ಅಣೆಕಟ್ಟು ಧ್ವಂಸ ಮಾಡಲು ಪೂರ್ವ ತಯಾರಿ (ಇ-ಲೋಕ-31)(16/7/2007)
ಅಣೆಕಟ್ಟುಗಳ ಬಗ್ಗೆ ಈಗ ಅಭಿಪ್ರಾಯ ಬದಲಾಗಿದೆ.ಅಣೆಕಟ್ಟುಗಳು ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆಗಳಿಗೆ ಅಡ್ಡಿ ತರುತ್ತದೆ. ಅಣೆಕಟ್ಟು ಭಾರೀ ಪ್ರಮಾಣದಲ್ಲಿ ಹೊಯಿಗೆ ಮತ್ತು ಮಣ್ಣನ್ನು ತಡೆಯುತ್ತವೆ. ಮೀನುಗಳ ನಾಶಕ್ಕೂ ಕಾರ್ಅಣವಾಗುತ್ತವೆ. ಅಣೆಕಟ್ಟು ತುಂಬಿದಾಗ ಒಂದೇ ಭಾರಿಗೆ ನೀರು ಬಿಡುವ ನಿರ್ಧಾರಗಳು ತರುವ ತೊಂದರೆಗಳು ಇದ್ದೇ ಇವೆ. ಅಮೆರಿಕಾದ ವೆಂಚುರಾ ಪಟ್ಟಣದ ಬಳಿಯ ವೆಂಚುರಾ ನದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕಿದ ವರ್ಷ ಅಣೆಕಟ್ಟು ಕಟ್ಟಲಾಯಿತು.ಇದನ್ನೀಗ ತೆಗೆದು ಬಿಡುವ ಯೋಚನೆಯಿದೆ. ಕಳೆದ ಒಂದು ದಶಕದಿಂದಲು ಅಣೆಕಟ್ಟನ್ನು ತೆಗೆಯುವ ಯೋಚನೆಯೇನೋ ಇತ್ತಾದರೂ, ಅದನ್ನು ತೆಗೆದಾಗ ಹೊರಹೋಗುವ ಅಪಾರ ನೀರು ಮತ್ತು ಕೆಸರು ನದಿ ಹರಿವಿನ ಪ್ರದೇಶಗಳಲ್ಲಿ ಮಾಡಬಹುದಾದ ಅನಾಹುತವನ್ನು ಅಂದಾಜು ಮಾಡುವುದು ಹೇಗೆ ಎನ್ನುವುದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲದ ಕಾರಣ ಇದನ್ನು ಮುಂದೆ ಹಾಕಲಾಗುತ್ತಿತ್ತು. ಈಗ ಆ ಬಗ್ಗೆ ಅಧ್ಯಯನ ಮಾಡಲು ಮತ್ತು ಅಣೆಕಟ್ಟು ಒಡೆದಾಗ ಆಗಬಹುದಾದ ಪರಿಣಾಮವನ್ನು ಅಧ್ಯಯನ ಮಾಡಲು ಕಂಪ್ಯೂಟರ್ ಮಾದರಿ ಲಭ್ಯವಿದೆ.ಖ್ಯಾತ ವಿಜ್ಞಾನಿ ಐನ್ಸ್ಟೈನ್ ಅವರ ಮಗನ ಮಾದರಿಯನ್ನು ಕಂಪ್ಯೂಟರಿಗೆ ಅಳವಡಿಸಲಾಗಿದೆ.ಇದನ್ನು ರಚಿಸಲು ಮೊದಲಾಗಿ ಅಣೆಕಟ್ಟಿನ ಸುತ್ತಲಿನ ಚಿತ್ರವನ್ನು ಲೇಸರ್ ಕಿರಣಗಳ ಸಹಾಯದಿಂದ ಪಡೆಯಲಾಯಿತು. ಈ ಚಿತ್ರಗಳ ಮೂಲಕ, ಭೂಭಾಗದ ಎತ್ತರ ನೀಡುವ ನಕ್ಷೆಯನ್ನೂ, ಭೂಭಾಗಗಳ ಸಾಮಾನ್ಯ ನಕ್ಷೆಯನ್ನೂ ರಚಿಸಲಾಯಿತು. ನಂತರ ಈ ಮಾಹಿತಿಗಳನ್ನು ಕಂಪ್ಯೂಟರಿಗೆ ಉಣಿಸಿ,ಹ್ಯಾನ್ಸ್ ಆಲ್ಬರ್ಟ್ ಐನ್ಸ್ಟೈನ್ ಅವರ ಮಾದರಿಯ ಪ್ರಕಾರ ತಂತ್ರಾಂಶ ರಚಿಸಿ, ಅಧ್ಯಯನ ಮಾಡಲು ಅಮೆರಿಕಾದ ಮಿಲಿಟರಿಯ ಇಂಜಿನಿಯರುಗಳು ತೊಡಗಿದ್ದಾರೆ. ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ಕೆಸರು ಒಂದು ಫುಟ್ಬಾಲ್ ಮೈದಾನದ ಅಗಲದ ಸ್ಥಳದಲ್ಲಿ ರಾಶಿ ಹಾಕಿದರೆ,ಅದರ ಎತ್ತರ ಮೂರು ಸಾವಿರ ಅಡಿಗಳಾಗಬಹುದು, ಎಂದವರು ಅಂದಾಜು ಮಾಡಿದ್ದಾರೆ. ಅದರಿಂದ ನೀರು ಮತ್ತು ಕೆಸರು ಹೊರ ಬಿಟ್ಟಾಗ ಜನಪ್ರದೇಶಗಳಿಗೆ ನೀರು ನುಗ್ಗದಂತೆ ಎಲ್ಲೆಲ್ಲಾ ತಡೆಗೋಡೆಗಳು ಬೇಕಾಗಬಹುದು ಎಂದವರಿಗೆ ಗೊತ್ತಾಗಿದೆ.ಯಾವ ಪ್ರದೇಶಗಳ ಜನರನ್ನು ದೂರ ಸಾಗಿಸುವುದು ಸುರಕ್ಷಿತವೆನ್ನುವುದು ಅವರು ಅಂದಾಜು ಮಾಡಿದ್ದಾರೆ.ಮೊದಲಾಗಿ ವೆಂಚುರಾ ನದಿಗೆ ಕಟ್ಟಿದ ಈ ಮತಿಲಿಜಾ ಅಣೆಕಟ್ಟನ್ನು ತೆಗೆದು, ನಂತರ ಇನ್ನೂ ಕೆಲವು ಅಣೆಕಟ್ಟುಗಳನ್ನು ತೆಗೆಯುವ ಯೋಚನೆ ಇದೆಯಂತೆ.
ಅಡ್ಡ ಕುಳಿತು ಬಿಡುವ ಸೈಕಲ್
ಮಾಮೂಲು ಸೈಕಲ್ ಸವಾರಿ ಮಾಡುವ ಹಾಗೆ ಮಾಡದೆ, ರಸ್ತೆಯಲ್ಲಿ ಸಾಗುತ್ತಿರುವವರನ್ನು ನೋಡುತ್ತಾ, ಅಡ್ಡಲಾಗಿ ಕುಳಿತು ಸವಾರಿ ಮಾಡುವ ಹೊಸ ವಿನ್ಯಾಸದ ಸೈಕಲನ್ನು ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಮಾಡಿದಾತ ತಂತ್ರಾಂಶ ಇಂಜಿನಿಯರ್. ಹಾಗೆಂದು ಇದು ಕಂಪ್ಯೂಟರ್ ಚಾಲಿತವೆಂದು ಬಗೆಯಬೇಡಿ. ಇದರಲ್ಲಿ ಸಂಕೀರ್ಣ ಗೇರ್ ವ್ಯವಸ್ಥೆಯನ್ನು ಬಳಸಿ, ಕುಳಿತೆಡೆಯಿಂದ ಪೆಡಲ್ ಮಾಡಿದರೂ ಮುಂದೆ ಹೋಗುವಂತೆ ವಿನ್ಯಾಸಗೊಳಿಸಲಾಗಿದೆ.ಮೈಕೆಲ್ ಕಿಲ್ಲಿಯನ್ ಎಂಬ ಹೆಸರಿನ ಇಂಜಿನಿಯರ್, ತನ್ನ ಸೈಕಲ್ ಸವಾರಿ ಭಾರೀ ಮಜಾ ಕೊಡುತ್ತೆ ಎನ್ನುತ್ತಾನೆ. ಅದರೆ ಸೈಕಲ್ ಮುಂದಿನಿಂದ ಬರುವ ಇತರ ಜನ, ವಾಹನಗಳನ್ನು ಸವಾರ ನೋಡುವುದು ಹೇಗೆನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು.
ಆಂಧ್ರ ಸದನದಲ್ಲೀಗ ನಿಸ್ತಂತು ಕಂಪ್ಯೂಟರ್ ಜಾಲ
ಆಂಧ್ರಪ್ರದೇಶ ಕಂಪ್ಯೂಟರೀಕರಣದಲ್ಲಿ ರಾಷ್ಟ್ರದಲ್ಲೇ ಮುಂದಿರುವ ರಾಜ್ಯಗಳಲ್ಲೊಂದು. ಈಗ ಅಲ್ಲಿನ ಶಾಸನ ಸಭೆಯಲ್ಲಿ ನಿಸ್ತಂತು ಕಂಪ್ಯೂಟರ್ ಜಾಲ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಒಂದು ಮೆಗಾಬೈಟು ಸಾಮರ್ಥ್ಯದ ಐವತ್ತು ಸಂಪರ್ಕಗಳನ್ನು ಒದಗಿಸಲು ಈ ವ್ಯವಸ್ಥೆ ಸಮರ್ಥವಾಗಿದೆ. ಅಲ್ಲಿನ ಶಾಸಕರಿಗೆ ನಿಸ್ತಂತು ಸಂಪರ್ಕ ಸಾಧಿಸಲು ಸಮರ್ಥವಾದ ಲ್ಯಾಪ್ಟಾಪ್ ಒದಗಿಸಲಾಗಿದೆ.ಇವರಲ್ಲಿ ಒಂದು ಮೂವತ್ತು ಶಾಸಕರಾದರೂ ಸದನ ನಡೆಯುವ ವೇಳೆ ಬಳಸಬಹುದೆಂದು ಊಹೆ. ಅಂತರ್ಜಾಲ ಸಂಪರ್ಕವೂ ಲಭ್ಯವಿರುವುದರಿಂದ, ಸದನದಲ್ಲಿ ಕಲಾಪ ನಡೆಯುವ ವೇಳೆ, ತೂಕಡಿಸುವ ಬದಲು, ಅಂತರ್ಜಾಲ ಜಾಲಾಡುವ ಕಾರ್ಯವನ್ನಾದರೂ ಅವರು ಮಾಡಬಹುದು. ನಿಜವಗಿಯೂ ಕಾಳಜಿಯಿದ್ದವರಿಗೆ, ಮಾಹಿತಿಗಳನ್ನು ಪಡೆದುಕೊಳ್ಳಲು ವ್ಯವಸ್ಥೆ ಅನುಕೂಲ ಕಲ್ಪಿಸಲಿದೆ.ಮಾಧ್ಯಮ ಪ್ರತಿನಿಧಿಗಳಿಗೂ ವ್ಯವಸ್ಥೆಯಡಿ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ.
ಮೈಕ್ರೋಸಾಫ್ಟ್ನಿಂದ ಬೆಂಗಳೂರಲ್ಲಿ ವಿಶ್ವವಿದ್ಯಾಲಯ?
ಮೈಕ್ರೋಸಾಫ್ಟ್ ಕಂಪೆನಿ ವಿದ್ಯಾಕ್ಷೇತ್ರಕ್ಕೆ ಅಡಿಯಿರಿಸಲಿದೆಯಂತೆ. ಈ ಯೋಜನೆಗೆ ಬೆಂಗಳೂರು ಸೂಕ್ತ ಎನ್ನುವ ನಿರ್ಧಾರ ಕಂಪೆನಿಯದ್ದು. ರಾಜ್ಯ ಸರಕಾರದ ಜತೆಗೀಗಲೇ ಮಾತುಕತೆ ನಡೆದಿದ್ದರೂ, ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಯು.ಜಿ.ಸಿಯ ಅಂಗೀಕಾರವಿನ್ನಷ್ಟೇ ದೊರಕಬೇಕಾಗಿದೆ.
ಆಕಾಶಗಂಗೆ ವಿಂಗಡಿಸಲು ಸಹಾಯ ಬೇಕಿದೆ!
ನಮ್ಮ ವಿಶ್ವವನ್ನು ಅಭ್ಯಸಿಸುವ ಖಗೋಳವಿಜ್ಞಾನಿಗಳಿಗೆ ಈಗ ರೇಡಿಯೋ ದೂರದರ್ಶಕಗಳು, ಆಕಾಶನೌಕೆಗಳಿಂದ ಲಭ್ಯವಾಗುತ್ತಿರುವ ಮಾಹಿತಿ ವಿಶ್ಲೇಷಿಸಲು ಪುರುಸೊತ್ತು ಸಾಲದಷ್ಟು ಮಾಹಿತಿಯ ಭರಪೂರ. ಕಂಪ್ಯೂಟರ್ ಬಳಸಿ,ಸಾಕಷ್ಟು ಮಾಹಿತಿಗಳ ವಿಶ್ಲೇಷಣೆ ನಡೆಯುತ್ತದಾದರೂ, ಕೆಲವಕ್ಕೆ ಕಂಪ್ಯೂಟರ್ ಪ್ರಯೋಜನಕ್ಕೆ ಬಾರವು. ಆಕಾಶಗಂಗೆಗಳ ಚಿತ್ರವನ್ನು ನೋಡಿ,ಅವು ದೀರ್ಘವೃತ್ತಾಕಾರದವೇ ಅಲ್ಲ ಉರುಟಿನವೇ ಮತ್ತು ಅವು ಚಲಿಸುವ ದಿಕ್ಕು ಯಾವುವು ಎಂದು ಅಂದಾಜಿಸಲು ಉತ್ಸಾಹಿ ಸ್ವಯಂಸೇವಕರನ್ನು ಬಳಸಬೇಕಿದೆ. ಅಂತರ್ಜಾಲ ಮೂಲಕ ಚಿತ್ರಗಳನ್ನು ಪಡೆದು, ತಮ್ಮ ಅನಿಸಿಕೆಯನ್ನು ತಿಳಿಸುವವರಿಗಾಗಿ ಇಂಗ್ಲೆಂಡಿನ ಪೋರ್ಟ್ಮೌತ್ ವಿಶ್ವವಿದ್ಯಾಲಯದ ಖಗೋಳಶಾಸ್ತಜ್ಞರು ಹುಡುಕುತ್ತಿದ್ದಾರೆ. ಇದೀಗಲೇ ಇಪ್ಪತ್ತು ಸಾವಿರ ಜನ ಇದರಲ್ಲಿ ಪಾಲ್ಗೊಂಡಿದ್ದಾರೆ. ಸಮಸ್ಯೆಯೆಂದರೆ ಸುಮಾರು ಒಂದು ದಶಲಕ್ಷ ಚಿತ್ರಗಳಿವೆ. ಈ ಚಿತ್ರಗಳು ಮೆಕ್ಸಿಕೋದ ದೂರದರ್ಶಕದಿಂದ ತೆಗೆಯಲಾದುವು. *ಅಶೋಕ್ಕುಮಾರ್ ಎ