ನೀರ ನೆಮ್ಮದಿಗೆ ದಾರಿ ಯಾವುದಯ್ಯಾ?

ನೀರ ನೆಮ್ಮದಿಗೆ ದಾರಿ ಯಾವುದಯ್ಯಾ?

ಕಡೂರಿನಿಂದ ಚಿಕ್ಕಮಗಳೂರಿನ ಹಾದಿಯಲ್ಲಿ ೧೧ ಕಿಮೀ. ಸಾಗಿದಾಗ ಎಡಬದಿಯಲ್ಲಿ ಕಾಣಿಸಿತು ’ರಾಮನಹಳ್ಳಿ’ ಫಲಕ. ಅಲ್ಲಿ ಎಡಕ್ಕೆ ತಿರುಗಿ ೨ ಕಿಮೀ. ಮುಂದೆ ಹೋಗಿ ನಿಂತದ್ದು ಪ್ರವೀಣರ ಹೊಲದಲ್ಲಿ. ಅಂದು, ಮೇ ೧೯, ೨೦೦೪ರಂದು, ಅಲ್ಲಿ ನಾನು ಬೈಕಿನಿಂದಿಳಿದಾಗ ಕಾಣಿಸಿದ್ದು ಅಗಲವಾದ ತೋಡಿಗೆ ಅಡ್ಡವಾಗಿ ಕಟ್ಟಿದ್ದ ೨೦ ಅಡಿಗಳುದ್ದದ ಕಲ್ಲು-ಸಿಮೆಂಟಿನ ತಡೆಗಟ್ಟ.

ಆ ವಾರ ಸುರಿದ ಮಳೆ ನೀರನ್ನೆಲ್ಲ ತಡೆಗಟ್ಟ ೨೦ ಅಡಿಗಳ ಆಳಕ್ಕೆ ತಡೆದು ನಿಲ್ಲಿಸಿತ್ತು. ಅದನ್ನ್ಜು ತೋರಿಸುತ್ತಾ "ಇಲ್ಲಿರೋ ನೀರು ನೋಡಿ ಧೈರ್ಯ ಬಂದಿದೆ. ಇಷ್ಟು ನೀರಿಂಗಿದರೆ ನನ್ನ ಬೋರ್‍ವೆಲ್‍ನಲ್ಲಿ ನೀರು ಸಿಗ್ತದೆ. ಇಲ್ಲದಿದ್ರೆ ನನ್ನ ಎರಡು ವರ್ಷಗಳ ಅಡಿಕೆ ಸಸಿಗಳನ್ನು ಉಳಿಸಿಕೊಳ್ಳೋದೇ ಕಷ್ಟ ಆಗ್ತಿತ್ತು" ಎಂದರು ಕಡೂರಿನ ವಿ.ಎಸ್. ಪ್ರವೀಣ್.

ಅವರ ಜಮೀನಿನಿಂದ ೩ ಕಿಮೀ. ದೂರದಲ್ಲಿ ಬೆಟ್ಟ. ಮಳೆ ಬಂದಾಗ ಅಲ್ಲಿಂದ ಪ್ರವೀಣರ ಜಮೀನಿನತ್ತ ರಭಸದಲ್ಲಿ ಹರಿದುಬರುತ್ತದೆ ಮಳೆನೀರು. "ಆ ಬೆಟ್ಟದ ಇಳಿಜಾರಿನಲ್ಲೂ ಹೀಗೆ ತಡೆಗಟ್ಟ ಕಟ್ಟಿದ್ದಾರಾ?" ಕೇಳಿದೆ. "ನಾಲ್ಕು ಕಡೆ ಕಟ್ಟಿದ್ರು ಸಾರ್, ಆದರೆ ಈಗ ಒಂದೂ ಉಳಿದಿಲ್ಲ" ಎಂದರು.

"ಏನಾಯಿತು? ಮಳೆಗೆ ಕೊಚ್ಚಿ ಹೋಯಿತೇ?" ಎಂಬ ನನ್ನ ಪ್ರಶ್ನೆಗೆ ಪ್ರವೀಣ್ ದೀರ್ಘ ಉಸಿರೆಳೆದುಕೊಂಡು ಉತ್ತರಿಸಿದರು, "ಅದೊಂದು ದೊಡ್ಡ ಕತೆ. ಜಲಾನಯನ ಅಭಿವೃದ್ಧಿ ಇಲಾಖೆಯವರು ತಡೆಗಟ್ಟ ಕಟ್ಟಿಸಿದ್ದು ನಿಜ. ಆದರೆ ಆಶ್ರಯ ಯೋಜನೆಯಲ್ಲಿ ಸ್ವಂತ ಮನೆ ಕಟ್ಟಬೇಕೆಂದಿದ್ದ ಹಳ್ಳಿ ಜನಕ್ಕೆ ಆ ತಡೆಗಟ್ಟದ ಕಲ್ಲುಗಳ ಮೇಲೆ ಕಣ್ಣು ಬಿತ್ತು. ಅವರು ಮನೆಯ ತಳಪಾಯ ಕಟ್ಟಿದ್ರೆ ಅವ್ರಿಗೆ ಹತ್ತು ಸಾವಿರ ರೂಪಾಯಿ ಗ್ರಾಮ ಪಂಚಾಯತಿನಿಂದ ಮಂಜೂರಾಗ್ತದೆ. ಆದರೆ ಮನೆಯ ತಳಪಾಯಕ್ಕೆ ಕಲ್ಲು ಬೇಕಲ್ಲ? ಈ ತಡೆಗಟ್ಟಗಳ ಕಲ್ಲುಗಳನ್ನೇ ಕಿತ್ತು ಒಯ್ತಾರೆ ಜನ. ನನ್ನ ಜಮೀನಿನಲ್ಲಿ ಕಟ್ಟಿಸಿದ ತಡೆಗಟ್ಟವೂ ಆ ಇಲಾಖೆಯ ಕಾರ್ಯಕ್ರಮದ್ದು. ಇದರ ಕಲ್ಲುಗಳನ್ನೂ ಕಿತ್ತು ಒಯ್ಯಲು ಎತ್ತಿನಗಾಡಿ ಕಟ್ಟಿಕೊಂಡು ಬಂದಿದ್ರು ಜನ. ನಾಲ್ಕು ಸಲ ಬಂದಿದ್ರು ಸಾರ್. ನನ್ನ ಜಮೀನು ನೋಡ್ಕೋತಾನಲ್ಲ ಹರೀಶ, ಅವನಿಲ್ಲೇ ಇರ್ತಾನೆ. ಹಾಗಾಗಿ ನನ್ನ ತಡೆಗಟ್ಟ ಇನ್ನೂ ಇದೆ."

ಇಂತಹ ಹಳ್ಳಿಗರಿಗೆ ’ಮಳೆ ನೀರಿಂಗಿಸೋದೇ ನೀರ ನೆಮ್ಮದಿಗೆ ದಾರಿ’ ಎಂಬುದನ್ನು ತಿಳಿಸಿಕೊಡೋದು ಹ್ಯಾಗೆ? ಅಂತಹ ಕೆಲಸ ಮಾಡಿದವರ ಅನುಭವಗಳನ್ನು ಇಂತಹ ಹಳ್ಳಿಗರ ಜೊತೆ ಹಂಚಿಕೊಂಡರೆ ಇವರಲ್ಲಿ ಜಾಗೃತಿ ಮೂಡಬಹುದು. ಅದಕ್ಕಾಗಿ ಅಂತಹ ಅನುಭವಗಳನ್ನು ದಾಖಲಿಸುವುದು ಅಗತ್ಯ.

ಬಹಳಷ್ಟು ಜನ ಅಂದುಕೊಂಡಿರೋದು, ’ಓಟು ಹಾಕುವುದು ನಮ್ಮ ಅನಿಸಿಕೆ ತಿಳಿಸುವ ದಾರಿ’ಎಂದು. ನಮ್ಮ ಅಭಿಪ್ರಾಯ ತಿಳಿಸಲು ಬೇರೆ ದಾರಿಗಳೂ ಇವೆ. ಪತ್ರಿಕೆಗಳ ಸಂಪಾದಕರಿಗೆ ಪತ್ರ ಬರೆಯುವುದು, ಜಲಜಾಗೃತಿಯ ಪೋರ್ಟಲ್‍ಗಳಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪೋರ್ಟಲ್‍ಗಳಲ್ಲಿ ಒಂದೆರಡು ಸಾಲು ಬರೆಯುವುದು. ಇವುಗಳಿಂದ ಪರಿಣಾಮ ಆಗಿಯೇ ಆಗುತ್ತದೆ. ಯಾಕೆಂದರೆ ಜನಪ್ರತಿನಿಧಿಗಳೂ ಅಧಿಕಾರಿಗಳೂ ನ್ಯಾಯಾಧೀಶರೂ ಇವನ್ನೆಲ್ಲ ಗಮನಿಸುತ್ತಾ ಇರುತ್ತಾರೆ.  ನಾವು ಗೊಣಗುಟ್ಟುತ್ತಾ ಕುಳಿತರೆ ನಮ್ಮ ಅಭಿಪ್ರಾಯ ಅವರಿಗೆ ಹೇಗೆ ತಾನೇ ತಿಳಿದೀತು? ಪರಿಣಾಮಕಾರಿಯಾಗಿ ನಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರೆ ಮಾತ್ರ ಅವರಿಗೆ ಜನಾಭಿಪ್ರಾಯದ ಬಿಸಿ ತಟ್ಟುತ್ತದೆ, ಅಲ್ಲವೇ?