ಜ್ಞಾನ ದೇಗುಲ

ಜ್ಞಾನ ದೇಗುಲ

ಕವನ

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್ಕು. ವಿದ್ಯಾರ್ಜನೆಯು ಬದಲಿಸುವುದು ನಮ್ಮ ಬಾಳ ದಿಕ್ಕು. ವಿದ್ಯಾರ್ಜನೆಗೆ ವಾತಾವರಣವ ಸೃಷ್ಠಿಸುವುದು ನಮ್ಮ ಧರ್ಮ. ವಿದ್ಯಾದೇವಿಯ ಒಲಿಸಿಕ್ಕೊಳ್ಳುವುದಾಗಲಿ, ಅವರ ಮನೋಧರ್ಮ. ಕಲಿಕೆಯ ದೃಷ್ಠಿಯಲಿ ಸಲ್ಲದು ಭೇದಭಾವ ಇದ್ದರೆ ಕಾಣುವುದಲ್ಲಿ ಫಲಿತಾಂಶದ ಅಭಾವ. ಕಲಿಕೆಯ ವಿಧಾನವು ಬೀರಲು ಪ್ರಭಾವ, ಇರಲಿ ವಿದ್ಯಾದಾನಗೈವ ಮನೋಭಾವ. ವಿದ್ಯಾಪೀಠಕೆ ಬಣ್ಣದ ಹೆಸರಿನ ಅಗತ್ಯವಿಲ್ಲ. ಸರ್ಕಾರಿ, ಖಾಸಗಿ ಪೀಠವೆಂದು ತಾರತಮ ತೋರುವುದು ಸೂಕ್ತವಲ್ಲ. ಅಂತರರಾಷ್ಟ್ರೀಯ ಪೀಠವೆಂದು ಹೇಳಿಕೊಳ್ಳುವುದು ಸಮಂಜಸವಲ್ಲ. ವಿದ್ಯಾದೇವಿಯು ಒಲಿಯಲು, ಈ ಅಂತರವನಳೆದು ಕೃಪೆತೋರುವುದಿಲ್ಲ. ವಿದ್ಯಾರ್ಹತೆ ತಿಳಿಯಲು ಪೋಷಕರ ಹುದ್ದೆಗೆ ಆದ್ಯತೆಕೊಡುವುದೆಷ್ಟು ಸರಿ? ಧನಿಕನಾಗಲಿ, ಬಡವನಾಗಲಿ ವಿದ್ಯಾದಾನಗೈಯುವುದಾಗಲಿ ನಮ್ಮ ಗುರಿ. ಶಿಲೆಯಾಗುವ ಮುನ್ನ, ಅದು ಕಲ್ಲುಬಂಡೆಯಷ್ಟೆ ಬರಿ. ಶಿಲ್ಪಿಯ ಜಾಣ್ಮೆಯಿಂದ, ಬಂಡೆಯ ಮುಡಿಗೇರುವುದು ಶಿಲೆಯ ಗರಿ. ಸೃಷ್ಠಿಯ ಅಚ್ಚರಿಯನರಿಯುವುದು, ಜ್ಞಾನದ ಗುರಿಯಾಗಲಿ. ಪ್ರಕೃತಿಯ ಪಾಠವನರಿತು ಬಾಳ ಸಾಗಿಸುವ, ಸಂಯಮ ನಮಗಿರಲಿ. ಜೀವನದ ಹಾದಿಯು, ಮಾನವೀಯ ಮೌಲ್ಯಗಳಿಗೆ ಕುಂದು ತಾರದಿರಲಿ. ನಮ್ಮ ವಿದ್ಯಾಕಲಿಕೆಯು, ಈ ಮೌಲ್ಯಗಳ ಅರಿಯುವುದಕೆ ಪೂರಕವಾಗಿರಲಿ. ವಿದ್ಯಾಸೇವೆಯಲಿ ವ್ಯಾಪಾರ ದೃಷ್ಠಿ ಹರಿಯದಿರಲಿ, ಸೇವಾಭಾವನೆಯಷ್ಟೇ ಇದರಲಿ ತುಂಬಿರಲಿ. ಮಕ್ಕಳನು ನಾಡಹೆಮ್ಮೆಯಾಗಿ ಬಿಂಬಿಸುವ ಕರ್ತವ್ಯ ನಮ್ಮದಾಗಲಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಸೃಷ್ಠಿಸುವ ದೂರದೃಷ್ಠಿ ನಮಗಿರಲಿ.