ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?

ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿರಂಗದಲ್ಲಿ ಸರಕಾರದ ಅತ್ಯಧಿಕ ಬೆಂಬಲ ಸಿಕ್ಕಿದ್ದು ಕಬ್ಬಿನ (ಸಕ್ಕರೆ) ಕಾರ್ಖಾನೆಗಳಿಗೆ ಎನ್ನಬಹುದು.
ಸಕ್ಕರೆ ಲಾಬಿ ನಮ್ಮದು ನಷ್ಟದ ವ್ಯವಹಾರ ಎನ್ನುತ್ತಲೇ ಇದೆ. ಆದರೆ, ವರುಷದಿಂದ ವರುಷಕ್ಕೆ ಸಕ್ಕರೆ ಉತ್ಪಾದನೆ ಹೆಚ್ಚುತ್ತಲೇ ಇದೆ! ಜೊತೆಗೆ, ಕಳೆದ ಹತ್ತು ವರುಷಗಳಲ್ಲಿ ಸಕ್ಕರೆ ಉದ್ಯಮವು ಸರಕಾರದಿಂದ ಸುಲಭ-ಷರತ್ತಿನ ಸಾಲ ಮತ್ತು ಇತರ ಸವಲತ್ತುಗಳನ್ನು ಪಡೆಯುತ್ತಲೇ ಇದೆ. ಹಾಗಿದ್ದರೂ, ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಹಣವನ್ನು ಸಕ್ಕರೆ ಕಾರ್ಖಾನೆಗಳು ಬಾಕಿ ಮಾಡಿವೆ.
ಇನ್ನಷ್ಟು ಸವಲತ್ತು ಸರಕಾರದಿಂದ ಸಿಗಲಿ ಎಂಬುದು ಸಕ್ಕರೆ ಕಾರ್ಖಾನೆಗಳ ನಿರೀಕ್ಷೆ. “ಸರಕಾರ ನಮಗೆ ಬಡ್ಡಿರಹಿತ ಸಾಲ ನೀಡಿದರೆ, ಕಬ್ಬು ಬೆಳೆಗಾರರ ಬಾಕಿಯನ್ನು ವಿಳಂಬವಿಲ್ಲದೆ ಪಾವತಿಸಲು ಸಾಧ್ಯ” ಎನ್ನುತ್ತಾರೆ ಅಭಿನಾಷ್ ವರ್ಮ, ಡೈರೆಕ್ಟರ್ ಜನರಲ್, ಭಾರತೀಯ ಸಕ್ಕರೆ ಮಿಲ್ಲುಗಳ ಸಂಘಟನೆ (ಐಎಸ್‍ಎಂಎ). ಈ ಸಂಘಟನೆಯು ಕಬ್ಬಿನ “ನ್ಯಾಯಬದ್ಧ ಮತ್ತು ಲಾಭದಾಯಕ ಬೆಲೆ” (ಎಫ್‍ಆರ್‍ಪಿ)ಯನ್ನೂ ಕಡಿಮೆ ಮಾಡಬೇಕೆಂದು ಒತ್ತಾಯಿಸುತ್ತಿದೆ. ಅದರ ಪ್ರಕಾರ, ಈಗ ನಿಗದಿ ಮಾಡಿರುವ ಬೆಲೆಯನ್ನು ಕಬ್ಬು ಬೆಳೆಗಾರರಿಗೆ ಪಾವತಿಸಿದರೆ ನಷ್ಟವಾಗುತ್ತದೆ. ನಿಜ ಏನೆಂದರೆ, ಸಕ್ಕರೆ ಉದ್ಯಮ ತನ್ನ ಲಾಭವನ್ನು ಬಹಿರಂಗ ಪಡಿಸುತ್ತಿಲ್ಲ!
ಸಕ್ಕರೆ ಕಾರ್ಖಾನೆಗಳ ಆದಾಯದ ಪ್ರಧಾನ ಭಾಗ ಸಕ್ಕರೆ ಮಾರಾಟದಿಂದ ಬರುತ್ತದೆ. ಸಕ್ಕರೆ ಉತ್ಪಾದನೆ ಮತ್ತು ಮಾರಾಟದ ಅಂಕೆಸಂಖ್ಯೆಗಳನ್ನು ಮಾತ್ರ ಬಹಿರಂಗ ಪಡಿಸುವ ಸಕ್ಕರೆ ಕಾರ್ಖಾನೆಗಳು ಸಕ್ಕರೆಯ ಉಪ-ಉತ್ಪನ್ನಗಳಿಂದ ಬರುವ ಆದಾಯವನ್ನು ಮುಚ್ಚಿಡುತ್ತವೆ. “ಒಟ್ಟು ಆದಾಯದ ಶೇಕಡಾ ೭೦ರಷ್ಟು ಸಕ್ಕರೆ ಮಾರಾಟದಿಂದ ಬಂದರೆ, ಉಳಿದದ್ದು ಉಪ-ಉತ್ಪನ್ನಗಳ ಮಾರಾಟದಿಂದ ಬರುತ್ತದೆ” ಎಂದು ಮಾಹಿತಿ ನೀಡುತ್ತಾರೆ ಪ್ರಕಾಶ್ ಪಿ. ನಾಯಕ್‍ನವಾಡೆ, ಮೆನೇಜಿಂಗ್ ಡೈರೆಕ್ಟರ್, ರಾಷ್ಟ್ರೀಯ ಸಹಕಾರಿ ಕಬ್ಬು ಕಾರ್ಖಾನೆಗಳ ಫೆಡರೇಷನ್, ನವದೆಹಲಿ.
ಸಕ್ಕರೆಯ ಉಪ-ಉತ್ಪನ್ನಗಳ ಸಂಖ್ಯೆ ೨೬. ಅವುಗಳಲ್ಲೊಂದು ಇಥನಾಲ್. ಪೆಟ್ರೋಲಿಯಂ ಇಂಧನಕ್ಕೆ ಶೇ.೨೦ರಷ್ಟು ಇಥನಾಲ್ ಮಿಶ್ರ ಮಾಡಬೇಕೆಂಬುದು ಸರಕಾರದ ನೀತಿ ನಿರೂಪಿಸಿದ ಗುರಿ. ಇಥನಾಲಿನ ಬೆಲೆ ಏರಿಸಬೇಕೆಂಬ ಸಕ್ಕರೆ ಕಾರ್ಖಾನೆಗಳ ಬೇಡಿಕೆಯನ್ನು ಸರಕಾರ ೨೦೧೮ರಲ್ಲಿ ಒಪ್ಪಿಕೊಂಡಿತು. “ಬಿ-ವರ್ಗದ” ಭಾರ ಕಾಕಂಬಿಯಿಂದ ಉತ್ಪಾದಿಸುವ ಉತ್ತಮ ಗುಣಮಟ್ಟದ ಇಥನಾಲಿಗೆ ಲೀಟರಿಗೆ ರೂ.೫೨ ಮತ್ತು “ಸಿ-ವರ್ಗದ” ಭಾರ ಕಾಕಂಬಿಯಿಂದ ಉತ್ಪಾದಿಸುವ ಇಥನಾಲಿಗೆ ಲೀಟರಿಗೆ ರೂ.೪೬ ಬೆಲೆ ನಿಗದಿ ಪಡಿಸಿತು. ಈಗ ಪೆಟ್ರೋಲಿಯಂ ತೈಲ ಕಂಪೆನಿಗಳಿಗೆ ೨.೪೫ ಬಿಲಿಯನ್ ಲೀಟರ್ ಇಥನಾಲ್ ಪೂರೈಸಲು ಸಕ್ಕರೆ ಕಾರ್ಖಾನೆಗಳು ಯೋಜಿಸಿವೆ. ಇದು ಪೆಟ್ರೋಲಿಯಂ ಇಂಧನಕ್ಕೆ ಶೇ.೭ರ ಪ್ರಮಾಣದಲ್ಲಿ ಇಥನಾಲ್ ಮಿಶ್ರ ಮಾಡಲು ಸಾಕಾಗುತ್ತದೆ. ಅಂದರೆ, ಮುಂದಿನ ವರುಷಗಳಲ್ಲಿ ಈ ಗ್ಯಾರಂಟಿ ಆದಾಯ ಪಡೆಯಲು ಸಕ್ಕರೆ ಕಾರ್ಖಾನೆಗಳು ಮುಂಬರಲಿವೆ.
ಒಂದು ಕಿಲೋಗ್ರಾಮ್ ಸಕ್ಕರೆಯ ಉತ್ಪಾದನಾ ವೆಚ್ಚ ರೂ.೩೫. ಈ ಪ್ರಕ್ರಿಯೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಇಥನಾಲ್ ೦.೬ ಲೀಟರ್. ಈ ಇಥನಾಲಿಗೆ ಲೀಟರಿಗೆ ರೂ.೫೨ ಬೆಲೆ ಸಿಗುವಾಗ, ಒಂದು ಕಾರ್ಖಾನೆ ತನ್ನ “ಬಿ-ವರ್ಗದ” ಭಾರ ಕಾಕಂಬಿಯನ್ನು ಇಥನಾಲ್ ಉತ್ಪಾದನೆಗೆ ಬಳಸಿದರೆ, ಆ ಕಾರ್ಖಾನೆಗೆ ಸಕ್ಕರೆಯ ಉತ್ಪಾದನಾ ವೆಚ್ಚ ದಕ್ಕುತ್ತದೆ. ಆದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಇಥನಾಲ್ ಉತ್ಪಾದನೆಯಿಂದ ಆದಾಯ ಲಭಿಸುತ್ತದೆಂದು ಒಪ್ಪುವುದಿಲ್ಲ!
ಇತ್ತ ಸಕ್ಕರೆ ಉದ್ಯಮವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ವಾದಿಸುತ್ತದೆ ಸಕ್ಕರೆ ಲಾಬಿ. ಅತ್ತ, ಸರಕಾರ ಕೋಟಿಗಟ್ಟಲೆ ರೂಪಾಯಿ ಆರ್ಥಿಕ ಬೆಂಬಲ ನೀಡಬೇಕೆಂದು ಆಗ್ರಹಿಸುತ್ತದೆ. ಇದು ಸಕ್ಕರೆ ಉದ್ಯಮದ ದ್ವಿಮುಖ ನೀತಿಯನ್ನು ಸೂಚಿಸುತ್ತದೆ.
೨೦೧೨ರಲ್ಲಿ ಆಗಿನ ಕೇಂದ್ರ ಸರಕಾರ ನೇಮಿಸಿದ ಸಿ. ರಂಗರಾಜನ್ ಸಮಿತಿ, ಸಕ್ಕರೆ ಉದ್ಯಮವನ್ನು ನಿಯಂತ್ರಣ ಮುಕ್ತಗೊಳಿಸಬೇಕೆಂದು ಶಿಫಾರಸ್ ಮಾಡಿತು. ಅದನ್ನು ಕೇಂದ್ರ ಸರಕಾರ ಜ್ಯಾರಿ ಮಾಡಿದರೂ. “ಎಫ್‍ಆರ್‍ ಬೆಲೆ” ನಿರ್ಧರಿಸುವ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿತು!
ಸರಕಾರ ಕೋಟಿಗಟ್ಟಲೆ ರೂಪಾಯಿ ಆರ್ಥಿಕ ಸಹಾಯ ನೀಡಿದರೂ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಿಲ್ಲ. ಇದರಿಂದಾಗಿ ರೈತರಿಗೆ ಇಮ್ಮಡಿ ನಷ್ಟ! ಒಂದೆಡೆ, ರೈತರು ಅಧಿಕ ಬಡ್ಡಿದರದಲ್ಲಿ ಬೆಳೆ ಸಾಲ ಪಡೆದು, ಕಬ್ಬು ಬೆಳೆ ಕಟಾವಿಗಾಗಿ ಒಂದು ವರುಷ ಕಾಯುತ್ತಾರೆ. ಇನ್ನೊಂದೆಡೆ, ರೈತರಿಂದ ಕಬ್ಬು ಖರೀದಿಸಿದ ಕಾರ್ಖಾನೆ, ಕಬ್ಬಿನ ಬೆಲೆ ಪಾವತಿಗೆ ವರುಷಗಟ್ಟಲೆ ವಿಳಂಬ ಮಾಡಿದರೂ ಆ ವಿಳಂಬದ ಅವಧಿಗೆ ರೈತರಿಗೆ ಬಡ್ಡಿ ಪಾವತಿಸುವುದಿಲ್ಲ. ಅಷ್ಟೇ ಅಲ್ಲ, ಸಕ್ಕರೆ ಕಾರ್ಖಾನೆಗಳು ವಿವಿಧ ಯೋಜನೆಗಳ ಅನುಸಾರ ಪಡೆದ ಸಾಲದಲ್ಲಿ ರೂ.೨,೦೮೧ ಕೋಟಿ ಬಾಕಿ ಮಾಡಿವೆ (ಮಾರ್ಚ್ ೨೦೧೯ರಲ್ಲಿ) ಎಂದು ಮಾಹಿತಿ ನೀಡುತ್ತದೆ ಕೇಂದ್ರ ಸರಕಾರದ ಸಕ್ಕರೆ ನಿರ್ದೇಶನಾ ವಿಭಾಗ. ಅಂತೂ, ತಾವು ಪಡೆದ ಸಾಲವನ್ನು ಸಕ್ಕರೆ ಕಾರ್ಖಾನೆಗಳು ಹೇಗೆ ಬಳಕೆ ಮಾಡುತ್ತಿವೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ.
ಮೂರು ಮುಖ್ಯ ಸಕ್ಕರೆ ಉತ್ಪಾದನಾ ರಾಜ್ಯಗಳಲ್ಲಿ, ಸಕ್ಕರೆ ಉದ್ಯಮದ ಮೇಲೆ ರಾಜಕಾರಣಿಗಳ ಬಿಗಿ ಹಿಡಿತ ಹೇಗಿದೆ ಗಮನಿಸಿ. ಅಲ್ಲಿ ರಾಜಕಾರಣಿಗಳು ನಿಯಂತ್ರಿಸುವ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೀಗಿದೆ: ಮಹಾರಾಷ್ಟ್ರದಲ್ಲಿ ಎನ್‍ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಆ ಪಕ್ಷದ ಇತರ ಮುಖಂಡರು ೧೮೭ ಸಕ್ಕರೆ ಕಾರ್ಖಾನೆಗಳು. ಅಲ್ಲಿನ ಮರಾಠವಾಡದಲ್ಲಿ ಬಿಜೆಪಿ ಪಕ್ಷದ ಪಂಕಜ ಮುಂಡೆ ಮತ್ತು ಅವರ ಕುಟುಂಬ ೭ ಸಕ್ಕರೆ ಕಾರ್ಖಾನೆಗಳು. ಅಲ್ಲಿನ ಇತರ ನಾಲ್ವರು ರಾಜಕೀಯ ಮುಖಂಡರು/ ಕುಟುಂಬ ೧೩ ಸಕ್ಕರೆ ಕಾರ್ಖಾನೆಗಳು. ಕರ್ನಾಟಕದಲ್ಲಿ ಬಿಜೆಪಿ ನಾಯಕರೊಬ್ಬರು ನಾಲ್ಕು ಸಕ್ಕರೆ ಕಾರ್ಖಾನೆಗಳ ಮತ್ತು ಕಾಂಗ್ರೆಸ್ ನೇತಾರರೊಬ್ಬರು ಒಂದು ಕಾರ್ಖಾನೆಯ ಒಡೆಯರು. ಭಾರತದ ಒಟ್ಟು ಸಕ್ಕರೆ ಉತ್ಪಾದನೆಗೆ ಶೇ.೩೭ರಷ್ಟು ಪಾಲು ನೀಡುವ ಉತ್ತರ ಪ್ರದೇಶದಲ್ಲಂತೂ ಸರಕಾರಿ ಸಕ್ಕರೆ ಕಾರ್ಖಾನೆಗಳು ರೊಟ್ಟಿಗಳಂತೆ ಮಾರಾಟವಾದವು! ಅಲ್ಲಿ ೨೦೧೦ರಲ್ಲಿ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರು ಮುಖ್ಯಮಂತ್ರಿ ಆಗಿದ್ದಾಗ, ಸರಕಾರಿ ಮಾಲೀಕತ್ವದ ೨೧ ಸಕ್ಕರೆ ಕಾರ್ಖಾನೆಗಳನ್ನು ತೀರಾ ಕಡಿಮೆ ಬೆಲೆಗೆ ಮಾರಿದರು.
ಈ ಮೂರು ರಾಜ್ಯಗಳಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿರುವ ಹಣ: ಉತ್ತರ ಪ್ರದೇಶದಲ್ಲಿ ರೂ.೧೦,೧೦೨ ಕೋಟಿ, ಮಹಾರಾಷ್ಟ್ರದಲ್ಲಿ ರೂ.೪,೯೯೯ ಕೋಟಿ ಮತ್ತು ಕರ್ನಾಟಕದಲ್ಲಿ ರೂ.೩,೦೪೧ ಕೋಟಿ. ಇವೆಲ್ಲವನ್ನು ಗಮನಿಸಿದಾಗ ಸ್ಪಷ್ಟವಾಗುವ ಸಂಗತಿ: ರಾಜಕಾರಣಿಗಳು ಸಕ್ಕರೆ ಉದ್ಯಮದಿಂದ ದೂರವಾಗದಿದ್ದರೆ ಮತ್ತು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಕಡ್ಡಾಯವಾಗಿ ಪಾವತಿಸುವಂತೆ ಮಾಡದಿದ್ದರೆ, ಕಬ್ಬು ಬೆಳೆಗಾರರಿಗೆ ಕಬ್ಬು ಕಹಿಯಾಗಿಯೇ ಇರುತ್ತದೆ; ಅವರ ಸಂಕಟಗಳು ಹಾಗೆಯೇ ಇರುತ್ತವೆ.