ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು. ಅದೇರೀತಿ, ಚಿತ್ರಗಳಲ್ಲಿ ಹಾಡಿ ಪರಿಶ್ರಮವಿರುವವರಿಗೆ, ಶಾಸ್ತ್ರೀಯಗಾಯನವೂ ಕಷ್ಟವೇ. ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ ಮೊದಲಾದವರು ಎಷ್ಟೇ ಒಳ್ಳೆಯ ಗಾಯಕರಾದರೂ, ಪಕ್ಕಾ ಶಾಸ್ತ್ರ್ರೀಯ ಸಂಗೀತಕ್ಕೆ ಅವರ ಕಂಠಸಿರಿ ಅಷ್ಟಾಗಿ ಒಪ್ಪದು. ಈ ದಿಸೆಯಲ್ಲಿ ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಗಾಯಕ ಎಂದರೆ ಅದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಶಾಸ್ತ್ರ್ರೀಯ, ಅರೆ-ಶಾಸ್ತ್ರ್ರೀಯ, ಮತ್ತೆ ಪಕ್ಕಾ ಫಿಲ್ಮೀ ಗೀತೆಗಳನ್ನು - ಹೀಗೆ ಎಲ್ಲ ಬಗೆಯ ಹಾಡುಗಳನ್ನು ಹಾಡುವುದರಲ್ಲಿ, ಅವರಷ್ಟು ಎತ್ತಿದ ಕೈ ಯಾರೂ ಇಲ್ಲ ಎಂದು ನನ್ನ ಭಾವನೆ. ಹಾಗಾಗಿ, ಅವರು ಹಾಡಿರುವ ಕೆಲವು ಶಾಸ್ತ್ರೀಯ ಗೀತೆಗಳನ್ನು ನೆನೆಸಿಕೊಳ್ಳೋಣ ಎನ್ನಿಸಿತು. ಅದೇಕೋ, ಮ್ಯೂಸಿಕ್ ಇಂಡಿಯಾ ತಾಣ ನನಗೆ ಕೆಲಸ ಮಾಡುತ್ತಿಲ್ಲ. ಆದರೆ, ನಾನೀಗ ಹೇಳುತ್ತಿರುವುದೆಲ್ಲ ಬಹಳ ಪ್ರಸಿದ್ಧ ಗೀತೆಗಳೇ,ಎಲ್ಲರಿಗೂ ತಿಳಿದುರುವಂತಹವೇ. ನಾನು, ಅಲ್ಲಲ್ಲಿ ಅದು ಯಾವ ರಾಗ ಎಂದು ಹೇಳುತ್ತೇನೆ ಅಷ್ಟೇ. ಈದನ್ನು ಓದುತ್ತ, ಆ ಗೀತೆಗಳನ್ನು ಮೆಲುಕಿ ಹಾಕಿದರೆ, ಬಹಳ ಚೆನ್ನು!
ನನ್ನ ಮಟ್ಟಿಗೆ ಹೇಳುವುದಾದರೆ,ರಾಜ್‍ಕುಮಾರ್ ಅವರ ಹಾಡುಗಾರಿಕೆ, ಅತಿ ಉತ್ತಮ ಶ್ರೇಣಿಯದು. ಪೂರ್ಣಕಂಠದಲ್ಲಿ ಹಾಡುವ ಅವರ ರೀತಿ ಬಹುಶಃ ನಾಟಕರಂಗದಲ್ಲಿ ಅವರಿಗಿದ್ದ ಅನುಭವದ ಕಾರಣದಿಂದ ಎನಿಸುತ್ತೆ. ಹಾಗೆಂದೇ, ಬಹಳ ಒಳ್ಳೆಯ ಶಾಸ್ತ್ರೀಯ ಸಂಗೀತದ ಆಧಾರಿತ ಗೀತೆಗಳನ್ನು ಹಾಡಲು ಅವರಿಗೆ ಸಾಧ್ಯವಾಯಿತು. ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ, ನೋಡುಗರ ಪ್ರೀತಿಯ ಪ್ರಶಸ್ತಿ ಅವರಿಗೆ ಯಾವಾಗಲೂ ಸಿಕ್ಕರೂ, ಅವರ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಲೇ ಇಲ್ಲ; ಆದರೆ, ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಸಿಕ್ಕದ್ದನ್ನು ನಾವಿಲ್ಲಿ ಮರೆಯುವಂತಿಲ್ಲ. ಹಾಗೆ ಅತ್ಯುತ್ತಮ ಗಾಯಕ ಪಟ್ಟ ಅವರಿಗೆ ಸಿಕ್ಕಿದ್ದು ಒಂದು ಪಕ್ಕಾ ಶಾಸ್ತ್ರೀಯ ಗೀತೆಗೆ. ತೋಡಿ ರಾಗದ ನಾದಮಯ ಈ ಲೋಕವೆಲ್ಲ ಎಂಬ ಗೀತೆ ಅವರ ಕರ್ನಾಟಕ ಸಂಗೀತ ಜ್ಞಾನಕ್ಕೊಂದು ಕನ್ನಡಿ.
ಕೆಲವು ದಿನಗಳ ಹಿಂದೆ ಉದಯ ಟಿವಿಯಲ್ಲಿ ಬಂದ ಸಂದರ್ಶನವೊಂದರಿಂದ, ರಾಜ್ ಅವರು ಪಾರ್ವತಮ್ಮ ಅವರ ತಂದೆಯಿಂದ ಸ್ವಲ್ಪ ದಿನ ಶಾಸ್ತ್ರೀಯ ಸಂಗೀತ ಕಲಿತಿದ್ದರು ಎಂದು ತಿಳಿದೆ. ಎಷ್ಟು ಕಾಲ ಅವರು ಕಲಿತಿದ್ದರೋ ತಿಳಿಯೆ. ಆದರೆ, ನಾಟಕಗಳಲ್ಲಿ ಅಭಿನಯಿಸುವಾಗ ಅದರ ಅಭ್ಯಾಸದಲ್ಲಿ, ಅವದ ಕಂಠ ಬಹಳ ಪಳಗಿತು ಎಂದು ಕಾಣುತ್ತೆ. ಆಗ ನಾಟಕ ಮಾಡುತ್ತಿದ್ದವರಿಗೆಲ್ಲ ಅಭಿನಯದ ಜೊತೆಗೆ ಸಂಗೀತ ಚೆನ್ನಾಗಿ ಬರಬೇಕಾಗಿತ್ತು. ೯೦ರ ದಶಕದಲ್ಲಿ ಬಂದ ಆಕಸ್ಮಿಕ ಚಿತ್ರದಲ್ಲಿ, ನಾಟಕದ ಮಟ್ಟಿನ ಒಂದು ಸುಂದರ ಗೀತೆಯನ್ನು ಅವರು ಹಾಡಿದ್ದಾರೆ. ನೆನಪಿಗೆ ಬಂತೇ? ಅನುರಾಗದಾ ಭೋಗ ಅನ್ನುವ ಗೀತೆ, ಸುಂದರ ಪಲುಕಿನಿಂದ ಕೂಡಿದ್ದು, ಅದರಲ್ಲಿನ ಸಂಗತಿಗಳು ಯಾವುದೇ ಕೃತಿಗೂ ಕಡಿಮೆ ಇಲ್ಲ! ಈ ಹಾಡು ಶುದ್ಧಸಾವೇರಿ ರಾಗದಲ್ಲಿರುವ ಗೀತೆ. ನೆನಪಾದಾಗ, ಇದೇ ರಾಗದಲ್ಲಿರುವ ಇನ್ನೊಂದು ಹಾಡನ್ನು ಹೇಳಿಬಿಡುತ್ತೇನೆ - ಅದಾವುದು ಗೊತ್ತೇ? ಹೇಳಿದೆನಲ್ಲ? ಎಲ್ಲಿ ಎಂದಿರಾ? ಅದು "ಇದೇ ರಾಗದಲ್ಲಿ, ಇದೇ ತಾಳದಲ್ಲಿ" ಎಂಬ ಶ್ರಾವಣ ಬಂತು ಚಿತ್ರದ ಗೀತೆ :) ಕರ್ನಾಟಕ ಸಂಗೀತದ ಶುದ್ಧಸಾವೇರಿಗೂ, ಹಿಂದೂಸ್ತಾನಿಯ ದುರ್ಗಾ ರಾಗಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಇನ್ನೊಂದು ಬಾರಿ ಈ ಹಾಡುಗಳನ್ನು ಕೇಳಿದಾಗ ಈ ರಾಗಗಳ ಹೆಸರನ್ನೊಮ್ಮೆ ನೆನೆಯಿರಿ. ನಾಟಕದ ಶೈಲಿಯ ಇನ್ನೊಂದು ಪ್ರಸಿದ್ಧ ಗೀತೆ ರವಿಚಂದ್ರ ಚಿತ್ರದ ಸತ್ಯಭಾಮೆ ಸತ್ಯಭಾಮೆ ಎನ್ನುವ ಹಾಡು.
ರಾಜ್ ಅವರ ಪೌರಾಣಿಕ ಚಿತ್ರಗಳನ್ನು ನೆನ್ನೆದಾಗ ನಿಮ್ಮ ಮನಸ್ಸಿಗೆ ಬಭ್ರುವಾಹನ ಬಂದೇ ಇರಬೇಕಲ್ಲ? ಪೌರಾಣಿಕ, ಚಾರಿತ್ರಿಕ ಚಿತ್ರಗಳಲ್ಲಿ ಶಾಸ್ತ್ರೀಯ ಸಂಗೀತದ ಬಳಕೆ ಸ್ವಲ್ಪ ಹೆಚ್ಚು ಎನ್ನುವುದೂ ಗೊತ್ತಿರುವ ವಿಷಯವೇ. ಬಭ್ರುವಾಹನದ ಒಂದೊಂದು ಗೀತೆಯೂ ನೆನೆಯುವಂತಹದ್ದು. ಆರಾಧಿಸುವೆ ಮದನಾರಿ ಗೀತೆಯಂತೂ ನನ್ನ ಅಚ್ಹುಮೆಚ್ಚು. ಖರಹರಪ್ರಿಯ ರಾಗದ ಈ ಗೀತೆಯನ್ನು ಹಾಡಲು ಸಂಗೀತಗಾರರೂ ತಿಣುಕಾಡಬೇಕು. ಇನ್ನು, ಯುದ್ಧಭೂಮಿಯಲ್ಲಿ ಅರ್ಜುನ-ಬಭ್ರುವಾಹನರ ಕಾಳಗಕ್ಕೆ ಮುನ್ನುಡಿಯಾಗಿ ಬರುವ ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಎನ್ನುವ ಗೀತೆ, ಕನ್ನಡ ನೆಲದ ಹೆಮ್ಮೆಯ ಗಮಕ ಕಲೆಯ ಸಾಕಾರ - ಕೇದಾರಗೌಳ ರಾಗದ ಈ ಹಾಡು, ಆ ಯುದ್ಧ ಸಮಯಕ್ಕೆ ಹೇಳಿಸಿದಂತಹ ರಾಗ! ಇನ್ನು, ಇದೇ ಚಿತ್ರದ ಪ್ರೇಮಗೀತೆ - ಈ ಸಮಯ ಶೃಂಗಾರಮಯ -ಎನ್ನುವುದು ರಾಗಮಾಲಿಕೆ ಎಂಬ ರಚನಾಪ್ರಕಾರಕ್ಕೆ ಒಳ್ಳೆ ಮಾದರಿ.ಹೆಸರೇ ಸೂಚಿಸುವಂತೆ, ಈ ಹಾಡು ರಾಗಗಳ ಹಾರದಂತೆ, ಮೂರು ರಾಗಗಳಲ್ಲಿ ನಿಯೋಜಿತವಾಗಿದೆ. ಕಲ್ಯಾಣಿಯಂತಹ ರಂಜಕ ರಾಗದಲ್ಲಿ ಆರಂಭವಾಗುತ್ತೆ ಇದು. ಇದನ್ನೇ ಹಿಂದೂಸ್ತಾನಿಯವರು ಯಮನ್ ಅನ್ನುತ್ತಾರೆ. ನಂತರ ಚರಣಗಳಲ್ಲಿ, ಈ ಹಾಡು ಮಿಯಾ ಮಲ್ಹಾರ್ ಮತ್ತು ಬಾಗೇಶ್ರೀ ಗಳಲ್ಲಿ ಸಂಚರಿಸುತ್ತೆ. ಹೀಗೇ ರಾಗಮಾಲಿಕೆಯ ಇನ್ನೊಂದು ಒಳ್ಳೆ ಉದಾಹರಣೆ ಎಂದರೆ, ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಳವಡಿಸಲಾಗಿರುವ ಶ್ಲೋಕ - ಮಾಣಿಕ್ಯವೀಣಾ ಎಂಬುದು. ಕಲ್ಯಾಣಿ, ಹಂಸಧ್ವನಿ, ಹಿಂದೋಳ ಮೊದಲಾದ ರಾಗಗಳಲ್ಲಿರುವ (ಎಲ್ಲವೂ ನೆನಪಾಗುತ್ತಿಲ್ಲ ಈಗ) ಈ ಹಾಡೂ ರಾಜ್‍ಕುಮಾರರ ಶಾಸ್ತ್ರೀಯ ಜ್ಞಾನಕ್ಕೆ ಸಾಕ್ಷಿ.
ಇನ್ನು ಕೆಲವು ಸಾಮಾಜಿಕ ಚಿತ್ರಗಳಲ್ಲೂ, ಶಾಸ್ತ್ರ್ರೀಯ ಬುನಾದಿ ಇರುವ - ಆದರೆ ಹೆಚ್ಚು ಅರಿಯದ ಕಿವಿಗಳಿಗೆ ಹಾಗೆ ಅಷ್ಟಾಗಿ ತೋರದ - ಎಷ್ಟೋ ಗೀತೆಗಳಿವೆ. ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ (ಮೋಹನ), ಸಮಯದ ಬೊಂಬೆ ಚಿತ್ರದ ಕೋಗಿಲೆ ಹಾಡಿದೆ ಕೇಳಿದೆಯಾ (ಕಲ್ಯಾಣಿ), ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ (ಹಿಂದೋಳ),ಅದೇ ಚಿತ್ರದ ಹೊಸಬಾಳಿನ ಹೊಸಿಲಲಿ (ಕಲ್ಯಾಣಿ), ಹೊಸಬೆಳಕು ಚಿತ್ರದಿಂದ ಚೆಲುವೆಯೇ ನಿನ್ನ ನೋಡಲು (ಅಭೇರಿ/ಭೀಮ್‍ಪಲಾಸ್), ಬೇವು ಬೆಲ್ಲದೊಳಿಡಲೇನು ಫಲ (ಬೇಹಾಗ್), ಕಣ್ಣೀರ ಧಾರೆ ಇದೇಕೆ (ಶುಭ ಪಂತುವರಾಳಿ/ಲಲಿತ್) , ಶ್ರುತಿ ಸೇರಿದಾಗ ಚಿತ್ರದಿಂದ ಬೊಂಬೆಯಾಟವಯ್ಯಾ (ಚಾರುಕೇಶಿ), ಶ್ರುತಿಸೇರಿದೇ ಹಿತವಾಗಿದೆ (ಬೇಹಾಗ್), ಅನುರಾಗ ಅರಳಿತು ಚಿತ್ರದ ಶೀಕಂಠಾ ವಿಷಕಂಠ (ಸಿಂಹೇಂದ್ರ ಮಧ್ಯಮ), ಜ್ವಾಲಾಮುಖಿ ಚಿತ್ರದ ಹೇಳುವುದು ಒಂದು ಮಾಡುವುದು ಇನ್ನೊಂದು (ಚಕ್ರವಾಕ/ಅಹಿರ್ ಭೈರವ್) , ಕವಿರತ್ನ ಕಾಳಿದಾಸದ ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡಿದೆ (ಬೃಂದಾವನ ಸಾರಂಗ), ಶ್ರೀನಿವಾಸಕಲ್ಯಾಣ ಚಿತ್ರದ ನಾನೇ ಭಾಗ್ಯವತಿ (ಕಾನಡ), ಧ್ರುವತಾರೆ ಚಿತ್ರದ ಆ ರತಿಯೇ ಧರೆಗಿಳಿದಂತೆ (ಶಿವರಂಜನಿ),ಜೀವನ ಚೈತ್ರದ ಲಕ್ಷ್ಮೀ ಬಾರಮ್ಮ (ಮೋಹನ ಕಲ್ಯಾಣಿ) , ತಾಯಿಗೆ ತಕ್ಕ ಮಗದ ವಿಶ್ವನಾಥನು ತಂದೆಯಾದರೆ (ಹಿಂದೂಸ್ಗ್ತಾನಿ ಕಾಪಿ) - ಹೀಗೇ ಹೇಳುತ್ತ ಹೋಗಬಹುದು! ಸದ್ಯಕ್ಕೆ ಇಷ್ಟು ಸಾಕು ಎನ್ನಿಸುತ್ತೆ :) ಹೀಗೇ ಇನ್ನು ಕೆಲವು ಗೀತೆಗಳು ನಿಮಗೆ ನೆನಪಾದರೆ, ಟಿಪ್ಪಣಿ ಸೇರಿಸಿ :)
ರಾಜ್ ಅವರಿಂದ ಪ್ರಾರಂಭಿಸುವುದು ನನಗೆ ಅವರ ಸಂಗೀತದ ಮೇಲಿನ ಗೌರವದಿಂದ ಸರಿ ಎನ್ನಿಸಿತು.ಇನ್ನೊಮ್ಮೆ ಇನ್ನಾರಾದರೂ ಹಿನ್ನಲೆ ಗಾಯಕರ ಗೀತೆಗಳೊಂದಿಗೆ ಹಾಜರಾಗುತ್ತೇನೆ.
-ಹಂಸಾನಂದಿ
Comments
ಉ: ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ
ಉ: ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ