ಸ್ವತಂತ್ರ ಭಾರತದೊಲ್ಲೊಂದು ಆತಂಕಕಾರಿ ಕ್ಷಣ

ಸ್ವತಂತ್ರ ಭಾರತದೊಲ್ಲೊಂದು ಆತಂಕಕಾರಿ ಕ್ಷಣ

ಬರಹ

ಸತ್ಯ ಅಹಿಂಸೆಯ ಹಾದಿಯಲ್ಲಿ ಹೋರಾಡಿ ಪರಕೀಯ ಅಳ್ವಿಕೆಯಿಂದ ಬಿಡುಗಡೆ ಹೊಂದಿ ವಿಷ್ವ ಸಮುದಾಯದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಸ್ಥಾನಮಾನ ಪಡೆದಿದೆ. ಸ್ವತಂತ್ರ ಬಂದ ಹೊಸತರಲ್ಲೇ ನಡೆದ ಈ ಘಟನೆ ನಂಬಲಸಾಧ್ಯವಾದರೂ ಸತ್ಯ.

ಸೆಪ್ಟೆಂಬರ್ ೬,೧೯೪೭ ರಂದು ನವದೆಹಲಿಯಲ್ಲಿ ನಡೆದ ಈ ಗುಪ್ತ ಸಭೆ ಮುಂದಿನ ಕಾಲು ಶತಮಾನದ ಕಾಲ ಗುಟ್ಟಾಗಿರದಿದ್ದರೆ ಮುಂದೆ ಜಗತ್ತಿನ ಪ್ರಮುಖ ರಾಜಕೀಯ ಮುತ್ಸದ್ದಿಯಾಗಿ ಮೆರೆದ ಪಂಡಿತ್ ಜವಹರಲಾಲ್ ನೆಹರುರವರ ಭವಿಷ್ಯ ಏನಾಗಿರುತ್ತಿತ್ತೆಂದು ಹೇಳಲು ಕಷ್ಟಕರ.ಕೊಠಡಿಯಲ್ಲಿದ್ದವರು ಮೂರು ಮಂದಿ.ಹಿಂದಿನ ದಿನವಷ್ಟೇ ಸಿಮ್ಲಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ತುರ್ತು ಕರೆಯ ಮೇರೆಗೆ ದೆಹಲಿಗೆ ಹಿಂತಿರುಗಿದ ಲೂಯಿಸ್ ಮೌಂಟ್ ಬ್ಯಾಟನ್, ಪ್ರಧಾನಿ ಜವಹರಲಾಲ್ ನೆಹರು ಮತ್ತು ಉಪ ಪ್ರಧಾನಿ ವಲ್ಲಭಾಯಿ ಪಟೇಲ್. ಭಾರತೀಯ ನಾಯಕರ ಮುಖದಲ್ಲಿ ಹತಾಶ ಭಾವನೆ ಎದ್ದು ಕಾಣುತ್ತಿತ್ತು. ದೇಶದ ವಿಭಜನೆಯಿಂದುಂಟಾದ ಹಿಂಸೆ ಭುಗಿಲೆದ್ದು ಪಂಜಾಬಿನಲ್ಲಿ ತನ್ನ ಭೀಕರ ಪರಿಣಾಮ ಭೀರಿ ಇದೀಗ ದೆಹಲಿಯತ್ತ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿತ್ತು. ಪರಿಸ್ಥಿತಿಯನ್ನು ಕೂಡಲೆ ನಿಯಂತ್ರಿಸದೆ ಹೋದಲ್ಲಿ ದೇಶ ಹಿಂಸೆಯ ದಳ್ಳುರಿಯಲ್ಲಿ ಉರಿದು ನಾಶವಾಗುವುದು ನಿಶ್ಚಿತವಾಗಿತ್ತು.

ನೆಹರು ಮೌಂಟ್ ಬ್ಯಾಟನ್ನರಿಗೆ ಪರಿಸ್ಥಿತಿಯನ್ನು ವಿವರಿಸುತ್ತಾ ತಮ್ಮಿಂದ ಇದರ ಹತೋಟಿ ಅಸಾಧ್ಯವೆಂದೂ ಕಾನೂನು ಮತ್ತು ವ್ಯವಸ್ಥೆಯನ್ನು ಸರಿಪಡಿಸಲು ನೀವೇ ಸಮರ್ಥರು, ದಯಮಾಡಿ ಸರ್ಕಾರವನ್ನು ನಡೆಸುವ ಜವಾಬ್ಧಾರಿಯನ್ನು ನೀವೇ ವಹಿಸಿಕೊಳ್ಳಿ ಎಂದು ಕೋರಿದರು. ಮೌಂಟ್ ಬ್ಯಾಟನ್ ಈ ಕೋರಿಕೆಯಿಂದ ದಿಗ್ಭ್ರಮೆಗೊಂಡು ಈಗಷ್ಟೇ ಗಳಿಸಿದ ಅಧಿಕಾರವನ್ನು ಇಷ್ಟು ಸುಲಭವಾಗಿ ಹಿಂತಿರಿಗಿಸುವುದು ಹಾಸ್ಯಾಸ್ಪದವಾದುದೆಂದೂ ಈ ವಿಷಯ ಬಹಿರಂಗವಾದರೆ ನಿಮ್ಮ ರಾಜಕೀಯ ಜೀವನಕ್ಕೇ ಅಪಾಯವೆಂದೂ ಹೇಳುತ್ತಾ ಅವರ ಕೋರಿಕೆಯನ್ನು ತಿರಸ್ಕರಿಸಿದರು.

ದೇಶದ ಹಿತದ ಮುಂದೆ ತಮ್ಮ ರಾಜಕೀಯ ಭವಿಷ್ಯ ಅಥವಾ ಪ್ರತಿಷ್ಠೆ ನೆಹರೂರವರಿಗೆ ಹೆಚ್ಚೆನಿಸಲಿಲ್ಲ. ತಮ್ಮ ಅಮೂಲ್ಯವಾದ ವರ್ಷಗಳು ಬ್ರಿಟೀಷ್ ಸೆರೆಮನೆಯಲ್ಲಿ ಕಳೆದುದರಿಂದ ತಮಗೆ ಇಂತಹ ಪರಿಸ್ಥಿತಿಯಲ್ಲಿ ಅಧಿಕಾರ ನಡೆಸುವ ಅನುಭವವಿಲ್ಲ. ಭಾರತವನ್ನು ವಿಭಜಿಸಿ ಅದು ಹೊತ್ತಿ ಉರಿಯುವಾಗ ತಾವು ನಿರ್ಲಿಪ್ತವಾಗಿರಲಾಗದು.ತಮ್ಮ ಎರಡನೆಯ ಮಹಾಯುದ್ಧದ ಅದ್ಭುತ ಮತ್ತು ಯಶಸ್ವೀ ಕಾರ್ಯಾಚರಣೆಯ ಅನುಭವದ ಅಗತ್ಯ ಸಧ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವೆಂದು ನೆಹರು ವಾದಿಸಿದರು. ಪಟೇಲರೂ ಅದಕ್ಕೆ ದನಿಗೂಡಿಸುತ್ತಾ ತಕ್ಷಣವೇ ಸರ್ಕಾರ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದರು.

ಮೌಂಟ್ ಬ್ಯಾಟನ್ ಒಂದು ಕ್ಷಣ ಯೋಚಿಸಿದರು. ಸವಾಲುಗಳನ್ನು ಇಷ್ಟಪಡುವ ಅವರ ಸ್ವಭಾವಕ್ಕೆ ಇದೊಂದು ದುರ್ಗಮವಾದ ಸವಾಲಿನಂತೆ ಕಂಡಿತು. ನೆಹರೂರವರೆಡೆಗಿನ ಅವರ ವೈಯಕ್ತಿಕ ಅಭಿಮಾನ, ಭಾರತದ ಬಗೆಗಿನ ಅವರ ಪ್ರೀತಿ ಮತ್ತು ತಮ್ಮ ಜವಾಬ್ದಾರಿ ಪ್ರಜ್ಞೆಗಳಿಂದಾಗಿ ಅವರಿಗೆ ತಪ್ಪಿಸಿಕೊಳ್ಳುವ ಹಾದಿಯೇ ಇರಲಿಲ್ಲ.

"ಸರಿ, ನಾನು ಇದನ್ನು ಮಾಡುತ್ತೇನೆ. ಇದನ್ನು ಹೇಗೆ ನಿಭಾಯಿಸಬೇಕೆಂಬುದು ನನಗೆ ಗೊತ್ತು. ಆದರೆ ಈ ಏರ್ಪಾಟು ಗುಟ್ಟಾಗಿರಬೇಕು." ಎಂದು ತಮ್ಮ ಯೋಜನೆಯನ್ನು ಚಕಚಕನೆ ಹೇಳುತ್ತಾ
ಹೇಳುತ್ತಾ ಹೋದರು."ನೀವಿಬ್ಬರೂ ನನ್ನನ್ನು ಸಂಪುಟ ಸಭೆಯ ತುರ್ತು ಸಮಿತಿಯನ್ನು ರಚಿಸಲು ಕೋರಿ ಅದರ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಆಹ್ವಾನಿಸಬೇಕು.ಸದಸ್ಯರನ್ನು ನಾನು ಮಾತ್ರ ನೇಮಕ ಮಾಡುತ್ತೇನೆ.ನಾಗರಿಕ ವಿಮಾನಯಾನದ ನಿರ್ದೇಶಕ,ರೈಲ್ವೆಯ ನಿರ್ದೇಶಕ,ಭಾರತ ಆರೋಗ್ಯ ಸೇವೆಯ ಮುಖ್ಯಸ್ಥರು ಸಮಿತಿಯಲ್ಲಿರಬೇಕು.ಸ್ವಯಂಸೇವಾ ಮತ್ತು ರೆಡ್ ಕ್ರಾಸ್ ಸಂಸ್ಥೆಗಳ ಮುಖಂಡತ್ವವನ್ನು ನನ್ನ ಮಡದಿ ವಹಿಸಬೇಕು.ಸಮಿತಿಯ ಕಾರ್ಯದರ್ಶಿಯಾಗಿ ಜನರಲ್ ಎರ್ಸ್ಕಿನ್ ಕ್ರಂ ಇರಲಿ.ಸಭೆಯ ನಡೆವಳಿಕೆಗಳನ್ನು ಕ್ಷಿಪ್ರವಾಗಿ ಟೈಪ್ ಮಾಡಲು ಬ್ರಿಟಿಷ್ ಟೈಪಿಸ್ಟ್ ಗಳಿರುತ್ತಾರೆ. ಈ ಸಭೆಗಳಲ್ಲಿ ಪ್ರಧಾನಿ ನನ್ನ ಬಲಕ್ಕೆ ಹಾಗೂ ಉಪ ಪ್ರಧಾನಿ ನನ್ನ ಎಡಕ್ಕೆ ಕುಳಿತು ನಾನು'ಹೀಗೆ ಮಾಡಬೇಕಲ್ಲವೇ?' ಎಂದಾಗ ನೀವು 'ಸರಿ ಹಾಗೇ ಮಾಡಿ' ಎನ್ನಬೇಕು. ಅನಗತ್ಯ ಮಾತುಗಳಿಗೆ ಈಗ ಸಮಯವಿಲ್ಲ." ಮೌಂಟ್ ಬ್ಯಾಟನ್ ರ ಮನಸ್ಸಿನ ಚುರುಕು ಗತಿಯನ್ನು ನೋಡಿ ದಂಗಾದ ಇಬ್ಬರೂ "ಸರಿ ಹಾಗೇ ಮಾಡೋಣ "ಎಂದರು.ಮತ್ತೆ ಹದಿನೈದು ನಿಮಿಷ ಚರ್ಚೆಯ ನಂತರ ಸಂಜೆ ಐದು ಘಂಟೆಗೆ ಮೊದಲ ಸಭೆ ಶುರುವಾಗಬೇಕೆಂದು ಮೌಂಟ್ ಬ್ಯಾಟನ್ ಹೇಳುವುದರೊಂದಿಗೆ ಸಭೆ ಮುಕ್ತಾಯಗೊಂಡಿತು.

ದಶಕಗಳ ಹೋರಾಟ,ಮುಷ್ಕರ,ಚಳುವಳಿ,ವಿದೇಶಿ ಬಟ್ಟೆ ಸುಡುವುದು,ಎಲ್ಲಕ್ಕೂ ಮಿಗಿಲಾಗಿ ಸ್ವತಂತ್ರ ಬಂದ ಕೇವಲ ಮೂರು ವಾರದ ನಂತರ ಕಟ್ಟಕಡೆಗೊಮ್ಮೆ ಭಾರತ ಒಬ್ಬ ಆಂಗ್ಲನೊಬ್ಬನಿಂದ ಆಳಲ್ಪಟ್ಟಿತು.

ಅದೇ ದಿನ ಕಲ್ಕತ್ತೆಯಲ್ಲೊಂದು ಸಾರ್ವಜನಿಕ ಸಮಾರಂಭದಲ್ಲಿ ಗಾಂಧೀಜಿಯವರಿಗೆ ನಗರದಲ್ಲಿ ನಡೆಯುತ್ತಿದ್ದ ಭೀಕರ ಕೋಮು ಗಲಭೆಯನ್ನು ಪವಾಡ ಸದೃಶವಾಗಿ ನಿಲ್ಲಿಸಿದ್ದಕ್ಕಾಗಿ
ಕಲ್ಕತ್ತೆಯ ಜನತೆ ಕೃತಜ್ಞತೆ ಸಲ್ಲಿಸುತ್ತಾ ಕೋಮು ಸೌಹಾರ್ದ ಕಾಪಾಡಿಕೊಂಡು ಬರುವುದಾಗಿ ವಚನವಿತ್ತರು.ಮಾರನೇ ದಿನವೇ ಮೌಂಟ್ ಬ್ಯಾಟನ್ ರ ಈ "One man boundary force" (ಏಕ ವ್ಯಕ್ತಿ ಗಡಿ ಪಡೆ) ದೆಹಲಿಯತ್ತ ಹೊರಟಿತು.ಹುಚ್ಚು ಆವೇಗದಲ್ಲಿ ವರ್ತಿಸುತ್ತಿದ್ದ ಜನರನ್ನು ಹತೋಟಿಗೆ ತರಲು ಈ ಮಹಾನ್ ವ್ಯಕ್ತಿಗಳ ನಿಸ್ವಾರ್ಥ ಹಾಗೂ ತ್ಯಾಗಮಯ ಜೀವನ ನಮಗೆಂದೆಂದೂ ಆದರ್ಶವಾಗಿರಲಿ.