ಆಕೆ
ಮನದ ಹೊಸ್ತಿಲ ದಾಟಿ, ನಡುಮನೆಯ ಸೇರಿದಳಾಕೆ
ತಿಳಿನೀರ ಕೊಳದಲಿ ತುಂಬಿ ಅರಿವಾಗದ ಹೊಸ ಬಯಕೆ
ಆಸೆ ಹೊತ್ತ ಮನಕೆ ತಿಳಿ ಹೇಳ ಹೊರಟೆ, ನಿನದಲ್ಲದ್ದು ಈಗ್ಯಾಕೆ?
ಕಣ್ಣ ಮುಚ್ಚಿದರೆ ಕಣ್ಣ ಬಿಂಬದಿ ನಿಂತು ಬಾಗಿಲ ತೆರೆದು ನಗುವಳವಳು
ಹೊರ ಹೋಗೆಂದು ಕಣ್ಣ ತೆರೆದರೆ, ಎದೆಯ ಕೋಣೆಯಲಿ ಬಚ್ಚಿಟ್ಟುಕೊಳುವಳು
ಕಣ್ಣೀರಾಗಿ ಹೊರ ದುಮುಕೆಂದರೆ, ಕಂಬನಿಯ ಬರಿದಾಗಿಸಿದಳವಳು
ಸೆಳೆದುಕೊ ಈಕೆಯ ಎಂದು ಬೀಸೊ ಗಾಳಿಗೆ ಎದೆಯೊಡ್ಡಿ ನಿಂತರೆ
ಒಳ ಸೇರಿ ಮುದುಡಿ ಕುಳಿತಳು ಎದೆಯ ಗೂಡೊಳಗೆ
ಅವಳ ನೆನಪ ನೀರಾಗಿ ಹರಿಸೆಂದು ಮಳೆಯ ಕರೆದರೆ
ನೀನಿಲ್ಲದ ನೆನಪೇಕೆಂದು ಅವಿತುಕೊಂಡಳು ಮನದ ಗುಡಿಸಲೊಳಗೆ
ನನಗರಿವಿದೆ, ಅವಳು ನನ್ನ ಜೀವನದಿ, ಹರಿಸುತ ಪ್ರೀತಿಯ ಒಲುಮೆ
ಅವಳಿರುವು, ಮರಳುಗಾಡಲ್ಲೊಂದು ಸಿಹಿನೀರ ಚಿಲುಮೆ
ನಾ ಕೆತ್ತಿರುವೆ, ಮಿಡಿವ ನನ್ನ ಹ್ರದಯದಿ, ಅವಳ ತುಂಬು ಪ್ರತಿಮೆ
ಅವಳಾಗಿಹಳು, ಆಗಸದಿ ಮಿನುಗುತ ಭೂಮಿಗೆ ತಂಪೆರೆವ ಹುಣ್ಣಿಮೆ
ಕಿವುಡನಿಗೇಕೆ ಕವನದ ಹಂಬಲ, ಕುರುಡನಿಗೇಕೆ ಕನ್ನಡಿಯ ಸಂಭ್ರಮ?
ಹರಿವ ನೀರ ಕಟ್ಟದೆ, ಹಾರೊ ಹಕ್ಕಿಯ ಹಿಡಿಯದಿರುವದೆ ಧರ್ಮ
ಮರೆಸಿ ಕತ್ತಲೆಯ ಬರದೆ ಇನ್ನೊಂದು ಹಗಲು, ತುಂಬಿ ಹಕ್ಕಿಗಳ ಸರಿಗಮ?
ಸುಡುಬಿಸಿಲ ಹಿಂದೆ ತಂಪನೆಯ ಬೆಳದಿಂಗಳು ಬರುವುದು ಪ್ರಕ್ರತಿಯ ನಿಯಮ