಬರು. ಸಾಹೇಬರ ದಷ್ಟ ಪುಷ್ಟವಾದ ಎತ್ತುಗಳು ನಿರಾಭರಣವಾಗಿ ಸುಂದರವಾಗಿದ್ದರೆ, ಉಳಿದೆರಡು ಗಾಡಿಗಳ ಯಜಮಾನರು ತಮ್ಮ ಎತ್ತುಗಳಿಗೆ ಅಲಂಕಾರ ಮಾಡಿ ಶೃಂಗರಿಸುತ್ತಿದ್ದರು. ಕೊಂಬುಗಳಿಗೆ ಬಣ್ಣದ ಗೊಂಡೆಗಳು, ಕೊರಳಿಗೆ ಪಟ್ಟಿ ಹಾಗೂ ಗಂಟೆಗಳು, ಗಾಡಿಯಲ್ಲಿ ಕುಳಿತು ಚಾಟಿ ಹಿಡಿದುಕೊಂಡರೆ (ಹೊಡೆಯುವ ಅಗತ್ಯವಿರುತ್ತಿರಲಿಲ್ಲ) ಅವರ ಠೀವಿ ನೋಡುವುದಕ್ಕೆ ಸಂತಸವಾಗುತ್ತಿತ್ತು. ಮಕ್ಕಳಾದ ನಾವು ನಿಂತು ನೋಡುತ್ತಿದ್ದುದೂ ಇತ್ತು. ಸಂಜೆಯ ವೇಳೆ ಅಂದರೆ ಶಾಲೆ ಬಿಟ್ಟ ಬಳಿಕ ಗಾಡಿ ಸಿಕ್ಕಿದರೆ ಶಾಲಾ ಮಕ್ಕಳು, ಹುಡುಗರು ಅದರಲ್ಲಿ ಖುಷಿಯಿಂದ ಮನೆಗೆ ಹೋಗುತ್ತಿದ್ದರು. ನಮಗೆ ಹುಡುಗಿಯರಿಗೆ ಆ ಖುಷಿ ಇರಲಿಲ್ಲ. ಮಣ್ಣಿನ ರಸ್ತೆಗೆ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ಎಂಬಂತೆ ಮುನಿಸಿಪಾಲಿಟಿಯ ಲಾರಿ ಬಂದು ನೀರು ಚಿಮುಕಿಸಿ ಧೂಳು ಹಾರದಂತೆ ನೋಡಿಕೊಳ್ಳುತ್ತಿತ್ತು.
ಮುಂದೆ ಡಾಂಬರು ಹಾಕಿದ ಬಳಿಕ ರಸ್ತೆಯಲ್ಲಿ ಬಸ್ಸುಗಳ ಓಡಾಟ ಪ್ರಾರಂಭವಾಯಿತು. ಮೊದಲಿಗೆ ಬಿಜೈ ಚರ್ಚ್ ವರೆಗೆ 8 ನಂಬ್ರದ ಬಸ್ಸು ಬಂತು. ಇದು ಹಂಪನಕಟ್ಟೆಯಿಂದ(ಕೆ.ಎಸ್.ರಾವ್ ರಸ್ತೆ) ರಥಬೀದಿಯಾಗಿ ಮಣ್ಣಗುಡ್ಡ, ಲೇಡಿಹಿಲ್, ಲಾಲ್‍ಬಾಗ್ ಮೂಲಕ ಬರುತ್ತಿತ್ತು. ಈ ಬಸ್‍ನಲ್ಲಿ ರೂಪವಾಣಿ, ರಾಮಕಾಂತಿ, ಚಿತ್ರಾ, ಬಾಲಾಜಿ ಟಾಕೀಸುಗಳಲ್ಲಿನ ಸಿನೆಮಾ ನೋಡಲು, ರಥಬೀದಿಯ ಹೂವಿನ, ತರಕಾರಿಯ ಮಾರುಕಟ್ಟೆ, ಸೆಂಟ್ರಲ್ ಮಾರುಕಟ್ಟೆಗೆ ಹೋಗಲು ಜನರಿಗೆ ಅನುಕೂಲವಾಯಿತು. ಹಾಗೆಯೇ ಗೋಕರ್ಣನಾಥೇಶ್ವರ ದೇವಸ್ಥಾನ, ಉರ್ವಾ ಮಾರಿಗುಡಿಗಳಿಗೆ ಅಪರೂಪ ದಲ್ಲಾದರೂ ಅಥವಾ ವಿಶೇಷ ದಿನಗಳಲ್ಲಿ  ಭೇಟಿ ನೀಡುವುದಕ್ಕೆ ಜನರು ಬಸ್ಸಿನಲ್ಲಿ ಹೋಗುವ ಅವಕಾಶ ಲಭಿಸಿತು. ಹಾಗೆಯೇ ಬಿಜೈ ಚರ್ಚ್‍ನಲ್ಲಿರುವ ಮಾರುಕಟ್ಟೆಗೆ, ಅಲ್ಲಿಯೇ ಸ್ವಲ್ಪ ಮುಂದೆ ಇರುವ ಬಿಜೈ ಮ್ಯೂಸಿಯಂಗೆ, ಕದ್ರಿ ದೇವಸ್ಥಾನಕ್ಕೆ ಹೋಗಲು, ರಥಬೀದಿ ಉರ್ವಾ ಮಣ್ಣಗುಡ್ಡದ ಜನರಿಗೆ ಬಸ್ಸು ದೊರೆತಂತಾಯಿತು. ಇದೇ ದಾರಿಯಲ್ಲಿ ಮುಂದೆ ಇನ್ನೊಂದು ಬಸ್ಸು ನಂ. 24 ಕೂಡಾ ಬಂದು, ಜನರು ನಡಿಗೆಯ ಅಭ್ಯಾಸವನ್ನು ನಿಧಾನಕ್ಕೆ ಮರೆಯುವಂತೆ ಮಾಡಿತ್ತು ಎಂದರೂ ತಪ್ಪಲ್ಲ. ನನ್ನ ಕಾಪಿಕಾಡು ರಸ್ತೆಯಲ್ಲಿ ಹಂಪನಕಟ್ಟೆಯಿಂದ ಕಾವೂರಿನವರೆಗೆ ಪ್ರಾರಂಭಗೊಂಡ ಬಸ್ಸು 17 ನಂಬ್ರದಾಗಿತ್ತು. ನಂ. 8 ಮತ್ತು 24 ನಂಬ್ರಗಳ ಬಸ್ಸು ಚಿಕ್ಕದಾಗಿದ್ದುವು. ಆದರೆ 17 ನಂಬ್ರದ ಬಸ್ಸು ಉದ್ದವಾಗಿದ್ದು ಇದರಲ್ಲಿ ಒಟ್ಟು ಪ್ರಯಾಣಿಸುವ ಜನರ ಸಂಖ್ಯೆ 42 ಆಗಿತ್ತು. ಹಳದಿ ಬಣ್ಣದ ಈ ಬಸ್ಸು ನೋಡಲು ಆಕರ್ಷಕವಾಗಿತ್ತು. ಈ ಬಸ್ಸಿನ ಮಾಲಕರು ಬಿಜೈಯವರೇ ಆಗಿದ್ದ ಎಸ್. ಚಂದ್ರಶೇಖರ ಸೊರಕೆಯವರು. ಎಸ್‍ಸಿಎಸ್ ಮೋಟಾರ್ ಸರ್ವಿಸ್ ಎನ್ನುವುದು ಅವರ ಸಂಸ್ಥೆಯ ಹೆಸರಾಗಿತ್ತು. ಅವರು ಊರಿನ ಗಣ್ಯರೂ ಆಗಿದ್ದು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸಿಗರಾಗಿದ್ದ, ಗಾಂಧೀವಾದಿಗಳಾಗಿದ್ದ ಅವರು ನನ್ನ ತಂದೆಯ ಹಿರಿಯ ಸ್ನೇಹಿತರೂ ಆಗಿದ್ದರು. ಈ ಬಸ್ಸಿನ ಸೇವೆ ನನ್ನೂರಿಗೆ ಬಹಳ ವರ್ಷಗಳ ಕಾಲ ಒದಗಿದೆ. ಆದರೆ 8 ಮತ್ತು 24 ನಂಬ್ರಗಳ ಬಸ್ಸುಗಳೇ ಇಂದು ನಿಂತು ಹೋಗಿವೆ. ನನ್ನೂರಿಗೆ ಮುಂದೆ ಹಂಪನಕಟ್ಟೆಯಿಂದ ಕುಂಟಿಕಾನದವರೆಗೆ 28 ನಂಬ್ರದ ಬಸ್ಸು, ಇದೇ ಕಾಪಿಕಾಡು ರಸ್ತೆಯಿಂದ ಮುಂದೆ ಕೊಟ್ಟಾರದ ವರೆಗೆ 28ಎ ನಂಬ್ರದ ಬಸ್ಸುಗಳು ಬಂದುವು. ಈ ಬಸ್ಸುಗಳಲ್ಲಿ ಓಡಾಡಿದ ನೆನಪುಗಳೊಂದಿಗೆ ಈ ನಂಬ್ರದ ಬಸ್ಸುಗಳು ಈಗ ಇಲ್ಲ ಎನ್ನುವುದು ಬೇಸರದ ವಿಷಯ. 17 ನಂಬ್ರದ ಬಸ್ಸು ಬಹಳ ವೇಗವಾಗಿ ಓಡುತ್ತಿದ್ದುದು ನೆನಪು. ಯಾಕೆಂದರೆ ಅದರ ವೇಗಕ್ಕೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ನನ್ನಜ್ಜಿ ಬದಿಯ ಚರಂಡಿಗೆ(ಮಳೆಗಾಲವಲ್ಲದ್ದರಿಂದ ನೀರು ಇರಲಿಲ್ಲ) ಬಿದ್ದುದು, ಅದು ಸುದ್ದಿಯಾಗಿ ಮಾಲಕರಿಗೆ ತಿಳಿದು ಬಸ್ಸಿನ ವೇಗಕ್ಕೆ ನಿಯಂತ್ರಣ ಹಾಕುವಂತೆ ಚಾಲಕನಿಗೆ ಆದೇಶಿಸಿದ್ದೆಲ್ಲವೂ ಸಣ್ಣ ಊರಿನ ದೊಡ್ಡ ಸುದ್ದಿ. ಇದೇ 17ರ ಬಸ್ಸಿನಡಿಗೆ ಬಿದ್ದು ನನ್ನ ಶಾಲಾ ಕಿರಿಯ ಸಹಪಾಠಿಯ ತಂದೆ ನಿಧನರಾದುದು ಕೂಡಾ ನೆನಪಿನಲ್ಲಿದೆ. ಇದು ಕೂಡಾ ಆಗ ದೊಡ್ಡ ಆಘಾತವೇ. ಆದರೆ ಇಂದು ವಾಹನಗಳ ಭರಾಟೆಯಲ್ಲಿ ಡಿಕ್ಕಿ ಹೊಡೆಯುವುದು, ಗಾಯಗೊಂಡು ಕೈ, ಕಾಲು, ಸೊಂಟ ಮುರಿದು ಕೊಳ್ಳುವುದು, ಸಾಯುವುದು ವಿಷಯವೇ ಅಲ್ಲ ಎನ್ನುವಂತಾಗಿ ಮನುಷ್ಯ ಜೀವಕ್ಕೆ ಬೆಲೆಯಿಲ್ಲವಾಗಿದೆ.
1957ರ ಸುಮಾರಿಗೆ ಕಾಪಿಕಾಡಿನ ರಂಗಕ್ಕನವರ ಮಗ ಶಂಕರಣ್ಣ ಅಂಬಾಸಿಡರ್ ಕಾರ್ ಕೊಂಡು ಸಾರ್ವಜನಿಕರಿಗಾಗಿ ಬಾಡಿಗೆಗೆ ಓಡಿಸಲು ಶುರು ಮಾಡಿದರು. ಮಕ್ಕಳಿಗೆಲ್ಲ ಈಗ ಬಸ್ಸು, ಕಾರುಗಳನ್ನು ನೋಡಿ ನಡೆಯುವುದು ಮರತೇ ಹೋಯ್ತು. ಅಂದರೆ ಅವರೆಲ್ಲ ಬಸ್ಸು ಕಾರಲ್ಲೇ ಓಡಾಡಿದರು ಎಂದಲ್ಲ. ರಸ್ತೆಯಲ್ಲಿ ನಡೆದು ಹೋಗುವ ಬದಲು ಕೈಗಳಲ್ಲಿ ಸ್ಟೇರಿಂಗ್ ಹಿಡಿದಂತೆ ಅಭಿನಯ ಮಾಡುತ್ತಾ ಬಾಯಲ್ಲಿ ಬಸ್ಸಿನ ಹಾರ್ನ್ ಶಬ್ದ ಮಾಡುತ್ತಾ ಬಸ್ಸು ಬಿಡುತ್ತಾ ಓಡುವುದೇ ಅವರ ರೀತಿಯಾಗಿತ್ತು. ಹಾಗೆಯೇ ಯಾವ ಹುಡುಗರನ್ನಾಗಲೀ ``ನೀನು ದೊಡ್ಡವನಾದಾಗ ಏನಾಗುತ್ತೀ'' ಎಂದು ಕೇಳಿದರೆ ಎಲ್ಲರ ಬಾಯಲ್ಲೂ ಬರುವ ತಕ್ಷಣದ ಉತ್ತರ ಅಂದರೆ ``ಡ್ರೈವರ್ ಆಗುತ್ತೇನೆ'' ಎನ್ನುವುದು. ಅಷ್ಟರ ಮಟ್ಟಿಗೆ ಬಸ್ಸು, ಕಾರುಗಳು ಮಕ್ಕಳ ಮೇಲೆ ಪ್ರಭಾವ ಬೀರಿದ್ದು ನಿಜವಾದಂತೆಯೇ ಹಲವರು ವಿದ್ಯಾಭ್ಯಾಸಕ್ಕಿಂತ ಈ ದಾರಿಯ ಕಡೆಗೆ ಒಲಿದದ್ದೂ ಇದೆ.
ಶಂಕರಣ್ಣನ ಕಾರು ಬಂದ ಬಳಿಕ ನಮ್ಮೂರಿನ ದಿಬ್ಬಣಗಳಲ್ಲಿ ಈ ಕಾರು ಗೌರವದಿಂದ ಮದುಮಗನನ್ನೋ, ಮದುಮಗಳನ್ನೋ ಅಥವಾ ಇಬ್ಬರನ್ನೂ ಕುಳ್ಳಿರಿಸಿಕೊಂಡು ಹೋಗುವ ಸಂದರ್ಭ ದಿಬ್ಬಣಕ್ಕೊಂದು ಹೊಸ ಶೋಭೆಯನ್ನು ತಂದಿತು. ಜೊತೆಗೆ ಬಡವರಿಗೂ ಖರ್ಚಿನ ದಾರಿಯೊಂದು ಹೊಸದಾಗಿ ಸೇರ್ಪಡೆಯಾಯಿತು. ಶಂಕರಣ್ಣನ ಕಾರಿನಲ್ಲಿ ನನ್ನ ಅಮ್ಮ ಹೆರಿಗೆಯಾದ ತಿಂಗಳ ಬಳಿಕ ಮಡಿಲಲ್ಲಿ ಪುಟ್ಟ ತಮ್ಮನನ್ನು ಮೊದಲ ಬಾರಿಗೆ ದೇವಸ್ಥಾನಕ್ಕೆ ಕರೆದೊಯ್ಯುವಾಗ ನಾನೂ ಜೊತೆಗೆ ಕದ್ರಿ ದೇವಸ್ಥಾನಕ್ಕೆ ಹೋಗಿ ಬಂದೆ. ಅದೇ ನನ್ನ ತಂಗಿ ಹುಟ್ಟಿದಾಗ ಊರಲ್ಲಿ ಕಾರು ಇರಲಿಲ್ಲ. ಆಗ ಕುದುರೆಗಾಡಿ ಅಂದರೆ ಜಟಕಾ ಬಂಡಿಯಲ್ಲಿ ಅಮ್ಮ ಮತ್ತು ತಂಗಿಯ ಜೊತೆಗೆ ಕದ್ರಿ ದೇವಸ್ಥಾನ ಅಂದರೆ ನಮ್ಮ ಗ್ರಾಮದ ದೇವಸ್ಥಾನಕ್ಕೆ ಸಂಪ್ರದಾಯದಂತೆ ಹೋಗಿದ್ದೆ. ಶಂಕರಣ್ಣನ ಒಂದೇ ಕಾರು ಊರಿನವರ ಬೇಡಿಕೆ ಪೂರೈಸಲು ಸಾಕಾಗುವುದಿಲ್ಲವೆನ್ನುವುದು ನಿಜವೇ. ಅವಕಾಶವಿದ್ದಾಗ ಎಲ್ಲರಿಗೂ ಅದು ಅಗತ್ಯವೇ ಅಲ್ಲವೇ. ಈ ಕಾರಣದಿಂದಲೇ ಕಾಪಿಕಾಡು ಬಾಳೆಬೈಲಿನ ವಲ್ಲಿಯಣ್ಣ, ವಾಸಪ್ಪ ಮೇಸ್ತ್ರಿಗಳ ಸಂಬಂಧಿಯವರ ರವಿಯಣ್ಣ ಇವರ ಕಾರುಗಳೂ ಊರವರ ಅಗತ್ಯಕ್ಕಾಗಿ ದೊರೆಯಿತು. ಹೀಗೆ ಒಂದು ಹೊಸ ವೃತ್ತಿಯನ್ನು ನನ್ನೂರಿನ ಜನ ಕಂಡುಕೊಂಡರು. ಇದರಿಂದಾಗಿ ನಮ್ಮೂರಿನ ಹೆಣ್ಣುಮಗಳು ಗಂಡನ ಮನೆಗೆ ಕಾರಿನಲ್ಲಿ ಠೀವಿಯಿಂದ ಹೋದರೆ, ನಮ್ಮೂರಿನ ಸೊಸೆಯೂ ಹಾಗೆಯೇ ಈ ಕಾರುಗಳಲ್ಲಿ ಬಂದಿಳಿದಳು.
ಕಾಪಿಕಾಡಿನ ಶಾಲೆಯ ಹಿಂಬದಿಯಲ್ಲಿ ನಿವೃತ್ತ ಅಧ್ಯಾಪಕರ ಮನೆಯಿತ್ತು. ಶ್ಯಾಮರಾವ್ ಎಂದು ಅವರ ಹೆಸರು. ಅವರ ಮಗ ಸದಾಶಿವರಾಯರು. ಅವರ ಮದುವೆಯಲ್ಲಿ ಅವರಿಗೆ ಕಾರು ಉಡುಗೊರೆಯಾಗಿ ಅವರ ಮಾವ (ಮಡದಿಯ ತಂದೆ) ನಿಂದ ದೊರೆತದ್ದು ಕೂಡಾ ಊರಲ್ಲಿ ಆಗ ವಿಶೇಷ ಸುದ್ದಿಯಾಗಿತ್ತು. ಅದೊಂದು ಚಂದದ ಪುಟ್ಟ ಕಾರು ಆಗಿತ್ತು. ಕಾಪಿಕಾಡು ರಸ್ತೆಯಲ್ಲಿ ಓಡಿದ ಮೊದಲ ಬೈಕು ನನ್ನ ಸಹಪಾಠಿ ಜಯಲಕ್ಷ್ಮಿಯ ಚಿಕ್ಕಪ್ಪನದು. ಅವರಿಗೆ ಬೈಕಿನ ಕಾರಣದಿಂದ ಬೈಕ್ ಚಿಕ್ಕಪ್ಪ ಎಂದೇ ಕರೆಯುತ್ತಿದ್ದೆವು. ಅದು ಬಹಳ ದೊಡ್ಡ ಬೈಕ್. ಅದರ ಸದ್ದು ಇಡೀ ಊರಿಗೆ ಕೇಳಿಸುವಂತಿತ್ತು. ಬಾಳಿಗಾ ಸ್ಟೋರಿನ ಎದುರುಗಡೆಯ ಮನೆಯಿಂದ ಬೈಕ್ ಹೊರಟರೆ ನಮ್ಮ ಮನೆ ಬದಿಯ ರಸ್ತೆಗೂ ಸದ್ದು ಕೇಳಿಸುತ್ತಿತ್ತು. ಹೀಗೆ ನಮ್ಮೂರಿಗೆ ಬಸ್ಸು, ಕಾರು, ಬೈಕ್‍ಗಳು ಬಂದವು. ನಿಧಾನವಾಗಿ ನನ್ನೂರಿನ ಜನ ರಸ್ತೆಯ ಕಾರಣದಿಂದ ಆಧುನಿಕರಾಗ ತೊಡಗಿದರು. ಹಾಗೆಂದು ಶ್ರೀಮಂತಿಕೆಗೆ ಕಾರು ಕೊಂಡವರಲ್ಲ. ಮೇಸ್ತ್ರಿಗಳಾಗಿದ್ದ ಐತಪ್ಪ ಮೇಸ್ತ್ರಿ, ವಾಸಪ್ಪ ಮೇಸ್ತ್ರಿ, ಚಂದ್ರಶೇಖರ ಸೊರಕೆ ಇವರೆಲ್ಲಾ ಕಾರು ಕೊಂಡರು. ಅವರ ಕೆಲಸಗಳಿಗೆ ಅದು ಅಗತ್ಯವೇ ಆಗಿತ್ತು ಎನ್ನಿ. ಈ ಎಲ್ಲಾ ಕಾರುಗಳಲ್ಲಿ ಸಾಂದರ್ಭಿಕ ವಾಗಿ ಕುಳಿತುಕೊಳ್ಳುವ ಅವಕಾಶ ನನ್ನ ಅಪ್ಪನಿಂದ ನನಗೂ ಒದಗಿದೆ. ಹೀಗೆ ಮಂಗಳೂರು ಪೇಟೆಯೊಳಗೆ ಹಳ್ಳಿಯಂತಿದ್ದ ನನ್ನ ಬಿಜೈ ಆಧುನಿಕತೆಗೆ ಮುಖ ಮಾಡಿತು.