ಚಂದ್ರವ್ವಳ "ಶಿವನ ಸಭಾ" ಕನಸು.

ಚಂದ್ರವ್ವಳ "ಶಿವನ ಸಭಾ" ಕನಸು.

ಜೀವನದ ಸಿಂಹಪಾಲು ಸಮಯ ಹುಟ್ಟಿದ ಹಳ್ಳಿಯ ಹೊರಗೇ ಕಳೆದರೂ ಊರಿನ ಅವಿಸ್ಮರಣೀಯ ಅನುಭವಗಳು ನನ್ನನ್ನು ಸೆರೆಹಿಡಿದಿವೆ. ತಿಳುವಳಿಕೆ ಬಂದಾಗಿನಿಂದ ಸಮಾಜವನ್ನು ಅರ್ಥೈಸಿಕೊಳ್ಳಬೇಕೆಂಬ ಹಂಬಲ ಬರೆಯಲು ಪ್ರೇರೇಪಿಸಿದರೂ ಸಮಯದ ಒತ್ತಡಕ್ಕೆ ಸಿಕ್ಕು ಮೈಗಳ್ಳಾನಾಗಿದ್ದ ನನಗೆ ಕಣ್ತೆರೆಸಿದವಳು ಚಂದ್ರವ್ವ ಮುದುಕಿ. ಪ್ರತಿ ಸಲ ಊರಿಗೆ ಹೋದಾಗಲೆಲ್ಲಾ ಊರಿನ ಹಿರಿಯರ ಜೊತೆ ಸ್ವಲ್ಪ ಕಾಲ ಕಳೆಯುವ ಹವ್ಯಾಸ ನನ್ನದು. ಹಾಗೆಯೇ ಎಲ್ಲರಿಗೂ ಹಾಜರಿ ಕೊಟ್ಟು ಬರುವ ನೆಪದಲ್ಲಿ ಚಂದ್ರವ್ವ ಮುದುಕಿಯನ್ನು ಕಾಣಲು ಹೋದೆ.ಹೋದವನೆ "ಆರಾಮಿದ್ದೀ ಆಯಿ?" ಎಂದೆ. ಬೇಸಿಗೆಯಾದರೂ ಮುಂಜಾವಿನ ಎಳೆಬಿಸಿಲಿಗೆ ಮೈಒಡ್ಡಿ ಮನೆಯ ಮುಂದೆ ಕುಳಿತಿದ್ದ ಚಂದ್ರವ್ವ ಕೊರಳಲ್ಲಿ ಸಿಕ್ಕಿಸಿಕೊಂಡಿದ್ದ ಕನ್ನಡಕ ಧರಿಸಿಕೊಂಡಾಗಲೇ ಅವಳಿಗೆ ನನ್ನ ಗುರುತು ಹತ್ತಿದ್ದು ಅಂತ ಕಾಣುತ್ತೆ. " ಅಯ್ಯ ಹಡದಯ್ಯ, ಯಾವಾಗ ಬಂದ್ಯೋ ನನಕೂಸ?" ಎನ್ನುವ ಮಾತಿನಲ್ಲಿದ್ದ ಅಪಾರವಾದ ಪ್ರೀತಿ ನನ್ನ ಹೃದಯವನ್ನು ಅಪೂರ್ವ ಆನಂದಕ್ಕೆ ಗುರಿ ಮಾಡಿತು.

"ನೀ ಒಬ್ಬನೇ ನೋಡಪಾ ನನಗ ಹುಡಕ್ಯಾಡಕೊಂಡ ಬಂದ ಮಾತ್ಯಾಡ್ಸಂವ" ಎನ್ನುತ್ತಾ ಮತ್ತಷ್ಟು ಹತ್ತಿರ ಸರಿದು ನನ್ನ ತಲೆಯ ಮೇಲೆ ಕೈಯಾಡಿಸುತ್ತಾ ಯಾವುದೋ ವಿಚಾರದಲ್ಲಿ ಮಗ್ನಳಾಗಿಬಿಟ್ಟಳು.ಅಷ್ಟರಲ್ಲೇ ಕುಡಿದ ನಶೆ ಇನ್ನೂ ಇಳಿಯದಂತಿದ್ದ ಅವಳ ಮಗ ಯಮನಪ್ಪ ನಮ್ಮ ಹತ್ತಿರ ಬಂದು ನನ್ನನ್ನೂ ಮಾತನಾಡಿಸಿ, "ಏ ಯವ್ವಾ, ದೊಡ್ಡಪ್ಪಗೋಳ ಮನಿಗಿ ಬಂದವರ ಮುಂದ ನನ್ನ ಬಗ್ಗೆ ಏನೂ ಹೇಳಬ್ಯಾಡ ನೋಡು ಎಂದಾಗ ಮುದುಕಿಯ ಕಣ್ತುಂಬಿತು. "ಆಯೀ ಯಾಕ ಅಳತಿ ಸುಮ್ ಇರು" ಎಂದೆ. "ನಿಮ್ಮುತ್ಯಾ ಇದ್ದಾಗ ಶಿವನ ಸಭಾ ಇದ್ದಾಂಗ ಇತ್ತಪಾ ಈ ಮನಿ; ಪ್ರತೀ ವರ್ಷ ಹುಚ್ಚಯ್ಯನ ಜಾತ್ರ್ಯಾಗ ಅಗ್ಗಿ ಹಾಯ್ದು ಬೆಂಕಿ ಹಾಂಗ ಪವಿತ್ರ ಇದ್ದವನ ಹೋಟ್ಯಾಗ ಯಮನಪ್ಪನಂಥ ಬೂದಿ ಹುಟ್ಟಿ ಈ ಮನಿ ಸ್ಮಶಾನಆಗಿಬಿಟ್ಟೈತಿ" ಎಂದಾಗ ಅವಳ ಹೃದಯಾಂತರಾಳದಲ್ಲಿದ್ದ ನೋವು ಅವಳ ಕಣ್ಣೀರಲ್ಲಿ ಪ್ರತಿಬಿಂಬಿಸಿದಂತಾಯಿತು. ಅವಳನ್ನು ಸಮಾಧಾನ ಪಡಿಸುವಷ್ಟು ಅನುಭವವಾಗಲಿ, ಮಾತುಗಳಾಗಲಿ ನನ್ನಲ್ಲಿ ಹುಟ್ಟಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಅವಳೇ ತನ್ನ ಕಥೆ ಹೇಳಲು ಪ್ರಾರಂಭಿಸಿದಳು. "ನಿಮ್ಮುತ್ತ್ಯಾ (ತುಕಾರಾಮ) ಇದ್ದಾಗ, ಈ ಯಮನಪ್ಪ ಅಲ್ಲಿ ಇಲ್ಲಿ ಮನಿ ಕಟ್ಟೂ ಕೆಲಸ ಮಾಡ್ಕೊಂಡು ಸಂಜಿ ಮುಂದ ಮನಿಗಿ ಬಂದು ಕಳ್ಳ ಬೆಕ್ಕಿನಾಂಗ ಇರದಿದ್ದಂವ, ಅಂವ ಕಣ್ಮುಚ್ಕೊಂಡವ್ನೆ ತಡ, ಇಂವ ಕಾಲ ಬಿಟ್ಟ ಕತ್ತಿ ನಮನ ಸಿಂದಿ ಕುಡುಕೊಂಡು ತಿರುಗಾಡ್ಲಿಕ ಸುರು ಮಾಡ್ದ. ಬಂದ ಪಗಾರೆಲ್ಲ ಸಿಂದಿ ಕುಡುದು ಬರ್ಬಾದ ಮಾಡ್ದ ಈ ಭಾಡ್ಯ, ಹೆಂಡಿರ ಮಕ್ಕಳಿಗೆಲ್ಲ ಥ್ವಾಡೆ ಕಷ್ಟ ಕೊಟ್ಟಾನೇನ್?" ಎನ್ನುತ್ತಾ ತನ್ನ ಮೊಮ್ಮಕ್ಕಳ ಬಗ್ಗೆ ದು:ಖಿಸಿದಳು.

ಯಮನಪ್ಪ ಚನ್ನಾಗಿದ್ದವನೇ ಮಹಕುಡುಕನಾಗಿಬಿಟ್ಟ.ದುಡಿದ ಹಣದಲ್ಲಿ ಸ್ವಲ್ಪವೂ ಮನೆಗೆ ಕೊಡುತ್ತಿರಲಿಲ್ಲ. ಅವನ ಹೆಂಡತಿ ಪೀರವ್ವ ಇದ್ದದ್ದರಲ್ಲೇ ಬಹಳ ಜಾಣ್ಮೆಯಿಂದ ಮನೆ ನಡೆಸುತ್ತಿದ್ದಾಳೆ. ಅವರ ದೊಡ್ಡ ಮಗ ಹತ್ತನೇ ಫೇಲಾಗಿ ಕೆಲಸವೂ ಮಾಡದೆ ತಂದೆ ತಾಯಿಗಳಿಗೆ ಭಾರವಾಗಿ ತಿರುಗಾಡುತ್ತಿದ್ದಾನೆ. ಹಿರಿಯ ಮಗಳು ಮೈನೆರೆದು ಮೂರು ತಿಂಗಳಾಗಿತ್ತು. ಅವಳು ಶಾಲೆ ಬಿಟ್ಟು ವರ್ಷಗಳೆ ಕಳೆದಿವೆ. ಎರಡನೇ ಮಗ ಮನೆಯಲ್ಲಿದ್ದ ಕುರಿ ಧನ ಕಾಯುತ್ತ ಕಾಲ ಕಳೆಯುತ್ತಿದ್ದ. ಇನ್ನಿಬ್ಬರು ಮಕ್ಕಳು ನಾಲ್ಕೈದು ವರ್ಷದವರಿರಬೇಕಷ್ಟೆ. ಹಿರಿಯರು ಧಾರೆಯೆರೆದ ಅಲ್ಪ ಸ್ವಲ್ಪ ಹೊಲ ಪೀರವ್ವನ ದು:ಖವನ್ನು ಸ್ವಲ್ಪ ಕುಗ್ಗಿಸಿತ್ತು. ಅದರ ಬಗ್ಗೆ "ಇದ್ದ ಹೊಲದಾಗ ಮೈ ಮುರಿದು ದುಡಿಲಿಲ್ಲಂದ್ರ ಹೊಟ್ಟಿ ರೊಟ್ಟೀಗಿ ಹುಚ್ಚಯ್ಯ ಜೋಳ ಕೊಡ್ತಾನೇನ?" ಎಂದಿದ್ದಳು ಚಂದ್ರವ್ವ. ಯಮನಪ್ಪನಂಥಾ ಮಹಾ ಕುಡುಕನನ್ನು ಕೈಹಿಡಿದ ಪೀರವ್ವ ಅಲ್ಲಿ ಇಲ್ಲಿ ಕೆಲಸ ಮಾಡಿ ಕೂಡಿಟ್ಟ ಹಣದಿಂದ ಮನೆ ನಡೆಸುತ್ತಿದ್ದಳು. ಮನೆಯಲ್ಲಿದ್ದ ಹಣ ಬಂಗಾರ ಎಲ್ಲಾ ಸೆರೆ ಅಂಗಡಿಗೆ ಹೋಗಿತ್ತು. ಮನೆಗೆ ಯಾರಾದರು ಬೀಗರು ಬಂದರೆ ಪೀರವ್ವನನ ಕಥೆ ಹೇಳತೀರದು. ಪರಿಸ್ಥಿತಿ ಹೀಗಿದ್ದರೂ ಬಂದ ಗಳಿಕೆಯಲ್ಲಿ ಯಮನಪ್ಪ ಐಶಾರಾಮಿ ಜೀವನ ನಡೆಸುತ್ತಿದ್ದ.ರಾತ್ರಿ ಮನೆಗೆ ಬಂದಾಗ ತನಗೆ ಗೊತ್ತಿದ್ದ ಎಲ್ಲ ತರಹದ ಬೈಗುಳಗಳನ್ನು ಹೆಂಡತಿ ಮಕ್ಕಳ ಕಿವಿಯಲ್ಲಿ ತಾಂಡವ ನೃತ್ಯವಾಡುವಂತೆ ಮಾಡಿಬಿಡುತ್ತಿದ್ದ. ಇಷ್ಟೆಲ್ಲ ಸಹಿಸುತ್ತಿದ್ದ ಪೀರವ್ವ, "ಜಗದಾಗ ದಿನಕ್ಕ ಎಷ್ಟೋ ಮಂದಿ ಸಾಯಿತಾರ , ಈ ಮನ್ಯಾಗ ನಿನ್ನಂಥ ಕುಡುಕ ಇರೋದಕ್ಕಿಂತ ಕಣ್ಮುಚ್ಕೊಂಡ ಹಾಳಾಗಿ ಹೋಗಬಾರದಾ?" ಎಂದದ್ದೂ ಉಂಟು.

ಇಂಥದರಲ್ಲಿಯೂ ಯಮನಪ್ಪ ಮನೆ ಕಟ್ಟೋ ಕೆಲಸದಲ್ಲಿ ಮಹಾಪ್ರವೀಣ. ಮನೆಯ ನಕ್ಷೆ ನೋಡಿ, ಮನೆ ಕಟ್ಟಲು ಇಷ್ಟೇ ಇಟ್ಟಿಗೆ, ಇಷ್ಟೇ ಸಿಮೆಂಟು ಬೇಕಾಗುತ್ತದೆಂದು ಬಾಯ್ಲೆಕ್ಕದಲ್ಲೇ ಹೇಳುವಷ್ಟು ಜಾಣ. ಅದಕ್ಕೆ ಅಂತ ಕಾಣುತ್ತೆ ಅವನ ಕೈತುಂಬ ಕೆಲಸ ಇರೋದು. "ಆಯೀ, ಯಮನಪ್ಪ ಕಾಕಾ, ಮನಿ ಕಟ್ಟದರಾಗ ಭಾಳ್ ಶ್ಯಾಣೆ ಹನ ಅಂತ ಅಲ್ಲಾ" ಎಂದೆ, ಅದಕ್ಕೆ ಚಂದ್ರವ್ವ "ಎಷ್ಟೇ ಶಾಣೆ ಇದ್ದರ ಎದಕ್ಕ ಬಂತೊ ತಮ್ಮಾ, ಮನಶ್ಯತ್ವ, ಕರಳು, ಅಂತ:ಕರಣ ಅನ್ನೋದ ಇರಬೇಕೋ ಭ್ಯಾಡೊ?" ಎಂದಿದ್ದಳು.

ಅವಳಾಡುವ ಮಾತುಗಳನ್ನು ತುಟಿ ಪಿಟಕ್ಕನ್ನದೇ ಕೇಳುತ್ತಿದ್ದೆ.ಹಾಗೆ ಮಾತು ಮುಂದುವರಿಸುತ್ತಾ, "ಈ ದರಿದ್ರ ಭಾಡ್ಯ ಯಾಕ ಇಷ್ಟ ಕುಡಿಲಾಕ ಹತ್ಯಾನ ಅಂತ ಹುಚ್ಚಯ್ಯನ ಜಾತ್ರ್ಯಾಗ ಬಂದಿದ್ದ ಒಬ್ಬ ಸಾಧುನ ಹತ್ತಿರ ದೇವರ ಕೇಳಿದ್ದೆ. ಅದಕ್ಕಂವ ಹೇಳಿದ್ದ, ಇವನಿಗೊಂದು ಶನಿ ಗಂಟ ಬಿದ್ದಾದ. ಅದೇ ಶನಿ ದಿನಾ ಸಂಜಿ ಮುಂದ ಸೆರಿ ಅಂಗಡಿಗಿ ಕರಕೊಂಡ ಹೋತದ ಅಂತ ಹೇಳಿದ್ದ. ಮುಂದಿನ ಜಾತ್ರ್ಯಾಗ ಜೋಡ ಕುರಿ ಕೊಯ್ದರ ಇವನ ಶನಿ ದೂರ ಹೋಗ್ತದ ಅಂದಿದ್ದ. ಅದಕೇ ಮುಂದಿನ ಜಾತ್ರಿ ತನ ಜೀವ ಇದ್ದರ ಜೋಡ ಕುರಿ ಕೊಯ್ದು ಇವನ ಶನಿ ದೂರ ಮಾಡ್ಬೇಕಂತ ಹರಕಿ ಹೊತ್ತೀನಪಾ" ಎಂದು ಚಂದ್ರವ್ವ ಹೇಳುವಾಗ ನನಗನಿಸಿತು, ಈ ಮೂಢನಂಬಿಕೆಗಳು ಮಾರಕವಾಗಿದ್ದರೂ, ಜನರ ದು:ಖವನ್ನು ಸ್ವಲ್ಪವಾದರೊ ದೂರಮಾಡಲು ಸಹಾಯಕವಾಗಿವೆಯಲ್ಲ!!!

ಯಮನಪ್ಪ ಯಾವತ್ತೋ ಒಂದು ದಿನ ಚಂದ್ರವ್ವನ ಹತ್ತಿರ ಮನಸು ಬಿಚ್ಚಿ ಮಾತಾಡಿದ್ದನಂತೆ. "ಯವ್ವಾ ನಾ ಯೇನ್ ಮಾಡ್ಲೆ? ಸಂಜಿ ಆಯ್ತಂದ್ರ ಸಾಕು, ಏನೋ ಒಂದ ಶಕ್ತಿ ನನಗ ಸೆರಿ ಅಂಗಡಿಗಿ ಕರಕೊಂಡ ಹೋಗ್ತದ. ಎಷ್ಟೇ ಪ್ರಯತ್ನ ಮಾಡಿದರೂ ತಡಕೊಳ್ಳಕ ಆಗಂಗಿಲ್ಲ" ಎಂದಿದ್ದನಂತೆ. ಆ ಮಾತು ಕೇಳಿ, ಆ ಸೆರೆಯಲ್ಲಿ ಅಂಥಾ ಶಕ್ತಿ ಇದೆಯೇ ? ಅವ್ವ ಮಾಡಿ ಹಾಕೋ ಅಡುಗೆಗಿಂತ ಅದರಲ್ಲಿ ಅಂಥಾ ರುಚಿ ಇದೆಯೇ? ಒಂದು ಸಲ ಸೆರೆ ಕುಡಿದು ರುಚಿ ನೋಡಿ, ಯಮನಪ್ಪನ ಪರಿಸ್ಥಿತಿ ಅನುಭವಿಸಿ ನೋಡಬೇಕು ಅನಿಸಿತು!

ಅಷ್ಟರಲ್ಲೇ ಪೀರವ್ವ ಚಹಾ ತಂದು ಕೊಟ್ಟಳು. ಚಹಾ ಕುಡಿದು ಚಂದ್ರವ್ವ ಪ್ರಸನ್ನಳಾಗಿ, ತನ್ನ ಎರಡೂ ಕೈಗಳಿಂದ ನನ್ನ ಮುಖ ಹಿಡಿದು ಅವಳ ಹತ್ತಿರ ಎಳೆದುಕೊಂಡು "ನೋಡಪಾ, ಶಿವನ ಸಭಾ ಇದ್ದಾಂಗ ಇದ್ದ ಮನಿ ಮತ್ತ ನೋಡ್ತಿನೋ ಇಲ್ಲೊ, ನೀ ಅರೆ ಭಾಳ ಛಂದ ವಿದ್ಯಾ ಕಲಿಬೇಕು. ದೊಡ್ಡ ಸಾಹೇಬನಾಗ್ಬೇಕು. ನಾ ಸತ್ತೆ ಅಂದರ ನೀ ಕಾರನ್ಯಾಗ ಬಂದು ನನಗ ಹೂವಿನ ಹಾರ ಹಾಕಬೇಕು. ನೀ ಎಂದೂ ಕುಡೆಂಗಿಲ್ಲ ಅಂತ ನನಗ ಆಣಿ ಮಾಡು" ಎಂದಾಗ ಎಲ್ಲೋ ಹುದುಗಿಕೊಂಡಿದ್ದ ದು:ಖದ ಅಲೆಗಳು ಹೃದಯಕ್ಕೆ ಅಪ್ಪಳಿಸಿ ಅನುಭವಿಸಲಾರದ ನೋವುಗಳಿಂದ ಮನಸ್ಸನ್ನು ಛಿದ್ರಮಾಡಿದಾಗ "ಆಯೀssss..." ಎನ್ನುತ್ತಾ ಅವಳಾ ಕಣ್ಣೀರಲ್ಲಿ ನಾನು ಭಾಗಿಯಾಗಿಬಿಟ್ಟೆ.

Rating
No votes yet