ತಾಯಿಯಾಗುವ ಸುಖ

ತಾಯಿಯಾಗುವ ಸುಖ

ಬರಹ

ಓದು ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಂಡು, ಯಾವ ಬಂಧನಕ್ಕೂ ಸಿಗದೆ ಹಕ್ಕಿಯಂತೆ ಹಾರಾಡುತ್ತಿದ್ದ ನನಗೆ ನನ್ನ ಅಕ್ಕನ ಮಕ್ಕಳನ್ನು ಕಂಡಾಗಲೆಲ್ಲ ಅನ್ನಿಸುತ್ತಿದ್ದುದು, ಮಕ್ಕಳು ಸ್ವಲ್ಪ ಹೊತ್ತು ಆಟವಾಡಲು ಅಷ್ಟೆ ಚೆಂದ, ಅವರ ಅಳು, ಊಟ ಮಾಡಿಸುವುದು, ನಿದ್ರೆ, ಸದಾ ಹಿಂದೆ ಮುಂದೆ ಸುತ್ತುವ ಅವುಗಳ ಮೇಲೆ ಯಾವಾಗಲೂ ಒಂದು ಕಣ್ಣಿಡುವುದು, ಇವೆಲ್ಲ ನನಗೆ ಆಗದ ಕೆಲಸವೆಂದು. ಆದರೆ ಸ್ವತ: ತಾಯಿಯಾಗುವ ಸಂದರ್ಭ ನನಗೂ ಒಂದು ದಿವಸ ಬಂದಿತು. ಮೊದಮೊದಲು ಮಗುವು ರಾತ್ರಿಯೆಲ್ಲ ಅಳುವಾಗ, ನನಗೆ ನಿದ್ರೆಯಿಲ್ಲದಾದಾಗ, ಒಂದಿನಿತೂ ಬೇಸರಿಸದೆ, ಮಗುವನ್ನು ನೋಡಿಕೊಂಡಿದ್ದು ನನಗೇ ಆಶ್ಚರ್ಯ ತರಿಸಿತ್ತು. ನಂತರ ಶುರುವಾಯಿತು ನನ್ನ ಮಗುವಿನ ಬಿಡಿಸಲಾಗದ ಅನುಬಂಧ. ಅದರ ಮುಗ್ಧ ನಗು, ಆಟ, ಚೇಷ್ಟೆ, ಎಲ್ಲವೂ ಅಪ್ಯಾಯಮಾನ. ಭಗವಂತ ಎಲ್ಲರಲ್ಲೂ ಈ ಮುಗ್ಧತೆಯನ್ನು ಯಾಕೆ ಇಟ್ಟಿರುವುದಿಲ್ಲ ಎನಿಸುತ್ತದೆ. ಕೆಲಸಕ್ಕೆ ಬಂದರೂ ಮಗುವಿನದೇ ಚಿಂತೆ, ಅತ್ತರೆ ಬೇಸರವಿಲ್ಲ, ನಾವು ದಣಿದಿದ್ದರೂ, ಅದಕ್ಕೆ ಊಟ ಮಾಡಿಸುವ ಸಂಭ್ರಮ, ನಿತ್ಯದ ಧಾರಾವಹಿಗಳಿಗೆ ತಿಲಾಂಜಲಿ ಇತ್ತು, ಮಗುವಿನ ಜೊತೆ ಆಟವಾಡುವಾಗ ಸಮಯ ಸರಿದದ್ದೇ ತಿಳಿಯುವುದಿಲ್ಲ. ಆಗ ತಿಳಿಯಿತು, ಎಲ್ಲರೂ ತಾಯ್ತನವು ಹೆಣ್ಣನ್ನು ಒಬ್ಬ ಪರಿಪೂರ್ಣ ಮಹಿಳೆಯಾಗಿಸುತ್ತದೆ ಎಂದು ಏಕೆ ಹೇಳುತ್ತಾರೆಂದು. ಮಕ್ಕಳಿಗೆ ನಾವು ಕೊಡುವ ಪ್ರೀತಿ, ಮಮತೆ ಇನ್ಯಾರಿಗೂ ಕೊಟ್ಟಿರುವುದಿಲ್ಲ, ಬಹುಶ: ಗಂಡನಿಗೂ ಕೂಡ, ಈ ರೀತಿಯ unconditional ಪ್ರೀತಿಯನ್ನು ನಾವು ಕೊಟ್ಟಿರುವುದಿಲ್ಲವೇನೋ ಅನ್ನಿಸುತ್ತದೆ. ಏಕೆಂದರೆ ಮಕ್ಕಳಿಂದ ಪ್ರತಿಯಾಗಿ ನಾವು ಏನನ್ನೂ ಬಯಸುವುದಿಲ್ಲ. ಇಂದಿನ ಪೀಳೀಗೆಯ ಅದರಲ್ಲೂ ಸಾಫ್ಟ್ ವೇರ್ ಮಂದಿಯು ಮಕ್ಕಳು ಬೇಡವೆಂದು ತೀರ್ಮಾನಿಸುವವರೇ ಹೆಚ್ಚಿರುವರೆಂದು ತಿಳಿದಾಗ, ಭಗವಂತ ಕೊಟ್ಟ ಅಮೂಲ್ಯವಾದ ಉಡುಗೊರೆಯನ್ನು ಬೇಡವೆನ್ನುವ ಅವರೆಷ್ಟು ದುರದೃಷ್ಟವಂತರೆಂದು ಅನ್ನಿಸುತ್ತದೆ.