ಆ ಗಣರಾಜ್ಯ- ಈ ಕರ್ನಾಟಕ
ಆ ಗಣರಾಜ್ಯ- ಈ ಕರ್ನಾಟಕ
ಕರ್ನಾಟಕ ರಾಜ್ಯವು ತನ್ನ ಉದಯದ ಸುವರ್ಣೋತ್ಸವವನ್ನು ಆಚರಿಸಿಕೊಳ್ಳುತ್ತಿರುವಾಗಲೇ, ಯಾವ ಆಶೋತ್ತರಗಳೊಂದಿಗೆ ಈ ರಾಜ್ಯೋದಯವಾಯಿತೋ ಆ ಆಶೋತ್ತರಗಳೇ ಪರಿಹಾಸ್ಯಕ್ಕೊಳಗಾಗುವಂತಹ ವಿದ್ಯಮಾನಗಳು ನಡೆದುಹೋಗುತ್ತಿವೆ. ಆದರೂ ರಾಜ್ಯದ ಜನ-ಅದು ಕನ್ನಡದ ಜನವೂ ಹೌದು-ಏನೂ ಆಗದಂತೆ, ಈ ಉತ್ಸವ-ಸಮ್ಮೇಳನ-ಜಾತ್ರೆ-ಹಬ್ಬಗಳ ಸಂಭ್ರಮದಲ್ಲಿ ಮುಳುಗಿದ್ದಾರೆ. ಪ್ರತಿಭಟನೆಯನ್ನೇ ವೃತ್ತಿಮಾಡಿಕೊಂಡು ಅದನ್ನು ಒಂದು ಅತಿಲಾಭ ತರುವಂತಹ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿರುವ ಒಂದೆರಡು ಸಣ್ಣ ಗುಂಪುಗಳು ಹಾಗೂ ಹಳೆಯ ಕಾಲದ ನೆನಪುಗಳ ಭಾರಹೊತ್ತ ನಾಲ್ಕಾರು ವಯೋವೃದ್ಧರ ಹೊರತಾಗಿ, ಮಿಕ್ಕವರಾರೂ ಈ ವಿದ್ಯಮಾನಗಳ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕಳೆದ ಐವತ್ತು ವರ್ಷಗಳಿಂದ ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆಗೆ `ಜಯಹೇ' ಹೇಳುತ್ತಿರುವ ಸಮಯದಲ್ಲೇ, ಈ ಭಾರತವೆಂಬುದು ಒಂದು ಗಣರಾಜ್ಯವಾಗಿ ವಿಕಾಸಗೊಳ್ಳುತ್ತಿರುವ ರೀತಿ ನೀತಿ ಮತ್ತು ಅದರಿಂದಾಗಿ ಅದರ ತನುಜಾತೆಯಾದ ಕರ್ನಾಟಕಕ್ಕೆ `ಜಯಹೇ' ಹೇಳುವುದರ ಅರ್ಥವಂತಿಕೆ ಕಡಿಮೆಯಾಗುತ್ತಾ, ಕ್ರಮೇಣ ಯಾಂತ್ರಿಕವಾಗುತ್ತಿರುವುದನ್ನು ಈ ಕೋಟ್ಯಾಂತರ ರೂಪಾಯಿಗಳ ವೆಚ್ಚದ ಉತ್ಸವಗಳ ಸಂಭ್ರಮ ಸಡಗರಗಳಲ್ಲಿ ಗಮನಿಸುವ ವ್ಯವಧಾನವೂ ಕನ್ನಡಿಗರಾದ ನಮಗಿಲ್ಲದಾಗಿದೆ.
ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ `ಯಶಸ್ವಿ'ಯಾಗಿ ನಡೆದ (ಅಂದರೆ ಊಟ ಮತ್ತು ವಸತಿ ವ್ಯವಸ್ಥೆ ಚೆನ್ನಾಗಿತ್ತು ಎಂದಷ್ಟೇ ಅರ್ಥ.) ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಾಡಗೀತೆಯನ್ನು ಪ್ರಸ್ತುತಪಡಿಸಿದ ರೀತಿ ಕರ್ನಾಟಕಕ್ಕೆ ಏನಾಗುತ್ತಿದೆ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುವಂತಿತ್ತು. ಗಾಯನ ಪ್ರತಿಭೆಯ ಹೊರತಾಗಿ ಮಿಕ್ಕೆಲ್ಲ ಪ್ರತಿಭೆಗಳನ್ನೂ ಪರಿಗಣಿಸಿ ಆಯ್ಕೆ ಮಾಡಿದಂತಿದ್ದ ಆ ತಂಡ ನಾಡಗೀತೆಯನ್ನು ಎಷ್ಟು ಶೃತಿಗೆಟ್ಟು, ಸ್ವರಗೆಟ್ಟು ಅಸಮಂಜಸವಾಗಿ ಹಾಡಿತೆಂದರೆ, ಇಂದು ಕರ್ನಾಟಕದ ಆತ್ಮಕ್ಕೆ ಏನಾಗಿದೆ ಮತ್ತು ಅದಕ್ಕೆ ಹತ್ತಿರುವ ಸೋಂಕುಗಳು ಯಾವುವು ಎಂಬುದನ್ನು ಅದು ಪರೋಕ್ಷವಾಗಿ ಪರಿಚಯ ಮಾಡಿಕೊಳ್ಳುವ ಪ್ರಯತ್ನದಂತಿತ್ತು. ಯಾವ ಘನೋದ್ದೇಶಗಳನ್ನು ಇಟ್ಟುಕೊಂಡು ನಮ್ಮ ಹಿರಿಯರು ಕನ್ನಡ ಭಾಷೆಯನ್ನಾಡುವ ಜನರನ್ನು ಭೌಗೋಳಿಕವಾಗಿ ಒಂದುಗೂಡಿಸಿ ಭಾರತದ ಒಂದು ಸಂವಿಧಾನಾತ್ಮಕ ಘಟಕವನ್ನಾಗಿ ರೂಪಿಸಿದರೋ, ಆ ಘನೋದ್ದೇಶಗಳೆಲ್ಲ ಇಂದು ಅಪ್ರಸ್ತುತವಾಗಿ ಕಾಣುವಷ್ಟು ಕನ್ನಡಿಗರು ತಮ್ಮ ನೆಲ, ಭಾಷೆ, ಸಂಸ್ಕೃತಿಗಳನ್ನು ಕುರಿತಂತೆ ಮೈಮರೆವಿಗೆ ಒಳಗಾಗಿದ್ದಾರೆ; ತಮ್ಮ ಬದುಕಿನ ಗುರಿ ಹಾಗೂ ಮಾಧ್ಯಮಗಳನ್ನು ಬದಲಿಸಿಕೊಂಡಿದ್ದಾರೆ.
ಇವರಲ್ಲಿ ಕೆಲವರು ಜಾತಿ-ವರ್ಗ, ಧರ್ಮ-ಹಣದ ರಾಜಕಾರಣಗಳ ಹುದಲಲ್ಲಿ ಸಿಕ್ಕಿಹಾಕಿಕೊಂಡು, ತಮಗೆ ಕನ್ನಡ ಮೂಲವಾದ ಒಂದು ಸಾಮಾನ್ಯ ಅಸ್ಮಿತೆಯಿದೆ; ಅದರ ಆಧಾರದ ಮೇಲೆ ರಾಜಕಾರಣ ಮಾಡಿದರೆ ಮಾತ್ರ ನಾಡಿಗೂ ತಮಗೂ ಒಳ್ಳೆಯದಾಗಬಲ್ಲದು ಎಂಬ ವಾರಸುದಾರಿಕೆಯನ್ನೇ ಮರೆತಿದ್ದಾರೆ. ಇನ್ನು ಕೆಲವರು ಜಾಗತೀಕರಣದ ಈ ದಿನಗಳಲ್ಲಿ ಎಲ್ಲ ಪ್ರತ್ಯೇಕತೆಗಳ ಗೋಡೆಗಳೂ ಬಿದ್ದು ಹೋಗುತ್ತಾ ಜಗತ್ತೇ ಒಂದಾಗುತ್ತಿರುವಾಗ, ಕನ್ನಡ ಕರ್ನಾಟಕ ಎಂದು ಮಾತಾಡುವುದೇ ಅಸಂಗತವೆಂದು ತಮ್ಮ `ಜಾಗತಿಕ ಪ್ರಜ್ಞೆ'ಯನ್ನು ಮರೆಯುತ್ತಾ `ಪ್ರಜ್ಞಾವಲಸೆ'ಗೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದಾರೆ. ಆದರೆ ಇವರಿಗೆ ಹಳೆಯ ಗೋಡೆಗಳು ಬೀಳುತ್ತಿದ್ದಂತೆ ಹೊಸ ಗೋಡೆಗಳು ಏಳುತ್ತಿವೆ ಹಾಗೂ ಈ ಹೊಸ ಗೋಡೆಗಳು ಆ ಹಳೆಯ ಗೋಡೆಗಳಂತೆ ನಮ್ಮ ಅಳತೆಗಳ ಪ್ರಕಾರ ಏಳುತ್ತಿಲ್ಲ; ಬದಲಾಗಿ ಇನ್ನಾರದೋ ಲೆಕ್ಕಾಚಾರದ ಪ್ರಕಾರ ಸದಾ ಅಳತೆಗಳನ್ನು ಬದಲಿಸಿಕೊಳ್ಳುವ ಗೋಡೆಗಳಾಗಿ ನಮ್ಮನ್ನು `ಮಾಯಾ ಪ್ರಪಂಚ'ವೊಂದರ ಪ್ರಜೆಗಳನ್ನಾಗಿ ಮಾಡುತ್ತಿವೆ ಎಂಬುದರ ಪರಿವೆ ಇದ್ದಂತಿಲ್ಲ.
ಸದ್ಯದ ಇಂತಹ ಮೈಮರೆವಿನಲ್ಲಿ, ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಗಣರಾಜ್ಯ ಕ್ರಮೇಣ ತನ್ನ ಒಕ್ಕೂಟ ಸ್ವರೂಪವನ್ನು ಕಳೆದುಕೊಳ್ಳುತ್ತಾ ಏಕಘಟಕ ರಾಷ್ಟ್ರದಂತೆ ಒಡಮೂಡಿ, ಇಂದು ಕರ್ನಾಟಕವೆಂಬುದನ್ನು ಕೇವಲ ತನ್ನ ಒಂದು ಉಪ ಆಡಳಿತ ಘಟಕದ ಮಟ್ಟಕ್ಕೆ ಇಳಿಸುತ್ತಿರುವುದನ್ನು ಯಾರೂ ಗಮನಿಸದೇ ಹೋಗಿರುವುದು ಕನ್ನಡಿಗರ ನಿಜವಾದ ದುರಂತವಾಗಿದೆ. ಹಾಗಾಗಿಯೇ 50 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಕರ್ನಾಟಕದ ಜನತೆ ಈ ಆಚರಣೆಗೆ ನಿಜವಾದ ಕಾರಣಗಳಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವ ವಿವೇಚನಾ ಶಕ್ತಿಯನ್ನೇ ಕಳೆದುಕೊಂಡಂತಿದೆ: ಈ ಸಂಭ್ರಮಾಚರಣೆಗಾಗಿ ಎಗ್ಗಿಲ್ಲದೇ ಹರಿದುಬರುತ್ತಿರುವ ಹಣದ ಹೊಳೆಯಲ್ಲಿ ಕುಣಿದು ಕುಪ್ಪಳಿಸುವ, ಹಾಡಿ ನಲಿಯುವ, ತಿಂದು ತೇಗುವ ಹಾಗೂ ಪರಸ್ಪರ ಹಾಡಿ ಹೊಗಳಿಕೊಳ್ಳುವ ಒಂದು ಉದ್ಯಮವೇ ಸೃಷ್ಟಿಯಾಗಿ, ಈ ರಾಜಕೀಯ ದೊಂಬರಾಟವನ್ನು ಅಮಾಯಕ ಜನಸ್ತೋಮ ಸುಮ್ಮನೆ ನಿಂತುನೋಡುತ್ತಿದೆ. ವಿಶ್ವ ಕನ್ನಡ ಸಮ್ಮೇಳನಕ್ಕೆ 15 ಕೋಟಿ ರೂಪಾಯಿಗಳ ವೆಚ್ಚವಂತೆ. ಇತ್ತ ಕನ್ನಡಕ್ಕೆ, ಕರ್ನಾಟಕವೆಂಬ ಕನ್ನಡ ರಾಜ್ಯದ ಸಾಂವಿಧಾನಿಕ ಅಧಿಪತಿಯೆನಿಸಿರುವ ರಾಜ್ಯಪಾಲರ ಕಾರ್ಯಾಲಯದಲ್ಲೇ ಅರ್ಧಚಂದ್ರವಾಗುತ್ತಿದೆ. ದೆಹಲಿಯಲ್ಲಿ ಕೂತ ಅನಾಮಿಕ ಅಧಿಕಾರಿಯೊಬ್ಬ ಕರ್ನಾಟಕದಲ್ಲಿ ಓಡಾಡುವ ರೈಲುಗಳಲ್ಲಿನ ಕನ್ನಡದ ಸ್ಥಾನಮಾನವನ್ನು ನಿರ್ಧರಿಸಿ ಫರ್ಮಾನು ಹೊರಡಿಸುತ್ತಾನೆ. ನಮ್ಮದೇ ರಾಜಕೀಯ ಪಕ್ಷಗಳು ಅನ್ಯ ರಾಜ್ಯಗಳ ಹಾಗು ಅನ್ಯಭಾಷಿಕ ಉದ್ಯಮಿಗಳನ್ನು ನಮ್ಮ ರಾಜ್ಯದ ಹಿತ ಕಾಯಲು ರಾಜ್ಯಸಭೆಗೆ ಕಳಿಸಿಕೊಡುತ್ತವೆ.
ಕರ್ನಾಟಕದಲ್ಲೇ ಕನ್ನಡದಿಂದ ಅನ್ನ ಹುಟ್ಟುವುದಿಲ್ಲ ಎಂಬ ವಾತಾವರಣ ನಿರ್ಮಿಸಲು ಅವಕಾಶ ಮಾಡಿಕೊಡುವ ನಮ್ಮದೇ ಸರ್ಕಾರ, `ವ್ಯಾವಹಾರಿಕ ನೀತಿ'ಯಾಗಿ ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿ ಪರಿವರ್ತಿಸಲು ನಿರ್ಧರಿಸುತ್ತಿದೆ. ಕರ್ನಾಟಕದಲ್ಲಿನ ಉದ್ಯಮಗಳಲ್ಲಿ ಕರ್ನಾಟಕದವರಿಗೆ ಉದ್ಯೋಗದಲ್ಲಿ ಆದ್ಯತೆ ಒದಗಿಸುವ ಪ್ರಯತ್ನವಾಗಿರುವ ಸರೋಜಿನಿ ಮಹಿಷಿ ವರದಿ ಜಾರಿಗೆ ಇವೆಯೆಂದು ಹೇಳಲಾದ ಕಾನೂನು ತೊಡಕುಗಳನ್ನು ಪರಿಹರಿಸಿಕೊಳ್ಳಲು ಹತ್ತಾರು ವರ್ಷಗಳಾದರೂ ಕರ್ನಾಟಕ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಹಾಗೇ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳವರು 13 ವರ್ಷಗಳಿಂದ ರಾಜ್ಯ ಉಚ್ಚ ನ್ಯಾಯಾಲಯದಿಂದ ಪಡೆದ ತಡೆಯಾಜ್ಞೆಯನ್ನು (ಇದು ಕರ್ನಾಟಕದಲ್ಲಿ ಮಾತ್ರ ಸಾಧ್ಯವೇನೋ) ತೆರವುಗೊಳಿಸುವ ತುರ್ತು ಇತ್ತೀಚಿನವರೆಗೆ-ಒಂದನೇ ತರಗತಿಯಿಂದಲೇ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ತನ್ನ ಆಜ್ಞೆಗೆ ವಿರೋಧ ವ್ಯಕ್ತವಾಗುವವರೆಗೆ-ಕನ್ನಡಿಗರ ಸರ್ಕಾರಕ್ಕೆ ಉಂಟಾಗಲಿಲ್ಲ! ಆದರೇನು, ಒಂದಷ್ಟು ಬಾಡಿಗೆ ಬಂಟರೂ, ವಯೋವೃದ್ಧರೂ ಕೂಗಾಡುವುದನ್ನು ಬಿಟ್ಟರೆ, ಕನ್ನಡದ ಜನ ಏನೂ ಆಗದಂತೆ ಭಾರತಾಂಬೆಯ ಮಡಿಲ ಮುಗ್ಧ ಮಕ್ಕಳಂತೆ ನಿರಾಳವಾಗಿಯೇ ಇರಬಲ್ಲವರಾಗಿದ್ದಾರೆ !
ಹಾಗೆ ನೋಡಿದರೆ ಕನ್ನಡಿಗರೇನೂ ಉದಾಸಿಗಳಲ್ಲ. ನೀರಿಗೆ ಸಂಬಂಧಿಸಿದಂತೆಯೋ, ಗಡಿಗೆ ಸಂಬಂಧಿಸಿದಂತೆಯೋ, ಉದ್ಯೋಗಕ್ಕೆ ಸಂಬಂಧಿಸಿದಂತೆಯೋ ಅನ್ಯಾಯವಾಗುತ್ತಿದೆ ಎಂದು ರಾಜಕೀಯ ಮಾಡಲು ಸದಾ ವಿಷಯ ಹುಡುಕುತ್ತಿರುವ ಪುಢಾರಿಗಳೋ ಅಥವಾ ಈಚಿನ ದಿನಗಳಲ್ಲಿ ವರದಿ ಮಾಡುವುದಕ್ಕಿಂತ ಸುದ್ದಿ ನಿರ್ಮಿಸುವುದರಲ್ಲೇ ನಿರತರಾಗಿರುವ ಮಾಧ್ಯಮಗಳೋ ಹುಯಿಲೆಬ್ಬಿಸಿದಾಗ, ಕನ್ನಡದ ಜನ ವೀರಾವೇಶದಿಂದ ಎದ್ದೇಳುತ್ತಾರೆ; ಬೀದಿಗಿಳಿಯುತ್ತಾರೆ, ಘೋಷಣೆ ಕೂಗುತ್ತಾರೆ. ಕೇಂದ್ರದ ಮಲತಾಯಿ ಧೋರಣೆಯನ್ನು ಖಂಡಿಸಿ ಮೆರವಣಿಗೆ ನಡೆಸಿ, ಮನವಿ ಕೊಟ್ಟು ನಾಯಕಮಣಿಗಳಿಂದ ಸಂತೈಸಿಕೊಂಡು ಮತ್ತೆ ಭಾರತಾಂಬೆಯ ಮಡಿಲು ಸೇರುತ್ತಾರೆ! ಹೀಗಾಗಿಯೇ ಇಂದು ದೆಹಲಿಯಲ್ಲಿ ಕರ್ನಾಟಕವು ಅಭಿವೃದ್ಧಿ ಹಾಗೂ ಭ್ರಷ್ಟಾಚಾರಗಳ ವಿಷಯದಲ್ಲಿ ದಕ್ಷಿಣದ ಬಿಹಾರವೆಂದೂ, ಕನ್ನಡಿಗರನ್ನು ತಲೆಹೋಕ-ಜಗಳಗಂಟರೆಂದೂ ಗುರುತಿಸಲಾಗುತ್ತಿದ್ದರೆ, ಅದಕ್ಕೆ ಕರ್ನಾಟಕದ ರಾಜಕಾರಣಿಗಳೇ, ಕರ್ನಾಟಕದ ಜನರೇ ಕಾರಣರಾಗಿದ್ದಾರೆ. ಇದಕ್ಕೆ ಮತ್ತೆ ಮುಖ್ಯ ಕಾರಣವೆಂದರೆ ರಾಜಕಾರಣಿಗಳೂ ಸೇರಿದಂತೆ ಕನ್ನಡದ ಜನ, ಕನ್ನಡತ್ವ - ಕರ್ನಾಟಕತ್ವಗಳ ಮೂಲಸೆಲೆಗಳನ್ನೇ ಮರೆತು ಬದುಕು ನಡೆಸುತ್ತಿರುವುದೇ ಆಗಿದೆ. ಇದರಿಂದಾಗಿಯೇ ನೆರೆಹೊರೆಯ ದ್ರಾವಿಡ ರಾಜ್ಯಗಳ ರಾಜಕಾರಣಕ್ಕೆ ಹೋಲಿಸಿದರೆ ಕರ್ನಾಟಕದ ಜನರ ರಾಜಕಾರಣ ಕರ್ನಾಟಕದ ರಾಜಕಾರಣವಾಗಿರದೇ, ಭಾರತದ ರಾಜಕಾರಣದಂತಹ ಮತ್ತು ಅದರಿಂದಾಗಿ ಈಗ ಜಾಗತಿಕ ರಾಜಕಾರಣದ ವಿಧೇಯ ರಾಜಕಾರಣವಾಗಿ ಅವನತಿಗೊಂಡಿದೆ. ಇದರಿಂದಾಗಿ ಕನ್ನಡನಾಡು-ನುಡಿ-ಸಂಸ್ಕೃತಿಗಳ ಮತ್ತು ಆ ಮೂಲಕ ಒಟ್ಟಾರೆ ಕರ್ನಾಟಕದ ಜನತೆಯ ಲೌಕಿಕಾಭ್ಯುದಯದ ಅವನತಿಯ ಹೆಬ್ಬಾಗಿಲು ತೆರೆದಂತಾಗಿದೆ.
ತಮಿಳರಿಗೆ ತಮ್ಮ ಸಂಸ್ಕೃತಿಯನ್ನು ಕಾದಿಟ್ಟುಕೊಳ್ಳಲು ಕೈಗೊಂಡ ಯಾವ ಕ್ರಮವೂ ಸಂಕುಚಿತತೆ ಎನ್ನಿಸಲಿಲ್ಲ. ಬದಲಿಗೆ ತನ್ನ ಕುಲದ ಬೇರನ್ನು ಭದ್ರಮಾಡಿಕೊಂಡು ಬೆಳೆಯಲು ಅವಕಾಶ ಕಲ್ಪಿಸಿಕೊಳ್ಳುವುದನ್ನು ಅದು ಬುಡಕಟ್ಟಿನ ವಿವೇಕವಾಗಿ ರೂಢಿಸಿಕೊಂಡಿತು. ಆ ವಿವೇಕವೇ ಇಂದಿಗೂ ತಮಿಳು ಭಾಷಾ ಸಮುದಾಯವನ್ನು-ಆಧುನಿಕತೆಯ ಪ್ರಭಾವದಿಂದಾಗಿ ಅದು ಎಷ್ಟೇ ಸಾಮಾಜಿಕ ಬಿರುಕುಗಳನ್ನು ಕಂಡಿದ್ದರೂ- ಅಖಿಲ ಭಾರತ ರಾಷ್ಟ್ರೀಯತೆಯಲ್ಲಿ ಲೀನಗೊಳಿಸದೆ ಒಂದು ಪುರಾತನ ರಾಷ್ಟ್ರೀಯತೆಯ ಪ್ರತಿನಿಧಿಯಾಗಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಕಾರಣವಾಗಿರುವುದು. ಹಾಗಾಗಿಯೇ ರೈಲ್ವೇ ಇಲಾಖೆ ತಮಿಳರ ಕೈಯಲ್ಲಿಲ್ಲದಿದ್ದರೂ, ಅದರ ಅಧಿಕಾರಿಗೆ ಹಿಂದಿ-ಇಂಗ್ಲಿಷ್ ಹೊರತಾಗಿ ಇನ್ನೆಲ್ಲ ಭಾರತೀಯ ಭಾಷೆಗಳನ್ನು ಅಖಿಲಭಾರತ ಮಟ್ಟದಲ್ಲಿ ತನ್ನ ಇಲಾಖೆಯಲ್ಲಿ ಒರೆಸಿ ಹಾಕುವ ಆಜ್ಞೆ ಹೊರಡಿಸುವ ಸಮಯದಲ್ಲಿ ತಮಿಳಿಗೆ ಮಾತ್ರ ವಿನಾಯ್ತಿ ಕೊಡಬೇಕಾದ ಎಚ್ಚರ ಮೂಡಿತು! ಇಂತಹ ಎಚ್ಚರವನ್ನು ಅಖಿಲಭಾರತ ಮಟ್ಟದಲ್ಲಿ ಮೂಡಿಸಲಾಗದ ಕನ್ನಡ ರಾಷ್ಟ್ರೀಯತೆ ತನ್ನ ಅಸ್ಮಿತೆಯನ್ನು ಪೂರಾ ಭಾರತದ ರಾಷ್ಟ್ರೀಯತೆಯಲ್ಲಿ ಲೀನಗೊಳಿಸಿಕೊಳ್ಳುವಲ್ಲಿ ತನ್ನ ಧನ್ಯತೆಯನ್ನು ಕಂಡುಕೊಳ್ಳುತ್ತಾ ಬಂದಿದೆ. ಹಾಗಾಗಿಯೇ ಕರ್ನಾಟಕದ ರಾಜ್ಯಪಾಲರು ತಮ್ಮ ಕಾರ್ಯಾಲಯದ ಸಿಬ್ಬಂದಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಕೊಡಬೇಕೆಂದು ಸೂಚಿಸುವ ಸ್ವಾತಂತ್ರ್ಯ ವಹಿಸುತ್ತಾರೆ; ಅದನ್ನು ಕನ್ನಡದ ಮುಖ್ಯಮಂತ್ರಿಗಳು `ಅದು ರಾಜ್ಯಪಾಲರ ಸೂಚನೆ, ನಾವೇನೂ ಮಾಡುವಂತಿಲ್ಲ' ಎಂಬ ಅಸಹಾಯಕತೆ ವ್ಯಕ್ತಪಡಿಸುವ ದುಃಸ್ಥಿತಿಗೆ ಈಡಾಗುತ್ತಾರೆ! ಕರ್ನಾಟಕದಲ್ಲಿ ಓಡಾಡುವ ರೈಲುಗಳಲ್ಲಿ ಹಾಗೂ ಕರ್ನಾಟಕದ ರಾಜ್ಯಪಾಲರ ಕಾರ್ಯಾಲಯದಲ್ಲಿ ಕನ್ನಡದ ಸ್ಥಾನಮಾನಗಳನ್ನು ತೀರ್ಮಾನಿಸುವ ಅಧಿಕಾರ ಕನ್ನಡ ಜನತೆಯ ಪ್ರತಿನಿಧಿಗಳ ಕೈಯಲ್ಲಿಲ್ಲ ಎಂದರೆ ಭಾರತದ ಒಕ್ಕೂಟವೆಂಬುದು ಒಂದು ಪ್ರಜಾಪ್ರಭುತ್ವವಾದಿ ರಾಷ್ಟ್ರವೋ ಅಥವಾ ಹಳೆಯ ವಸಾಹತುಶಾಹಿ ಪಳೆಯುಳಿಕೆಗಳ ಮೇಲೆ ಕಟ್ಟಿದ ಒಂದು ಆಧುನಿಕ ಸಾಮ್ರಾಜ್ಯವೋ ಎಂದು ಆಶ್ಚರ್ಯಡುವಷ್ಟು ನಮ್ಮ ಸಂವಿಧಾನದ ಆಶಯಗಳು ಬುಡಮೇಲುಗೊಂಡಿವೆ.
ಭಾರತ ಒಂದು ಗಣರಾಜ್ಯವಾಗಿ ಉದಯವಾದಾಗ ಅದು ಮುಂದೆ ಜನತೆಯ ಆಶೋತ್ತರಗಳ ಪ್ರತಿಬಿಂಬವಾಗಿ ಭಾಷಾವಾರು ವಿಂಗಡಣೆಯ ಆಧಾರದ ಮೇಲೆ ರೂಪಿತವಾದ ರಾಜ್ಯಗಳೆಲ್ಲ ಸೇರಿದ ಒಂದು ಒಕ್ಕೂಟವಾಗಿ, ಭಾರತವೆಂಬ ರಾಷ್ಟ್ರವಾಗಿ ಒಡಮೂಡುತ್ತದೆ ಎಂಬ ಕಲ್ಪನೆ ಇತ್ತು. ಹಾಗೇ ನಮ್ಮ ಸಂವಿಧಾನ ಕರ್ತೃಗಳು ಕೂಡಾ ಭಾರತವನ್ನು ರಾಜ್ಯಗಳ ಒಕ್ಕೂಟವೆಂದೇ ಘೋಷಿಸಿದರು. ಅಲ್ಲದೆ, ಸಂವಿಧಾನದಲ್ಲೇ ಕೇಂದ್ರ ಮತ್ತು ರಾಜ್ಯಗಳ ಹಕ್ಕು ಅಧಿಕಾರ-ಕರ್ತವ್ಯಗಳನ್ನು ಕೇಂದ್ರ, ರಾಜ್ಯ ಹಾಗೂ ಸಹಚರಿ (concurrent) ಎಂಬ ಮೂರು ಪಟ್ಟಿಗಳಾಗಿ ವಿಂಗಡಿಸಿ, ಕೇಂದ್ರ-ರಾಜ್ಯಗಳ ಸಂಬಂಧವನ್ನು ನಿರೂಪಿಸಿದರು. ವಿಶೇಷವಾಗಿ ರಾಜ್ಯಗಳ ಹಿತ ಕಾಯಲೆಂದೇ ಲೋಕಸಭೆಯ ಜೊತೆಗೆ ರಾಜ್ಯಸಭೆಯ ರಚನೆಗೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಯಿತು. ಹಾಗಾಗಿಯೇ ನಮ್ಮ ಸಂವಿಧಾನ ಕರ್ತೃಗಳು ಸಂಬಂಧಪಟ್ಟ ರಾಜ್ಯಗಳ ವಿಧಾನಸಭೆಗಳಿಂದ ರಾಜ್ಯಸಭೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಆಯಾ ರಾಜ್ಯಗಳ ನಿವಾಸಿಗಳೇ ಆಗಿರಬೇಕೆಂಬ ನಿಬಂಧನೆಯನ್ನೂ ಹಾಕಿದ್ದರು. ಆಯಾ ರಾಜ್ಯಗಳಲ್ಲಿ ಹುಟ್ಟಿ ಬೆಳೆದವರಿಗೆ ಆಯಾ ರಾಜ್ಯದ ಜನ-ನಾಡು-ನುಡಿ-ಸಂಸ್ಕೃತಿ-ಆಡಳಿತ-ಅಭ್ಯುದಯಗಳ ಬಗೆಗೆ ಅಭಿಮಾನಾಸ್ಪದವಾದ ಕಲ್ಪನೆ ಇರುತ್ತದೆ ಎಂಬುದು ಈ ನಿಬಂಧನೆಯ ಹಿಂದಿನ ತಿಳುವಳಿಕೆ.
ಆದರೆ ಕಳೆದ 55 ವರ್ಷಗಳಲ್ಲಿ ರಾಷ್ಟ್ರರಾಜಕಾರಣವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಎಷ್ಟು ಕೇಂದ್ರೀಕೃತಗೊಳ್ಳುತ್ತಾ ಹೋಗಿದೆ ಎಂದರೆ, ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತಾ ಹೋದ ಅನೇಕ ಸಂವಿಧಾನ ತಿದ್ದುಪಡಿಗಳಿಗೆ ಕಿರೀಟವಿಟ್ಟಂತೆ ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್.ಡಿ.ಎ) ಸರ್ಕಾರವೂ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯಸಭಾ ಚುನಾವಣೆಗಿದ್ದ ರಾಜ್ಯ ನಿವಾಸಿ ನಿಬಂಧನೆಯನ್ನೇ ತೆಗೆದುಹಾಕಿತು! ಈ ಮುನ್ನ ಈಗಿನ ಪ್ರಧಾನಮಂತ್ರಿಯೂ ಸೇರಿದಂತೆ, ವಿವಿಧ ಪಕ್ಷಗಳಿಗೆ ಸೇರಿದ ಅನೇಕರು ಸುಳ್ಳು ಅಥವಾ ಹೊಸದಾಗಿ ಸೃಷ್ಟಿಸಿಕೊಂಡ ಮನೆ ವಿಳಾಸಗಳನ್ನು ನೀಡಿ ತಮ್ಮದಲ್ಲದ ರಾಜ್ಯಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಂದರೆ ಪಕ್ಷಭೇದವಿಲ್ಲದೇ ನಮ್ಮ ರಾಜಕಾರಣ - ನಮ್ಮ ರಾಜ್ಯದ ರಾಜಕಾರಣವೂ ಸೇರಿದಂತೆ ರೀತಿ ನೀತಿಗಳೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯಗಳ ಸ್ವಾಯತ್ತತೆಯನ್ನೂ ನಾಶ ಮಾಡಹೊರಟಿವೆ. ಇದಕ್ಕೆ ಮುಖ್ಯಕಾರಣ ಈಗ ಪಕ್ಷಗಳಿಗಿಂತ ನಾಯಕರು ಮುಖ್ಯವಾಗಿ ಅವರ ವರ್ಚಸ್ಸು ಹಾಗೂ ಅವರ ಹಣವಿಲ್ಲದೇ ಚುನಾವಣೆಗಳನ್ನು ಎದುರಿಸಲಾಗದಷ್ಟು ನಮ್ಮ ರಾಜಕಾರಣವು ಉದ್ಯಮೀಕರಣಗೊಂಡಿರುವುದು. ಕರ್ನಾಟಕದಲ್ಲಂತೂ ಈ ಪ್ರವೃತ್ತಿ ಎಲ್ಲ ರಾಜಕೀಯ ಮರ್ಯಾದೆಯನ್ನೂ ಮೀರಿ ಬೆಳೆದಿದೆ. ಇಂದು ರಾಜ್ಯಸಭೆಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹನ್ನೆರಡು ಜನರಲ್ಲಿ ಮೂವ್ವರು ಹೊರರಾಜ್ಯದವರಾಗಿದ್ದಾರೆ. ಅನ್ಯಭಾಷಿಕರಾದ ಈ ಮೂವ್ವರೂ ಈಗ ಆಡಳಿತ ನಡೆಸುತ್ತಿರುವ ಪಕ್ಷಗಳ ಬೆಂಬಲದಿಂದಲೇ ಆಯ್ಕೆಯಾಗಿ ಹೋದವರು. ಇವರಲ್ಲೊಬ್ಬರೂ ಈವರೆಗೆ ರಾಜ್ಯದ ಹಿತ ಕಾಯ್ದ ದಾಖಲೆಗಳಿಲ್ಲ. ಇನ್ನು ಉಳಿದವರು ತಮ್ಮ ಪಕ್ಷಗಳ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದಾರೆಯೇ ಹೊರತು, ರಾಜ್ಯದ ಪ್ರತಿನಿಧಿಗಳಂತಲ್ಲ. ಇವರು ರಾಜ್ಯದ ಹಿತಕ್ಕೆ ಧಕ್ಕೆಯಾದಾಗ ರಾಜ್ಯಸಭೆಯಲ್ಲಿ ಕರ್ನಾಟಕದ ಗುಂಪಿನಂತೆ ಒಟ್ಟಾಗಿ ಎದ್ದು ನಿಂತು ಮಾತನಾಡಿದ ಅಥವಾ ರಾಜಕಾರಣ ಮಾಡಿದ ಉದಾಹರಣೆ ಇಲ್ಲವೇ ಇಲ್ಲವೆನಿಸುವಷ್ಟು ಅಪರೂಪ.
ಈಚೆಗೆ ರಾಜ್ಯದಿಂದ ನಡೆದ ರಾಜ್ಯಸಭಾ ಚುನಾವಣೆಯನ್ನು ಗಮನಿಸಿದರೆ ಕನ್ನಡಿಗರು ತಮ್ಮ ರಾಜಕಾರಣವನ್ನು ಎಷ್ಟು ಆತ್ಮಘಾತುಕವಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬುದು ಗೊತ್ತಾಗುತ್ತದೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಯಾರೂ ಹೆಸರೇ ಕೇಳಿರದ ಅನ್ಯಭಾಷಿಕ ಉದ್ಯಮಿಯೊಬ್ಬನನ್ನು ಬೆಂಬಲಿಸಿ ನಾಮಪತ್ರ ಸಲ್ಲಿಸಿದಾಗ ಕನ್ನಡದ ಪ್ರತಿಭಾವಂತ ಹಿರಿಯ ಸಾಹಿತಿಯೊಬ್ಬರು ಕನ್ನಡ-ಕರ್ನಾಟಕದ ಆತ್ಮಗೌರವದ ಆಧಾರದ ಮೇಲೆ (ಅವರಿಗೆ ರಾಜಕೀಯ ಆಕಾಂಕ್ಷೆಯೂ ಇದ್ದಿರಬಹುದು. ಅದು ಅಪರಾಧವೇನಲ್ಲವಲ್ಲ!) ಕೆಲವು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಮ್ಮ ಮುಖ್ಯಮಂತ್ರಿಗಳು ಕನಲಿ ಕೆಂಡವಾಗಿ `ಯಾರೀತ? ನಮ್ಮನ್ನು ಒಂದು ಮಾತು ಕೇಳದೆ ನಾಮಪತ್ರ ಸಲ್ಲಿಸುವುದೆಂದರೇನು?' ಎಂದು ತಮ್ಮ ಸಾಂಸ್ಕೃತಿಕ ಅಮಾಯಕತ್ವವನ್ನು, ರಾಜಕೀಯ ಅಪ್ರಬುದ್ಧತೆಯನ್ನೂ ಪ್ರದರ್ಶಿಸಿದರೆ, `ಕನ್ನಡ ಕನ್ನಡ' ಎಂದು ಕೂಗಾಡುವ ಸಾಹಿತಿ - ಸಂಶೋಧಕ - ಹೋರಾಟಗಾರರ ಗುಂಪೊಂದು ಮುಖ್ಯಮಂತ್ರಿಯವರ ಕನಲಿಕೆಗೆ ಬೆಂಬಲ ಸೂಚಿಸುವಂತೆ, ಆ ಹಿರಿಯ ಪ್ರತಿಭಾವಂತ ಸಾಹಿತಿಯನ್ನು `ಕನ್ನಡ ದ್ರೋಹಿ' ಎಂದು ಕರೆಯಿತು. ಈ ಗುಂಪಿನ ಅನೇಕರು ಆ ಅನ್ಯಭಾಷಿಕ ಅನಾಮಿಕ ಉದ್ಯಮಿಯನ್ನು, ಆತ ಕರ್ನಾಟಕದ ನಿವಾಸಿ ಎಂದು ಸಮರ್ಥಿಸಿ, ಪರೋಕ್ಷವಾಗಿ ಆತನನ್ನು ಬೆಂಬಲಿಸಿದರು. ಇಲ್ಲಿ ಎದ್ದು ಕಂಡದ್ದು ಇವರೆಲ್ಲರಿಗೆ ಕನ್ನಡದ ರಾಜಕಾರಣಕ್ಕಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಯ ಅಧಿಕಾರ ರಾಜಕಾರಣವೇ ದೊಡ್ಡದಾಗಿದ್ದು. ಇದರಿಂದಾಗಿಯೇ, ಕನ್ನಡ ರಾಜಕಾರಣದ ಅಭ್ಯರ್ಥಿಯಾಗಿದ್ದ ಹಿರಿಯ ಸಾಹಿತಿ - ಆತನ ವೈಯಕ್ತಿಕ ದೌರ್ಬಲ್ಯಗಳು ಏನೇ ಇದ್ದರೂ - ಆ ಅನ್ಯಭಾಷಿಕ ಉದ್ಯಮಿಗಿಂತ ಹೆಚ್ಚು ಸಮರ್ಥವಾಗಿ ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ಕರ್ನಾಟಕ-ಕನ್ನಡವನ್ನು ರಾಷ್ಟ್ರ ರಾಜಕಾರಣದಲ್ಲಿ ಪ್ರತಿನಿಧಿಸಬಲ್ಲವನಾಗಿದ್ದ ಎಂಬುದೇ ಅವರ ಅರಿವಿಗೆ ಬಾರದೇ ಹೋಯಿತು. ಹೀಗೆ ಸೃಷ್ಟಿಸಲಾದ ಗೊಂದಲದಲ್ಲಿ ಕನ್ನಡದ ಸಾಮಾನ್ಯ ಜನ, ಕನ್ನಡಿಗರಾದರೇನು - ಅನ್ಯರಾದರೇನು, ಅವರು ನಮ್ಮ ಹಿತ ಕಾಯುವುದು ಅಷ್ಟರಲ್ಲೇ ಇದೆ ಎಂದು ಸಿನಿಕರಾಗಿ ಸುಮ್ಮನಾದರು. ಇನ್ನೂ ಕೆಲವು ಕನ್ನಡ ಬುದ್ಧಿಜೀವಿಗಳಂತೂ ಈ ನೆಲದಮೇಲೇ ಇಲ್ಲದವರಂತೆ, ಸ್ವ ಮತ್ತು ಅನ್ಯವೆಂಬುದೇ ಸಂಕುಚಿತ ಪರಿಕಲ್ಪನೆಗಳು ಎಂದೆನ್ನುತ್ತಾ ತಮ್ಮ ಅನುಭಾವಿಕ ಎತ್ತರಗಳನ್ನು ಮೆರೆದರು!
ಇದು ಕನ್ನಡದ ಅಸ್ಮಿತೆಯ ಬಿಕ್ಕಟ್ಟಿನ ಮೂಲಗಳನ್ನು ಗುರುತಿಸಬಹುದಾದ ಒಂದು `ಪರೀಕ್ಷಾ ಪ್ರಕರಣ'ದಂತೆ ಕಂಡರೆ ಆಶ್ಚರ್ಯವಿಲ್ಲ. ಕನ್ನಡಿಗರೇಕೆ ಹೀಗೆ ಕುಲಾಭಿಮಾನವಿಲ್ಲದವರಂತೆ ರ್ವತಿಸುತ್ತಿದ್ದಾರೆ? ಇವರು ಕುಲಾಭಿಮಾನದಲ್ಲಿ ನಂಬಿಕೆ ಇಲ್ಲದ ಜಾಗತಿಕ ಪ್ರಜಾವರ್ಗವಾಗಿ ಪರಿವರ್ತಿತವಾಗಿದ್ದಾರೆಂದೇನೂ ಅಲ್ಲ. ತಮಿಳು ಕುಲಾಭಿಮಾನ ಕೆರಳಿದೊಡನೆ ತಡವಿಲ್ಲದೆ ಇವರ ಕುಲಾಭಿಮಾನವೂ ಕೆರಳಬಲ್ಲಷ್ಟು ಅದು ತೀವ್ರವಾಗಿದೆ! ಇತ್ತೀಚಿನ ಉದಾಹರಣೆ ಎಂದರೆ, ಈಗ ದೊಡ್ಡ ವಿವಾದವಾಗಿ ಮಾರ್ಪಾಡಾಗಿರುವ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ನಡೆದಿರುವ ಚಳುವಳಿ. ತಮಿಳರು ತಮ್ಮ ಭಾಷೆಗೆ ಆ ಸ್ಥಾನಮಾನವನ್ನು ದೊರಕಿಸಿಕೊಂಡಾಗಲಷ್ಟೇ ಎಚ್ಚೆತ್ತುಗೊಂಡ ಕನ್ನಡ ಕುಲವೀರರು, ಅವಮಾನಿತರಾದಂತೆ ಈಗ ತಮ್ಮ ಭಾಷೆಗೂ ಆ ಸ್ಥಾನಮಾನ ಬೇಕು ಎಂದು ಅನೇಕ `ಒಂದು ದಿನದ ಆಮರಣಾಂತ ಉಪವಾಸ'ಗಳನ್ನು ಕೈಗೊಳ್ಳುತ್ತಿದ್ದಾರೆ; ಧರಣಿಗಳನ್ನು ನಡೆಸುತ್ತಾ, ಮೆರವಣಿಗೆ ತೆಗೆಯುತ್ತ ಕೇಂದ್ರ ಸರ್ಕಾರದ ಮೇಲೆ ಗುಟುರು ಹಾಕುತ್ತಿದ್ದಾರೆ! ಆದರೆ ತಮಿಳರು ತಮ್ಮ ಭಾಷೆಗೆ ಈ `ಪ್ರತಿಷ್ಠಿತ' ಸ್ಥಾನಮಾನ ಗಳಿಸಿಕೊಳ್ಳಲು ನಡೆಸಿದ ಅಧ್ಯಯನ, ಪಟ್ಟ ಪರಿಶ್ರಮ, ಪ್ರದರ್ಶಿಸಿದ ಐಕ್ಯತೆ ಹಾಗೂ ಪಕ್ಷ ಭೇದವಿಲ್ಲದೆ ಸಂಘಟಿಸಿಕೊಂಡ ರಾಜಕೀಯ ಇಚ್ಛಾಶಕ್ತಿ ಎಂತಹುದು ಮತ್ತು ಇವೆಲ್ಲ ಯಾವ ಮೂಲದಿಂದ ಹೊಮ್ಮಿದವು ಎಂಬುದರ ಕಡೆಗೆ ಮಾತ್ರ ಇವರ ಗಮನ ಹೋದಂತಿಲ್ಲ.
ತಮಿಳರಿಗೆ ಹೋಲಿಸಿದಂತೆ ಕೀಳರಿಮೆಯಿಂದ ನರಳುವಂತೆ ತೋರುವ ಕನ್ನಡ ಚಳವಳಿಕಾರರು ತಮಿಳರಿಂದ ಕಲಿಯಬೇಕಾದುದು ಅಮೂಲ್ಯವೂ ಅಪಾರವೂ ಆಗಿದೆ. ಅವರು ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಒತ್ತಾಯಿಸುವ ಮುನ್ನ ಮಾಡಿಕೊಂಡ ಪೂರ್ವಸಿದ್ಧತೆಗಳ ಪರಿಯನ್ನೇ ನೋಡಿ. ನಮ್ಮ ಇತಿಹಾಸ ತಜ್ಞರೊಬ್ಬರು ಇತ್ತೀಚೆಗೆ ಸ್ವಲ್ಪ ಉತ್ಪ್ರೇಕ್ಷಿಸಿ ಹೇಳಿದಂತೆ, ಪ್ರತಿವರ್ಷ ತಮಿಳರ ಇತಿಹಾಸ ಹತ್ತು ವರ್ಷ ಹೆಚ್ಚುತ್ತಿದೆ. ಅದಕ್ಕಾಗಿ ಅವರು ಅಗತ್ಯ ಪೂರಕ ಮಾಹಿತಿ ಹಾಗೂ ಆಕರಗಳನ್ನು ಸಂಗ್ರಹಿಸುತ್ತಿದ್ದಾರೆ. ಹಾಗೇ ಅವರ ಹತ್ತುವರ್ಷದ ಇತಿಹಾಸಕ್ಕೆ ಸಾವಿರ ಪುಟಗಳಷ್ಟು ದಾಖಲೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಶಾಸ್ತ್ರೀಯ ಭಾಷೆ ಎಂಬುದು ಅಂತಾರಾಷ್ಟ್ರೀಯ ಮಟ್ಟದ ಭಾಷಾಶಾಸ್ತ್ರೀಯ ಪರಿಕಲ್ಪನೆಯಾದ್ದರಿಂದ, ಅವರು ಮೊದಲು ತಮಿಳನ್ನು ಶಾಸ್ತ್ರೀಯ ಭಾಷೆಯಾಗಿ ಪ್ರಚುರ ಪಡಿಸಿದ್ದು ಒಬ್ಬ ಅಂತಾರಾಷ್ಟ್ರೀಯ ಭಾಷಾಕುಲತಜ್ಞನ ಮೂಲಕ. ನಂತರ ಅದನ್ನು ಪಡೆದುಕೊಂಡದ್ದು ತಮಿಳು ಅಸ್ಮಿತೆಯನ್ನು ಆಧರಿಸಿದ ರಾಜಕೀಯ ಇಚ್ಛಾಶಕ್ತಿಯ ಮೂಲಕ. ತಮಿಳರು ತಮ್ಮ ರಾಜಕಾರಣವನ್ನು ಹೇಗೆ ಕಟ್ಟಿಕೊಂಡಿದ್ದಾರೆಂದರೆ, ಅವರು ಯಾವ ಪಕ್ಷಕ್ಕೇ - ಅದು ರಾಷ್ಟ್ರೀಯ ಪಕ್ಷವಾದರೂ ಸರಿಯೇ - ಸೇರಿರಲಿ, ಅದರ ದಾಕ್ಷಿಣ್ಯವಿಲ್ಲದೆ ರಾಷ್ಟ್ರ ರಾಜಕಾರಣ ನಡೆಯದು! ಆದರೆ ಕನ್ನಡಿಗರ ರಾಜಕಾರಣ ಅನ್ಯರ 'ಮೋರೆ'ಗೆ ಮಸಿ ಬಳಿಯುವುದರಲ್ಲೇ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದೆ!
ತಮಿಳರು ದ್ರಾವಿಡ ಕುಲವೆಂದು ಪರಿಗಣಸಲ್ಪಟ್ಟಿದ್ದರೂ, ಇತರ ದ್ರಾವಿಡ ಕುಲಗಳಿಗೆ ಹೋಲಿಸಿದಂತೆ ಅವರು ಅನಾದಿಕಾಲದಿಂದಲೂ ತಮ್ಮ ಕುಲವಿಶಿಷ್ಟತೆಯನ್ನು ಪ್ರಜ್ಞಾಪೂರ್ವಕವಾಗಿ ಉಳಿಸಿಕೊಂಡು ಬಂದವರು. ಲಿಪಿ ಇಲ್ಲದಿದ್ದ ದ್ರಾವಿಡ ಭಾಷಾ ಪ್ರಕಾರಗಳಿಗೆ ಬ್ರಾಹ್ಮಿ ಲಿಪಿ ಒದಗಿಬಂದಾಗ, ಆ ಲಿಪಿಯ ಮೂಲಕ ಅನ್ಯ ಸಂಸ್ಕೃತಿಗಳು ಅತಿಕ್ರಮಿಸಿಯಾವು ಎಂಬ ಎಚ್ಚರದಿಂದ ತಮಿಳು ಅನೇಕ ಶತಮಾನಗಳ ಕಾಲ ತನ್ನ ಸಾಹಿತ್ಯ ಸಂಸ್ಕೃತಿಗಳನ್ನು ಮೌಖಿಕವಾಗಿಯೇ ಉಳಿಸಿಕೊಂಡು ಬೆಳೆಸಿತು. ಬ್ರಾಹ್ಮಿ ಲಿಪಿಯನ್ನು ಅಳವಡಿಸಿಕೊಳ್ಳುವ ತುರ್ತು ಒದಗಿಬಂದಾಗ, ಅದನ್ನು ಪರಿಷ್ಕರಿಸಿಕೊಂಡು ತನ್ನ ಭಾಷಾ ಅಭಿವ್ಯಕ್ತಿಗೆ ಬೇಕಾದ 26 ಅಕ್ಷರಗಳನ್ನು ಮಾತ್ರ ಸ್ವೀಕರಿಸಿ ಉಳಿದವನ್ನು ತಿರಸ್ಕರಿಸಿತು. ಕನ್ನಡ ಮಾತ್ರ ಉದಾರವಾಗಿ ಬ್ರಾಹ್ಮಿ ಲಿಪಿಯ 56 ಅಕ್ಷರಗಳನ್ನೂ ಸ್ವೀಕರಿಸಿ ಉದಾರತೆ ಮೆರೆಯಿತು. ಆದರೆ ಈ `ಉದಾರತೆ'ಯಿಂದ ಕನ್ನಡ ಸಂಸ್ಕೃತಿ ಪಡೆದಿದ್ದೇನು, ತಮಿಳು ಸಂಸ್ಕೃತಿ ತನ್ನ `ಸಂಕುಚಿತತೆ' ಯಿಂದಾಗಿ ಕಳೆದುಕೊಂಡಿದ್ದೇನು ಎಂದು ಇಂದು ನಿಂತು ಯೋಚಿಸಿದಾಗ, ಈ ಉದಾರತೆ ಮತ್ತು ಸಂಕುಚಿತತೆಗಳೆಂಬ ಭಾವನೆಗಳೇ ಬ್ರಾಹ್ಮಿ ಲಿಪಿ ಮೂಲಕ ಕನ್ನಡ ಸಂಸ್ಕೃತಿಯೊಳಕ್ಕೆ ನುಸುಳಿಬಂದ ಅಪಕಲ್ಪನೆಗಳೇನೋ ಎಂದೆನ್ನಿಸದಿರದು!
ಕಳೆದ 50-55 ವರ್ಷಗಳಲ್ಲಿ ನಡೆದ ಅನೇಕ ಸಂವಿಧಾನ ಹಾಗೂ ಕಾನೂನು ತಿದ್ದುಪಡಿಗಳ ಮೂಲಕ ರಾಜ್ಯಗಳ ಸ್ವಾಯತ್ತತೆ ಒತ್ತರಿಸಲ್ಪಟ್ಟಿದೆ. ಆದರೆ ತನ್ನ ಭಾಷಾಕುಲ ಸಂಸ್ಕೃತಿಯನ್ನು ಗುರುತಿಸಿಕೊಂಡು ಸಹಜವೆಂಬಂತೆ ಪೋಷಿಸಿಕೊಂಡು ಬಂದ ರಾಜ್ಯಗಳು ಈ ಒತ್ತುವರಿಯನ್ನೂ ತಮ್ಮ ರಾಜಕೀಯ ಶಕ್ತಿ ಸಂಘಟನೆಯ ಮೂಲಕ ನಿಷ್ಕ್ರಿಯಗೊಳಿಸಿವೆ. ಆದರೆ ಕರ್ನಾಟಕ ಮಾತ್ರ ತನ್ನ ಅಭ್ಯುದಯಕ್ಕೂ ಕನ್ನಡ ಕುಲಪ್ರಜ್ಞೆಗೂ ಸಂಬಂಧವೇ ಇಲ್ಲದಂತೆ ರಾಷ್ಟ್ರ ರಾಜಕಾರಣದ ತಾಳಕ್ಕೆ ತಕ್ಕ ಹೆಜ್ಜೆ ಹಾಕುವುದೇ ತನ್ನ ಧರ್ಮವೆಂದು ನಂಬಿಕೊಂಡು ನಡೆಯುತ್ತಾ ತನ್ನ ಗುರುತನ್ನೇ ಅಳಿಸಿಕೊಳ್ಳುತ್ತಿದೆ. ಇದರಿಂದಾಗಿ ಕನ್ನಡ ಭಾಷಾ ಸಮುದಾಯದ ಅಂತಃಸತ್ವವೇ ಬತ್ತಿಹೋಗಿ ಅದು ಆಧುನೀಕರಣದ ಒತ್ತಡಗಳನ್ನು ತಾಳಿಕೊಳ್ಳಲಾರದೆ ಕ್ರಮೇಣ ಕುಸಿಯುತ್ತಿದೆ; ಅನ್ಯಾಕ್ರಮಣಕ್ಕೆ ಈಡಾಗುತ್ತಿದೆ. ಇದಕ್ಕೊಂದು ಮಾದರಿ ಉದಾಹರಣೆಯಂತಿದೆ ಕರ್ನಾಟಕದ ರಾಜಧಾನಿ ಬೆಂಗಳೂರು. ಈ ನಗರ ತನಗಿಂತ ದೊಡ್ಡ ನಗರಗಳಾದ ಕೋಲ್ಕೊತ್ತಾ ಅಥವಾ ಚೆನ್ನೈ ನಗರಗಳು ಉಳಿಸಿಕೊಳ್ಳಲು ಸಾಧ್ಯವಾಗಿರುವ ಸ್ಥಳೀಯ ಸಾಂಸ್ಕೃತಿಕ ನೆಲೆಗಟ್ಟನ್ನು ಉಳಿಸಿಕೊಳ್ಳಲಾಗದೆ ಕ್ರಮೇಣ ಚಹರೆಯೇ ಇಲ್ಲದ ಭೂತನಗರಿಯಾಗುತ್ತಿದೆ. ಈ Bangaloreನ್ನು Bengaluru ಎಂದು ಪುನಃನಾಮಕರಣ ಮಾಡುವ ಉದ್ಘೋಷಣೆಯ ಮೂಲಕ ನಮ್ಮ ರಾಜ್ಯಸರ್ಕಾರ ಸಂಸ್ಕೃತಿಯ ಪ್ರಶ್ನೆಯನ್ನು ಸಾಂಕೇತಿಕತೆಯ ಮಟ್ಟಕ್ಕೆ ಇಳಿಸಿದೆ. ಆದರೆ ಜೊತೆಯಲ್ಲೇ Greater Bangalore ಎಂಬ ಯೋಜನೆಯನ್ನೂ ಘೋಷಿಸಿ ಈ ಸಾಂಕೇತಿಕತೆಯನ್ನು ಟೊಳ್ಳುಗೊಳಿಸಿದೆ. ಈ ಬಗ್ಗೆಯೆಲ್ಲಾ ತಲೆಯನ್ನು ಕೆಡಿಸಿಕೊಳ್ಳದಿರುವಂತೆ ತೋರುತ್ತಿರುವ ಕನ್ನಡ ಸಮುದಾಯ ತಾನೂ ಟೊಳ್ಳುಗೊಳ್ಳುತ್ತಿದೆ. ಇಂಗ್ಲಿಷ್‌ಗೆ ಮುಗಿಬಿದ್ದು, ತನ್ನ ಭಾಷೆಗೂ ತನಗೂ ಇರುವ ಕಳ್ಳುಬಳ್ಳಿ ಸಂಬಂಧವನ್ನೇ ನಿರಾಕರಿಸ ಹೊರಟಿರುವ ಈ ಸಮುದಾಯ ಎದುರು ನೋಡುತ್ತಿರುವ ಭವಿಷ್ಯವಾದರೂ ಎಂತಹುದು? ಇಂತಹ ಪ್ರಶ್ನೆಯನ್ನು ಕೇಳಿಕೊಳ್ಳುವ ಸಂದಿಗ್ಧ ಕನ್ನಡ ಸಂಸ್ಕೃತಿಗೆ ಏಕೆ ಒದಗಿ ಬಂದಿದೆ? ತನ್ನ ನೆರೆಹೊರೆಯ ಭಾಷಾ ಸಮುದಾಯಗಳಂತೆ ಕನ್ನಡ ಭಾಷಾ ಸಮುದಾಯವೂ ಏಕೆ ಒಂದು ವಿಶಿಷ್ಟ ಸಾಂಸ್ಕೃತಿಕ ಸಮುದಾಯವಾಗಿ ತನ್ನನ್ನು ಸಂಘಟಿಸಿಕೊಳ್ಳಲಾಗುತ್ತಿಲ್ಲ? ತನ್ನ ಪಾರಂಪರಿಕ ಅಸ್ಮಿತೆಯ ಆಧಾರದ ಮೇಲೆ ತನ್ನ ಬದುಕಿನ ಅನನ್ಯತೆ - ಘನತೆಗಳನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಈಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಅದೇಕೆ ಸೋಲತೊಡಗಿದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಕರ್ನಾಟಕದ ಇತಿಹಾಸದಲ್ಲಿ ಕನ್ನಡ ರಾಷ್ಟ್ರೀಯತೆ ಎಂಬ ಪರಿಕಲ್ಪನೆ ವಿಕಾಸಗೊಂಡ ರೀತಿ ಮತ್ತು ಅದು ಎದುರಿಸಿದ ಬಿಕ್ಕಟ್ಟುಗಳನ್ನು ಪರಿಶೀಲಿಸಬೇಕಾಗುತ್ತದೆ.
ಈಗ ರಾಷ್ಟ್ರೀಯತೆ ಎಂದೊಡನೆ ಅದು ಭಾರತದ ರಾಷ್ಟ್ರೀಯತೆ ಎಂದೇ ಭಾವಿಸಲಾಗುತ್ತದೆ. ಆದರೆ ಭಾರತದ ರಾಷ್ಟ್ರೀಯತೆ ಎಂಬುದೇ ಕಳೆದೊಂದು ಶತಮಾನದಲ್ಲಿ ನಾವು ಕಟ್ಟಿಕೊಂಡ ಒಂದು ಆಧುನಿಕ ಪರಿಕಲ್ಪನೆಯಾಗಿದೆ. ಏಕೆಂದರೆ ಭಾರತವೆಂಬುದು ಇತಿಹಾಸದಲ್ಲಿ ಒಂದು ರಾಜಕೀಯ ಶಕ್ತಿಯಾಗಿ ಈಗಿನ ರಾಷ್ಟ್ರ ರೂಪದಲ್ಲಿ ಇದ್ದುದೇ ಇಲ್ಲ. ಇತಿಹಾಸದಲ್ಲಿ ಈ ರೂಪಕ್ಕೆ ಅತಿ ಸಮೀಪ ಬಂದಿದ್ದುದೆಂದರೆ ಸಾಮ್ರಾಟ್ ಅಶೋಕ ಹಾಗೂ ಅಕ್ಬರರ ಸಾಮ್ರಾಜ್ಯ ವಿಸ್ತರಣೆಯ ಕಾಲದಲ್ಲಿ ಮಾತ್ರ. ಹೀಗಾಗಿ ನಾವು ಈಗ ಅರ್ಥಿಸಿಕೊಳ್ಳುತ್ತಿರುವಂತೆ ಭಾರತದ ರಾಷ್ಟ್ರೀಯತೆ ಎಂಬುದು ರೂಪುಗೊಂಡುದುದೇ, ಎರಡು ಶತಮಾನಗಳಿಂದೀಚೆಗೆ ಬ್ರಿಟಿಷರು ಭಾರತೀಯ ಉಪಖಂಡದಲ್ಲಿ ಕ್ರಮೇಣ ವಶಪಡಿಸಿಕೊಳ್ಳುತ್ತಾ ಹೋದ ಪ್ರಾಂತ್ಯಗಳು ಒಟ್ಟುಗೂಡಿ ಕಲ್ಪಿತವಾದ ಮೂಡಿದ ಒಂದು ಭೂಭಾಗದ ಜನರ ರಾಜಕೀಯ ಆಶೋತ್ತರಗಳ ಆಧಾರದ ಮೇಲೆ. ಅವು, ಅವರು 19ನೇ ಶತಮಾನದ ರಾಜಕೀಯ ಆವಿಷ್ಕಾರಗಳಲ್ಲಿ ಒಂದಾದ ಆಧುನಿಕ ರಾಷ್ಟ್ರವೊಂದರ ಕಲ್ಪನೆ ಇಟ್ಟುಕೊಂಡು ಸಂಘಟಿಸಿಕೊಂಡ ಸ್ವಾತಂತ್ರ್ಯ ಹೋರಾಟದ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಪ್ರಜಾಸತ್ತಾತ್ಮಕ ರಾಜಕೀಯ ಆಶೋತ್ತರಗಳಾಗಿದ್ದವು ಎಂಬುದಿಲ್ಲಿ ಗಮನಾರ್ಹ. ಇದಕ್ಕೆ ಮುನ್ನ ರಾಷ್ಟ್ರೀಯತೆಗಳೆಂಬುವೇನಾದರೂ ವ್ಯಕ್ತಗೊಂಡಿದ್ದರೆ, ಅವು ಭಾಷಾ ರಾಷ್ಟ್ರೀಯತೆಗಳೇ.
ರಾಷ್ಟ್ರೀಯತೆ ಎಂದರೆ ಸ್ಥೂಲವಾಗಿ, ಒಂದು ಸಮುದಾಯ ಉನ್ನತಿಯ ಒಂದು ಸಾಮಾನ್ಯ ಆಶಯದೊಂದಿಗೆ ಮುನ್ನಡೆಯಲು ತನ್ನನ್ನು ತಾನು ಸಂಘಟಿಸಿಕೊಳ್ಳುವುದಕ್ಕೆ ಕಂಡುಕೊಂಡ ಒಂದು ಭಾವ ಸಂಬಂಧ. ಭರತ ಖಂಡದಲ್ಲಿ ಇಂತಹ ಭಾವ ಸಂಬಂಧಗಳು ಹಲವು ಬಾರಿ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ವ್ಯಕ್ತವಾಗುತ್ತಿದ್ದವು. ಆದರೆ ಈ ಧಾರ್ಮಿಕ ಭಾವಧಾರೆ ಇತಿಹಾಸದುದ್ದಕ್ಕೂ ಅನೇಕ ರೂಪಾಂತರಗಳನ್ನು ಹೊಂದುತ್ತಿದ್ದುದರಿಂದಲೂ ಮತ್ತು ಭೌಗೋಳಿಕವಾಗಿ ಅದನ್ನು ಸುಸ್ಥಿರವಾಗಿ ಸಂಘಟಿಸುವ ರಾಜಕೀಯ ಶಕ್ತಿ ಮೂಡದಿದ್ದುದರಿಂದಲೂ, ಭರತ ಖಂಡ ಬಹುಧರ್ಮೀಯ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಾ ಬಂತು. ಇದರಿಂದಾಗಿ ಇಲ್ಲಿ ಧರ್ಮಾಧಾರಿತ ರಾಷ್ಟ್ರೀಯತೆ ತನ್ನ ಕ್ರಿಯಾಶೀಲ ರೂಪಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಒಂದು ಸಾಮಾನ್ಯ ಭಾಷೆಯ ಮೂಲಕ ಬಂಧಿಸಲ್ಪಟ್ಟ ಒಂದು ಜನಸಮುದಾಯ ಆ ಭಾಷೆಯ ಮೂಲಕ ವ್ಯಕ್ತಪಡಿಸಿದ ಸಾಮುದಾಯಿಕ ವಿಕಾಸದ ಆಶಯಗಳು ಒಂದು ರಾಜಕೀಯ ಘಟಕದ ನಿರ್ಮಾಣಕ್ಕೆ ಕಾರಣವಾಗಿ ರಾಷ್ಟ್ರೀಯತೆಯಾಗಿ ಬೆಳೆದುಬಂದ ಅನೇಕ ಉದಾಹರಣೆಗಳನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಇಲ್ಲಿ ಮಾತ್ರವಲ್ಲ, ಜಗತ್ತಿನ ಇತರ ಭಾಗಗಳಲ್ಲೂ ಭಾಷಾ ಸಮುದಾಯಗಳು ರಾಜಕೀಯ ಘಟಕಗಳಾಗಿ ಸಂಘಟಿತಗೊಂಡು ತಮ್ಮದೇ ರಾಷ್ಟ್ರೀಯತೆಯನ್ನು ಬೆಳಸಿಕೊಂಡದ್ದನ್ನು ನಾವು ಗಮನಿಸಬಹುದು.
ಭಾರತದ ಜನಸಮುದಾಯದ ಮಾನಸಿಕತೆಯಲ್ಲಿ ಈ ಭಾಷಾ ರಾಷ್ಟ್ರೀಯತೆಗಳು ಅಂತರ್ಗತವಾಗಿದ್ದುದರಿಂದಲೇ, ವಸಾಹತುಶಾಹಿ ಸಂದರ್ಭದಲ್ಲಿ ಸ್ವಾತಂತ್ರ್ಯದ ಆಶಯವೂ ಭಾಷಾ ರಾಷ್ಟ್ರೀಯತೆಗಳೂ ಒಟ್ಟೊಟ್ಟಿಗೇ ವ್ಯಕ್ತವಾಗತೊಡಗಿದ್ದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತದ ಭಾಷಾ ರಾಷ್ಟ್ರೀಯತೆಗಳೇ ಭಾರತದ ರಾಷ್ಟ್ರೀಯ ಆಂದೋಲನವನ್ನು ರೂಪಿಸಿದ್ದು ಎಂದರೆ ತಪ್ಪಾಗಲಾರದು. 19ನೇ ಶತಮಾನದ ಕೊನೆಯ ದಶಕಗಳಲ್ಲಿ ಬರೀ ಚರ್ಚೆ, ಮನವಿ, ಬೇಡಿಕೆ ಮಂಡನೆ ಇತ್ಯಾದಿ ರೂಪಗಳಲ್ಲಿ ಮಾತ್ರ ವ್ಯಕ್ತವಾಗುತ್ತಿದ್ದ ಸ್ವಾತಂತ್ರ್ಯದ ಅಭೀಪ್ಸೆ, ನಿಜವಾಗಿ ಹೋರಾಟದ ಆವೇಗ ಪಡೆದುಕೊಂಡದ್ದು 1905ರ ಬಂಗ್ಲಾ ವಿಭಜನೆಯ ಪ್ರಸ್ತಾಪದ ಸಂದರ್ಭದಲ್ಲೇ ಎಂಬುದನ್ನು ನಾವು ಗಮನಿಸಬೇಕು. ಬಂಗಾಳಿ ರಾಷ್ಟ್ರೀಯತೆಗೆ ಒದಗಿದ ಈ ಬಿಕ್ಕಟ್ಟು ಬೇರೆ ಬೇರೆ ಪ್ರಾಂತ್ಯಗಳಲ್ಲಿ (ಅಂದರೆ ಭಾಷಾ ರಾಷ್ಟ್ರೀಯತೆಗಳಲ್ಲಿ) ವಿವಿಧ ಮನೋಭೂಮಿಕೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ರೂಪಿಸಿ, ದೇಶದಾದ್ಯಂತ ಒಂದು ರಾಜಕೀಯ ಸಂಚಲನವನ್ನು ಉಂಟುಮಾಡಿತು. ಅಲ್ಲಿಂದಲೇ ನಿಜವಾದ ರಾಷ್ಟ್ರೀಯ ಹೋರಾಟದ ಆರಂಭವೆಂಬುದನ್ನೂ ನಾವು ಗಮನಿಸಬೇಕು.
ಹಾಗೆ ನೋಡಿದರೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ವರ್ಣಿಸಲಾಗುವ 1857ರ ಸಿಪಾಯಿ ದಂಗೆಯ ಪರಿಣಾಮವಾಗಿ ಬ್ರಿಟನ್ ಭಾರತಕ್ಕೆ ಒಂದು ಮಟ್ಟದ ಸ್ವಾಯತ್ತತೆ ನೀಡುವ ಒತ್ತಡಕ್ಕೆ ಒಳಗಾದ ಹೊತ್ತಿಗೇ, ಭಾರತದ ಭಾಷಾ ರಾಷ್ಟೀಯತೆಗಳೇ ಅದರ ಮುಖ್ಯ ಆಡಳಿತ ಘಟಕಗಳೆಂದು ಮಾನ್ಯ ಮಾಡಲ್ಪಟ್ಟಿದ್ದವು. ಆ ಸ್ವಾಯತ್ತತೆಯ ಸ್ವರೂಪದ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಭಾರತದ ರಾಜಕೀಯ ಕುರಿತಂತೆ ಪರಿಣತಿ ಹೊಂದಿದ್ದ ಪಾರ್ಲಿಮೆಂಟ್ ಸದಸ್ಯ ಜಾನ್ ಬ್ರೈಟ್ ಬ್ರಿಟಿಷ್ - ಭಾರತವನ್ನು ಭಾಷೆಗಳ ಆಧಾರದ ಮೇಲೆ ಐದು ಪ್ರಮುಖ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಅಧಿಕಾರವನ್ನು ಹಂಚಬಹುದೆಂದು ಸಲಹೆ ನೀಡಿದ್ದರು. ಅಂದರೆ, ವಸಾಹತುದಾರರೇ ಅರಿತುಕೊಂಡಂತೆ, ಭಾರತ ಒಂದು ಆಧುನಿಕ ರಾಷ್ಟ್ರವಾಗಲು ಸಿದ್ಧಗೊಳ್ಳುತ್ತಿದ್ದುದು, ತನ್ನ ಭಾಷಾ ರಾಷ್ಟ್ರೀಯತೆಗಳ ಆಧಾರದ ಮೇಲೆ.
ಏಕೆಂದರೆ ಭಾರತದ ರಾಷ್ಟ್ರೀಯತೆ ಎಂಬ ಕಲ್ಪನೆಯೇ ಆಗಿನ್ನೂ ಮೂಡಿರಲಿಲ್ಲ. ಅದೇನಿದ್ದರೂ ಬ್ರಿಟಿಷ್ ಭಾರತದಲ್ಲಿ ಲೀನಗೊಂಡಿದ್ದ ಭಾಷಾ ರಾಷ್ಟ್ರೀಯತೆಗಳನ್ನು ಅಥವಾ ಅವುಗಳ ಆಧಾರದ ಪ್ರಾದೇಶಿಕ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಿದ್ದ ಪ್ರಾಂತ್ಯಗಳ ಜನ, ಒಂದಲ್ಲ ಒಂದು ಕಾರಣದ ಮೇಲೆ ವ್ಯಕ್ತಗೊಳಿಸುತ್ತಿದ್ದ ಬ್ರಿಟಿಷ್ ಅಧಿಪತ್ಯ ವಿರೋಧಿ ಭಾವನೆಗಳ ರೂಪದಲ್ಲಿರುತ್ತಿತ್ತು. ಇದರ ಪರಿಣಾಮವಾಗಿಯೇ ಮುಂದೆ ಸಿಂಧ್, ಬಿಹಾರ ಹಾಗೂ ಒರಿಸ್ಸಾ ಪ್ರಾಂತ್ಯಗಳು ಭಾಷಾ ರಾಷ್ಟ್ರೀಯತೆಗಳ ಆಧಾರದ ಮೇಲೆ ರೂಪುಗೊಂಡವು. ಆದರೆ ಆ ಹೊತ್ತಿಗೆ ಇಪ್ಪತ್ತಕ್ಕೂ ಹೆಚ್ಚು ಆಡಳಿತ ಘಟಕಗಳಾಗಿ ಹಂಚಿ ಹೋಗಿ, ಛಿದ್ರ ವಿಚ್ಛಿದ್ರವಾಗಿದ್ದ ಕನ್ನಡ ರಾಷ್ಟ್ರೀಯತೆ ಮತ್ತೆ ತನ್ನ ಏಕತೆಯನ್ನು, ಭಾರತದ ರಾಷ್ಟ್ರೀಯ ಆಂದೋಲನದ ಭಾಗವಾಗಿಯೇ ಕಂಡುಕೊಳ್ಳುವ ಚಾರಿತ್ರಿಕ ಅನಿವಾರ್ಯತೆಗೆ ಈಡಾಯಿತು. ಆವರೆಗಿನ ಭಾರತದ ಇನ್ನಾವ ಭಾಷಾ ರಾಷ್ಟ್ರೀಯತೆಯೂ ಈ ಪ್ರಮಾಣದ ರಾಜಕೀಯ ವಿಚ್ಛಿದ್ರತೆಗೆ ಒಳಗಾಗಿರಲಿಲ್ಲ ಎಂಬುದೂ ಗಮನಾರ್ಹ.
ಕನ್ನಡ ರಾಷ್ಟ್ರೀಯತೆ ಎಂಬುದು ಸಾವಿರ ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವುಳ್ಳ ಒಂದು ಕಲ್ಪಿತ ರಾಜಕೀಯ ಸಮುದಾಯವಾಗಿ ತನ್ನದೇ ವಿಶಿಷ್ಟ ಸಂಸ್ಕೃತಿಯ - ಅಂದರೆ ಸ್ಥೂಲವಾಗಿ ಒಂದು ಸಾಮಾನ್ಯ ಬದುಕಿನ ರೀತಿನೀತಿಗಳನ್ನು ರೂಢಿಸಿಕೊಂಡು, ನೆರೆಹೊರೆಯ ಇತರ ಜನಸಮುದಾಯಗಳಿಂದ ಭಿನ್ನವಾಗಿ ಕಾಣುವಂತಹುದು- ಆ ಮೂಲಕ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ. ಈ ಪ್ರಯತ್ನದಲ್ಲಿ ಅದು ಅನೇಕ ರಾಜಕೀಯ ಸ್ಥಿತ್ಯಂತರಗಳಿಗೂ, ಭೌಗೋಳಿಕ ಮಾರ್ಪಾಡುಗಳಿಗೂ, ಸಾಂಸ್ಕೃತಿಕ ಸಮೀಪೀಕರಣಗಳಿಗೂ ಒಡ್ಡಿಕೊಂಡು ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದಿದೆ. ಆದುದರಿಂದಲೇ ಅದು, ಸ್ವಾತಂತ್ರ್ಯ ಆಂದೋಲನ ಸೃಷ್ಟಿಸಿದ ಅವಕಾಶದಲ್ಲಿ ಮತ್ತೆ ಪ್ರಕಟಗೊಂಡು, ಭಾರತದ ಒಕ್ಕೂಟದಲ್ಲಿ ತನ್ನದೇ ವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ಕರ್ನಾಟಕ ಏಕೀಕರಣ ಚಳುವಳಿಯ ರೂಪದಲ್ಲಿ ಸಂಘಟಿಸಿಕೊಳ್ಳಲು ಸಾಧ್ಯವಾದದ್ದು.
ಕರ್ನಾಟಕವೆಂಬುದಕ್ಕೆ ಭೌಗೋಳಿಕವಾಗಿ ಮಹಾಭಾರತದಷ್ಟು ಪುರಾತನ ಇತಿಹಾಸವಿದ್ದರೂ, ಅದು ಕನ್ನಡದ ಅಸ್ತಿತ್ವವೆಂಬಂತೆ ಇತಿಹಾಸದ ನಮ್ಮ ಗಮನಕ್ಕೆ ಬರುವುದು ಬಾದಾಮಿ ಚಾಲುಕ್ಯರ ಕಾಲದಲ್ಲಿ. ಅಂದರೆ ಕ್ರಿ.ಶ. 6ನೇ ಶತಮಾನದ ಕೊನೆಯ ಹೊತ್ತಿಗೆ. ಈ ಹಿಂದಿನ ಶಾತವಾಹನರೂ, ಪೂರ್ವ ಗಂಗರೂ, ಕದಂಬರೂ ಈ ಭೂಭಾಗದಲ್ಲಿ ಆಳ್ವಿಕೆ ನಡೆಸಲಾರಂಭಿಸಿದ್ದರಾದರೂ, ಆ ಆಳ್ವಿಕೆಗಳು ಕನ್ನಡ ಭಾಷಾ ಸಂಸ್ಕೃತಿಯೊಂದನ್ನು ರೂಪಿಸಿಕೊಂಡು ಕನ್ನಡದ್ದೆಂದು ಹೇಳಬಹುದಾದ ಅಸ್ಮಿತೆಯೊಂದನ್ನು ಸಾಧಿಸಿಕೊಂಡಿದ್ದ ಯಾವ ಐತಿಹಾಸಿಕ ಸೂಚನೆಗಳು ನಮಗೆ ಸಿಗುವುದಿಲ್ಲ. ಆ ಆಳ್ವಿಕೆಗಳ ಐತಿಹಾಸಿಕ ಅವಶೇಷಗಳು ನಮಗೆ ಬಹುಪಾಲು ಸಿಗುವುದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲೇ... ಅಲ್ಲೊಂದು ಇಲ್ಲೊಂದು ಮಾತ್ರ ಕನ್ನಡದಲ್ಲಿ-ಉದಾ: ಕನ್ನಡದ ಮೊದಲ ಲಭ್ಯ ಶಾಸನವೆಂದು ಹೇಳಲಾಗುವ ಹಲ್ಮಿಡಿ ಶಾಸನ. ಇಲ್ಲಿ ಅಸ್ಮಿತೆ ಎಂದರೇನು ಎಂದು ಹೇಳುವುದು ಒಳಿತೇನೋ. ಅಸ್ಮಿತೆ ಎಂದರೆ, ಜನಸಮುದಾಯವೊಂದು ತನ್ನ ಚರಿತ್ರೆಯ ಮೂಲಕ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಗಳಲ್ಲಿ ಸಂಘಟಿಸಿಕೊಂಡ ಹಾಗೂ ತನ್ನ ಮುನ್ನಡೆಗಾಗಿ ಕಾಪಿಟ್ಟುಕೊಂಡ ಶಕ್ತಿ ಸಂಚಯದ ಸ್ವರೂಪ. ಅಂದರೆ ಸ್ಥೂಲವಾಗಿ ಆ ಜನಸಮುದಾಯದ ಒಟ್ಟಾರೆ ವ್ಯಕ್ತಿತ್ವ ಅಥವಾ ಶೀಲ ಎನ್ನಬಹುದು.
ಮೂಲತಃ ಕೃಷಿಕುಲಕ್ಕೆ ಸೇರಿದವರೆಂದು ಹೇಳಲಾದ (ಸಲಿಕೆ->ಚಲುಕೆ->ಚಾಲುಕ್ಯ) ಬಾದಾಮಿ ಚಾಲುಕ್ಯರು (ಅಥವಾ ಚಲುಕ್ಯರು) ಆ ಹೊತ್ತಿಗೆ ಎಲ್ಲ ಭಾಷಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದಿರಬಹುದಾದ ಕನ್ನಡ ನುಡಿಯನ್ನು ಆಡಳಿತ ಭಾಷೆಯಾಗಿ ಅಳವಡಿಸಿಕೊಂಡು ಅದನ್ನು ಪೋಷಿಸುವುದನ್ನು ತಮ್ಮ ರಾಜಧರ್ಮವನ್ನಾಗಿ ಮಾಡಿಕೊಂಡಿದ್ದ ಎಲ್ಲ ಸೂಚನೆಗಳು ಇವರ ಆಳ್ವಿಕೆಯ ಕಾಲದ ಶಾಸನಗಳಲ್ಲಿ ಸಿಗುತ್ತವೆ. 7ನೇ ಶತಮಾನದ ಬಾದಾಮಿ ಶಾಸನವಂತೂ - `ಸಾಧುಂಗೆ ಸಾಧು| ಮಾಧುರ್ಯಂಗೆ ಮಾಧುರ್ಯಂ| ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್'- ಕನ್ನಡಿಗ ಮತ್ತು ಕನ್ನಡ ಭಾಷೆಯ ಅಸ್ಮಿತೆಯ ಅಸ್ತಿತ್ವವನ್ನು, ತನ್ನ ಭಾವ-ಭಾಷೆಗಳ ವಿದ್ಯುದಾಲಿಂಗನದ ಮೂಲಕ ನಿರ್ವಿವಾದಾತ್ಮಕವಾಗಿ ಮಂಡಿಸುತ್ತದೆ. ಆದರೆ ಈ ಕಾಲಘಟ್ಟದಲ್ಲಿ ಕನ್ನಡ ಸಂಸ್ಕೃತಿ ಅಭಿವ್ಯಕ್ತಿಯನ್ನು ಕಂಡುಕೊಂಡಿದ್ದು ಹೆಚ್ಚಾಗಿ ಶಿಲಾ ಶಿಲ್ಪದ ಮೂಲಕ. ಶಬ್ದಶಿಲ್ಪ ಎದ್ದು ಕಾಣುವಂತಾದ್ದು ಏನಿದ್ದರೂ, 8ನೇ ಶತಮಾನದಿಂದೀಚೆಗೆ ಪ್ರವರ್ಧಮಾನಕ್ಕೆ ಬಂದ ರಾಷ್ಟ್ರಕೂಟರ ಕಾಲದಲ್ಲಿ. 9ನೇ ಶತಮಾನದ ನೃಪತುಂಗನ ಕಾಲದ ಕವಿರಾಜಮಾರ್ಗ ಕನ್ನಡದ ಲಭ್ಯ ಮೊದಲ ಗ್ರಂಥವೆಂದು ಪ್ರಸಿದ್ಧವಾಗಿದ್ದು, ಅದು ಕನ್ನಡವು ರಾಷ್ಟ್ರೀಯತೆಯ ಎಲ್ಲ ಲಕ್ಷಣಗಳನ್ನು ತನ್ನಲ್ಲಿ ಸುಸ್ಥಿರಗೊಳಿಸಿಕೊಂಡಿತೆಂಬುದನ್ನು ಸಾಬೀತುಪಡಿಸುತ್ತದೆ. ಅಲ್ಲಿನ `ಆ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ' ಎಂಬ ಪದ್ಯಭಾಗವು ಸಂಕ್ಷಿಪ್ತ ರೂಪದಲ್ಲಿ, ಆ ಹೊತ್ತಿಗೆ ಕನ್ನಡವು ಭಾಷಾ, ರಾಜ ಮತ್ತು ಜನಶಕ್ತಿಯ ರೂಪಗಳಲ್ಲಿ ಪರಸ್ಪರ ಹಾಸುಹೊಕ್ಕಾಗಿ ಹೇಗೆ ಒಂದು ರಾಷ್ಟ್ರೀಯತೆಯಾಗಿ ಒಡಮೂಡಿತ್ತು ಎಂಬುದನ್ನು ನಿರೂಪಿಸುತ್ತದೆ. ನಂತರದ ಒಂದೆರಡು ಶತಮಾನಗಳಲ್ಲಿ ಪಂಪ, ಪೊನ್ನ ರನ್ನರು ವಿವಿಧ ರಾಜಾಶ್ರಯಗಳಲ್ಲಿ ಅದಕ್ಕೊಂದು ಸಾಹಿತ್ಯಿಕ ಚೌಕಟ್ಟನ್ನು ಒದಗಿಸಿಕೊಟ್ಟರು.
ಕನ್ನಡ ರಾಷ್ಟ್ರೀಯತೆ ಒಂದು ಹೊಸ ಮಜಲು ತಲುಪುವುದು ಕಲ್ಯಾಣದ ಚಾಲುಕ್ಯರ ಕಾಲದಲ್ಲಿ. 12ನೇ ಶತಮಾನದಲ್ಲಿ. ಬಸವಣ್ಣನ ಶರಣ ಚಳುವಳಿಯ ಮೂಲಕ ಒಂದು ಕ್ರಾಂತಿಕಾರಕ ಪ್ರಯೋಗಕ್ಕೆ ಒಳಗಾದ ಈ ರಾಷ್ಟ್ರೀಯತೆ, ತನ್ನೊಳಗಿನ ಸಾಮಾಜಿಕ ಆರ್ಥಿಕ ನೆಲೆಗಳ ವಿರೋಧಾಭಾಸಗಳನ್ನು ಮುಖಾಮುಖಿಯಾಗಿಸಿಕೊಳ್ಳುವ ಧೈರ್ಯ ತೋರಿ, ಸಾಂಸ್ಕೃತಿಕವಾಗಿ ತನ್ನನ್ನು ಗಟ್ಟಿಗೊಳಿಸಿಕೊಂಡಿತು. ದುಡಿಯುವ ವರ್ಗವೇ ವ್ಯಾಪಾರೀ ವರ್ಗವಾಗಿಯೂ ಸಮಾಜದ ಮಧ್ಯರಂಗಕ್ಕೆ ಬಂದು, ಸಮಾಜದ ಪಟ್ಟಭದ್ರರಾಗಿದ್ದ ಮಧ್ಯವರ್ತಿ ವರ್ಗಗಳನ್ನು ನಿವಾರಿಸಿಕೊಳ್ಳುವ ಮೂಲಕ ಸಾಮಾಜಿಕ ಪುನಾರಚನೆಗೆ ಪ್ರಯತ್ನಿಸಿದ ಈ ಐತಿಹಾಸಿಕ ಸಾಹಸ, ಜಾತಿ ಶ್ರೇಣೀಕರಣವನ್ನು ಪ್ರಶ್ನಿಸುವುದರಲ್ಲಿ ಕೊನೆಗೊಂಡದ್ದು ಕನ್ನಡ ಆಸ್ಮಿತೆಗೆ ವಿಶಿಷ್ಟ ಆಯಾಮವನ್ನು ನೀಡಿತು. ಇಲ್ಲಿಂದಾಚೆಗೆ ಕನ್ನಡ ರಾಷ್ಟ್ರೀಯತೆ ಎಂದರೆ ಕೇವಲ ಒಂದು ಸಾಂಸ್ಕೃತಿಕ ಪರಿಕಲ್ಪನೆ ಮಾತ್ರವಾಗುಳಿಯದೆ, ಜನಾಂದೋಲನ ಶಕ್ತಿಯನ್ನು ತನ್ನೊಳಗೆ ಅಂತರ್ಗತಗೊಳಿಸಿಕೊಂಡಿತು. ನಂತರ ಹೊಯ್ಸಳರ ಕಾಲದ ಬಹುಧರ್ಮೀಯತೆ ರೂಢಿಸಿದ ಬಹುತ್ವದ ಜನ ಸಂಸ್ಕೃತಿ, ವಿಜಯನಗರ ಕಾಲದ ಲೌಕಿಕ ವೈಭವ ಹಾಗೂ ಉದಾರ ಜೀವನದೃಷ್ಟಿ ಮತ್ತು ಅದರ ಅಧಃಪತನ ಸೃಷ್ಟಿಸಿದ ರಾಜಕೀಯ ಕಂಪನಗಳ ಮಧ್ಯೆ ಬಿಜಾಪುರ ಆದಿಲ್ಷಾಹೀ ಕಾಲದಲ್ಲಿ ಕಂಡುಬಂದ ಹಿಂದೂ-ಮುಸ್ಲಿಂ ಧರ್ಮಗಳ ಅನುಸಂಧಾನ; ಮತ್ತು ಅದರ ಪ್ರಭಾವದಿಂದಾಗಿ-ವಿಶೇಷವಾಗಿ ಕೆಳವರ್ಗಗಳಲ್ಲಿ-ಮೂಡಿನಿಂತ ಜಾತ್ಯತೀತ ಅನುಭಾವಿ ತತ್ವಪರಂಪರೆ ಹಾಗೂ ಶ್ರೀರಂಗಪಟ್ಟಣದ ಚಿಕ್ಕದೇವರಾಜನ ಕಾಲದಲ್ಲಿ ಕಂಡುಕೊಂಡ ಪುನರುತ್ಥಾನ - ಹೀಗೆ ಐದು ಶತಮಾನಗಳ ಅಂತರದಲ್ಲಿ ಕನ್ನಡ ರಾಷ್ಟ್ರೀಯತೆ ಅನೇಕ ಏಳು ಬೀಳುಗಳನ್ನು ಕಂಡಿತು. ಇವುಗಳಿಂದಾಗಿಯೇ ಒಂದು ವಿಶಿಷ್ಟ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಚಹರೆಗಳನ್ನು ರೂಢಿಸಿಕೊಂಡಿದ್ದ ಅದು, 18ನೇ ಶತಮಾನದ ಟಿಪ್ಪುವಿನ ಕಾಲಕ್ಕೆ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದು, ದೇಶಿ ಮತ್ತು ವಿದೇಶಿ - ಈ ಎರಡೂ ಶಕ್ತಿಗಳೊಂದಿಗೆ ಹೋರಾಡುತ್ತ, ಕಾಲಕ್ಕೆ ತಕ್ಕ ಒಂದು ಆಧುನಿಕ ರಾಷ್ಟ್ರವಾಗಿ ಹೊರಹೊಮ್ಮಿತು. ಆದರೆ, ದುರದೃಷ್ಟವಶಾತ್ ಇದೇ ಅದಕ್ಕೆ ಮುಳುವಾಯಿತು.
ಬ್ರಿಟಿಷ್ ಭಾರತದ ಉತ್ಪನ್ನಗಳಿಗೆ ತನ್ನ ಸಂಸ್ಥಾನದ ಮಾರುಕಟ್ಟೆಗೆ ಪ್ರವೇಶ ನಿರಾಕರಿಸುವ ಮೂಲಕ ಬ್ರಿಟಿಷ್ ಬಂಡವಾಳಶಾಹಿ ವಿಸ್ತರಣೆಗೆ ಅವಕಾಶ ಕೊಡದೆ ಬಹುಕಾಲ ಸೆಡ್ಡು ಹೊಡೆದು ನಿಂತಿದ್ದ ಟಿಪ್ಪುವಿನ ಮೈಸೂರು ಸಂಸ್ಥಾನವನ್ನು, ಬ್ರಿಟಿಷರು ದೇಶೀಯರ ಸಹಯೋಗದೊಂದಿಗೇ ಮತ್ತು ಟಿಪ್ಪುವಿನ ಸಹಧರ್ಮೀಯರ ಬೆಂಬಲದೊಂದಿಗೇ ದೀರ್ಘ ಹೋರಾಟದ ಮೂಲಕ ಮಣಿಸಿದರು. ನಂತರವೂ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ರೂಪದಲ್ಲಿ ಕನ್ನಡ ರಾಷ್ಟ್ರೀಯತೆ ವಸಾಹತುಶಾಹಿಗೆ ತನ್ನ ಸಣ್ಣ ಪುಟ್ಟ ಪ್ರತಿರೋಧಗಳನ್ನು ತೋರಿತಾದರೂ; ಟಿಪ್ಪು ರೂಪದಲ್ಲಿ ವ್ಯಕ್ತವಾದ ಪ್ರತಿರೋಧ ಬ್ರಿಟಿಷರನ್ನು ಎಷ್ಟು ರೊಚ್ಚಿಗೆಬ್ಬಿಸಿತ್ತೆಂದರೆ, ಭೌಗೋಳಿಕವಾಗಿ ಈಗಿನ ಕರ್ನಾಟಕವನ್ನೂ ಮೀರಿ ಹರಡಿದ್ದ ಕನ್ನಡದ ಆ ವಿಶಾಲ ಸಂಸ್ಥಾನವನ್ನು ಹರಿದು ಚೂರು ಮಾಡಿ, ಅದರ ಅಸ್ಮಿತೆಯನ್ನೇ ಛಿದ್ರಗೊಳಿಸಿದರು. ಯಾರ ಸೋಲಿನವರೆಗೆ ಭಾರತ ಪೂರ್ಣವಾಗಿ ತನ್ನ ಕೈವಶವಾಗಿರಲಿಲ್ಲವೋ, ಅಂತಹ ಟಿಪ್ಪುವಿನ ಸಾಮ್ರಾಜ್ಯ ವಿಸ್ತರಣೆಗೆ ಸಮುದ್ರ ವ್ಯಾಪಾರ-ವ್ಯವಹಾರಗಳ ಮೂಲಕ ಅನುಕೂಲ ಒದಗಿಸಿದ್ದ ಕರಾವಳಿ ಪ್ರದೇಶವನ್ನು ಬ್ರಿಟಿಷ್ ಸರ್ಕಾರ ತನ್ನ ಅಧೀನದಲ್ಲಿದ್ದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿಕೊಳ್ಳುವ ಜಾಣತನ ತೋರಿತು. ಮಿಕ್ಕದ್ದರಲ್ಲಿ ಸ್ವಲ್ಪ ಭಾಗಗಳನ್ನು ಮರಾಠರ ಹಾಗೂ ತೆಲುಗು-ತಮಿಳರ ಭಾಷಾ ಆಧಿಪತ್ಯಗಳಿಗೆ ಹಂಚಿ; ತನ್ನ ರಾಜಕೀಯ ನೈತಿಕತೆಯ ಪ್ರದರ್ಶನಕ್ಕೆಂಬಂತೆ, ಉಳಿದಿದ್ದನ್ನು ಮೈಸೂರು ಒಡೆಯರಿಗೆ ಅಧೀನ ಅಧಿಕಾರ ರೂಪದಲ್ಲಿ ಒಪ್ಪಿಸಿತು. ಅಷ್ಟೇ ಅಲ್ಲ, ಈ ರಾಷ್ಟ್ರೀಯತೆ ಮತ್ತೆ ತಲೆ ಎತ್ತದಂತೆ ಮಾಡಲು, ಅನ್ಯಭಾಷಾ ರಾಷ್ಟ್ರೀಯತೆಗಳಿಂದ - ವಿಶೇಷವಾಗಿ ತೆಲುಗು ಮತ್ತು ತಮಿಳು-ಆಡಳಿತ ಹಾಗೂ ಕಾರ್ಮಿಕ ವರ್ಗವನ್ನು ತಂದು ಇಲ್ಲಿ ನೆಲೆಗೊಳಿಸಿತು. ಪಶ್ಚಿಮ ಕರಾವಳಿಯಲ್ಲಿ ಬ್ರಿಟಿಷ್ ಬಂಡವಾಳಶಾಹಿಯೊಂದಿಗೆ ಶಾಮೀಲಾಗಿ ಅಖಿಲ ಭಾರತ ವ್ಯಾಪಾರಿ ಸಮುದಾಯವಾಗಿ ತನ್ನ ಹಿತಾಸಕ್ತಿಯನ್ನು ಬೆಳಸಿಕೊಂಡಿದ್ದ ವಣಿಜ ವರ್ಗವನ್ನು ಇಲ್ಲಿ ತನ್ನ ದಲ್ಲಾಳಿ ವರ್ಗವಾಗಿ ನೆಲೆಗೊಳಿಸಿತು. ಹೀಗೆ ಭೌಗೋಳಿಕವಾಗಲ್ಲದೆ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ - ಈ ಎಲ್ಲ ನೆಲೆಗಳಲ್ಲೂ ಛಿದ್ರ ವಿಚ್ಛಿದ್ರವಾದ ಕನ್ನಡ ರಾಷ್ಟ್ರೀಯತೆ, ಕರ್ನಾಟಕ ಏಕೀಕರಣವಾದ ಈ 50 ವರ್ಷಗಳ ನಂತರವೂ ತನ್ನ ಪ್ರಜ್ಞೆಯನ್ನು ಪೂರ್ಣವಾಗಿ ಪಡೆದುಕೊಂಡಿಲ್ಲವೆಂದರೆ, ಈ ಕಾಲಾಂತರದಲ್ಲಿ ಅದು ಅನುಭವಿಸಿದ ಅಘಾತಗಳು ಎಂತಹದಿರಬಹುದೆಂಬುದನ್ನು ಊಹಿಸಬಹುದಾಗಿದೆ.
ಭಾರತದ ರಾಷ್ಟ್ರೀಯ ಆಂದೋಲನದ ಜೊತೆಯಲ್ಲೇ ಮೂಡಿ ನಿಂತ ಕರ್ನಾಟಕ ಏಕೀಕರಣ ಚಳವಳಿಯ ಮೂಲಕ ಕನ್ನಡ ರಾಷ್ಟ್ರೀಯತೆ ಮತ್ತೆ ಒಂದು ಹೊಸ ಭೌತಿಕ ರೂಪವನ್ನೇನ್ನೋ ಕಂಡುಕೊಂಡಂತಾಗಿದೆ. ಆದರೆ, ಅದಕ್ಕೊಂದು ಕನ್ನಡದ ಆತ್ಮ ಇನ್ನೂ ಮೂಡಿದಂತಿಲ್ಲ. ಇದಕ್ಕೆ ಟಿಪ್ಪು - ಬ್ರಿಟಿಷರ ಮುಖಾಮುಖಿಯಿಂದಾಗಿ ಕನ್ನಡ ರಾಷ್ಟ್ರೀಯತೆ ಹಲವಾರು ವರ್ಷಗಳ ಕಾಲ ಮುಕ್ಕಾಗಿದ್ದುದು ಎಷ್ಟು ಕಾರಣವೋ; ಅಷ್ಟೇ ಕಾರಣವಾದದ್ದು, ಕರ್ನಾಟಕ ಏಕೀಕರಣ ಚಳವಳಿಯು ಭಾರತದ ರಾಷ್ಟ್ರೀಯ ಆಂದೋಲನದ ಭಾವನಾತ್ಮಕ ಒತ್ತಡಗಳಿಗೆ ಸಿಕ್ಕಿ, ತನ್ನ ಆಶೋತ್ತರಗಳ ವಿಷಯದಲ್ಲಿ ಒಂದು ಸ್ಪಷ್ಟ ಹಾಗೂ ದೃಢವಾದ ತಾತ್ವಿಕತೆಯನ್ನು ಸಂಘಟಿಸಿಕೊಳ್ಳದೇ ಹೋದದ್ದು. ಇದು ಭಾಷಾ ಆಧಾರದ ಮೇಲೆ ರಚಿತವಾದ ಎಲ್ಲ ರಾಜ್ಯಗಳ ಪೂರ್ವ ರಾಷ್ಟ್ರೀಯತೆಗಳ ಬಗೆಗೂ ಹೇಳಬಹುದಾದರೂ, ಇವುಗಳಿಗೆ ಹೋಲಿಸಿದಂತೆ ಕನ್ನಡದ ಅಸ್ಮಿತೆಯು ಛಿದ್ರ ವಿಚ್ಛಿದ್ರವಾಗಿ ಹೋಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ಚಳುವಳಿ ವಿಶೇಷ ಜಾಗ್ರತೆ ವಹಿಸಬೇಕಾಗಿತ್ತು ಎನ್ನಿಸದಿರದು. ತಾನು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಮೂಲ ಸ್ಫೂರ್ತಿಯಾಗಿದ್ದವರೆಗೆ ಭಾಷಾ ರಾಷ್ಟ್ರೀಯತೆಗಳನ್ನು ಮಾನ್ಯ ಮಾಡುತ್ತ ಬಂದ ಭಾರತದ ರಾಷ್ಟ್ರೀಯ ಆಂದೋಲನ, ತನ್ನ ಗುರಿ ಸಮೀಪಿಸುತ್ತಿದ್ದಂತ ೆ- ಬ್ರಿಟಿಷರು ಅಧಿಕಾರ ಹಸ್ತಾಂತರ ಮಾಡಲು ಸಿದ್ಧರಾಗುತ್ತಿದ್ದಂತೆ - ಅವನ್ನು ಸಂಕುಚಿತ ಆಂದೋಲನಗಳೆಂದು ತಿರಸ್ಕರಿಸತೊಡಗಿದಾಗ, ಮುಂದಿನ ಭಾರತ ಎಂತಹದ್ದಿರಬಹುದೆಂಬುದರ ಸೂಚನೆ ದೊರಕತೊಡಗಿತು.
ಭಾರತದ ರಾಷ್ಟ್ರೀಯ ಆಂದೋಲನಕ್ಕೆ ಒಂದು ತಾತ್ವಿಕತೆ ಒದಗಿಸಿ ಮುನ್ನಡೆಸಿದ ಗಾಂಧೀಜಿ ನೇತೃತ್ವವು, ಭಾರತದ ವಿಭಜನೆಯ ಪ್ರಸ್ತಾಪದಿಂದಾಗಿ ಈ ಆಂದೋಲನ ಎದುರಿಸಿದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ರಾಜಕೀಯೇತರ ನೆಲೆಗಳಿಗೆ ಸರಿಯುವಂತಾದಾಗ, ಬಹುಭಾಷಾ ರಾಷ್ಟ್ರೀಯತೆಗಳು ಹತ್ತಿಕ್ಕಲ್ಪಟ್ಟವು. ಅಲ್ಲದೆ, ಆ ಹೊತ್ತಿಗಾಗಲೇ ಬ್ರಿಟಿಷ್ ಬಂಡವಾಳಶಾಹಿಯೊಂದಿಗೆ ಶಾಮೀಲಾಗಿ ಪ್ರವರ್ಧಮಾನಕ್ಕೆ ಬಂದಿದ್ದ ಒಂದು ಅಖಿಲ ಭಾರತ ವ್ಯಾಪಾರಿ ವರ್ಗ ರಾಷ್ಟ್ರೀಯ ಆಂದೋಲನದ ಮೇಲೆ ಪ್ರಭಾವ ಬೀರುವಷ್ಟು ಪ್ರಬಲಗೊಂಡಿತ್ತು. ಅದು ಬಹುಭಾಷಾ ರಾಷ್ಟ್ರೀಯತೆಗಳನ್ನಾಧರಿಸಿದ ಆಡಳಿತ ವಿಕೇಂದ್ರೀಕರಣ ನೀತಿಯು ನವಭಾರತ ನಿರ್ಮಾಣಕ್ಕೆ ಮಾರಕ ಎಂಬ ಅಭಿಪ್ರಾಯವನ್ನು ರಾಷ್ಟ್ರೀಯ ನಾಯಕತ್ವದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಹಾಗಾಗಿಯೇ ರಾಷ್ಟ್ರೀಯ ಆಂದೋಲನದ ನೇತೃತ್ವ ವಹಿಸಿದ್ದ ಕಾಂಗ್ರೆಸ್ಸನ್ನು ಭಾಷಾ ಪ್ರಾಂತೀಯತೆಗಳ ಆಧಾರದ ಮೆಲೆ ಸಂಘಟಿಸಲು 1928ರಷ್ಟು ಹಿಂದೆಯೇ ನೆಹರೂ ನೇತೃತ್ವದ ಸಮಿತಿ ಮಾಡಿದ್ದ ಶಿಫಾರ್ಸನ್ನು ಒಪ್ಪಿ ಪಾಲಿಸಿದ ಕಾಂಗ್ರೆಸ್, 1948ರ ಹೊತ್ತಿಗೆ ನೆಹರೂ ನೇತೃತ್ವದಲ್ಲೇ ಭಾಷಾವಾರು ಪ್ರಾಂತ್ಯಗಳ ರಚನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿತು. ಇದರ ಹಿಂದೆ, ಧರ್ಮಾಧಾರಿತವಾಗಿ ನಡೆದಿದ್ದ ರಾಷ್ಟ್ರ ವಿಭಜನೆ ಹುಟ್ಟಿಸಿದ್ದ ಆತಂಕವೂ ಇದ್ದೀತು. ಅದೇನೇ ಇರಲಿ, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಕರ್ನಾಟಕ ಏಕೀಕರಣ ಚಳವಳಿಯು ಭಾರತದ ರಾಷ್ಟ್ರೀಯ ಆಂದೋಲನದೊಂದಿಗೆ ಅನುಸಂಧಾನ ನಡೆಸಿದ ರೀತಿ ನೀತಿಗಳು, ಅದು ಕಟ್ಟಲು ಹೊರಟಿದ್ದ ನವಕರ್ನಾಟಕತ್ವದ ಶಿಥಿಲತೆಗೆ ಕಾರಣವಾಯಿತೆನ್ನಬಹುದು.
1858ರಷ್ಟು ಹಿಂದೆಯೇ ಧಾರವಾಡ ಸೀಮೆಯಲ್ಲಿ ಡೆಪ್ಯುಟಿ ಚೆನ್ನಬಸಪ್ಪ ಅವರಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಕನ್ನಡ ಸ್ವಾಭಿಮಾನ ಚಳವಳಿ, 1865ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಭಾಷಾ ಉಜ್ಜೀವಿನಿ ಸಭಾ; 1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ; 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು; 1920ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಮಹಾಸಮ್ಮೇಳನ ಮುಂತಾದ ಸಂಸ್ಥೆ-ಸಂಘಟನೆಗಳ ಸ್ಥಾಪನೆಯ ಮೂಲಕ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಾದ್ಯಂತ ಸುಪ್ತವಾಗಿದ್ದ ಕನ್ನಡ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಮೂಲಕ ಕರ್ನಾಟಕ ಏಕೀಕರಣ ಚಳವಳಿಯಾಗಿ ಬೆಳೆದು ನಿಂತಿತು. ಆದರೆ ಅದು, ಅಖಿಲ ಭಾರತ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಕನ್ನಡ ರಾಷ್ಟ್ರೀಯತೆ ಪಡೆದುಕೊಳ್ಳಬಹುದಾದ ರಾಜಕೀಯ ಸ್ವರೂಪದ ಬಗೆಗೆ ಒಂದು ನೀಲನಕ್ಷೆ ತಯಾರಿಸುವ ಸಂಘಟಿತ ಪ್ರಯತ್ನವನ್ನು ಮಾಡಲಾಗದ ಸಂದಿಗ್ಧಕ್ಕೆ ಸಿಕ್ಕಿಕೊಂಡಿತು.
ಈ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದಂತೆ ತೋರಿದ ಕರ್ನಾಟಕ ಕುಲ ಪುರೋಹಿತರೆಂದೇ ಪ್ರಸಿದ್ಧರಾದ ಆಲೂರು ವೆಂಕಟರಾಯರು ಭಾರತದ ರಾಷ್ಟ್ರೀಯತೆ ಹೊಮ್ಮಿದ ಹೊಸ ಸಂದರ್ಭದಲ್ಲಿ ಕನ್ನಡ ರಾಷ್ಟ್ರೀಯತೆಯನ್ನು `ಕರ್ನಾಟಕತ್ವ' ಎಂಬ ಪರಿಕಲ್ಪನೆಯ ಮೂಲಕ ಹೊಸದಾಗಿ ನಿರ್ವಚಿಸಿ, ಆ ಬಗೆಗೆ ವ್ಯಾಪಕ ಚಟುವಟಿಕೆಗಳನ್ನು ಕೈಗೊಂಡರು. ಆದರೆ ಅವರು, ಗಾಂಧೀಜಿಯ ಅಸ್ಪೃಶ್ಯತಾ ನಿವಾರಣೆ ಸೇರಿದಂತೆ ಅವರ ರಚನಾತ್ಮಕ ಕಾರ್ಯಕ್ರಮಗಳ ಬಗೆಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿ ಸಾವರ್ಕರರೊಂದಿಗೆ ಗುರುತಿಸಿಕೊಂಡು, `ಕರ್ನಾಟಕತ್ವ'ವನ್ನು `ಹಿಂದುತ್ವ'ದ ಮಾದರಿ ಮೇಲೆ ನಿರೂಪಿಸ ಹೊರಟರು. ಇದರಿಂದಾಗಿ ಅವರು ಏಕೀಕರಣ ಚಳವಳಿಯಲ್ಲಿ ಒಂಟಿಯಾಗಿ ಹೋದರು. ಹೀಗಾಗಿ `ಕರ್ನಾಟಕತ್ವ'ದ ರಾಜಕೀಯ ಸ್ವರೂಪ ನಿರ್ಧಾರಿತವಾಗಬೇಕಿದ್ದ ಸಂವಿಧಾನ ರಚನಾ ಸಭೆಯಲ್ಲಿ `ಕರ್ನಾಟಕ'ವನ್ನು ಪ್ರತಿನಿಧಿಸಿದವರೆಂದರೆ ನವಭಾರತದ ಏಕತೆ ಹಾಗೂ ಸಮಗ್ರತೆಯ ಹೆಸರಿನಲ್ಲಿ ಭಾರತದ ಭಾಷಾ ರಾಷ್ಟ್ರೀಯತೆಗಳನ್ನು ಹತ್ತಿಕ್ಕಲು ನಿರ್ಧರಿಸಿದ್ದ ರಾಷ್ಟ್ರೀಯ ಆಂದೋಲನದ ನಾಯಕರ ಪ್ರಭಾವಕ್ಕೆ ಸಿಕ್ಕಿ, `ಕರ್ನಾಟಕತ್ವ'ದ ಕೆಚ್ಚನ್ನೇ ಕಳೆದುಕೊಡಿದ್ದ ಕರ್ನಾಟಕ ಏಕೀಕರಣ ಚಳವಳಿಯ ರಾಜಕೀಯ ನಾಯಕರು. ಉದಾ: ಎಸ್.ನಿಜಲಿಂಗಪ್ಪನವರಂತಹವರು. ಭಾಷಾ ರಾಷ್ಟೀಯತೆಗಳನ್ನು ಅವುಗಳ ರಾಜಕೀಯ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲಿ ಅರ್ಥ ಮಾಡಿಕೊಳ್ಳಬಲ್ಲರಾಗಿದ್ದ ಸಮಾಜವಾದಿಗಳು ಕಾಂಗ್ರೆಸ್ ರಾಜಕಾರಣವನ್ನು ವಿರೋಧಿಸಿ ಸಂವಿಧಾನ ರಚನಾ ಸಭೆಯನ್ನು ಬಹಿಷ್ಕರಿಸಿದ್ದೂ, ಬಹುಭಾಷಾ ರಾಷ್ಟ್ರೀಯತೆಗಳಿಗೆ ಮುಳುವಾಯಿತು. ಇನ್ನು ಸಂವಿಧಾನ ಕರಡು ಸಿದ್ಧ ಪಡಿಸಿದ ಡಾ|| ಅಂಬೇಡ್ಕರಂತೂ ದಲಿತರ ಹಿತ ಅಖಿಲ ಭಾರತ ರಾಷ್ಟ್ರೀಯತೆಯಲ್ಲೇ ಅಡಗಿದೆ ಎಂದೇ ನಂಬಿದವರಾಗಿದ್ದರು.
ಕೆಲವು `ಮೈಸೂರಿಗ'ರ ವಿರೋಧದ ನಡುವೆಯೂ, ಎ.ಜೆ. ದೊಡ್ಡಮೇಟಿಯವರ ನೇತೃತ್ವದ ಕರ್ನಾಟಕ ನಿರ್ಮಾಣ ಶಿಬಿರ ಹಾಗೂ ಶಂಕರಗೌಡ ಅಳವಂಡಿಯವರ ಅಮರಣಾಂತ ಉಪವಾಸದಂತಹ ಉಪಕ್ರಮಗಳಿಂದಾಗಿ 1954ರ ಹೊತ್ತಿಗೆ, ಮೈಸೂರು ಕಾಂಗ್ರೆಸ್ಸಿಗರು ಒಮ್ಮತದಿಂದ ಕರ್ನಾಟಕ ಏಕೀಕರಣವನ್ನು ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಸದಸ್ಯತ್ವ ಹಾಗೂ ತಂತಮ್ಮ ರಾಜಕೀಯ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರದಿಂದಾಗಿ, ಕರ್ನಾಟಕ ರಾಜ್ಯೋದಯಕ್ಕೆ ಅಧಿಕೃತ ಚಾಲನೆ ಸಿಕ್ಕಿತು. ಆದರೆ ಆ ಹೊತ್ತಿಗೆ ಅಖಿಲ ಭಾರತ ರಾಷ್ಟ್ರೀಯತೆಯ ಎರಕದಲ್ಲಿ ಹಾಗೂ ಬ್ರಿಟಿಷ್ ಸರ್ಕಾರ ರೂಪಿಸಿದ್ದ 1935ರ ಭಾರತ ಸರ್ಕಾರದ ಕಾಯಿದೆಯ ಮೂಲ ಸ್ಫೂರ್ತಿಯೊಂದಿಗೆ ನಮ್ಮ ಸಂವಿಧಾನ ರೂಪುಗೊಂಡಿತ್ತು. ಅದರ ಅಡಿಯಲ್ಲಿ ಬ್ರಿಟಿಷರ ಕಾಲದ ಪ್ರಾಂತ್ಯಗಳು ಭಾರತದ ಒಕ್ಕೂಟದ ರಾಜ್ಯಗಳಾಗಿ ತಮ್ಮೆಲ್ಲ ಪೂರ್ವಭಾಷಾ ರಾಷ್ಟ್ರೀಯತೆಗಳ ಸ್ವಾಯತ್ತತೆಯನ್ನೂ ಕಳೆದುಕೊಂಡಿದ್ದವು. ಅವೀಗ ಉಪರಾಷ್ಟ್ರೀಯತೆಗಳೆಂಬ ಅಭಿದಾನಕ್ಕೆ ಪಾತ್ರವಾಗಿ, ತಾವೇ ರೂಪಿಸಿದ ರಾಷ್ಟ್ರೀಯ ಆಂದೋಲನ ಕಟ್ಟಿ ಕೊಟ್ಟ ಸಂವಿಧಾನ ನಿರೂಪಿಸಿದ ಭವ್ಯ ಭಾರತದ ಭಾರಕ್ಕೆ ಸಿಕ್ಕಿ, ತಮ್ಮ ಅಸ್ಮಿತೆಗಳ ಮೂಲಾಧಾರಗಳನ್ನೇ ಕಳೆದುಕೊಂಡವು: ಕೇಂದ್ರದ ಪ್ರತಿನಿಧಿಗಳಾದ ರಾಜ್ಯಪಾಲರು ಹಾಗೂ ಕೇಂದ್ರದ ಅಧೀನದಲ್ಲಿರುವ ಅಖಿಲ ಭಾರತ ಸೇವಾ ಸಿಬ್ಬಂದಿಯ ಕಣ್ಗಾವಲಿನಲ್ಲಿ, ಸಂವಿಧಾನದಿಂದ ಪರಿಮಿತವಾದ ಸಾಮಾಜಿಕ - ಆರ್ಥಿಕ - ಸಾಂಸ್ಕೃತಿಕ ಎಲ್ಲೆಗಳಲ್ಲಷ್ಟೇ ಅವು ಈಗ ಜೀವ ಆಡಿಸಿಕೊಳ್ಳಬಲ್ಲವಾಗಿವೆ. ಇಂತಹ ಒತ್ತಡಗಳಿಂದಾಗಿಯೇ, 70ರ ದಶಕದಿಂದೀಚೆಗೆ ದೇಶದ ಅನೇಕ ಕಡೆ ಪ್ರತ್ಯೇಕತಾ ಚಳವಳಿಗಳು ತಲೆ ಎತ್ತಿ ಕೇಂದ್ರ ಬಲದಿಂದ ದಮನಕ್ಕೀಡಾಗಿವೆ. ಸದ್ಯದ ಕಾಶ್ಮೀರ ಸಮಸ್ಯೆ ಕೂಡಾ ಈ ಅದಮ್ಯ ಪ್ರವೃತ್ತಿಯ ಜಟಿಲ ರೂಪವೇ ಆಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯಗಳ ಅಧಿಕಾರಗಳನ್ನು ಪುನರ್ನಿರೂಪಿಸಲು 80ರ ದಶಕದಲ್ಲಿ ರಚಿತವಾದ ಸರ್ಕಾರಿಯಾ ಆಯೋಗದ ಶಿಫಾರ್ಸುಗಳೂ ಇಂದು ಅಪ್ರಸ್ತುತಗೊಂಡಿವೆ.
ಹೀಗೆ ಮೂಡಿ ನಿಂತಿತುವ ಹೊಸ ಜಾಗತಿಕ ಪರಿಸ್ಥಿತಿಯಲ್ಲಿ, ತಮಿಳ್ನಾಡಿನಂತಹ ರಾಜ್ಯಗಳೇನೋ ಮುಕ್ಕಾಗದಂತೆ ಉಳಿದುಕೊಂಡು ಬಂದಿದ್ದ ತಮ್ಮ ಕುಲಪ್ರಜ್ಞೆಯ ಸ್ಫೂರ್ತಿಯೊಂದಿಗೆ; ಈ ಮೊದಲು ವಿವರಿಸಿದಂತೆ, ತಮ್ಮ ಕುಲ ಸ್ವಾಯತ್ತತೆಯನ್ನು ಒತ್ತುವರಿ ಮಾಡಿಕೊಳ್ಳುವ ಈ ಹೊಸ ರಾಷ್ಟ್ರೀಯತೆಯ ಈವರೆಗಿನ ಅನೇಕ ತೆರನ ಪ್ರಯತ್ನಗಳನ್ನು ಸಮರ್ಥವಾಗಿ ಎದುರಿಸುತ್ತ ಬಂದಿವೆ. ತಮಿಳ್ನಾಡಂತೂ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ತನ್ನ ಕುಲ ರಾಜಕಾರಣದ ಅಗತ್ಯಕ್ಕೆ ತಕ್ಕಂತೆ, ಸಂವಿಧಾನವನ್ನೇ ಪರಿಷ್ಕರಿಸುವ ಹಕ್ಕೊತ್ತಾಯವನ್ನು ರಾಜ್ಯಪಾಲರ ಭಾಷಣದ ಮೂಲಕವೇ ಮಂಡಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದಶರ್ಿಸಿದೆ. ಆದರೆ ಕರ್ನಾಟಕ ಏಕೀಕರಣ ಸಮಯದಲ್ಲಾದರೂ ಕುಲಪ್ರಜ್ಞೆಯ ಆಧಾರದ ಮೇಲೆ ಕರ್ನಾಟಕತ್ವದ ಸಮರ್ಥ ಮಾದರಿ ಕಟ್ಟಿಕೊಳ್ಳಲಾಗದೇ ಹೋದ ಕನ್ನಡ ಸಮುದಾಯ, ಸಹಜವಾಗಿಯೇ ಇಂದು ಭಾರತವೆಂಬ ಒಕ್ಕೂಟದಲ್ಲಿ ಸದಾ ಎಲ್ಲ ರೀತಿಯ - ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ - ಒತ್ತುವರಿಗಳಿಗೆ ಸಮರ್ಥ ಪ್ರತಿರೋಧ ವ್ಯಕ್ತಪಡಿಸುವ ಅಸ್ಮಿತೆಯ ಅಂತಃಶಕ್ತಿಯನ್ನೇ ಕಳೆದುಕೊಂಡಿದೆ. ಹಾಗಾಗಿಯೇ ಇಂದು ಕನ್ನಡ ಚಳವಳಿ ಬೀದಿ ಜಗಳದ ಮಟ್ಟಕ್ಕೆ ಇಳಿದಿದೆ.
ಇದರ ಒಟ್ಟಾರೆ ಪರಿಣಾಮವೆಂದರೆ ಕರ್ನಾಟಕದ ರಾಜಕಾರಣ ತನ್ನ ಕೇಂದ್ರವನ್ನೇ ಕಳೆದುಕೊಂಡು, ಜಾಗತೀಕರಣವೆಂಬ ನವವಸಾಹತುಶಾಹಿಯ ದಲ್ಲಾಳಿಗಳ ಕೈವಶವಾಗಿ, ಕರ್ನಾಟಕದ ಸಾಮಾನ್ಯ ರೈತ ಪ್ರತಿನಿಧಿಸುವ ಸಾಮಾನ್ಯ ಕನ್ನಡಿಗ ತನ್ನ ನಾಡಿನಲ್ಲೇ ಘನತೆಯಿಂದ ಅನ್ನ ಸಂಪಾದಿಸಿಕೊಂಡು ಬದುಕುವ ನೆಲೆಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಅಭಿವೃದ್ದಿ ಸೂಚ್ಯಂಕದಲ್ಲಿ 25 ವರ್ಷಗಳ ಹಿಂದೆ ಭಾರತದಲ್ಲಿ 4-5ನೇ ಸ್ಥಾನದಲ್ಲಿರುತ್ತಿದ್ದ ಕರ್ನಾಟಕ, ತನ್ನ ಹೆಮ್ಮೆಯ ಮಾಹಿತಿ ತಂತ್ರಜ್ಞಾನ ಕೈಗಾರಿಕೆ ಉತ್ಪತ್ತಿ ಮಾಡುತ್ತಿರುವ ಅಪಾರ ಸಂಪತ್ತಿನ ದ್ವೀಪಗಳ ನಡುವೆಯೂ ಈಗ 7-8ನೇ ಸ್ಥಾನಕ್ಕೆ ಜಾರಿದೆ. ನೆರೆಯ ಕೇರಳ ಹಾಗೂ ತಮಿಳ್ನಾಡು ಕರ್ನಾಟಕವನ್ನು ದಾಟಿ ಹೋಗಿವೆ. ಆಂಧ್ರ ಆ ಹಾದಿಯಲ್ಲಿದೆ. ಇದನ್ನು ಸಂಕೇತಿಸುವಂತೆ ರಾಜ್ಯದ ಪೂರ್ವಗಡಿ, ತೆಲುಗು ರಾಜಕಾರಣದ ಒತ್ತುವರಿಗೆ ಈಡಾಗುತ್ತಿದೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸುವಲ್ಲಿ ರಾಜ್ಯ ಸೋತಿರುವುದು ಈಗ ಸ್ಪಷ್ಟವಾಗಿದೆ. ಇದನ್ನೆಲ್ಲ ಬೀದಿ ಕಾಳಗದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವೇ?
ಹಾಗಾದರೆ, ಇದಕ್ಕೆ ಪರಿಹಾರವೇನು? ಇದಕ್ಕಾಗಿ ಇಂದು ಅಗತ್ಯವಿರುವುದು ನವ ಭಾರತ ತನ್ನ `ಪ್ರಗತಿ'ಯ ಹಾದಿಯಲ್ಲಿ ಸೃಷ್ಠಿಸಿಕೊಟ್ಟಿರುವ ಹೊಸ ಸವಾಲುಗಳನ್ನು, ಕರ್ನಾಟಕದ ಮಟ್ಟಿಗೆ ಸಮರ್ಥವಾಗಿ ಎದುರಿಸಬಲ್ಲ ಹೊಸ `ಕರ್ನಾಟಕತ್ವ'. ನವೋದಿತ ರಾಷ್ಟ್ರೀಯತೆಯ ಸಂಭ್ರಮದಲ್ಲಿ ಕರ್ನಾಟಕ ಏಕೀಕರಣ ಚಳವಳಿ ರೂಪಿಸಿಕೊಂಡ ಕರ್ನಾಟಕತ್ವವು ಸಾಂಸ್ಕೃತಿಕ ಪ್ರಾಧಾನ್ಯತೆ ಹೊಂದಿದ್ದು, ಸಾಮಾಜಿಕ - ಆರ್ಥಿಕ ಆಯಾಮಗಳು ಅದರಲ್ಲಿ ಕಾಣೆಯಾಗಿದ್ದವು. ಈ ಮಾದರಿಗೆ ಸ್ಫೂರ್ತಿ ನೀಡಿದ್ದ ಆಲೂರು ವೆಂಕಟರಾಯರ ಗತ ವೈಭವಧಾರಿತ ಶಿಷ್ಟ ಸಾಂಸ್ಕೃತಿಕ ಮಾದರಿ, ಬಿ.ಎಂ.ಶ್ರೀಯವರ 'ಇವಳ ಸೊಬಗನವಳು ತೊಟ್ಟು, ನೋಡ ಬಯಸಿದೆ; ಅವಳ ತೊಡುಗೆ ಇವಳಿಗಿಟ್ಟು ಹಾಡ ಬಯಸಿದ' ಇಂಗ್ಲಿಷ್-ಕನ್ನಡ ಸಂಸ್ಕೃತಿಗಳ ಸಮನ್ವಯದ ಆಧುನೀಕರಣದ ಮಾದರಿ ಹಾಗೂ ಕುವೆಂಪು ಅವರ `ನೃಪತುಂಗ ಚಕ್ರವರ್ತಿ; ಪಂಪ ಅದರ ಮುಖ್ಯಮಂತ್ರಿ' ಎಂದು ಭಾವಿಸಿಕೊಂಡು 'ನೀನೆಲ್ಲಿದ್ದರೆಯೇನ್, ಅದೆ ಕರ್ನಾಟಕ' ಎಂದು ಹೇಳುವ ಭಾವನಾತ್ಮಕ ಮಾದರಿ - ಇವು ಈ 50 ವರ್ಷಗಳಲ್ಲಿ ಪ್ರಕಟಪಡಿಸಿರುವ ಮಿತಿಗಳನ್ನು ಮನಗಂಡು, ಇಂದು ಸಾಮಾಜಿಕ-ಆರ್ಥಿಕ-ರಾಜಕೀಯ ಆಯಾಮಗಳನ್ನೊಳಗೊಂಡ ಹೊಸ ಮಾದರಿಯೊಂದನ್ನು ರೂಪಿಸಿಕೊಳ್ಳುವ ತುರ್ತು ಅಗತ್ಯವಿದೆ.
ಇದರ ಬೀಜ ಮಾದರಿ ಈ ಮೊದಲೇ ನಿರೂಪಿಸಿದಂತೆ ಕರ್ನಾಟಕದ ಪರಂಪರೆಯಲ್ಲೇ ಇದೆ. ಅದೇ ಬಸವಣ್ಣನ ಮಾದರಿ. ಈ ಮಾದರಿಯನ್ನು, ಬಸವಣ್ಣನನ್ನು ಒಂದು ನಿರ್ದಿಷ್ಟ ಜಾತಿಯ ನಾಯಕತ್ವದಿಂದ ಬಿಡಿಸಿಕೊಂಡು ಕರ್ನಾಟಕದ ಕುಲ ನಾಯಕನನ್ನಾಗಿ ಮಾಡಿಕೊಳ್ಳುವ ಆಂದೋಲನದ ಕುಲುಮೆಯಲ್ಲಿ ರೂಪಿಸಬೇಕಿದೆ. ಇಂತಹ ಆಂದೋಲನ ಮಾತ್ರ ನಿಜವಾದ ಕನ್ನಡ ಚಳವಳಿಯಾಗಿ ಬೆಳೆದು, ಭಾರತದ ಏಕತೆ, ಸಮಗ್ರತೆ ಹಾಗೂ ಅಭ್ಯುದಯದ ಜೊತೆ ಜೊತೆಗೆ ಕರ್ನಾಟಕದ, ಅಂದರೆ ಕನ್ನಡಿಗನ ವ್ಯಕ್ತಿತ್ವದ ಏಕತೆ, ಸಮಗ್ರತೆ ಹಾಗೂ ಅಭ್ಯುದಯವನ್ನು ಸಾಧಿಸಬಲ್ಲದು.
ಇಂತಹ ಆಂದೋಲನವೊಂದಕ್ಕಾಗಿ ಕರ್ನಾಟಕ ಕಾಯುತ್ತಿದೆ.
Comments
ಉ: ಆ ಗಣರಾಜ್ಯ- ಈ ಕರ್ನಾಟಕ