ಮುಂಗಾರುಮಳೆ ಮತ್ತು ದ್ವೀಪ

ಮುಂಗಾರುಮಳೆ ಮತ್ತು ದ್ವೀಪ

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (ಕನ್ನಡ ಬ್ಲಾಗುಲೋಕ) ಕೊಟ್ಟುಕೊಂಡು ಸುಸ್ತಾಗಿ ಏನನ್ನೂ ಬರೆದಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ತುಂಬ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ. ಅನಿವಾಸಿಯವರು 'ಮುಂಗಾರು ಮಳೆ' ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಯನ್ನು ಸಂಪದದಲ್ಲಿ ಬರೆದಾಗ ಅದಕ್ಕೆ ಬಂದ ಖಾರವಾದ ಪ್ರತಿಕ್ರಿಯೆಗಳನ್ನು ಓದಿದ ಮೇಲಂತೂ ತುಡಿತ ಇನ್ನೂ ಜಾಸ್ತಿಯಾಯಿತು.

ನಾನು ನನ್ನ ವಿಚಾರವನ್ನು ಸರಳೀಕರಿಸಲು ಚಿತ್ರ ನೋಡುಗರನ್ನು ಎರೆಡು ವಿಭಾಗ ಮಾಡುತ್ತೇನೆ (ಇದು ತುಂಬ ಸರಳೀಕರಣ ಎಂದು ನನಗೆ ಗೊತ್ತು), ಒಂದು 'ಮುಂಗಾರುಮಳೆ'ಯಂಥ ಚಿತ್ರಗಳನ್ನು ಹೆಚ್ಚಾಗಿ ಇಷ್ಟಪಡುವವರು, ಇನ್ನೊಂದು 'ದ್ವೀಪ'ದಂಥ ಚಿತ್ರಗಳನ್ನು ಹೆಚ್ಚಾಗಿ ಇಷ್ಟಪಡುವವರು.

ಈಗ ಮೊದಲನೇ ಕೆಟಗರಿಯ ಜನರನ್ನು ನೋಡೋಣ: ಮುಂಗಾರುಮಳೆ'ಯಂಥ ಚಿತ್ರಗಳನ್ನು ಇಷ್ಟಪಡುವ ಜನ, 'ದ್ವೀಪ'ದಂಥ ಚಿತ್ರಗಳ ಹೆಸರು ಕೇಳುತ್ತಿದ್ದಂತೇ ಮೂಗುಮುರಿಯಲು ಆರಂಭಿಸುತ್ತಾರೆ, 'ದ್ವೀಪ'ದಂಥ ಚಿತ್ರಗಳನ್ನು ನೋಡಿ ಖುಷಿಪಡುವ ಜನರನ್ನು ಕಂಡರೆ ಅವರು ಬೇರೆ ಗ್ರಹದಿಂದ ಬಂದವರೇನೋ ಎಂಬಂತೆ ವಿಚಿತ್ರವಾಗಿ ನೋಡುತ್ತಾರೆ. ಅವರ ಪ್ರಕಾರ 'ದ್ವೀಪ'ದಂಥ ಚಿತ್ರಗಳನ್ನು ನೋಡುವುದು waste of time and money, ಸಕತ್ ಬೋರು, ಹಳ್ಲಿಯಿಶ್. ಅಂಥ ಚಿತ್ರಗಳ ಬಗ್ಗೆ ಅವರ standard ಮಾತು, 'ಅಯ್ಯೋ ಬೀಡಿ, ಅಂಥ ಚಿತ್ರಗಳಲ್ಲಿ ಏನಿರುತ್ತೆ, ಒಬ್ಬ ಮನುಷ್ಯ ಆ ಕಡೆಯಿಂದ ಈ ಕಡೆವರೆಗೆ ಬರುವುದನ್ನು ಹತ್ತು ನಿಮಿಷ ತೋರಿಸುತ್ತಾರೆ, ಒಂದು ಮೂಲೆಯಲ್ಲಿ ಒಬ್ಬನನ್ನು ಗಂಟೆಗಟ್ಟಲೇ ಕೂರಿಸಿ ಆರ್ಟ್ ಸಿನಿಮಾ ಅನ್ನುತ್ತಾರೆ'. ಅಥವಾ, 'either premarital or extramarital sex ಬಿಟ್ಟರೆ ಇಂಥ ಚಿತ್ರಗಳಲ್ಲಿ ಏನಿರುತ್ತೆ, ಯಾವಾಗ ನೋಡಿದರೂ ಹಳ್ಳಿ ಕತೆ, ಹಾಡು ಇರುವುದಿಲ್ಲ, ಒಳ್ಳೆ ಡ್ರೆಸ್ ಇರುವುದಿಲ್ಲ, ಸಕತ್ ಬೋರ್’ ಎಂದು ಹೆಂಗಸರ ಅಂಬೋಣ.
ಈಗ ಎರಡನೇ ಕೆಟಗರಿಯ ಜನರನ್ನು ನೋಡೋಣ: "ದ್ವೀಪ"ದಂಥ ಚಿತ್ರಗಳನ್ನು ಇಷ್ಟಪಡುವ ಜನರು, "ಮುಂಗಾರುಮಳೆ"ಯಂಥ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದಂತೆ, ಇಂಥ ಚಿತ್ರಗಳು ಬಾಲಿಷ, childish, ಕ್ಲೀಷೆಗಳ ಆಗರ, stereotyped characters, ಬದುಕಿನ ಸೂಕ್ಷ್ಮತೆಗಳು ಒಂಚೂರೂ ಗೊತ್ತಿರದ ಎಲ್ಲವನ್ನೂ black and white ಮಾಡುವ, ಹೆಂಗಸರನ್ನು ಸೆಕ್ಸ್ ಗೊಂಬೆಗಳ ಹಾಗೆ ತೋರಿಸುವ "ಕೀಳು" ಮನರಂಜನೆ ಎಂದು ಹೇಳುತ್ತಾರೆ. ಅಂಥ ಚಿತ್ರಗಳನ್ನು ನೋಡುವವರು ಬುದ್ಧಿಯಿಲ್ಲದವರು ಎಂಬಂತೆ, ತಮಗೊಬ್ಬರಿಗೇ ಬುದ್ಧಿಯಿದೆ ಎನ್ನುವಂತೆ ಮಾತಾಡುತ್ತಾರೆ.
'ಮುಂಗಾರುಮಳೆ'ಯಂಥ ಚಿತ್ರಗಳನ್ನು ಇಷ್ಟಪಡುವ ಜನರಿಗೆ 'ದ್ವೀಪ'ದಂಥ ಚಿತ್ರಗಳ ಬಗ್ಗೆ ಗಂಟೆಗಟ್ಟಲೇ ಕೊರೆದರೂ, ಅವರು ಅರ್ಥೈಸಿಕೊಳ್ಳುವುದು ಏನೆಂದರೆ, ಅಂಥ ಚಿತ್ರಗಳನ್ನು ತೆಗೆಯುವುದು ನೋಡುವುದು ಮತ್ತು ಚರ್ಚಿಸುವುದು ದಂಡಪಿಂಡ. ಈಗೀಗ ಈ 'multiplex ಚಿತ್ರ'ಗಳನ್ನು (ಉದಾ: ಹಿಂದಿಯ life in Metro, page 3, Mr and Mrs Iyer) ನೋಡಿ ಕೊನೆಗೆ ತೀರ್‍ಪು ಕೊಡುತ್ತಾರೆ, 'Multiplex movies are far better than the movies like ದ್ವೀಪ'.
'ದ್ವೀಪ'ದಂಥ ಚಿತ್ರಗಳನ್ನು ಇಷ್ಟಪಡುವ ಜನರಿಗೆ, "ಮುಂಗಾರುಮಳೆ"ಯಂಥ ಚಿತ್ರಗಳ ಉದ್ದೇಶ ಬರೀ ಮನರಂಜನೆ, ದಿನದ ಕಷ್ಟಗಳನ್ನೆಲ್ಲ ಬದಿಗಿಟ್ಟು ಎರೆಡೂವರೆ ಗಂಟೆ ಬೇರೆ ಪ್ರಪಂಚದಲ್ಲಿ ನಕ್ಕು-ಅತ್ತು ಖುಷಿಪಡಿಸುವುದು ಮಾತ್ರ ಎಂದು ಹೇಳಿದರೂ, ಅವರ ತಕರಾರು, ಅದು ಕೀಳು ಮನರಂಜನೆ, mediocre, ಸ್ವಂತಿಕೆಯಿಲ್ಲದೆ ಅಂಧಾನುಕರಣೆ.
'ಮುಂಗಾರುಮಳೆ'ಯಂಥ ಚಿತ್ರಗಳನ್ನು ಮೆಚ್ಚುವವರು, "ದ್ವೀಪ"ದಂಥ ಚಿತ್ರಗಳನ್ನು ಮಾಡುವುದು ತುಂಬ ಸುಲಭ ಎಂದುಕೊಳ್ಳುತ್ತಾರೆ, ಅದಕ್ಕವರು ಕೊಡುವ ಕಾರಣ: ಸ್ಟಾರ್ ಗಳಿಗೆ ದುಡ್ಡುಕೊಡಬೇಕಾಗಿಲ್ಲ, ಸೆಟ್ ಗಳಿಗೆ ಖರ್ಚಿಲ್ಲ, ವಿದೇಶಕ್ಕೆ ಹೋಗಬೇಕಾಗಿಲ್ಲ, ಸಂಗೀತವಿಲ್ಲ. "ದ್ವೀಪ"ದಂಥ ಚಿತ್ರಗಳನ್ನು ಮೆಚ್ಚುವವರೂ ಹಾಗೇ ಹೇಳುತ್ತಾರೆ, ಅದಕ್ಕವರು ಕೊಡುವ ಕಾರಣ: ಒಂದಿಷ್ಟು ದುಡ್ಡು ಇದ್ದರಾಯಿತು, ಕತೆ ಬೇಕಾಗಿಲ್ಲ, ಸಂವೇದನಶೀಲತೆ ಬೇಕಿಲ್ಲ, ಒಂದಿಷ್ಟು ಹಾಡು, ಒಂದಿಷ್ಟು skinshow, ಒಂದಿಷ್ಟು ಸೆಂಟಿಮೆಂಟು ಇದ್ದರಾಯಿತು.
ಆದರೆ ಖರೆ ಹೇಳಬೇಕೆಂದರೆ 'ಮುಂಗಾರುಮಳೆ'ಯಂಥ ಚಿತ್ರಗಳನ್ನು ತೆಗೆಯುವವರಿಗೆ 'ದ್ವೀಪ'ದಂಥ ಚಿತ್ರಗಳನ್ನು ತೆಗೆಯಲು ಬರುವುದಿಲ್ಲ. "ರಂಗೀಲಾ"ದಂಥ ಚಿತ್ರದಿಂದ ಪಡ್ಡೆಹುಡುಗರನ್ನೆಲ್ಲ ಹೌಹಾರಿಸಿದ ರಾಮಗೋಪಾಲವರ್ಮಾನ 'ನಿಶಬ್ದ್' ನೋಡಿ, ನಾನು ಹೇಳುವುದೇನು ಅಂತ ಗೊತ್ತಾಗುತ್ತೆ. ಹಾಗೆಯೇ, "ದ್ವೀಪ"ದಂಥ ಚಿತ್ರಗಳನ್ನು ತೆಗೆಯುವವರಿಗೆ "ಮುಂಗಾರುಮಳೆ"ಯಂಥ ಚಿತ್ರಗಳನ್ನು ತೆಗೆಯಲು ಬರುವುದಿಲ್ಲ ಎಂಬುದೂ ಅಷ್ಟೇ ಖರೆ. 'ಅರ್ಧ್ ಸತ್ಯ್'ನಂಥ ಸಿನಿಮಾ ಮಾಡಿದ ಗೋವಿಂದ ನಿಹಲಾನಿಯ  ಕಮರ್ಷಿಯಲ್ ಚಿತ್ರ "ತಕ್ಶಕ್" ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿರುವುದು (ಎ ಆರ್ ರೆಹೆಮಾನ್ ಸಂಗೀತವಿದ್ದೂ) ಎಲ್ಲರಿಗೂ ಗೊತ್ತೇ ಇದೆ.
ಲಂಕೇಶರನ್ನೂ times of India ದ ಸಂಪಾದಕರನ್ನೂ ಹೋಲಿಸಲು ಸಾಧ್ಯವೇ? ಹಾಗೆ ನೋಡಿದರೆ ಇಬ್ಬರೂ ಪತ್ರಿಕೆ ನಡೆಸುವವರೇ, ಒಬ್ಬನ ಉದ್ದೇಶ ಬದುಕಿನ ಸೂಕ್ಷ್ಮತೆಗಳಿಗೆ, ಸಮಾಜದಲ್ಲಿ ತುಳಿಯಲ್ಪಟ್ಟಿರುವ ಜನಕ್ಕೆ ದನಿಯಾಗಿ ಜಾಹಿರಾತಿಲ್ಲದೇ ಪತ್ರಿಕೆ ನಡೆಸುವದು; ಇನ್ನೊಬ್ಬನದು ಸುದ್ದಿಗಳನ್ನು ವರದಿ ಮಾಡಿ, ಬೆಂಗಳೂರಿನ ಶ್ರೀಮಂತವರ್ಗದ ಪಾರ್ಟಿಗಳನ್ನು ವರದಿಮಾಡಿ, ಜಾಹಿರಾತುಗಳಿಂದ ಹಣದ ಹೊಳೆ ಹರಿಸುವುದು. ಇಬ್ಬರ ಉದ್ದೇಶ, ಗುರಿ ಬೇರೆ ಬೇರೆ ಇರಬೇಕಾದರೆ ಇಬ್ಬರನ್ನೂ ಹೋಲಿಸಿವುದು ಅವರವರ ವೃತ್ತಿಗೇ ಅನ್ಯಾಯ ಮಾಡಿದಂತೆ. ಹಾಗೆಯೇ, ಗಿರೀಶ್ ಕಾಸರವಳ್ಳಿಯಂಥ ನಿರ್ದೇಶಕರನ್ನೂ ಯೋಗರಾಜ್ ಭಟ್ ರಂಥ ನಿರ್ದೇಶಕರನ್ನೂ ಹೋಲಿಸಲು ಸಾಧ್ಯವೇ?
'ದ್ವೀಪ'ದಂಥ ಚಿತ್ರಗಳನ್ನು ಬರೀ "ನೋಡಿ" ಮಜಾಮಾಡಲು ಸಾಧ್ಯವಿಲ್ಲ, ಎಂಬುದು 'ಮುಂಗಾರುಮಳೆ'ಯಂಥ ಚಿತ್ರ ನೋಡುವವರಿಗೆ ಅರ್ಥವಾಗುವುದಿಲ್ಲ; ಮತ್ತು 'ಮುಂಗಾರುಮಳೆ'ಯಂಥ ಚಿತ್ರಗಳನ್ನು "ಹಾಗೆ ಸುಮ್ಮನೆ" ನೋಡಲು "ದ್ವೀಪ"ದಂಥ ಚಿತ್ರ ನೋಡುವವರಿಗೆ ಅರ್ಥವಾಗುವುದಿಲ್ಲ. 
 
ನನ್ನ ಉದ್ದೇಶ ಇಷ್ಟೇ, "ಮುಂಗಾರುಮಳೆ"ಯಂಥ ಚಿತ್ರಗಳನ್ನು enjoy ಮಾಡಿ, ಮನತಣಿಯೇ ನೋಡಿ (ಅರ್ಥೈಸಬೇಡಿ, ರಿಯಾಲಿಟಿ ಹುಡುಕಲು ಹೋಗಬೇಡಿ), ಹಾಡುಗಳನ್ನು ಗುಣುಗುಣಿಸಿ, ನಗಿ, ಅಳಿ; ಅದೇ ಕಾಲಕ್ಕೆ "ದ್ವೀಪ"ದಂಥ ಚಿತ್ರಗಳನ್ನೂ ನೋಡಿ, ಬದುಕಿನ ಸಂಕೀರ್ಣತೆಯನ್ನು, ಸೂಕ್ಷ್ಮತೆಯನ್ನು, ಪ್ರಶ್ನೆಗಳನ್ನು, parallel thinking ಅನ್ನೂ ಬೆಳೆಸಿಕೊಳ್ಳಿ. ಬಾಲಿವುಡ್ ಸ್ಟೈಲಿನಲ್ಲಿ ಹೇಳುವುದಾದರೆ, "ಮುಂಗಾರುಮಳೆ"ಯಂಥ ಚಿತ್ರ ನೋಡಿ "ಹೃದಯ"ತುಂಬಿಕೊಳ್ಳಿ; "ದ್ವೀಪ"ದಂಥ ಚಿತ್ರ ನೋಡಿ "ಮೆದುಳ"ನ್ನು ಜೀವಂತವಾಗಿಟ್ಟುಕೊಳ್ಳಿ.
ಆದರೂ ಒಂದು ಮನವಿ: "ಮುಂಗಾರುಮಳೆ" ಯಂಥ ಚಿತ್ರಗಳನ್ನು  ಆನಂದಿಸುವವರೇ, ನಿಮ್ಮ ಮೆಚ್ಚಿನ ಚಿತ್ರ ನೂರುದಿನ ಓಡಲಿ, ೨೫ ವಾರ ಕಾಣಲಿ, ಸಿಡಿಗಳು ಲಕ್ಷ ಲಕ್ಷ ಸೇಲ್ ಆಗಲಿ, ಸಂತೋಷವೇ! ಆದರೆ, ಅದೇ ಕಾಲಕ್ಕೆ " ದ್ವೀಪ" ದಂಥ ಸೂಕ್ಷ್ಮ, ಸಂವೇದನಶೀಲ ಚಿತ್ರಗಳನ್ನು ಅಸಡ್ಡೆಯಿಂದ ನೋಡದೇ, ಅವುಗಳನ್ನು  ಅರ್ಥಮಾಡಕೊಳ್ಲಲಿ ಪ್ರಯತ್ನಿಸಿ, ಪ್ರೊತ್ಸಾಹಿಸಿ, ಏಕೆಂದರೆ ಅಂಥ ಚಿತ್ರಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳು, ನಮ್ಮ ನಾಡಿನ ಜೀವನಾಡಿಗಳು, ನಮ್ಮ ಭಾಷೆಯ ನಿಜ ಪ್ರತಿಮೆಗಳು. 
 
Rating
No votes yet

Comments