ನಾವು ಭಾರತೀಯರು ಏಕೆ ಹೀಗೆ?
ಇತ್ತೀಚೆಗೆ ಬೀದಿಯಲ್ಲಿ ನಡೆಯುತ್ತಿದ್ದಾಗ ಮನೆಯೊಂದರಿಂದ ತಾಯಿ ಮಗನಿಗೆ ಕೂಗಿ ಹೇಳುವ ಮಾತು ಕೇಳಿ ಬಂತು.."ಜೂಲೀನ ಹೊರಗಡೆ ಕರ್ಕೊಂಡು ಹೋಗಿ ಬಾ, ಇಲ್ಲಾಂದ್ರೆ ಮನೆ ಒಳ್ಗೇ ಗಲೀಜು ಮಾಡುತ್ತೆ" ಆ ಹುಡುಗ ನಾಯಿಯನ್ನು ರಸ್ತೆ ಬದಿಯಲ್ಲಿ ’ಗಲೀಜು’ ಮಾಡಿಸಲು ಕರೆದುಕೊಂಡು ಹೊರಟ.
ನಾನು ಇಸ್ರೇಲಿನಲ್ಲಿ ಕಳೆದ ದಿನಗಳ ನೆನಪಾದವು. ತೆಲ್ ಅವಿವ್ ನಗರದ ಬೆನ್ ಯಹುದ ರಸ್ತೆ ಬದಿಯಲ್ಲಿ ನಡೆಯುತ್ತಿದ್ದೆ. ನನ್ನ ಸ್ವಲ್ಪ ಮುಂದೆ ಒಬ್ಬ ಯುವಕ ಮತ್ತು ಆತನ ಸ್ನೇಹಿತೆ ನಡೆಯುತ್ತಿದ್ದರು. ಯುವತಿಯು ನಾಯಿಯೊಂದರ ಕುತ್ತಿಗೆಗೆ ಕಟ್ಟಿದ್ದ ಸರಪಳಿ ಕೈಯಲ್ಲಿ ಹಿಡಿದುಕೊಂಡಿದ್ದಳು. ಯುವತಿಯ ಧಿರಿಸು ಫ್ಯಾಶನ್ ಟಿವಿಯ ಯಾವುದೇ ರೂಪದರ್ಶಿಯನ್ನು ನಾಚಿಸುವಂತಿತ್ತು, ಅತಿ ಎತ್ತರ ಹಿಮ್ಮಡಿಯ ಶೂಗಳು, ಚಿಕ್ಕದಕ್ಕಿಂತಲೂ ಚಿಕ್ಕದಾದ ಲಂಗ, ಎದೆ ಮಾತ್ರ ಮುಚ್ಚುವಂತಹ ಅಂಗಿ...
ನಾಯಿಯು ಒಂದು ಕಡೆ ’ಗಲೀಜು’ ಮಾಡಿತು. ಆಗ ಆ ಯುವತಿಯು ಮಾಡಿದ ಕೆಲಸದಿಂದ ನಾನು ದಂಗು ಬಡೆದು ಹೋದೆ. ಆಕೆ ತನ್ನ ಕೈಚೀಲದಿಂದ ಪ್ಲಾಸ್ಟಿಕ್ ಹಾಳೆಯೊಂದನ್ನು (ದಪ್ಪವಾಗಿ ಪಾರದರ್ಶಕವಾಗಿರುವಂತಹದ್ದು, ನಮ್ಮ ದೇಶದಲ್ಲಿ ಉಪಯೋಗಿಸುವಂತಹ ಅತಿ ತೆಳುವಾದ ಹಾಗೂ ವಾತಾವರಣಕ್ಕೆ ಅತಿ ಹಾನಿಕಾರಕವಾದಂತಹದ್ದಲ್ಲ) ತೆಗೆದಳು ಹಾಗೂ ನಾಯಿ ಮಾಡಿದ ’ಗಲೀಜ’ನ್ನು ಬಾಚಿ ತೆಗೆದು ಹಿಡಿದು ನಡೆಯತೊಡಗಿದಳು. ಮುಂದೆ ಸಿಕ್ಕಿದ ಕಸದ ಬುಟ್ಟಿಯೊಂದರಲ್ಲಿ ಎಸೆದಳು.
ನಮ್ಮ ದೇಶದ ಯುವಕ ಯುವತಿಯರು ಪಾಶ್ಚಾತ್ಯರ ಫ್ಯಾಶನ್ನನ್ನು ಚಾಚೂ ತಪ್ಪದೆ ಅನುಸರಿಸಿ ಅವರಿಗಿಂತಲೂ ಮುಂದೆ ಹೋಗುತ್ತಾರೆ. ಆದರೆ ಪಾಶ್ಚಾತ್ಯರ ಅಂತರ್ಶಿಸ್ತನ್ನು ಯಾರೂ ಅನುಕರಿಸುವುದಿಲ್ಲ. ದಾರಿ ಬದಿಯಲ್ಲಿ ನಾಯಿ ಗಲೀಜು ಮಾಡಿದರೆ ತಮ್ಮ ಮನೆ ಸ್ವಚ್ಛವಾಗಿ ಉಳಿಯುತ್ತದೆ ಎಂಬುದು ಬಿಟ್ಟರೆ ರಸ್ತೆ ಬದಿಯಲ್ಲಿ ನಡೆಯುವವರಿಗೆ ಆಗುವ ಅನಾನುಕೂಲದ ಬಗ್ಗೆ ಕಾಳಜಿಯೇ ಇರುವುದಿಲ್ಲ.
ನಮ್ಮ ದೇಶ ಸೂಪರ್ ಪವರ್ ಆಗುವ ಬಗ್ಗೆ ಎಲ್ಲರೂ ಮಾತಾಡುತ್ತಾರೆ, ಆದರೆ ಜನತೆಗೆ ಅಂತರ್ಶಿಸ್ತು ಇಲ್ಲದೆ ಸೂಪರ್ ಪವರ್ ಮಟ್ಟಕ್ಕೆ ಏರುವ ಮಾತು ಕೇವಲ ಕಾಲ್ಪನಿಕ ಎನಿಸುತ್ತದೆ...