ಬೆಂಡೇಕಾಯಿ ಫಿಶ್ ಕರಿ!

ಬೆಂಡೇಕಾಯಿ ಫಿಶ್ ಕರಿ!

ಬರಹ

ನಮ್ಮ ಬ್ರಹ್ಮಚಾರಿ ಮಹೇಶರು ಲಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ತಿಂದು, ಅದಕ್ಕೊಂದು ಮುಕ್ತಿ ಕೊಡಿಸಿದ ಸ್ವಾರಸ್ಯ ಹೇಳುತ್ತಾ ಹೋದಂತೆ, ಸಾಯಂಕಾಲ ಆರು ಗಂಟೆಯ ಹಸಿವು ಇನ್ನಷ್ಟು ಚುರುಗುಟ್ಟಿ, ಬಾಯಲ್ಲಿ ನೀರೂರಿ, ಅದರ ಮುಂದುವರಿದ ಭಾಗವೋ ಎಂಬಂತೆ ನಾಲಿಗೆ ಇದ್ದಕ್ಕಿದ್ದಂತೆ ಬೆಂಡೇಕಾಯಿ ಫಿಶ್ ಕರಿಯ ರುಚಿಯನ್ನು ನೆನಪಿಸಿ ಲೊಚಗುಟ್ಟಿತು. ಇವತ್ತು ಮನೆಯಲ್ಲಿ ಇದನ್ನು ಮಾಡಬೇಕು ಅಂದುಕೊಂಡು ನಾಲಿಗೆಯನ್ನು ಸಂತೈಸಿದೆ.

ಹೆಸರು ವಿಚಿತ್ರವಾಗಿದೆಯಲ್ಲ? `ಬೆಂಡೇಕಾಯಿ ಫಿಶ್ ಕರಿ!' ಬೆಂಡೇಕಾಯಿ ಎಂಬ ವೆಜ್ಜೂ ಫಿಶ್ ಎಂಬ ನಾನ್ವೆಜ್ಜೂ ಸೇರಿ ಆಗುವ ವಿಚಿತ್ರ `ಆಶೆ' (ಪದಾರ್ಥ) ಇದಿರಬೇಕು ಎಂದುಕೊಳ್ಳುತ್ತಿದ್ದೀರಾ? ನಿಲ್ಲಿ. ಇಲ್ಲಿ ಬೆಂಡೇಕಾಯಿಯೇ ಪ್ರಧಾನ. ಫಿಶ್ ಗಿಶ್ ಏನೂ ಇಲ್ಲ.

ಬೆಂಗಳೂರಿನಲ್ಲಿರುವ ಗುಜರಾತಿಗಳು ಈ ರೀತಿಯ ಪದಾರ್ಥವೊಂದನ್ನು ಮಾಡುತ್ತಾರೆ ಎನ್ನುತ್ತಾ, ನಮ್ಮ ಸಂಬಂಧಿಕರೊಬ್ಬರು ಒಂದು ದಿನ ಮಾಡಿ ಬಡಿಸಿದ್ದೇ ಈ ಒಂದು ಹೊಸ ಪದಾರ್ಥ ಚಿಂತಾಮಣಿಗೆ ಕಾರಣ! ಏನಿಲ್ಲ, ಎಳೆಯ, ಸಣ್ಣ ಸಣ್ಣ ಬೆಂಡೇಕಾಯಿಗಳನ್ನು ಅದರ ಬಾಲದಿಂದ ಬುಡದ ಚೊಟ್ಟಿನವರೆಗೆ ಮಧ್ಯಭಾಗದಲ್ಲಿ ಸೀಳಬೇಕು. ಸೀಳುವುದೆಂದರೆ ಪೂರ್ತಿ ಅಲ್ಲ, ಚೊಟ್ಟಿನವರೆಗೆ ಮಾತ್ರ. ಚೊಟ್ಟು ಹಾಗೇ ಇರಲಿ. ನಂತರ ಮೆಣಸಿನಪುಡಿ, ಹುಳಿಪುಡಿ, ಉಪ್ಪು ಹದವಾಗಿ ಸೇರಿದ ಮಿಶ್ರಣವನ್ನು ಬೆಂಡೇಕಾಯಿಯ ಬಾಲದಿಂದ ಬುಡದವರೆಗೆ -ಅಥವಾ ವೈಸ್ ವರ್ಸಾ- ತೆಳ್ಳಗೆ ತುಂಬಿ (ಹುಳಿಪುಡಿ ಇರದಿದ್ದರೆ ಡ್ರೈ ಮಾಡುವಾಗ ನಿಂಬೇಹಣ್ಣಿನ ರಸ ಹಾಕಿದರೂ ಸಾಕು). ಬಾಣಲೆಗೆ ಸ್ವಲ್ಪ ಕಡಲೇಕಾಯಿ ಎಣ್ಣೆ ಸುರಿದು ಈ ಬೆಂಡೇಕಾಯಿಗಳನ್ನು ಹಾಕಿ ಡ್ರೈ ಮಾಡಿ. ಬೆಂಡೇಕಾಯಿ ಬಾಡಿ ಬಸವಳಿವವರೆಗೆ, ಹಸಿರು ಬಣ್ಣ ನಸುಗಪ್ಪು ಬಣ್ಣಕ್ಕೆ ತಿರುಗುವವರೆಗೆ ಡ್ರೈ ಮಾಡಬೇಕು. ಆನಂತರ ಅನ್ನಕ್ಕೆ ಕಲಸಿಕೊಂಡಾದರೂ ತಿನ್ನಿ, ಊಟದ ಮಧ್ಯೆಯಾದರೂ ತಿನ್ನಿ, ಬರೀ ಬಾಯಲ್ಲೇ ತಿನ್ನಿ. ಆಹಾ! ಎಂಥ ಮಧುರ ರುಚಿಯಿದೂ!

ಈ ವಿಶಿಷ್ಟ ಪದಾರ್ಥಕ್ಕೆ ಹೆಸರೇನು ಎಂಬುದು ನಮಗೆ ಗೊತ್ತಿಲ್ಲ. ಅದಕ್ಕೊಂದು ಹೊಸ ಹೆಸರಿನ ತಲಾಷ್ನಲ್ಲಿದ್ದಾಗ ಒಂದು ದಿನ ನನ್ನ ಸಹೋದರ ಮನೆಗೆ ಬಂದ (ಅವನು ಪುರೋಹಿತ, ಅಪ್ಪಟ ಸಸ್ಯಹಾರಿ ಬ್ರಾಹ್ಮಣ. ನಾವೂ ಬ್ರಾಹ್ಮಣರೇ. ಸಸ್ಯಾಹಾರಿಗಳಲ್ಲಿ `ಅಪ್ಪಟ'ರು ಹೌದೋ ಅಲ್ಲವೋ ನನಗೆ ಗೊತ್ತಿಲ್ಲ!). ಅವನಿಗೆ ಈ ಬೆಂಡೇಕಾಯಿಯ ವಿಶಿಷ್ಟ ಪದಾರ್ಥ ಮಾಡಿ ಬಡಿಸಿದ್ದಾಯಿತು. ಬೆಂದ ಬೆಂಡೇಕಾಯಿಯನ್ನು ನೋಡುತ್ತಲೇ `ಅಯ್ಯೋ, ಮೀನಾ?!' ಎನ್ನುತ್ತಾ ಗಾಬರಿಯಾದ ಅವನಿಗೆ ವಾಸ್ತವಾಂಶ ತಿಳಿಸಿದಾಗ ನಿರುಮ್ಮಳನಾಗಿ ಅದಕ್ಕೊಂದು ಹೆಸರನ್ನೂ ಸೂಚಿಸಿಯೇಬಿಟ್ಟ: `ಬೆಂಡೇಕಾಯಿ ಫಿಶ್ ಕರಿ!' (ಅವನಿಗೆ ಫಿಶ್ ಕರಿ ಗೊತ್ತಾ ಅಂತ ಕೇಳಬೇಡಿ. ನಾನೂ ಕೇಳಿಲ್ಲ!)

ನಂತರ ಈ ಹೆಸರೇ ಅದಕ್ಕೆ ಗಟ್ಟಿಯಾಯಿತು. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅವರಿಗೆ ಗಾಬರಿ, ಮುಜುಗರವಾಗುವುದು ಬೇಡ ಅಂತ `ಇದು ಬೆಂಡೇಕಾಯಿಯದು, ಬೇರೇನಲ್ಲ' ಅಂತ ಮೊದಲೇ ಹೇಳಿ, ನಂತರ ಅದಕ್ಕೆ ನಾವಿಟ್ಟ ಹೆಸರನ್ನು ಹೇಳಿ ಸಂಭ್ರಮಿಸುತ್ತೇವೆ!

ಮಹೇಶರ ಚಿತ್ರಾನ್ನದ ಜೊತೆಗೇ ಈ ಬೆಂಡೇಕಾಯಿ ಫಿಶ್ ಕರಿಯನ್ನೂ ಒಮ್ಮೆ ಮಾಡಿ ನೋಡಿ. ಬ್ರಹ್ಮಚಾರಿಗಳಿಗಂತೂ ಇದು ದಿಢೀರ್ ಪದಾರ್ಥ.