ನಮ್ಮ ಗುರುವು

ನಮ್ಮ ಗುರುವು

ಕವನ

ಕೈ ತುತ್ತನಿತ್ತು, ತುತ್ತಿಗೆ ಬೆಲೆಯ ತೆತ್ತು,
ಪೋಷಣೆ ಭಾರ ಹೊತ್ತು, ಏಳಿಗೆ ಬೀಜ ಬಿತ್ತು,
ಪೋಷಿಸಲು ಮಮತೆ ಪ್ರೀತಿಯನಿತ್ತು,
ಸಲಹುವ ತಾಯಿ ತಂದೆ - ಮೊದಲ ಗುರುವು.

ಜೀವಿಸಲು ಪಂಚಭೂತಗಳ ನೀಡಿ,
ಶುದ್ಧ ಪರಿಸರವ ಸೃಷ್ಠಿಯ ಮಾಡಿ,
ಜೀವಸಂತತಿ ವೃದ್ಧಿಸಲು ಕ್ರಿಯೆಯ ಹೂಡಿ,
ಪ್ರಕೃತಿಯಿದು - ಉಸಿರನೀವ ಗುರುವು.

ಪ್ರೀತಿ ಬಾಂದವ್ಯದ ಮೊಳಕೆಯನು ಚಿಗುರಿಸಿ,
ಸಂಬಂಧಗಳ ಮೌಲ್ಯವನು ಹೆಚ್ಚಿಸಿ,
ಕೂಡಿಬಾಳುವ ಭಾಗ್ಯವನು ಕಲ್ಪಿಸಿ,
ಒಡವುಟ್ಟಿದವರಿವರು - ಬಾಂದವ್ಯ ಬೆಸೆವ ಗುರುವು.

ವಿದ್ಯಾ ಸಾಧನೆಯ ಗುರಿಯ ತೋರಿ,
ಸಾಧಿಸುವ ಛಲವ ತುಂಬಿ ಅಳತೆ ಮೀರಿ,
ಗುರಿಯ ಸೇರಲು ಮಾರ್ಗವ ತೋರಿ,
ವಿದ್ಯೆ ದಾನಗೈವರಿವರು - ಗುರುವು.

ಜೀವನದಂತ್ಯದವರೆಗೂ ಕೂಡಿ ಬರುವ,
ಹಾದಿ ಸುಗಮವಾಗಲು ಹೆಗಲು ಕೊಡುವ,
ಕಷ್ಟಸುಖಗಳಲಿ ಸಮನಾಗಿ ಬೆರೆವ,
ಸಂಗತಿಯು - ಸಂಸಾರ ಗುರುವು.

ಸಮಯೋಚಿತ ಸಲಹೆ ನೀಡುವವರು,
ಮುನ್ನಡೆಯಲು ಕೈಜೋಡಿಸುವವರು,
ಒಳಿತನು ಬಯಸುವ ಹಿತೈಷಿಗಳಿವರು,
ಸ್ನೇಹಿತರು - ಸ್ನೇಹಭಾವನೀವ ಗುರುವು.

ಅಡಿಗಡಿಗೂ ಬೆನ್ನ ಹಿಂದೆ ನಿಂದು,
ಬಯಸದೆ ಭಾಗ್ಯ ನೋವುಗಳ ತಂದು,
ಜೀವನದಾಟದ ಸೂತ್ರವ ಹೆಣೆದು,
ಆಡಿಸುವ ಈ ವಿಧಿಯು - ಜೀವನದ ಗುರುವು.