ರಾಮದಾಸ್‌ಗೆ ನಮಸ್ಕಾರ!...

ರಾಮದಾಸ್‌ಗೆ ನಮಸ್ಕಾರ!...

ರಾಮದಾಸ್‌ಗೆ ನಮಸ್ಕಾರ!...
ಸ್ನೇಹಿತರೆ,
ಇದು 'ಚಿಂತನಾಗೋಷ್ಠಿ'. ಆಹ್ವಾನ ಪತ್ರಿಕೆ ಪ್ರಕಾರ ನಾನು ಮಾತನಾಡಬೇಕಾಗಿರುವುದು 'ಸಮಾಜವಾದಿ ಹೋರಾಟ'ದ ಬಗ್ಗೆ. ಆದರೆ ಇದು ರಾಮದಾಸರ ನೆನಪಿನ ಕಾರ್ಯಕ್ರಮವೂ ಆಗಿರುವುದರಿಂದ ನಾನು ಮಾತನಾಡಬೇಕಾಗಿರುವುದು ಸಮಾಜವಾದಿ ಹೋರಾಟದ ಬಗೆಗೋ, ಸಮಾಜವಾದಿ ಹೋರಾಟದಲ್ಲಿ ರಾಮದಾಸರ ಪಾತ್ರದ ಬಗೆಗೋ ತಿಳಿಯದಾಗಿದೆ. ಈ ಕಾರ್ಯಕ್ರಮದ ಸಂಘಟಕರು ಇದೀಗ ತಾನೇ, ಎರಡೂ ವಿಷಯ ಸೇರಿಸಿ ಮಾತನಾಡಬಹುದು ಎಂದು ಸೂಚಿಸಿದ್ದಾರೆ. ಹಾಗೆ ನೋಡಿದರೆ, ಆಹ್ವಾನ ಪತ್ರಿಕೆಯನ್ನು ಕಣ್ಣಾರೆ ನೋಡುವವರೆಗೂ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆನ್ನುವುದು ನನಗೆ ಗೊತ್ತಿರಲಿಲ್ಲ! ಇದನ್ನು ನಾನು ಸಂಘಟಕರ ಲೋಪವನ್ನು ಸೂಚಿಸಲು ಹೇಳುತ್ತಿಲ್ಲ. ಬದಲಿಗೆ, ಹತ್ತಾರು ವರ್ಷಗಳಿಂದ ಸಾರ್ವತ್ರಿಕವಾಗಿ ನಮ್ಮ ಬಹುಪಾಲು ಎಲ್ಲ ಪ್ರಗತಿಪರ ಚಟುವಟಿಕೆಗಳು ಮತ್ತು ನಿರ್ದಿಷ್ಟವಾಗಿ ಸಮಾಜವಾದಿ ಚಟುವಟಿಕೆಗಳು ಹೀಗೆ ಅವ್ಯವಸ್ಥಿತವಾಗಿ, ಯಾವುದೇ ನಿರಂತರತೆ ಇಲ್ಲದೆ-ಒಂದು ಸಮಗ್ರ ಗುರಿಯಿಲ್ಲದೆ-ದಿನವಹಿ ಆಧಾರದ ಮೇಲೆ ನಡೆದುಕೊಂಡು ಬರುತ್ತಿರುವದು ಕೂಡ, ಲೋಹಿಯಾ, ಗೋಪಾಲಗೌಡರಂತಹ ಹಿರಿಯ ನಾಯಕರಿಂದ ಹಿಡಿದು ರಾಮದಾಸರವರೆಗೆ ನಮ್ಮ ಬಹುಪಾಲು ಸಮಾಜವಾದಿಗಳು ಅನಿರೀಕ್ಷಿತ ಅನಾರೋಗ್ಯ ಹಾಗೂ ಅಕಾಲಿಕ ಮರಣಕ್ಕೆ ತುತ್ತಾಗುತ್ತಿರುವುದಕ್ಕೆ ಒಂದು ಕಾರಣವಿರಬಹುದಲ್ಲವೇ ಎಂದು ಸೂಚಿಸಲು ಮಾತ್ರ. ದಯವಿಟ್ಟು ಯೋಚಿಸಿ.

ರಾಮದಾಸ್ ಸ್ವತಃ ಹೀಗಿರಲಿಲ್ಲ. ತಮ್ಮ ವೈಯುಕ್ತಿಕ ಬದುಕಿನಲ್ಲಿ ಸ್ವಲ್ಪ ಅಶಿಸ್ತಿನ ಮನುಷ್ಯರಾಗಿದ್ದಂತೆ ತೋರಿದರೂ, ತಾನೇ ಕಾರ್ಯಕ್ರಮವೊಂದನ್ನು ಸಂಘಟಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಾಗ ಸಕಲ ವಿವರಗಳ ಕಡೆಗೂ ಗಮನ ನೀಡಿ ಕಾರ್ಯಕ್ರಮಕ್ಕೊಂದು ಗುರಿ ಒದಗಿಸುತ್ತಿದ್ದರಲ್ಲದೆ, ಅದು ಆ ಗುರಿ ಮುಟ್ಟುವಂತೆ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಆ ಸಂದರ್ಭದಲ್ಲಿನ ಅವರ ಪೇಚಾಟವನ್ನು ನೋಡಿ ನಮಗೇ ಕನಿಕರ ಮೂಡುತ್ತಿತ್ತು! ಅವರ ಸಮಾಜವಾದಿ ಬದ್ಧತೆಯೂ ಅಷ್ಟೆ. ಸಮಾಜವಾದಿ ಚಟುವಟಿಕೆಗೆ ಸಂಬಂಧಿಸಿದಂತೆ ಯಾರೇ ಎಲ್ಲಿಗೇ ಕರೆಯಲಿ, ಯಾವುದೇ ನೆಪ ಹೇಳದೆ-ಹಲವು ಬಾರಿ ತೀವ್ರ ಅನಾರೋಗ್ಯದ ನಡುವೆಯೂ-ಸಕಾಲದಲ್ಲಿ ಹಾಜರಾಗಿ ತಮಗನ್ನಿಸಿದ್ದನ್ನು ನಿಷ್ಠುರವಾಗಿ ಹೇಳಿ ಬರುತ್ತಿದ್ದರು ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳಿಗಳಿಗೆ ಬದ್ಧರಾಗಿರುತ್ತಿದ್ದರು. ಅಷ್ಟೇ ಅಲ್ಲ, ಲೋಹಿಯಾ ಕಾಲದ ಸಮಾಜವಾದಿಯಾದ ಅವರು ಸಮಾಜವಾದಿ ತತ್ವದ ಬಗ್ಗೆ ಎಷ್ಟು ಆಳವಾದ ತಿಳುವಳಿಕೆ ಮತ್ತು ಸ್ಪಷ್ಟತೆ ಹೊಂದಿದ್ದರೆಂದರೆ, ಸಮಾಜವಾದಿ ತತ್ವ ಇತ್ತೀಚಿನ ಜನಪ್ರಿಯ ರಾಜಕಾರಣಕ್ಕೆ ಸಿಕ್ಕಿ ದಿಕ್ಕಾಪಾಲಾಗಿ ಹೋಗಲಾರಂಭಿಸಿದ ಸಂದರ್ಭದಲ್ಲಿ, ಯಾವ ಗೊಂದಲಕ್ಕೂ ಸಿಗದೆ ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ದಿಟ್ಟತನವನ್ನು ಉಳಿಸಿಕೊಂಡಿದ್ದರು.

ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಜಾತಿ ವಿನಾಶದ ಸಮಾಜವಾದಿ ತತ್ವವು ಸಾಮಾಜಿಕ ನ್ಯಾಯ ಚಳುವಳಿಯೆಂಬ ಮೀಸಲಾತಿ ವಿಸ್ತರಣೆಯ ಚಳುವಳಿಯಾಗಿ ಕುಬ್ಜಗೊಂಡು ಜಾತಿ ಸಮಾನತೆಯನ್ನು ಪ್ರತಿಪಾದಿಸ ತೊಡಗಿದಾಗ, ರಾಮದಾಸ್ ಅದನ್ನು ಕಟುವಾಗಿ ಖಂಡಿಸಿದರು. ಈ ಸಂಬಂಧ ಅವರು ಕರ್ನಾಟಕದಲ್ಲಿ ಇಂತಹ ಸಾಮಾಜಿಕ ನ್ಯಾಯ ಚಳುವಳಿಗೆ ಚಾಲನೆ ನೀಡಿದ ಹಾವನೂರ್ ವರದಿಯ ಉದ್ದೇಶದ ಬಗೆಗೇ ತಮ್ಮ ಭಿನ್ನಾಭಿಪ್ರಾಯವನ್ನು (ಶಿವಮೊಗ್ಗದ 'ಬಹುಮತ ಸಂಘಟನೆ'ಗೆ ನೀಡಿದ ಧ್ವನಿಮುದ್ರಿತ ಸಂದರ್ಶನವೊಂದರಲ್ಲಿ) ದಾಖಲಿಸಲು ಅವರು ಹಿಂಜರಿಯಲಿಲ್ಲ. ಹಾವನೂರ್ ವರದಿಯ ಶಿಫಾರಸ್‌ಗಳನ್ನು ಅವರು ಸ್ವಾಗತಿಸಿದರಾದರೂ, ವರದಿ ಜಾತಿ ವಿನಾಶಕ್ಕೆ ಬದಲು ಜಾತಿ ಸಮಾನತೆಯ ಗುರಿಯಿಟ್ಟುಕೊಂಡಿದ್ದುದರ ಬಗೆಗೆ ಅವರ ತೀವ್ರ ಅಸಮಧಾನವಿತ್ತು. ಹಾಗೇ ಪ್ರೊ|| ರವಿವರ್ಮ ಕುಮಾರ್‌ರಂತಹ ಹಾವನೂರ್‌ವಾದಿಗಳು ಜನಸಂಖ್ಯಾಧಾರಿತ ಮೀಸಲಾತಿಯ ಪ್ರಸ್ತಾಪ ಮಾಡಿದಾಗ, ಅದು ಸಾಮಾಜಿಕ ಸ್ಥಗಿತತೆಗೆ ಕಾರಣವಾಗುತ್ತದೆಯೆಂದು ಅದರ ವಿರುದ್ಧ (2002ರಲ್ಲಿ ಚಿತ್ರದುರ್ಗದಲ್ಲಿ ನಡೆದ ದಿ|| ಬಿ. ಕೃಷ್ಣಪ್ಪ ನೆನಪಿನ ಕಾರ್ಯಕ್ರಮವೊಂದರಲ್ಲಿ) ಎಚ್ಚರಿಕೆ ನೀಡಿದರು. ಇತ್ತೀಚೆಗೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಬೇಕೆಂದು ಒತ್ತಾಯಿಸುವ ಆಂದೋಲನ ಆರಂಭವಾದಾಗಲೂ, ರಾಮದಾಸ್ ತಮ್ಮ ಹಲವು ಸಮಾಜವಾದಿ ಗೆಳೆಯರ ಪಕ್ಷಾಂತರದಿಂದ ವಿಚಲಿತರಾಗದೆ, ಅದನ್ನು ವಿರೋಧಿಸಿದರು. ಜಾಗತೀಕರಣದ ದುಷ್ಪರಿಣಾಮಗಳ ವಿರುದ್ಧ ಹೋರಾಡಲು ಮಾತೃಭಾಷೆಗಳನ್ನು ಬಲಪಡಿಸಬೇಕಾದುದೂ ಮುಖ್ಯವೆಂದು ಭಾವಿಸಿದ್ದ ಅವರು; 2003ರಲ್ಲಿ ಈ ಸಂಬಂಧ ನಾನು ಬರೆದಿದ್ದ ಕಿರು ಪುಸ್ತಕದ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಶಿಕ್ಷಣದಲ್ಲಿ ಮಾತೃಭಾಷೆಯ ಪ್ರಾಥಮಿಕತೆ ಕುರಿತ ಸಮಾಜವಾದಿ ತತ್ವದ ಬಗೆಗಿನ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದ್ದರು.

ಹೀಗೆ ಸಮಾಜವಾದಿ ಚಳುವಳಿ ಕೇವಲ ಹಿಂದುಳಿದ ವರ್ಗಗಳ ಜಾತಿ ರಾಜಕಾರಣವಾಗಿ ಅವನತಿಗೊಳ್ಳುತ್ತಿದ್ದಾಗ, ರಾಮದಾಸ್ ಸಮಾಜವಾದಿ ಚಳುವಳಿ ಅದಕ್ಕಿಂತ ದೊಡ್ಡದು ಎಂಬ ಎಚ್ಚರದೊಂದಿಗೆ ತತ್ಕಾಲೀನ ಬೆಳವಣಿಗೆಗಳ ಬಗ್ಗೆ ಸ್ಪಂದಿಸುತ್ತಿದ್ದರು. ಇತ್ತೀಚೆಗೆ ಅವರು ಪದೇ ಪದೇ ಹೇಳುತ್ತಿದ್ದ ಮಾತೆಂದರೆ, 'ಅಭಿವೃದ್ಧಿ ಎಂಬುದು ಒಂದು ಭ್ರಮೆ' ಎಂಬುದು.(ವಿವರಗಳಿಗಾಗಿ ಎನ್.ಕೆ.ಹನುಮಂತಯ್ಯ ಅವರೊಡನೆಯ ಮಾತುಕತೆಯನ್ನು ನೋಡಿ:'ಊರುಕೇರಿ') 'ಚಾರ್ವಾಕ'ರೆನಿಸಿ ಬದುಕಿನ ಭೌತವಾದಿ ಸ್ವರೂಪದಲ್ಲೇ ನಂಬಿಕೆಯಿರಿಸಿದ್ದ ರಾಮದಾಸ್, ಮನುಷ್ಯನ ಸಾಮಾನ್ಯ ಸುಖ-ಸಂತೋಷಗಳ ಬಗ್ಗೆ ವೈರಾಗ್ಯ ಭಾವವನ್ನೇನೂ ತಾಳಿರಲಿಲ್ಲವಾದರೂ; ಜಾಗತೀಕರಣ ಪ್ರತಿಪಾದಿಸಿ ಜಾರಿಗೆ ತರಲಾರಂಭಿಸಿರುವ 'ಅಭಿವೃದ್ಧಿ' ಕುರಿತು ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಪರಿಸರ ಚಳುವಳಿ ಕುರಿತು ವಿಶೇಷ ಆಸಕ್ತಿ ತಾಳಿದ್ದ ಅವರು, ನೆಲ-ನೀರು-ಗಾಳಿ-ಆಕಾಶ-ಪಶು-ಪಕ್ಷಿ-ಗಿಡ-ಮರಗಳನ್ನು ನಾಶ ಮಾಡುತ್ತಾ ಬರುತ್ತಿರುವ 'ಅಭಿವೃದ್ಧಿ' ಬೇಡವೇ ಬೇಡ ಎನ್ನುತ್ತಿದ್ದರು. ಆ ಮೂಲಕ ಅವರು ಈಗ ಸಮಾಜವಾದಿಗಳಿಗೆ ಮರೆತೇ ಹೋಗಿರುವಂತಿರುವ ಸಮಾಜವಾದದ ಜಾಗತಿಕ ಆಯಾಮದ ಕಡೆ ಪರೋಕ್ಷವಾಗಿಯಾದರೂ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಕಳೆದ ಮಾರ್ಚ್‌ನಲ್ಲಿ ಚಿತ್ರದುರ್ಗದಲ್ಲಿ 'ಅಭಿರುಚಿ' ವೇದಿಕೆಯಡಿ ಏರ್ಪಡಿಸಲಾಗಿದ್ದ 'ಲೋಹಿಯಾ ನೆನಪು' ಕಾರ್ಯಕ್ರಮದಲ್ಲಿ ರಾಮದಾಸ್ ಮಾತನಾಡಿದ್ದು, ಲೋಹಿಯಾ ಬಗೆಗೂ ಅಲ್ಲ, ಸಮಾಜವಾದದ ಬಗೆಗೂ ಅಲ್ಲ; ಅಭಿವೃದ್ಧಿಯ ಹೆಸರಲ್ಲಿ ನಾಶವಾಗುತ್ತಿರುವ ಪರಿಸರದ ಬಗ್ಗೆ ಮತ್ತು ಈ ಕುರಿತ ಯುವಜನರ ಅನಾಸಕ್ತಿಯ ಬಗೆಗೆ.

ಹಾಗೆ ನೋಡಿದರೆ, ಇಂದು ಸಮಾಜವಾದಿ ಚಳುವಳಿ ಪುನಃಶ್ಚೇತನಗೊಳ್ಳುವ ಸಾಧ್ಯತೆ ಇದ್ದರೆ, ಅದು ಪರಿಸರದ ಪ್ರಶ್ನೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ತನ್ನ ಸಂಕಥನವನ್ನು ಪುನಾರಚಿಸಿಕೊಳ್ಳುವ ಮೂಲಕ ಮಾತ್ರ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಜಾಗತಿಕ ಪರಿಸರ ಸಮ್ಮೇಳನದಲ್ಲಿ ಕ್ಯೂಟೋ ಸಮ್ಮೇಳನದ ಘೋಷಣೆಯನ್ನೇ ಪುನಃರುಚ್ಛರಿಸುತ್ತಾ, ಭೂಮಿಯನ್ನು ಉಳಿಸಲು ಇನ್ನು ಏಳು ವರ್ಷಗಳು ಮಾತ್ರ ಬಾಕಿಯಿವೆ ಎಂದು ಸ್ವತಃ ವಿಜ್ಞಾನಿಗಳೇ ಕಟು ಎಚ್ಚರಿಕೆ ನೀಡಿದ್ದಾರೆ. ಆದರೂ, ಧರೆಯ ಆತಂಕಕಾರಿ ಬಿಸಿಯೇರಿಕೆಗೆ ಭಾರತ ಮತ್ತು ಚೀನಾದಂತಹ ಅಭಿವೃದ್ಧಿಶೀಲ ದೇಶಗಳ ಹಿಂದುಳಿದ ತಂತ್ರಜ್ಞಾನವೇ ಕಾರಣ ಎಂದು ವಾದಿಸುತ್ತಾ, ತಮ್ಮ ದೇಶದ ಜನರ ಅತಿ ಗ್ರಾಹಕವಾದಿ ಜೀವನ ಕ್ರಮವನ್ನು ಬದಲಾಯಿಸಿಕೊಳ್ಳಲಿಚ್ಛಿಸದ ಅಮೆರಿಕಾದಂತಹ ಅಭಿವೃದ್ಧಿಗೊಂಡ ಹಠಮಾರಿ ದೇಶಗಳು ಒಂದು ಕಡೆ; ಈ ಬಗೆಗಿನ ವರದಿಗಳೆಲ್ಲ ಉತ್ಪ್ರೇಕ್ಷಿತವೆಂದು ಭಾವಿಸುತ್ತಾ, ಈಗ ತಾನೇ ಅತ್ಯಾಧುನಿಕ ಸುಖ-ಸವಲತ್ತುಗಳ ಪ್ರಪಂಚಕ್ಕೆ ತರೆದುಕೊಂಡು ಅವನ್ನು ಸುಲಭವಾಗಿ ಬಿಡಲಾಗದ ಸಂಕಟದಲ್ಲಿರುವ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಜನಸ್ತೋಮದ ಹಪಾಹಪಿ ಇನ್ನೊಂದು ಕಡೆ - ಹೀಗೆ ಜಗತ್ತು ಜಾಗತೀಕರಣದ ಅತ್ಯುತ್ಸಾಹದಲ್ಲಿ ಅದರ ಲೌಕಿಕ ಬೆರಗಿಗೆ ಸಿಕ್ಕಿ ಅವಿವೇಕಿಯಂತೆ ವರ್ತಿಸುತ್ತ ಭೂಮಿಯನ್ನೇ ನಾಶ ಮಾಡಹೊರಟಿರುವಾಗ, ಸಮಾಜವಾದ ತನ್ನ ಹಿರಿತನಕ್ಕೆ ತಕ್ಕ ವಿವೇಕದೊಂದಿಗೆ ಜಗತ್ರಕ್ಷಕ ತತ್ವವಾಗಿ ಹೊಸದಾಗಿ ಹೊರಹೊಮ್ಮಬೇಕಿದೆ. ಇದು ಸಮಾಜವಾದದ ಪುನರನ್ವೇಷಣೆ ಕೂಡ.

ಸಮಾಜವಾದಿ ಚಳುವಳಿಯನ್ನು ಭಾರತದಲ್ಲಿ ಕೇವಲ ರಾಷ್ಟ್ರೀಯ ಚೌಕಟ್ಟಿನ ಸಾಮಾಜಿಕ ಚಳುವಳಿಯ ಮಟ್ಟಕ್ಕಷ್ಟೇ ಸೀಮಿತಗೊಳಿಸಿ ಅದರ ಸಾಧ್ಯತೆಗಳೆನ್ನೆಲ್ಲ ಸೂರೆ ಮಾಡಿ ದಿಕ್ಕೆಟ್ಟು ಕೂತಿರುವ ಸಮಾಜವಾದಿಗಳು, ಈಗಲಾದರೂ ಅದರ ಜಾಗತಿಕ ಸ್ವರೂಪದಲ್ಲಿ ಅಡಗಿರುವ ನಿತ್ಯಸತ್ಯದ ಕಡೆ ಗಮನ ಹರಿಸಬೇಕಿದೆ. ಲೋಹಿಯಾ ಪ್ರತಿಪಾದಿಸಿದ ಸಮಾಜವಾದ ಮೂಲಭೂತವಾಗಿ ಹೊಸ ಅಭಿವೃದ್ಧಿ ಮೀಮಾಂಸೆಯನ್ನು ಆಧರಿಸಿದ ಒಂದು ಜಾಗತಿಕ ರಾಜಕೀಯ ಚಳುವಳಿಯೇ ಆಗಿತ್ತು. ಅದನ್ನು ಹಾಗೆ, ಒಂದು ಹೊಸ ಜಾಗತಿಕ ನಾಗರೀಕತೆಯ ಅಸ್ತ್ತಿವಾರದಂತೆ ರೂಪಿಸಲೂ ಲೋಹಿಯಾ ಶ್ರಮಿಸಿದ್ದರು. ವೈಜ್ಞಾನಿಕ ಅನ್ವೇಷಣೆಗಳ ನಿರಂತರ ಅನ್ವಯವನ್ನಾಧರಿಸಿದ ತಂತ್ರಜ್ಞಾನ ಸೃಜಿಸುವ ಸದಾ ಏರುತ್ತಾ ಹೋಗುವ ಜೀವನ ಮಟ್ಟವು ತನ್ನ ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಅಗತ್ಯಗಳಿಗಾಗಿ ಜಗತ್ತಿನ ಒಂದು ಭಾಗವನ್ನು ಒಂದಲ್ಲ ಒಂದು ರೂಪದಲ್ಲಿ ವಸಾಹತುವನ್ನಾಗಿ ಮಾಡಿಕೊಳ್ಳುವ ಅನಿವಾರ್ಯತೆಯನ್ನುಂಟು ಮಾಡಿ, ಒಟ್ಟಾರೆ ಮಾನವತೆಯ ಮಹೋನ್ನತಿಗೆ ಭಂಗ ತರುವುದೆಂದು ವಿಶ್ಲೇಷಿಸಿದ್ದ ಅವರು; ಇಡೀ ಜಗತ್ತು ಅನುಸರಿಸಬಹುದಾದ ಸಣ್ಣ ಪ್ರಮಾಣದ ತಂತ್ರಜ್ಞಾನದ ಮೂಲಕ ಸಾಧಿಸಬಹುದಾದ ಮಿತಿಗಳುಳ್ಳ ಒಂದು ಸಭ್ಯ-ಸರಳ ಜೀವನ ಮಟ್ಟವನ್ನು ಪ್ರತಿಪಾದಿಸಿದ್ದರು. ಆ ಮೂಲಕ ಅವರ ಈ ಜಾಗತಿಕ ದೃಷ್ಟಿಯ ಸಮಾಜವಾದ ಮನುಷ್ಯನ ಮೂಲಭೂತ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳನ್ನು ಕುರಿತಂತೆ ಬಂಡವಾಳವಾದ ಹಾಗೂ ಕಮ್ಯುನಿಸಂಗಳೆರಡೂ ಒಡ್ಡಬಹುದಾದ ಅಪಾಯಗಳ ವಿರುದ್ಧ ರಕ್ಷಣೆ ಒದಗಿಸಬಲ್ಲ ಹೊಸ ಜೀವನ ಕ್ರಮದ ಹೊಳಹನ್ನೂ ನೀಡಿತ್ತು.

ಆದರೆ ಚರಿತ್ರೆಯ ಅನಿವಾರ್ಯ ಒತ್ತಡಗಳಿಗೆ ಹಾಗೂ ಪಿತೂರಿಗೆ ಸಿಕ್ಕ ಸಮಾಜವಾದ, ಕಮ್ಯುನಿಸಂ ಜೊತೆಗೇ ಅಪ್ರಸ್ತುತೀಕರಣಕ್ಕೆ ಒಳಗಾದದ್ದು ಮಾತ್ರ ವಿಷಾದಕರ. ಇದಕ್ಕೆ ಭಾರತವೂ ಸೇರಿದಂತೆ ಜಗತ್ತಿನಾದ್ಯಂತದ ಸಮಾಜವಾದಿಗಳು ಬಂಡವಾಳವಾದ ಹಾಗೂ ಕಮ್ಯುನಿಸಂಗಳ ವಿರುದ್ಧ ಹೋರಾಡಿದಷ್ಟು ಬಲವಾಗಿ ಸ್ವಂತ ತಮ್ಮ ತತ್ವವನ್ನು ಕಾರ್ಯಕ್ರಮಗಳ ರೂಪದಲ್ಲಿ ಪ್ರತಿಪಾದಿಸುವಲ್ಲಿ ಸೋತು ಹೋದುದೂ ಕಾರಣವಾಗಿದೆ. ಆದರೆ ಇಂದು ಕಮ್ಯುನಿಸಂ ತನ್ನ ನೆನಪುಗಳ ಮೂಲಕ ಜಗತ್ತನ್ನು ದುಃಸ್ವಪ್ನದಂತೆ ಕಾಡುವಂತಾಗಿ, ಬಂಡವಾಳವಾದವೀಗ ಜಾಗತೀಕರಣದ ರೂಪದಲ್ಲಿ ಭೂಮಿಯನ್ನೇ ತಿಂದು ತೇಗುವ ಅಪಾಯವನ್ನೊಡ್ಡಿರುವಾಗ; ಮಧ್ಯಮ ಮಾರ್ಗವೆನಿಸಿರುವ ಸಮಾಜವಾದ ಒಂದು ಜಾಗತಿಕ ನೈತಿಕ ಶಕ್ತಿಯಾಗಿ ಹೊರಹೊಮ್ಮುವುದಾದರೆ, ಜನ ಅದನ್ನು ನಿಸ್ಸಂದೇಹವಾಗಿ ಸ್ವಾಗತಿಸಿಯಾರು.

ಭಾರತದಲ್ಲಿನ ರೈತರ ಆತ್ಮಹತ್ಯೆಯ ಜ್ವಲಂತ ಸಮಸ್ಯೆಗೆ ಇಂದು ಇಂತಹ ಒಂದು ನೈತಿಕ ಸಾಂತ್ವನದ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯಗಳು ಎಷ್ಟೇ ದೊಡ್ಡ ದೊಡ್ಡ ಆರ್ಥಿಕ ಪ್ಯಾಕೇಜುಗಳನ್ನು ಪ್ರಕಟಿಸಿದರೂ ರೈತರ ಆತ್ಮಹತ್ಯೆ ನಿಲ್ಲದಿರುವುದರ ಹಿಂದೆ ಜಾಗತೀಕರಣದ ಅನೈತಿಕತೆಯ ಒಂದು ದೊಡ್ಡ ಮಹಾಭಾರತವೇ ಇದೆಯೆಂಬುದನ್ನು ನಾವು ಮರೆಯಬಾರದು. ಹಾಗಾಗಿಯೇ ನಾನು ಶೂನ್ಯ ಬಂಡವಾಳದ ಕೃಷಿ ಇತ್ಯಾದಿ ಪರ್ಯಾಯ ಕೃಷಿ ಪದ್ಧತಿಗಳನ್ನು ಪ್ರಚುರ ಪಡಿಸುತ್ತಿರುವ ಸ್ವಾಮಿ ಆನಂದರಂತಹ ಗೆಳೆಯರಿಗೆ, ಅದನ್ನು ರೈತನ ಸಮಗ್ರ ಎಚ್ಚರದ ಭಾಗವಾಗಿ ಒಂದು ರಾಜಕೀಯ ಚಳುವಳಿಯಂತೆಯೇ ನಡೆಸಿಕೊಂಡು ಹೋಗಿ ಎಂದು ಹೇಳುತ್ತಿರುವುದು. ಜಾಗತೀಕರಣ ಇಡೀ ಜಗತ್ತನ್ನು ನಗರೀಕರಣಕ್ಕೊಳಪಡಿಸಿ, ಕೃಷಿ ಸಂಸ್ಕೃತಿ ಆಧಾರಿತ ಗ್ರಾಮ ಬದುಕಿನ ನೆಲೆಗಳನ್ನು ನಾಶಪಡಿಸ ಹೊರಟಿದೆ. ಈ ನಾಶದ ಒಂದು ಭಾಗವಾಗಿ ರೈತರ ಆತ್ಮಹತ್ಯೆ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಹೋದಲ್ಲಿ, ರೈತರ ಆತ್ಮಹತ್ಯೆಯನ್ನೂ ತಡೆಯಲಾಗದು ಹಾಗೂ ಅದರ ಮುಂದಿನ ಪರಿಣಾಮವಾಗಿ ಕೃಷಿ ಸಂಸ್ಕೃತಿ ಆಧಾರಿತ ದೇಶಗಳ 'ಆತ್ಮ'ಹತ್ಯೆಯನ್ನೂ-ಬಹುಶಃ ಚೀನಾ ಆಡಳಿತ ಮಾದರಿಯ ಹೊರತಾಗಿ ಇನ್ನಾವ ಆಡಳಿತ ಮಾದರಿಯ ಮೂಲಕವೂ - ತಡೆಯಲಾಗದು.

ಆದುದರಿಂದ 'ಅಭಿವೃದ್ಧಿ' ಕುರಿತಂತೆ ನಾವಿಂದು ಆಮೂಲಾಗ್ರವಾಗಿ ಪುನರಾಲೋಚಿಸುವ ಅಗತ್ಯವಿದೆ. ಅತಿಗೆ ಹೋಗಿ ಹೇಳುವುದಾದರೆ, 'ಅಭಿವೃದ್ಧಿ ಇನ್ನು ಸಾಕು' ಎಂಬ ದಿಟ್ಟ ಪ್ರಣಾಳಿಕೆಯ ಆಧಾರದ ಮೇಲೇ ಸಮಾಜವಾದವಿಂದು ತನ್ನ ಹೋರಾಟವನ್ನು ಆರಂಭಿಸಬೇಕಿದೆ. ಈವರೆಗಿನ 'ಊಧ್ರ್ವ' ಅಭಿವೃದ್ಧಿಯು 'ಅಗಲ'ವಾಗಿ ಹರಡಿಕೊಳ್ಳುವ ವಿವೇಕ ಕಂಡುಕೊಳ್ಳುವವರೆಗೆ, 'ಊರಿನ ಮರ ಕಡಿದು ಮನೆಗೆ ಹವಾ ನಿಯಂತ್ರಕವನ್ನು ಹಾಕಿಸಿಕೊಳ್ಳುವ' ವಿಕ್ಷಿಪ್ತ ಅಭಿವೃದ್ಧಿಗೆ ಸಾಕು ಎಂದು ಹೇಳುವ ಧೈರ್ಯವನ್ನು ಸಮಾಜವಾದ ಸಂಘಟಿಸಿಕೊಳ್ಳಬೇಕಿದೆ. ಲೋಹಿಯಾ ಪ್ರತಿಪಾದಿಸಿದ ಸರಳ - ಸಭ್ಯ ಜೀವನ ಮಟ್ಟದ ಕಾರ್ಯಶೀಲ 'ಮಾದರಿ'ಗಳನ್ನು ಸಮಕಾಲೀನ ಜೀವನದ ಮಟ್ಟಿಗೆ ಅಸಂಗತವೂ, ಅವ್ಯವಹಾರಿಕವೂ ಅನ್ನಿಸದ ರೀತಿಯಲ್ಲಿ ನಿರೂಪಿಸಿ ಪ್ರಚಾರ ಮಾಡುವುದೇ, ಸಮಾಜವಾದಿ ಚಳುವಳಿಯ ಸದ್ಯದ ಧರ್ಮವಾಗಬೇಕಿದೆ. ಹಿರಿಯ ಗೆಳೆಯ ರಾಮದಾಸರ ನೆನಪಿನಲ್ಲಿ ಮತ್ತು ನೆಪದಲ್ಲಿ ಇಷ್ಟು ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟ ನಿಮಗೆಲ್ಲ ವಂದಿಸಿ ನನ್ನ ಈ ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ.
(ಮೈಸೂರಿನ 'ಪ್ರಗತಿಪರ ಸಂಘಟನೆಗಳ ಒಕ್ಕೂಟ'ವು ಇದೇ ಜುಲೈ ಒಂದರಂದು ಏರ್ಪಡಿಸಿದ್ದ 'ಪ್ರೊ||ಕೆ.ರಾಮದಾಸ್: ಒಂದು ನೆನಪು' ಕಾರ್ಯಕ್ರಮದಲ್ಲಿನ 'ಚಿಂತನ ಗೋಷ್ಠಿ'ಯಲ್ಲಿ ಆಡಿದ ಮಾತುಗಳು)

ಅಂದಹಾಗೆ : ನನ್ನ ನಂತರ ಈ ಗೋಷ್ಠಿಯಲ್ಲಿ, 'ಕೋಮುವಾದ ಹಾಗೂ ಹಿಂಸಾವಾದ' ಕುರಿತು ಮಾತನಾಡಿದ ಪ್ರೊ||ರವಿವರ್ಮ ಕುಮಾರ್ ಅವರು, ಕೋಮುವಾದ ರಾಜ್ಯದಲ್ಲಿ ಈ ಮಟ್ಟಿಗೆ ತಲೆ ಎತ್ತಲು, ರೈತ ಚಳುವಳಿ ರೈತರನ್ನು ಕೋಮುವಾದ ಇತ್ಯಾದಿ ದುಷ್ಟ ಸಾಮಾಜಿಕ ಶಕ್ತಿಗಳ ವಿರುದ್ಧ ಜಾಗೃತಗೊಳಿಸದೇ ಹೋದದ್ದೇ ಮುಖ್ಯ ಕಾರಣವೆಂದು ಹೇಳುತ್ತಾ; ಬಾಬಾಗೌಡ ಪಾಟೀಲರಂತಹ ಹಿರಿಯ ನಾಯಕರೇ ಭಾ.ಜ.ಪ.ಕ್ಕೆ ಹೋದ ಉದಾಹರಣೆ ನೀಡಿದರು. ಆದರೆ ಬಾಬಾಗೌಡ ಪಾಟೀಲರಿಗಿಂತ ಬಹು ಮುನ್ನವೇ, ಕರ್ನಾಟಕದಲ್ಲಿನ ಸಾಮಾಜಿಕ ನ್ಯಾಯ ಚಳುವಳಿಯ ಪಿತಾಮಹರೆಂದು ರವಿವರ್ಮ ಕುಮಾರರಂತಹವರಿಂದಲೇ ಕರೆಸಿಕೊಂಡ ಎಲ್.ಜಿ.ಹಾವನೂರರೇ ಭಾ.ಜ.ಪ. ಸೇರಿದ್ದರ ಕಾರಣವಾದರೂ ಏನು ಎಂಬುದನ್ನು ಮಾತ್ರ ಅವರು ವಿವರಿಸಲು ಹೋಗದ್ದಿದುದು ಆಶ್ಚರ್ಯ!
-ಡಿ.ಎಸ್.ನಾಗಭೂಷಣ

Rating
No votes yet