ಕಬ್ಬು ಬೆಳೆಗಾರ: ರಾಜಕೀಯದ ದಾಳ

ಕಬ್ಬು ಬೆಳೆಗಾರ: ರಾಜಕೀಯದ ದಾಳ

ಭಾರತದಲ್ಲಿ ಆರ್ಥಿಕತೆ, ನೀರಿನ ಲಭ್ಯತೆ ಮತ್ತು ರಾಜಕೀಯ ಚದುರಂಗ – ಇವು ಮೂರರ ಮೇಲೆ ಪರಿಣಾಮ ಬೀರುವ ಒಂದೇ ಒಂದು ಬೆಳೆ ಕಬ್ಬು.
ಕಬ್ಬಿನ ಕೃಷಿಗೆ ನಮ್ಮ ದೇಶದಲ್ಲಿ ೨,೦೦೦ ವರುಷಗಳ ಇತಿಹಾಸ. ಜಗತ್ತಿನಲ್ಲಿ ಮೊಟ್ಟಮೊದಲಾಗಿ ಕಬ್ಬು ಬೆಳೆದ ಮತ್ತು ಸಕ್ಕರೆ ತಯಾರಿಸಿದ ದೇಶ ನಮ್ಮದು. ಈಗಂತೂ, ಬ್ರೆಜಿಲಿನ ನಂತರ ಅತ್ಯಧಿಕ ಸಕ್ಕರೆ ಉತ್ಪಾದಿಸುವ ದೇಶ ಎಂಬ ಹೆಗ್ಗಳಿಕೆ ನಮ್ಮದು.
ಬ್ರೆಜಿಲ್ ಉತ್ಪಾದಿಸುವ ಸಕ್ಕರೆಯ ಬಹುಪಾಲು ರಫ್ತಾಗುತ್ತದೆ. ಇಥನಾಲ್ ಇಂಧನ ಲಾಬಿ ಅಲ್ಲಿ ಕಬ್ಬು ಕೃಷಿ ಮತ್ತು ಸಕ್ಕರೆ ಉತ್ಪಾದನೆಯ ಬೆಂಬಲಕ್ಕಿದೆ. ಆದರೆ ಭಾರತದ ಕಬ್ಬಿನ ಕೃಷಿಕರದ್ದು ಕಣ್ಣೀರಿನ ಕತೆ. ಕಬ್ಬು ಬೆಳೆಯಲು ನಮ್ಮ ರೈತರಿಗೆ ಪ್ರೋತ್ಸಾಹ ನೀಡುವ ರಾಜಕಾರಣಿಗಳು ಅವರ ಹಿತ ಕಾಯುತ್ತಿಲ್ಲ. ಹಾಗಾಗಿ ಕಬ್ಬು ಬೆಳೆಗಾರರದ್ದು ಬವಣೆಯ ಬದುಕಾಗಿದೆ. ಯಾಕೆಂದರೆ, ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಪಾವತಿಸಲು ಬಾಕಿ ಮಾಡಿರುವ ಹಣ ರೂ.೨೪,೦೦೦ ಕೋಟಿ.
ಹಾಗಾಗಿಯೇ ಹಲವು ಕಬ್ಬು ಬೆಳೆಗಾರರು ಕಬ್ಬನ್ನು ರಸ್ತೆಯಲ್ಲಿ ಎಸೆಯುತ್ತಿದ್ದಾರೆ ಅಥವಾ ಬೆಂಕಿಯಲ್ಲಿ ಸುಡುತ್ತಿದ್ದಾರೆ. ಅದು ಅವರ ಪ್ರತಿಭಟನೆಯ ವಿಧಾನ. ಸಕ್ಕರೆ ಉದ್ಯಮವನ್ನು ಅವಲಂಬಿಸಿದ ರೈತರ ಸಂಖ್ಯೆ ೫೦ ದಶಲಕ್ಷ ಹಾಗೂ ಕಾರ್ಮಿಕರ ಸಂಖ್ಯೆ ಎರಡು ದಶಲಕ್ಷ. ಬೇಡಿಕೆಗಿಂತ ಜಾಸ್ತಿ ಸಕ್ಕರೆ ಉತ್ಪಾದಿಸುವ ಭಾರತ ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬುದೇ ಬಹು ದೊಡ್ಡ ವಿಪರ್ಯಾಸ!
ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕ – ಈ ಮೂರು ರಾಜ್ಯಗಳು ಒಟ್ಟಾಗಿ ಉತ್ಪಾದಿಸುವುದು ಭಾರತದ ಒಟ್ಟು ಸಕ್ಕರೆ ಉತ್ಪಾದನೆಯ ಶೇಕಡಾ ೮೧ರಷ್ಟು. ಈಗ ಪುನಃ ಸಕ್ಕರೆ ಉದ್ಯಮದ ಬಿಕ್ಕಟ್ಟಿನಲ್ಲಿ ಕೇಂದ್ರ ಮತ್ತು ಈ ರಾಜ್ಯ ಸರಕಾರಗಳು ಮಧ್ಯಪ್ರವೇಶ ಮಾಡಲಿವೆ. ಯಾಕೆಂದರೆ ಈ ಮೂರು ರಾಜ್ಯಗಳು ೧೫೮ ಸದಸ್ಯರನ್ನು ಮೇ ೨೦೧೯ರ ಮಹಾಚುನಾವಣೆಯಲ್ಲಿ ಲೋಕಸಭೆಗೆ ಚುನಾಯಿಸಿ ಕಳಿಸಿವೆ. ಮಾತ್ರವಲ್ಲ, ಈ ರಾಜ್ಯಗಳ ಲೋಕಸಭಾ ಸದಸ್ಯರು ಸಕ್ಕರೆ ಲಾಬಿ ಜೊತೆ ಕೈಜೋಡಿಸಿದವರು. ೧೮೩ ಸಕ್ಕರೆ ಕಾರ್ಖಾನೆಗಳ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಗಮನಿಸಿದಾಗ ತಿಳಿದು ಬರುವ ಒಂದು ಸಂಗತಿ: ೧೯೯೩ರಿಂದ ೨೦೦೫ರ ವರೆಗೆ, ಈ ಕಾರ್ಖಾನೆಗಳ ೧೦೧ ಚೇರ್‍ಮನ್ನರು ರಾಜ್ಯ ಅಥವಾ ಕೇಂದ್ರ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
ಸಕ್ಕರೆ ಉದ್ಯಮ ಮತ್ತು ಸರಕಾರಗಳ ನಡುವಿನ ಅನಾರೋಗ್ಯಕರ ಸಂಬಂಧದ ಪರಿಣಾಮವಾಗಿ ಅನೇಕ ನೋಟಿಫಿಕೇಷನುಗಳು ಮತ್ತು ಕಾಯಿದೆಗಳು ಜ್ಯಾರಿಯಾಗಿವೆ. ಸರಕಾರಗಳು ಏನು ಮಾಡುತ್ತವೆ? ಕಬ್ಬಿನ ಮತ್ತು ಸಕ್ಕರೆಯ ಬೆಲೆಯನ್ನು ನಿರ್ಧರಿಸುತ್ತವೆ. ಚುನಾವಣೆಗಳು ಮತ್ತು ಕಬ್ಬಿನ ಕೃಷಿಕರು ಹಾಗೂ ಸಕ್ಕರೆ ಉದ್ಯಮವನ್ನು ಆರ್ಥಿಕವಾಗಿ ಬೆಂಬಲಿಸುವ ಘೋಷಣೆಗಳ ನಡುವಿನ ಸಂಬಂಧ ಎದ್ದು ಕಾಣುತ್ತದೆ.
ಈ ನಿಟ್ಟಿನಲ್ಲಿ, ೨೦೧೯ರ ಲೋಕಸಭಾ ಚುನಾವಣೆಯ ಮುನ್ನ, ಕೆಲವು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರಕಾರ ಕೈಗೊಂಡಿತು. ಜನವರಿ ೨೦೧೯ರಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ರೂ.೨೯ರಿಂದ ರೂ.೩೧ಕ್ಕೆ ಹೆಚ್ಚಿಸಲಾಯಿತು. ಸಕ್ಕರೆ ಉದ್ಯಮ ಇದನ್ನು ಸ್ವಾಗತಿಸಿತು. ಜೊತೆಗೆ, ಫೆಬ್ರವರಿ ೨೦೧೯ರಲ್ಲಿ ಕೇಂದ್ರ ಸರಕಾರ ರೂ.೧೦,೫೪೦ ಕೋಟಿ “ಸುಲಭ ಷರತ್ತಿನ ಸಾಲ”ವನ್ನು ಸಕ್ಕರೆ ಕಾರ್ಖಾನೆಗಳಿಗೆ ಮಂಜೂರು ಮಾಡಿತು – ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿರುವ ಕಬ್ಬಿನ ಹಣದ ಪಾವತಿಗಾಗಿ.
ಅದಕ್ಕಿಂತ ಮುಂಚೆ, ಜೂನ್ ೨೦೧೮ರಲ್ಲಿ, ದಾಖಲೆ ಸಕ್ಕರೆ ಉತ್ಪಾದನೆಯ ಸನ್ನಿವೇಶದಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ ರೂ.೮,೫೦೦ ಕೋಟಿ ಮೌಲ್ಯದ ಆರ್ಥಿಕ ಬೆಂಬಲ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಘೋಷಿಸಿತು. ಇದರಲ್ಲಿ ರೂ.೪,೪೪೦ ಕೋಟಿ ಸಕ್ಕರೆ ಕಾರ್ಖಾನೆಗಳಿಗೆ ಸುಲಭ ಷರತ್ತಿನ ಸಾಲ – ಇಥನಾಲ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿಕ್ಕಾಗಿ. ಅದಲ್ಲದೆ, ಕಬ್ಬು ಖರೀದಿಗಾಗಿ ಟನ್ನಿಗೆ ರೂ.೧೩೮.೮೦ ಹಣ ಸಹಾಯವನ್ನೂ ನೀಡಲಾಯಿತು; ಇದಕ್ಕಾಗಿ ಕೇಂದ್ರ ಸರಕಾರ ಮಾಡಿದ ವೆಚ್ಚ ರೂ.೪,೧೦೦ ಕೋಟಿ. ಜೊತೆಗೆ, ಮೂರು ದಶಲಕ್ಷ ಟನ್ ಸಕ್ಕರೆಯ ಹೆಚ್ಚುವರಿ ದಾಸ್ತಾನು ಇಟ್ಟುಕೊಳ್ಳಲು ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿ, ಅದಕ್ಕಾಗಿ ರೂ.೧,೧೭೫ ಕೋಟಿ ಒದಗಿಸಿತು.
೨೦೧೪ರ ಲೋಕಸಭಾ ಚುನಾವಣೆಯ ಮುಂಚೆಯೂ ಹೀಗೆಯೇ ಆಗಿತ್ತು. ಆಗಿನ ಕೇಂದ್ರ ಸರಕಾರವು ಸಕ್ಕರೆ ಕಾರ್ಖಾನೆಗಳಿಗೆ ೨೦೧೩ರಲ್ಲಿ ರೂ.೭,೨೦೦ ಕೋಟಿ ಬಡ್ಡಿರಹಿತ ಸಾಲ ನೀಡಿತ್ತು – ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿದ್ದ ಹಣದ ಪಾವತಿಗಾಗಿ.
ಕೇಂದ್ರ ಸರಕಾರ ಈ ಎಲ್ಲ ಕ್ರಮ ಜ್ಯಾರಿ ಮಾಡಿದರೂ, ಕಬ್ಬು ಬೆಳೆಗಾರರ ಬವಣೆ ತಪ್ಪಿಲ್ಲ. ತಮ್ಮ ಅಧಿಕಾರವನ್ನು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಹೇಗೆ ದುರುಪಯೋಗ ಪಡಿಸುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ: ೨೦೦೪ – ೨೦೦೫ರಲ್ಲಿ ಆಗಿನ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತೆಗೆದುಕೊಂಡ ವಿವಾದಾಸ್ಪದ ನಿರ್ಧಾರ. ಅವರು ಸಕ್ಕರೆ ರಫ್ತಿಗೆ ಒಪ್ಪಿಗೆ ನೀಡಿದರು; ಅದೇ ಸಮಯದಲ್ಲಿ ಬ್ರೆಜಿಲಿನಿಂದ ಸಕ್ಕರೆ ಆಮದಿಗೂ ಒಪ್ಪಿಗೆ ನೀಡಿದರು. ಅಂದರೆ ಕಡಿಮೆ ಬೆಲೆಗೆ ಸಕ್ಕರೆ ಮಾರಾಟ ಮತ್ತು ಹೆಚ್ಚಿನ ಬೆಲೆಗೆ ಸಕ್ಕರೆ ಖರೀದಿ! ಇದರಿಂದಾಗಿ ಸರಕಾರಕ್ಕೆ ಭಾರೀ ನಷ್ಟವಾಯಿತು. ಗಮನಿಸಿ: ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘಟನೆಯ ಈಗಿನ ಅಧ್ಯಕ್ಷ ರೋಹಿತ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ.)ಯ ನಾಯಕ ಶರದ್ ಪವಾರ ಅವರ ಹತ್ತಿರದ ಸಂಬಂಧಿ.
ಕೇಂದ್ರ ಸರಕಾರ ಕೋಟಿಗಟ್ಟಲೆ ರೂಪಾಯಿ ಸಾಲ ನೀಡಿದರೂ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಕಬ್ಬಿನ ಬಾಕಿ ಹಣ ಪಾವತಿಸಿಲ್ಲ. ಬೆಳೆದು ನಿಂತಿರುವ ಕಬ್ಬಿನ ಬೆಳೆಯನ್ನು ಯಾವಾಗ ಕಟಾವು ಮಾಡಬೇಕು ಎಂಬುದೇ ಕಬ್ಬು ಬೆಳೆಗಾರರ ದೊಡ್ಡ ಸಮಸ್ಯೆ. ಯಾಕೆಂದರೆ, ಕಟಾವು ಮಾಡಿ ಒಂದೇ ದಿನದಲ್ಲಿ ಕಬ್ಬು ಕೊಳೆಯಲು ಆರಂಭಿಸುತ್ತದೆ. ಆಗ ಕಬ್ಬು ಬೆಳೆಗಾರರು ಕಬ್ಬನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ ಅಥವಾ ರಸ್ತೆ ಬದಿಯಲ್ಲೇ ಎಸೆಯಬೇಕಾಗುತ್ತದೆ. ಅಂತೂ ಕಾರ್ಖಾನೆಗಳಿಂದ ಕಬ್ಬು ಖರೀದಿಯಲ್ಲಿ ವಿಳಂಬ ಮತ್ತು ಕಬ್ಬಿನ ಖರೀದಿ ಬೆಲೆ ನಿರ್ಧರಿಸುವಲ್ಲಿ ಸರಕಾರದ ರಾಜಕೀಯದಿಂದಾಗಿ ಕಬ್ಬು ಬೆಳೆಗಾರರ ಸಂಕಟ ಹೆಚ್ಚುತ್ತಿದೆ.