ತಾಯ ಮಮತೆ

Submitted by rajeevkc on Fri, 09/20/2019 - 12:43
ಬರಹ

ತನ್ನ ಮಡಿಲ ತುಂಬಿದ ಮಗುವ ನೋಡಿ,
ಸಾರ್ಥಕವೆನಿಸಿತು ತಾಯಿಗೆ ತಾ ಜನ್ಮತಾಳಿ.
ಕಂದನ ಹಸಿವನೀಗಿಸುವಳು ತನ್ನ ಹಾಲನುಣಿಸಿ.
ಪೌಷ್ಠಿಕತೆಯ ಹೆಚ್ಚಿಸುವಳು ಮಮತೆ ಪ್ರೀತಿ ಬೆರೆಸಿ.

ತಾಯಮಡಿಲಿದು ಮಗುವಿಗೆ ಬೆಚ್ಚನೆಯ ಬೀಡು.
ಪ್ರೀತಿ ಮಮತೆಯು ತುಂಬಿದ ಅಕ್ಕರೆಯ ಗೂಡು.
ಮಡಿಲಿನಾಶ್ರಯದಿ ಮಗುವಿಗಿಲ್ಲಾ ಜಗದ ಅರಿವು.
ಮಗುವಿನರಿವಿಗೆ ಬರುವುದೊಂದೇ, ಅದು ತಾಯ ಜೋಗುಳ ಪದವು.

ಮಗುವಿಗೆ ಮೊದಲು ಪರಿಚಯವಾಗುವುದು,
ತಾಯ ಮುದ್ದು ಮುಖವು.
ಜಗವ ಪರಿಚಯಿಸುತ ತಾಯಿಯಾಗುವಳು,
ಮಗುವಿಗೆ ಮೊದಲ ಗುರುವು.

ಮಗುವ ಮೊದಲ ನುಡಿಯಾಗಿ ಹೊರಡುವುದು,
ಮಧುರವಾದ ಅಮ್ಮನ ಆ ಕರೆಯು
ಮಗುವಿಗಿದು ನೋವನುಪಶಮನ ಮಾಡುವ ಔಷಧಿಯು.
ನಮಗಿದು ಕೊನೆತನಕ ಅನುಭವಕೆ ಬರುವ ನಿಜ ಸಂಗತಿಯು.

ಕಂದನು ಆಡುವ ಆ ತೊದಲು ನುಡಿಯು,
ತಾಯಿಗದು ಇಂಪಾದ ಗಾನಸುಧೆಯು.
ಮಗುವ ಬೆಳವಣಿಗೆಯ ಈ ಪರಿಯು,
ತಾಯಿಗದು ದೊರೆತ ಅಷ್ಟಐಸಿರಿಯು.

ಮಗುವ ಏಳಿಗೆಗಾಗಿ ಶ್ರಮಿಸುವಳು,
ತನ್ನ ಇಷ್ಟಾರ್ಥವೆಲ್ಲವಾ ಬದಿಗೆ ದೂಡಿ.
ತನ್ನ ನೋವನೆಲ್ಲಾ ಮರೆಯುವಳು,
ಮಗುವ ಮೊಗದಿ ನಗುವ ನೋಡಿ.

ಮಗುವಿನ ವಿನಹ ಇವಳಿಗೆ ಅನ್ಯ ಜಗವಿಲ್ಲ.
ಜಗತ್ತಿನದ್ಬುತವಾವುದೂ ಈ ಪ್ರೀತಿಗೆ ತೂಗಲು ಸಮವಲ್ಲ.
ಮಗುವ ಹಿತವನು ಬಯಸುತ ಬಾಳುವಳು ಕೊನೆಯತನಕ.
ನೆಚ್ಚಿನ ಬಂಧುವಾಗಿ ಉಳಿಯುವಳು ಸೃಷ್ಠಿಯಿರುವತನಕ.