ಅಬಲೆ-ಸಬಲೆ
ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ
ಕೂಗುತಿತ್ತು ಹ್ರದಯ ಸೋಲುತಿಹೆನು ನಾನು, ಸೋಲ ಬಿಡಬೇಡ ನೀನನ್ನ
ಮನಸ್ಸು ಹ್ರದಯಗಳ ನಡುವೆ ಭಾವನೆಗಳು ನಡೆಸುತಿರೆ ಕೋಲಾಹಲ
ಹಿನ್ನಲೆ ಎಂಬಂತೆ, ಮಿಂಚು ಗುಡುಗುಗಳು ಸ್ರಷ್ಟಿಸಿವೆ ಮನಸ್ಸಲ್ಲಿ ಹಾಲಾಹಲ
ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ
ಋಷಿ ಪತ್ನಿ ಅಹಲ್ಯೆ ಆಗಲಿಲ್ಲವೆ ಬಲಿ ತನ್ನದಲ್ಲದ ತಪ್ಪಿಗೆ?
ಮರ್ಯಾದ ಪುರುಷೊತ್ತಮನ ಸತಿಯೂ ಬೀಳಬೇಕಾಯ್ತಲ್ಲ ಕೊನೆಗೆ ಬೆಂಕಿಗೆ!
ಹಡೆದೈದು ಮಕ್ಕಳ ಶಿರವಿಲ್ಲದ ಶರೀರವ ನೋಡಬೇಕಾಯ್ತಲ್ಲ ಪಂಚಾಲಿಗೆ!
ತನ್ನದಲ್ಲದ ತಪ್ಪು, ಕಾಯುವುದೇ ಇನ್ನೂ ಮುಪ್ಪು? ಆಕೆಯ ಮನಸ್ಸಿನ್ನೂ ಬರಿ ಒಗಟು
ಅಹಲ್ಯೆ, ಸೀತೆ, ದ್ರೌಪದಿಯರಿಗಿದ್ದ ಒಬ್ಬ ಶ್ರೀಹರಿ ಕಾಪಾಡಲು, ಕಾಡಲು
ಸೀತೆ ತಾನಾಲ್ಲವಲ್ಲ, ಸಾಂತ್ವಾನ ಹೇಳಲು ಬರಲಿಲ್ಲ ಆಂಜನೇಯ ರಾಮನ ಬದಲು
ಬಯಕೆಯ ಹಿಡಿದಿಟ್ಟು, ಕಾಮವ ಹೊರಗಿಟ್ಟು ನಲುಗುತಿಹಳವಳು ರಾತ್ರಿ ಹಗಲು
ಕಗ್ಗತ್ತಲು, ದೂರದಿ ಬೆಳಕು, ಸಡಿಲವಾಗುತಿಹುದು ಆಸೆ, ಬಯಕೆಗಳ ಬೇಲಿ
ಬಿಸಿಲು ಮಳೆಗೆ ಎದೆಯೊಡ್ಡಿ ಶಿಥಿಲವಾಗುತಿಹುದು ಮೈ ಮನಸೆಲ್ಲಾ ಕಾಲಿ ಕಾಲಿ
ತಿರುಗಿ ಬರುವನಾತ, ತೋಳ ತೆಕ್ಕೆಯೊಳಗೆ ಸೆಳೆದುಕೊಳ್ಳುವನಾತ, ಎಲ್ಲ ಬರಿ ಕಲ್ಪನೆ
ಹಿಡಿದಿಟ್ಟ ಆಸೆ ಗೋಪುರಗಳು ತರಿಸುತ್ತಿವೆ ಹೇದಹ ತುಂಬೆಲ್ಲಾ ಪ್ರಸವದ ವೇದನೆ
ಕಿಟಕಿಯ ಬಡಿದು ಗಾಳಿ ನುಗ್ಗಿ ಬರಲು, ಸಂಯಮ ಸಡಿಲವಾಗುತ್ತಿದೆ ಮೆಲ್ಲ ಮೆಲ್ಲನೆ
ಪರದೆ ಸರಿಸಿ ಹೊರ ನೋಡಿದರೆ, ದೂರದಲ್ಲೊಂದು ಬೆಳಕಿನ ಗೋಲ
ಇಣಕಿ ನೋಡುತ್ತಿದ್ದ ಉದಯ ರವಿ ಹುಟ್ಟಿಸಿ ನವಿರಾದ ಹೊಸ ಹೊಸ ಬಯಕೆ
ಕಾತುರ ಆತುರಗಳ ಕೂಡಿಟ್ಟಳು ನಾಗಾಲೋಟದಿ ಓಡುವ ಮನಸ್ಸಿನ ತುಂಬೆಲ್ಲ
ತಲೆ ಎತ್ತಿ ಹೊರ ನಡೆದಳು ಎದೆ ಭಾರ ಇಳಿಸಿ, ಮುಗುಳ್ನಗು, ಹಗುರಾದಳಾಕೆ