ಬಾಲಿಶ ನಂಬಿಕೆಗಳು

ಬಾಲಿಶ ನಂಬಿಕೆಗಳು

ನನ್ನೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಬಿಚ್ಚಿಕೊಳ್ಳುವ ಸ್ನೇಹ ಸಂಬಂಧಗಳು ಹತ್ತು ಹಲವು. ಇಂದಿನ ಕಾಪಿಕಾಡು ರಸ್ತೆಯಲ್ಲಿ ಕಿರೋಡಿಯನ್ನರ ಮನೆ ಪಕ್ಕದ ಓಣಿಯ ತುತ್ತತುದಿಯ ಹಿತ್ತಿಲಲ್ಲಿ ತೆಂಗು, ಮಾವು, ಹಲಸಿನ ಮರಗಳಿದ್ದು ಒಂದು ದೊಡ್ಡ ಮನೆಯಿತ್ತು. ಈ ಮನೆಯ ಚಿಕ್ಕ ಹುಡುಗ ಶಿವಪ್ಪ. ಈ ಹಿತ್ತಿಲಿನ ಮುಂದಿನ ಹಿತ್ತಿಲು ಮನೆ ನನ್ನ ಅಜ್ಜನದಾಗಿದ್ದು ಇದರಲ್ಲಿ ಸ್ವಲ್ಪ ಸಮಯ ನನ್ನ ಅಪ್ಪ ಅಮ್ಮ ವಾಸ್ತವವಿದ್ದರು ಎಂದು ತಿಳಿಸಿದ್ದೇನಲ್ಲ. ಆ ದಿನಗಳ ವಿಷಯ. ನನ್ನ ಅಪ್ಪ ಹರಿಕತೆ, ಯಕ್ಷಗಾನಗಳೆಂದು ರಾತ್ರಿ ತಡವಾಗಿ ಬರುತ್ತಿದ್ದುದರಿಂದ ನನ್ನ ಅಮ್ಮನ ಭಯ ನಿವಾರಣೆಗೆ ಜತೆಗೆ ತಮ್ಮನಂತೆ ಇದ್ದವರು ಈ ಶಿವಪ್ಪಣ್ಣ ಎಂದು ಅಮ್ಮ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ಮುಂದೆ ನಾನೂ ಅವರನ್ನು ನೋಡಿದ್ದೆ. ನಾನು ಹೈಸ್ಕೂಲು ಸೇರಿದ ಮೇಲೆ ಈ ಮನೆಗೆ ಹೆಚ್ಚು ಬಾರಿ ಹೋಗುವಂತಾದುದು ಶಿವಪ್ಪಣ್ಣನ ಅಕ್ಕಂದಿರ ಮಕ್ಕಳು ಮುಖ್ಯವಾಗಿ ಶಶಿಕಲಾ, ಉಮಾ ಸುಂದರಿಯರು ನನ್ನ ಸ್ನೇಹಿತೆ ಯರಾದಾಗ. ನಾವು ಜೊತೆಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಓದುತ್ತಿದ್ದೆವು. ಶನಿವಾರ ಆದಿತ್ಯವಾರಗಳಂದು ನಮ್ಮ ಮನೆಯಲ್ಲಿ ಅಥವಾ ಅವರ ಮನೆಯಲ್ಲಿ ಮರಗಳ ಬುಡದಲ್ಲಿ, ಒಮ್ಮೊಮ್ಮೆ ಸ್ವಲ್ಪ ಎತ್ತರದ ಗೆಲ್ಲುಗಳಲ್ಲಿ ಕುಳಿತು ಗಟ್ಟಿಯಾಗಿ ಓದುತ್ತಿದ್ದುದನ್ನು ನೆನಪಿಸಿಕೊಳ್ಳುವುದೇ ಈಗ ತುಂಬಾ ಖುಷಿಯ ವಿಚಾರ. ಆದ್ದರಿಂದಲೇ ಎಸ್.ಎಸ್.ಎಲ್.ಸಿ.ಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದು ನಾನು ಮತ್ತು ಉಮಾ ಸುಂದರಿ ಅಂದಿನ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪಿಯುಸಿ ತರಗತಿಗೆ ಸೇರಿದೆವು.  ಹೀಗೆ ಓದಿಕೊಳ್ಳಲು ಪರಸ್ಪರ ಹೋಗಿ  ಬರುತ್ತಿದ್ದ
ದಿನಗಳಲ್ಲಿ ಒಮ್ಮೊಮ್ಮೆ ಮಧ್ಯಾಹ್ನದ ಊಟವೂ ನಮ್ಮ ಮನೆಯಲ್ಲಿ ಅಥವಾ ಅವರ ಮನೆಯಲ್ಲಿ ಜತೆಯಾಗಿಯೇ ಆಗುತ್ತಿತ್ತು. ನಾನು ಸಸ್ಯಾಹಾರಿಯಾದುದರಿಂದ ಅವರ ಮನೆಯಲ್ಲಿ ನನಗಾಗಿ ಪ್ರತ್ಯೇಕ ತರಕಾರಿ ಅಡುಗೆ ಮಾಡಬೇಕಾಗುತ್ತಿತ್ತು. ನಮ್ಮ ಮನೆಯಲ್ಲಿ ಸಸ್ಯಾಹಾರದ ಅಡುಗೆಗೆ ಅವಳದೇನೂ ತಕರಾರು ಇಲ್ಲ. ಬದಲಿಗೆ ತುಂಬ ಚೆನ್ನಾಗಿತ್ತು ಎನ್ನುವ ಮೆಚ್ಚುಗೆ ಬೇರೆ. ಇಂದು ಭೇಟಿಯಾಗುವ ಸಂದರ್ಭಗಳಲ್ಲಿ ಒಂದು ವಿಶಿಷ್ಟ ಸಂದರ್ಭ ನಮ್ಮ ಪಾಲಿಗೆ ಸೃಷ್ಟಿಯಾಯಿತು. ನಾವು ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯ 1966ರ ಎಸ್.ಎಸ್.ಎಲ್.ಸಿ. ತರಗತಿಯ ಒಡನಾಡಿಗಳು ಪರಸ್ಪರರನ್ನು ಹುಡುಕಿ ಭೇಟಿ ಮಾಡುವ ಕಾಯಕ ಶುರು ಮಾಡಿದ್ದೇವೆ. ಇಂತಹ ಒಂದು ಸೌಹಾರ್ದಕೂಟದಲ್ಲಿ ನಮ್ಮ ನಮ್ಮ ಹಳೆಯ ನೆನಪುಗಳನ್ನು ಬಿಚ್ಚಿದಾಗ ಉಮಾಸುಂದರಿ ನಮ್ಮ ಮನೆಗೆ ಬರುವಾಗ ಅಂದು ಆಕೆ ಮೀನಿನ ಊಟ ಮಾಡಿದ್ದರೆ ಚೆನ್ನಾಗಿ ಬಾಯಿ ತೊಳೆದು ಬರುತ್ತಿದ್ದಳಂತೆ. ಹೇಗೆ ಅನ್ನುತ್ತೀರಾ? ಸೋಪ್ ನೀರಿನಲ್ಲಿ ಬಾಯಿ ಮುಕ್ಕಳಿಸಿಕೊಳ್ಳುತ್ತಿದ್ದ ಳಂತೆ. ಕೇಳಿದವರು ಬಿದ್ದು ಬಿದ್ದು ನಕ್ಕರು. ನಾನಾದರೋ `ಅಯ್ಯೋ ದೇವರೇ ಹೀಗೆ ಮಾಡುತ್ತಿದ್ದೆಯಾ?' ಎಂದು ಬೇಸರಪಟ್ಟರೆ, ಇಂದು ನನ್ನ ಮನೆ ಮಂದಿ ಸಸ್ಯಾಹಾರಿಗಳಾಗಿ ಉಳಿದಿಲ್ಲ ಎಂದು ತಿಳಿದು ಅವಳಿಗೆ ಆಶ್ಚರ್ಯ. ಆದರೆ ಈಗ ಅವಳಿಗೂ ಲೋಕಜ್ಞಾನವಿದೆ. ಆಹಾರಕ್ಕೂ ಜನಿವಾರಕ್ಕೂ ಸಂಬಂಧವಿಲ್ಲ. ಆಹಾರ ಅವರ ಇಚ್ಛೆ. ಅವರ ಆಯ್ಕೆ ಎನ್ನುವುದು ಸಾಮಾನ್ಯ ವಿಷಯವಾಗಿದೆ. ಹಾಗೆಯೇ ಜಾತಿ ಧರ್ಮಗಳು ಆಹಾರದ ಮೇಲೆ ನಿಂತಿಲ್ಲ ಎನ್ನುವ ಜಾಗತಿಕ ಸತ್ಯದ ಅರಿವು, ಪ್ರತಿಭೆಗೂ, ಸಾಮರ್ಥ್ಯಕ್ಕೂ ಆಹಾರಕ್ಕೂ ತಾಳೆ ಹಾಕಲು ಸಾಧ್ಯವಿಲ್ಲ ಎನ್ನುವುದೂ ತಿಳಿದಿದೆ. ನಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಆಹಾರ ಕ್ರಮಗಳ ಇತಿಹಾಸ ಕೆದಕಿದರೆ ಸಿಗುವ ಸತ್ಯಗಳು ವಿಚಿತ್ರವಾಗಿವೆ ಎಂಬ ತಿಳುವಳಿಕೆ ನನ್ನದು. ಆಹಾರ ಕ್ರಮ ಅಥವಾ ಆಯ್ಕೆ ಹಸಿವೆಗಾಗಿ ಎಂಬ ಕಠೋರ ವಾಸ್ತವದ ಮುಂದೆ ಉಳಿದೆಲ್ಲ ಆದರ್ಶಗಳು ಹುಸಿಯಾಗುತ್ತವೆ. ಹಾಗೆಯೇ ಇಂದು ಕೌಟುಂಬಿಕ ಕಾರ್ಯಕ್ರಮಗಳು ಸಾರ್ವಜನಿಕ ಸಮಾರಂಭ ವಾಗುತ್ತಿರುವ ಸನ್ನಿವೇಶಗಳಲ್ಲಿ ಆಹಾರ ಸಹಿಷ್ಣುತೆಯನ್ನು ಪಾಲಿಸುವ ಮಂದಿಗೆ ಕೃತಜ್ಞತೆ ಹೇಳಲೇಬೇಕು.
ಆ ದಿನಗಳಲ್ಲಿ ಬಿಲ್ಲವ ಸಮುದಾಯದ ಮಂದಿಗೆ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ ಎನ್ನುವುದಕ್ಕೆ ನನ್ನ ಶಾಲಾ ದಿನದ ಒಂದು ಅನುಭವವೇ ಸಾಕ್ಷಿ. ನಾವು ವಿದ್ಯಾರ್ಥಿಗಳು ಅಧ್ಯಾಪಕ ಅಧ್ಯಾಪಿಕೆಯರ ಸಹಿತ ಮೂಡುಬಿದಿರೆ, ಕಾರ್ಕಳ, ಧರ್ಮಸ್ಥಳಕ್ಕೆ ಪ್ರವಾಸ ಹೊರಟೆವು. 5 ರಿಂದ 8ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು. ಇವರಲ್ಲಿ ಹುಡುಗರೇ ಹೆಚ್ಚು. ಯಾಕೆಂದರೆ 7, 8 ನೆ ತರಗತಿಯ  ಹುಡುಗಿಯರಿಗೆ ಅವಕಾಶವಿರಲಿಲ್ಲ. 5ನೆ ಮತ್ತು 6ನೆ ತರಗತಿಯ ಹುಡುಗಿಯರಲ್ಲೂ ಕೆಲವರಿಗೆ ಮಾತ್ರ ಅವಕಾಶ. ಅಂದರೆ ಅವರು ಇನ್ನೂ ಹತ್ತು ಹನ್ನೊಂದು ವಯಸ್ಸಿನ ಒಳಗಿನವರು. ಯಾಕೆ ಹೀಗೆ ಎನ್ನುವುದನ್ನು ಪ್ರವಾಸದ ಕೊನೆಯಲ್ಲಿ ತಿಳಿಸುತ್ತೇನೆ. ಬಸ್ಸು ತುಂಬಾ ತುಂಬಿದ್ದ ತಂಡದಲ್ಲಿ ವಿದ್ಯಾರ್ಥಿ ಗಳೊಂದಿಗೆ ಬ್ರಾಹ್ಮಣ, ಇತರ ಹಿಂದೂಗಳು, ಕ್ರಿಶ್ಚಿಯನ್, ಮುಸ್ಸಿಂ ಶಿಕ್ಷಕ, ಶಿಕ್ಷಕಿಯರು ಇದ್ದರು. ಮೂಡುಬಿದಿರೆಯ ಸಾವಿರ ಕಂಬದ ಬಸದಿಯನ್ನು ನೋಡಿ ಶಿಲ್ಪಕಲೆಗೆ  ಬೆರಗಾದೆವು. ಕೆಲವರಿಗೆ ಕಂಬಗಳನ್ನು ಎಣಿಸುವ ಉತ್ಸಾಹ. ಅಷ್ಟರಲ್ಲಿ ಯಾರೋ ಹೇಳಿದರು. ``ಕಂಬಗಳನ್ನು ಎಣಿಸಬೇಡಿ. ಹಿಂದೆ ಯಾರೋ ಎಣಿಸಿದಾಗ ಒಂದು ಕಂಬ ಕಡಿಮೆ ಇತ್ತಂತೆ. ಆಗ ಎಣಿಸಿದವನೇ ಕಲ್ಲಿನ ಕಂಬವಾಗಿ ಬಿಟ್ಟನಂತೆ'' ಎಂದು ಮಕ್ಕಳ ಕುತೂಹಲದ ಬುದ್ಧಿಗೆ ಭಯವನ್ನುಂಟು ಮಾಡಿ ಶೋಧ ಪ್ರವೃತ್ತಿಗೆ ಅಥವಾ ಸತ್ಯದ ಹುಡುಕಾಟಕ್ಕೆ ತೆರೆ ಎಳೆದರು. ಬಹುಶಃ ಶಿಕ್ಷಣದಲ್ಲಿ ಇಂತಹ ಅನೇಕ ಮೂಢ ನಂಬಿಕೆಗಳು ನುಸುಳುವುದರಿಂದಲೇ `ಮಕ್ಕೀ ಕಾ ಮಕ್ಕಿ' ಯಂತಹ ಪ್ರವೃತ್ತಿ ಬೆಳೆದು ನಿಜವಾದ ಅರ್ಥದ ಜ್ಞಾನ, ಸಂಶೋಧನೆಗಳು ಈ ದೇಶದಲ್ಲಿ ನಡೆಯುವುದು ಸಾಧ್ಯವಿಲ್ಲ ಅನ್ನಿಸುತ್ತದೆ ಇರಲಿ. ಮುಂದೆ ಕಾರ್ಕಳದ ಗೊಮ್ಮಟೇಶ್ವರನನ್ನು ಕಂಡಾಗ ಹುಡುಗರಿಗೆ ನಾಚಿಕೆಯಾಗುವ ಬದಲು ನಮಗೆ ಹುಡುಗಿಯರಿಗೇ ನಾಚಿಕೆ ಎನ್ನಿಸಿದ್ದು ಯಾಕೆ ಎಂದು ನನಗೆ ಈಗಲೂ ಆಶ್ಚರ್ಯವೇ? ನಮ್ಮ ಕನ್ನಡದ ಅಧ್ಯಾಪಕ ಗುರುವಪ್ಪ ಮಾಸ್ತರರು ಭರತ-ಬಾಹುಬಲಿಯವರ ಕತೆಯನ್ನು ತಿಳಿಸಿ ಬಾಹುಬಲಿ ಯಾಕೆ ಗೊಮ್ಮಟನ ಹಾಗೆ ನಿಂತಿದ್ದಾನೆ ಎಂಬುದನ್ನು ತಿಳಿಸಿದರು. ಗೆದ್ದ ರಾಜ್ಯವನ್ನು ತಿರುಗಿ ಕೊಟ್ಟ ಈ ತಮ್ಮ ಅಣ್ಣನಿಗಿಂತ ಹಿರಿಯವನಾಗಿ ಮೆಚ್ಚುಗೆಯಾದ. ಜತೆಗೆ ಕಾರ್ಕಳದ ಈ ಗೊಮ್ಮಟೇಶ್ವರ ನನ್ನು ಕೆತ್ತಿದ ಶಿಲ್ಪಿಯ ಕೈ ಕತ್ತರಿಸಿದ ರಾಜನು `ಅಹಿಂಸೆಯೇ ಪರಮ ಧರ್ಮ' ಎಂಬ ಧರ್ಮವನ್ನೇ ಕತ್ತರಿಸಿ ತುಂಡರಿಸಿ ಕ್ರೂರಿ ಎಂಬಂತೆ ಗೋಚರಿಸಿದ.
ಮುಂದಿನ ನಮ್ಮ ಪ್ರಯಾಣ ಧರ್ಮಸ್ಥಳಕ್ಕೆ. ಧರ್ಮಸ್ಥಳ ಬಹಳ ಕಾರಣಿಕದ ಕ್ಷೇತ್ರ ಎಂದು ಅದಾಗಲೇ ಪ್ರಸಿದ್ಧವಾಗಿತ್ತು. ಯಾವುದೇ ಊರಲ್ಲಿ ಸತ್ಯವನ್ನು ಸಮರ್ಥಿಸಿ ಹೇಳಬೇಕಾದ ಸಂದರ್ಭ ಬಂದಾಗ `ಆ ಮಂಜುನಾಥನೇ ನೋಡಲಿ' ಎಂದು ಹೇಳಿದರೆ ಅದರ ಪರಿಣಾಮ ತಪ್ಪಿದಲ್ಲ ಎನ್ನುವುದು ಜನರ ನಂಬಿಕೆ. ಹಾಗೆಯೇ ಈ ನಂಬಿಕೆಯನ್ನು ಬಲಪಡಿಸುವ ಶಕ್ತಿ ಇದ್ದುದು ಅಲ್ಲಿನ ಕ್ಷೇತ್ರ ದೈವವಾಗಿದ್ದ ಅಣ್ಣಪ್ಪನಿಗೆ ಎನ್ನುವುದು ಕೂಡ ಇನ್ನೊಂದು ನಂಬಿಕೆ. ಅವರವರ ನಂಬಿಕೆ ಅವರವರಿಗೆ. ದೇವಸ್ಥಾನದ ಒಳಗೆ ಪ್ರವೇಶಿಸಲು ಸರತಿ ಸಾಲಲ್ಲಿ ನಿಲ್ಲುವಾಗ ಒಳಗೆ ಬರಲಾಗದವರು ಹೊರಗೇ ಉಳಿದರು. ಅಂದರೆ ಬಿಲ್ಲವ ಸಮುದಾಯದ ಮತ್ತು ದಲಿತ ಸಮುದಾಯದ ಹುಡುಗ ಹುಡುಗಿಯರು ಹಾಗೂ ಈ ಸಮುದಾಯದ ಇಬ್ಬರು ಅಧ್ಯಾಪಕರು. ಉಳಿದ ನಾವೆಲ್ಲ ಅಂದರೆ ಕ್ರಿಶ್ಚಿಯನ್, ಮುಸ್ಲಿಂ ಜನಾಂಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಶಿಕ್ಷಕಿಯರು ಸೇರಿದಂತೆ ಬ್ರಾಹ್ಮಣರು ಹಾಗೂ ಇತರ ಹಿಂದೂಗಳು ದೇವರ ದರ್ಶನ ಮಾಡಿ ಬಂದೆವು. ಇದು ಯಾಕೆ ಹೀಗೆ ಎಂಬ ಪ್ರಶ್ನೆಗೆ ಅಲ್ಲಿ ಯಾರನ್ನೂ ಕೇಳಲೂ ಸಾಧ್ಯವಾಗಲಿಲ್ಲ. ಒಳಹೋದವ ರಿಗೆ ಒಂದು ರೀತಿಯ ಬೇಸರ. ಹೊರಗೆ ಇದ್ದವರಿಗೂ ಬೇಸರ. ಸಹಪಾಠಿಗಳಲ್ಲಿ ಕೇಳಿದರೆ ಕೆಲವರು ಗೊತ್ತಿಲ್ಲ ಎಂದುತ್ತರಿಸಿದರೆ, ಇನ್ನು ಕೆಲವು ಅದನ್ನೆಲ್ಲ ಇಲ್ಲಿ ಹೇಳಬಾರದು ಎಂದು ಭಯಪಟ್ಟುಕೊಂಡರು. ನನ್ನ ಕುತೂಹಲಕ್ಕೆ ಉತ್ತರ ದೊರಕಿದ್ದು ಮನೆಗೆ ಬಂದ ಮೇಲೆ ಅಪ್ಪನಲ್ಲಿ ವಿಚಾರಿಸಿದಾಗ. ಅದರ ಜತೆಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲದ ಬಿಲ್ಲವ ಸಮುದಾಯದವರಿಗಾಗಿ ಕೇರಳದ ಮಹಾತಪಸ್ವಿ, ಜ್ಞಾನಿ, ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳು ಮಂಗಳೂರಿಗೆ ಬಂದು ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಸ್ಥಾಪಿಸಿದ್ದನ್ನು ತಿಳಿಸಿದರು. ನಾವು ಮನೆ ಮಂದಿ ಕದ್ರಿ ದೇವಸ್ಥಾನಕ್ಕೆ ಗ್ರಾಮದ ದೇವಸ್ಥಾನ ಎಂಬಂತೆ ಸಾಂದರ್ಭಿಕವಾಗಿ ಹೋಗಿ ಬರುತ್ತಿದ್ದರೆ ಉಳಿದಂತೆ ಹೋಗುತ್ತಿದ್ದ ದೇವಸ್ಥಾನಗಳೆರಡು. ಅವುಗಳಲ್ಲಿ ಒಂದು ಗೋಕರ್ಣನಾಥೇಶ್ವರವಾದರೆ ಇನ್ನೊಂದು ಉರ್ವ ಮಾರಿಯಮ್ಮನ ಗುಡಿ. ಈ ಎರಡೂ ದೇವಸ್ಥಾನಗಳಲ್ಲೂ ಯಾರಿಗೂ ಪ್ರವೇಶವಿಲ್ಲ ಎಂದು ನಿಷೇಧವಿರಲಿಲ್ಲ. ಮಾರಿಯಮ್ಮನ ಗುಡಿಯಲ್ಲಿ ಹಿಂದೆ ಕೋಣ ಬಲಿ ನಡೆಯುತ್ತಿತ್ತು ಎಂದು ತಿಳಿಸಿದರೆ ಈಗ ಕೋಳಿಯನ್ನು ಜನರೇ ಒಯ್ದು ತಾವೇ ಕೊಯ್ದು ಬಲಿ ಎಂದರ್ಪಿಸಿ ಅದನ್ನು ಮನೆಯಲ್ಲಿ ಅಡುಗೆ ಮಾಡಿ ಮಾರಿಯಮ್ಮನ ಹಬ್ಬ ಆಚರಿಸುತ್ತಿದ್ದುದು ಇತ್ತು. ಈ ಮಾರಿಯಮ್ಮನ ದೇವಸ್ಥಾನವು ವಿಶೇಷವಾಗಿ ಮೊಗವೀರರಿಗೆ ಸೇರಿದ ದೇವಸ್ಥಾನವಾಗಿತ್ತು ಎನ್ನುವುದು ತಿಳಿಯಿತು. ಹೀಗೆ ಒಂದೊಂದು ಜಾತಿಗೆ ಒಂದೊಂದು ದೇವಸ್ಥಾನಗಳಿರುವುದು ಹಿಂದೂ ಧರ್ಮದ ವೈಶಿಷ್ಟ್ಯವೂ ಅಥವಾ ವೈಚಿತ್ರ್ಯವೋ ಎಂದು ನಾನು ಹೇಳಲು ಸಾಧ್ಯವಾದರೂ ಅಂದು ನನಗೆ ಇದೆಂತಹ ವಿಚಿತ್ರವಪ್ಪ ಎಂದು ಆಶ್ಚರ್ಯವಾದುದು ಸುಳ್ಳಲ್ಲ. ಹಾಗೆಯೇ 12 ಹಾಗೂ 12 ವರ್ಷಕ್ಕಿಂತ ಮೇಲ್ಮಟ್ಟ ಹುಡುಗಿಯರಿಗೆ ಪ್ರವಾಸಕ್ಕೆ ಅವಕಾಶ ನೀಡಿರಲಿಲ್ಲ ಎಂದಿದ್ದೆನಲ್ಲಾ? ಅದು ಮೈನೆರೆವ ವಯಸ್ಸಿಗೆ ಹತ್ತಿರವಾದ ಹುಡುಗಿಯರು ಧರ್ಮಸ್ಥಳಕ್ಕೆ ಹೋಗುವುದಕ್ಕೆ  ನಿಷೇಧವಾದ ವಯಸ್ಸಾಗಿತ್ತು. ಒಂದು ವೇಳೆ ಅಲ್ಲಿ ಅಕಸ್ಮತ್ತಾಗಿ ಮೈ ನೆರೆದರೆ ಅವಳನ್ನು ಅಲ್ಲಿಯೇ ಬಿಟ್ಟು ಬರಬೇಕಾಗಿತ್ತಂತೆ. ಆದ್ದರಿಂದ ಮನೆಯವರು ಕಳುಹಿಸುವುದಕ್ಕೂ, ಅಧ್ಯಾಪಕರು ಕರೆದೊಯ್ಯುವುದಕ್ಕೂ ಅವಕಾಶವಿರುತ್ತಿರಲಿಲ್ಲ. ಸುಮ್ಮನೆ ಸಮಸ್ಯೆಯ ಸೃಷ್ಟಿಯಾಗಬಾರದಲ್ಲಾ? ಈ ನಂಬಿಕೆಯ ಹಿಂದೆ ದೇವರಿಗೆ `ಬಿಡುವುದು' ಎಂಬ ಜೋಗಿತಿಯರ ಕಲ್ಪನೆ ಇತ್ತೋ ಏನೋ ಎಂಬ ಸಂದೇಹ ನನ್ನದು.