ಪರವಲ್ ಪುರಾಣ

ಪರವಲ್ ಪುರಾಣ

ಫ್ರಿಜ್ಜು ಭಣಭಣ ಅನ್ನುತ್ತಿದ್ದ ಒಂದು ದಿನ. ಏನು ಅಡಿಗೆ ಮಾಡಲಪ್ಪಾ ಅಂತ ಯೋಚಿಸುತ್ತಿದ್ದೆ. ಇದನ್ನ ಯೋಚಿಸೋದು ಕವನ ಬರೆದಷ್ಟೇ ಕಷ್ಟ...ಅಥವಾ ಕೆಲವು ಸಲ ಸುಲಭ. ಆದರೆ ಈವತ್ತು ಕಷ್ಟದ ದಿನ. ಬೆಳಗಾತೆದ್ದು ದಿನಾ ಇದೇ ಮಂಡೆಬಿಸಿಯಾಯ್ತಲ್ಲ ಅಂತ ಅಂದುಕೊಳ್ಳೋದಕ್ಕೂ ಫೋನ್ ಬರೋದಕ್ಕೂ ಸರಿ ಹೋಯ್ತು. 'ಇವತ್ತು ಸಾಯಂಕಾಲ ನೀವಿಬ್ಬರೂ ಮನೇಲಿ ಇರ್ತೀರಾ?' 'ಹೂಂ ಇರ್ತೀವಿ, ಏನು, ಈ ಕಡೆ ಬರ್ತಿದೀರಾ?' 'ಹೌದು, ನಾನೂ ನನ್ನ ಸ್ನೇಹಿತಾನೂ ಬರೋಣ ಅಂತ ಇದ್ವಿ. ಆದ್ರೆ ನೀನು ಅಡಿಗೆ-ಗಿಡಗೆ ಏನೂ ಮಾಡೋಕೆ ಹೋಗ್ಬೇಡ, ಅಷ್ಟೊತ್ತು ನಾವು ಇರಲ್ಲ' 'ಅಯ್ಯೋ ಹಾಗಂದ್ರೆ ಹೇಗೆ, ಬಂದ ಮೇಲೆ ಊಟಮಾಡಿಕೊಂಡೇ ಹೋಗಿ' 'ಸರಿ ಹಾಗಾದ್ರೆ, ಸಂಜೆ ಸಿಗೋಣ' 'ಆಯ್ತು ಬನ್ನಿ.'

ಫೋನಿಟ್ಟೆ, ತಲೆ ಚಿತ್ರಾನ್ನ ಆಯ್ತು. ಫೋನ್ ಮಾಡಿದವರು ಅಪರೂಪದವರೇನು ಅಲ್ಲ. ಊರಿಗೆ ಬಂದಾಗೆಲ್ಲ ನಮ್ಮ ಮನೇಗೆ ಬರ್ತಿರ್ತಾರೆ. ಒಂದೇ ಟ್ರಿಪ್ಪಲ್ಲಿ ಎರಡು ಮ್+ಊ+ರು ಸಲ ಬಂದರೂ ಬಂದರೇ. ಆಗೊಂದು ಈಗೊಂದು ಸಿನೆಮಾ ತೆಗೆಯೋದು, ನಾಟ್ಕ ಆಡ್ಸೋದು, ಇನ್ನೂ ಏನೇನೋ ಮಾಡೋದು ಅವರ ಕೆಲಸ. ಆದರೆ ನಮಗೆ ಅವರೊಂಥರಾ घर की मुर्गी ಇದ್ದ ಹಾಗೆ (...दाल बराबर - ಹಿಂದಿಯಲ್ಲಿ ಹಿಂದುಳಿದವರಿಗೆ = ಸಾಕಿದ ಕೋಳಿ ಪುಳ್ಚಾರಿಗಿಂತ ಕಡೆ ಅಂತ). ಪರಿಪರಿಯಾಗಿ ಮಾಡಿ ಹಾಕಬೇಕಂತೇನೂ ಇಲ್ಲ. ಒಂದು ಅನ್ನ, ಪುಳ್ಚಾರೇ ಸಾಕು. ಜೀವಮಾನದಲ್ಲೇ ಇನ್ನು ಇಂಥ ಸಾರು ಸಿಗತ್ತೋ ಇಲ್ಲವೋ ಅನ್ನೋ ಥರ ಸುರಿದು ಉಂಡು ಬಟ್ಟಲು ಕೀಸಿ ಬೆರಳು ನೆಕ್ಕುವವರು. ಅಂಥದ್ದರಲ್ಲಿ ಅವರಿಗೊಂದು ಅಡಿಗೆ ಮಾಡಿ ಹಾಕುವುದೆಂದರೆ ಕಡಿಗೆ ಕೊಚ್ಚುವಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ,ಅವರು ಸಿನೆಮಾ ಮಾಡೋಷ್ಟೇ ಸಲೀಸಾಗಿ ಸೌಂಟೂ ಹಿಡೀತಾರೆ, ರು..ಚ್ಚಿಯಾಗಿ ಅಡಿಗೇನೂ ಮಾಡ್ತಾರೆ! ಇಂಥಾ ನಳನಿರ್ದೇಶಕನಿಗೆ ಬರೀ ಒಂದು ಸಾರು ಮಾಡಿಹಾಕೋದೇ? ಸಾಧ್ಯವೇ ಇಲ್ಲ.

ನಮ್ಮ ಊರಲ್ಲಿ (ಕೂಡಿಸಿಕೊಂಡು ಓದಿ) 'ಬ್ರಾಂಬೃ ಮನೆಅಗೆ ಬಾಳಿ ಇಪ್ಪ್‌ಕಾಗ, ಶೂದೃ ಮನೆಅಗೆ ಕೋಳಿ ಇಪ್ಪ್‌ಕಾಗ' ಅಂತಾರೆ. ಅಂದರೆ ಹೊತ್ತಲ್ಲದ ಹೊತ್ತಲ್ಲಿ ಹರಿಹರಿ ಅಂತ ಯಾವನಾದರೂ ಊಟಕ್ಕೆ ಬಂದರೆ ಬಾಳೆಯ ಕುಡಿಗೋ ಕೋಳಿಯ ಕತ್ತಿಗೋ ಕುತ್ತು ಬಂತು ಅಂತಲೇ ಲೆಕ್ಕ. ಅದಕ್ಕೆ ಇವೆರಡೂ ಆ ಆ ಜಾತಿಗೆ ಸೇರಿದವರ ಮನೆಯಲ್ಲಿ ಇರಬಾರದು ಅಂತ. ಅತಿಥಿ ದೆವ್ವೋಭವ ಅನ್ನುವವರು ಮಾಡಿಕೊಂಡ ಗಾದೆ ಇದಿರಬೇಕು! ಆದರೆ ನಾನು ಶುದ್ಧ ಬ್ರಾಂಬೃ ಆದ್ದರಿಂದ ಗಾದೆಯ ಎರಡನೆಯ ಭಾಗ ನನಗೆ ಇರ್ರೆಲವೆಂಟು. ಇಪ್ಪತ್ತನೇ ಮಾಡಿಯಲ್ಲಿ ನನ್ನ ಮನೆಯಿರೋದ್ರಿಂದ ಬ್ರಾಂಬೃ ಭಾಗವೂ ನನಗೆ ಇರ್ರೆಲವೆಂಟು. ಅದಕ್ಕೇ ಈ ಗಾದೆಗೆ ನನ್ನ sequel ಏನಂಪ್ಪಾ ಅಂದ್ರೆ, 'ಫ್ಲ್ಯಾಟಲ್ಲಿಪ್ಪೋರ ಫ್ರಿಜ್ಜು ಖಾಲಿ ಇಪ್ಪ್‌ಕಾಗ' ಅಂತ. ಈಗ ನನ್ನ ಅವಸ್ಥೆ ನೋಡಿದ ಮೇಲೆ ಇದು ಸುಳ್ಳಲ್ಲ ಅಂತ ನಿಮಗೇ ಗೊತ್ತಾಗತ್ತೆ.

ಹೋಗಿ ತರಕಾರಿ ತರೋಣ ಅಂದ್ರೆ ಅಷ್ಟು ಟೈಮಿಲ್ಲ. ತಿಂಡಿ, ರಾತ್ರಿಯ ಅಡಿಗೆ ಎರಡೂ ಮಾಡಿಟ್ಟು ಕೆಲಸಕ್ಕೆ ಹೋಗಬೇಕು. ಈ ಊರಲ್ಲಿ ಫೋನ್ ಮಾಡಿದರೆ ಸಾಕು, ಎಲ್ಲಾ ಮನೆಬಾಗಿಲಿಗೇ ಬರತ್ತೆ. ಆದರೆ ಫೋನ್ ಮಾಡಿ ತರಕಾರಿ ತರಿಸಿಕೊಳ್ಳೋದು ಅಂದ್ರೆ ಪೀಟ್ಜಾ ತರಿಸಿಕೊಂಡ ಹಾಗೆ ಅಲ್ಲ. ಅಂಗಡಿಯವನು ತಾನು ಬಲುಜಾಣ ಅಂದುಕೊಂಡು ನಾಲ್ಕು ಚೆನ್ನಾಗಿರೋ ಟೊಮ್ಯಾಟೋ ಜೊತೆ ಎರಡು ಕೊಳೆತಿರೋದು, ಅರ್ಧ ಚೆನ್ನಾಗಿದ್ದರೆ ಅರ್ಧ ಬಲಿತಿರೋ ಬೆಂಡೆಕಾಯಿ ಕಳಿಸಿಬಿಡ್ತಾನೆ. ಇದನ್ನ ಮನೆಗೆ ತಂದುಕೊಡೋ ಹುಡುಗನ ಜೊತೆ ನಾನೇನು ಜಗಳ ಆಡಲಿ? ಅಷ್ಟೂ ವಾಪಸ್ ತಗೊಂಡು ಹೋಗು ಅನ್ನಲಾ, ಇಲ್ಲಾ, ಒಳ್ಳೇದಿಟ್ಟು ಕೊಳೆತದ್ದನ್ನ ತಗೊಂಡು ಹೋಗಿ ನಿನ್ನ ಯಜಮಾನನ ಮುಖಕ್ಕೆ ಬಡಿ ಅನ್ನಲಾ? ನಾನು ಹಾಗಂದರೂ ಆ ಹುಡುಗ ಹೋಗಿ ನಾನ್ಹೇಳಿದ ಹಾಗೇ ಮಾಡ್ತಾನಾ? ಪಾಪ ಆ ಹುಡುಗನದೇನು ತಪ್ಪು? ಅದಕ್ಕೇ ತರಕಾರಿ ಮಾತ್ರ ನಾನೇ ಮಾರ್ಕೆಟ್ಟಿಗೆ ಹೋಗಿ ನೋಡಿ, ಹೆಕ್ಕಿ, ಚೌಕಾಸಿ ಮಾಡಿ ತಂದರೇ ವಿದ್ಯಾರ್ಥಿ ಭವನದ ದೋಸೆ ತಿಂದಷ್ಟು ತೃಪ್ತಿ. ಏನೇ ಆಗಲಿ ಒಂದು ಸಲ ಫ್ರಿಜ್ ತೆಗೆದು ನೋಡೇ ಬಿಡೋಣ ಅಂತ ಹೋದೆ. ತೆಗೆದು ನೋಡಿದರೆ ಸೊರಗಿದ ಅರ್ಧ ಸೋರೆಕಾಯಿ, ನಾಲ್ಕು ನರಪೇತಲ ಅಲಸಂದೆಕೋಡು, ಒಂದಷ್ಟು ಪರವಲ್ ಇತ್ತು. ಅರ್ಧ ಸೋರೆಕಾಯಾದರೂ ಅರ್ಥ ಆಗತ್ತೆ; ದೊಡ್ಡ ಸೋರೆಕಾಯಲ್ಲಿ ಅರ್ಧ ಪಲ್ಯನೋ, ಸೀಮೆಣ್ಸೋ, ಇನ್ನೇನೋ ಮಾಡಿ ಉಳಿದರ್ಧ ಹಾಗೇ ಇಟ್ಟಿರಬೇಕು. ಆದರೆ ನಾಲ್ಕು ಅಲಸಂದೆಕೋಡು ಯಾವ ಪುರುಷಾರ್ಥಕ್ಕೆ ಅಂತ ಉಳಿಸಿದ್ದೆ? ಹೊಳೆಯಲಿಲ್ಲ. ಹೋಗ್ಲಿ. ಇಷ್ಟರಲ್ಲಿ ನಾಲ್ಕು ಜನಕ್ಕೆ (ನಾವಿಬ್ಬರು, ನಮಗಿಬ್ಬರು ನೆಂಟರು) ಏನಂತ ಮಾಡ್ಲಿ? ಪರವಲ್ ಸುಮಾರಿತ್ತು. ಹಾಗಾದರೆ ಇದರಲ್ಲೇ ಏನಾದರೂ ಮಾಡಬೇಕು. ಆದರೆ ಬರುವವರಲ್ಲಿ ಒಬ್ಬರು ಮೈಸೂರಿನವರು ಇನ್ನೊಬ್ಬರು ದೆಹಲಿಯವರು. ಇವರಿಗೆ ಈ ತರಕಾರಿ ಹಿಡಿಸುತ್ತೋ ಇಲ್ಲವೋ. ಹಿಡಿಸಲಿ ಬಿಡಲಿ ಈಗ ನನಗೆ ಪರವಲ್ಲೇ ಪರಮಾತ್ಮ. ಗತಿಕಾಣಿಸಲಿಕ್ಕೆ ಇದೊಂದೇ ಇರೋದು.

ಈ ಪರವಲ್ ಬಿಹಾರದಿಂದ ಬಂದವರೊಬ್ಬರು ತಂದುಕೊಟ್ಟಿದ್ದು. (ಗೊತ್ತಿಲ್ಲದವರಿಗೆ, ಪರವಲ್ ತೊಂಡೆಯಂತೆ ಕಾಣುವ ಆದರೆ ತೊಂಡೆಗಿಂತ ಠುಮ್ಮಗಿರುವ ಒಂದು ತರಕಾರಿ. ಹೋಲಿಕೆ ಇಲ್ಲಿಗೇ ಮುಗಿಯುತ್ತದೆ. ಇದನ್ನು ಬಿಹಾರ, ಬಂಗಾಲಗಳಲ್ಲಿ ಹೆಚ್ಚು ತಿಂತಾರೆ. ಭೋಜಪುರಿಯಲ್ಲಿ ಇದನ್ನ 'ಪರೋರಾ' ಅಂತಾರೆ. ಕನ್ನಡದ ವೆಬ್ಸೈಟಲ್ಲಿ ಬಿಹಾರಕ್ಕೂ ಅದರ ಪರವಲ್ಲಿಗೂ ಏನು ಕೆಲಸ ಅಂದ್ರಾ? ಯಾಕ್ರೀ? ಗುಂಡು ಗುಂಬಳಕಾಯಿ ಥರ ಇದ್ದಿದ್ದ ಜಗತ್ತು ಇಂಟರ್ನೆಟ್ ಬಂದಮೇಲೆ ಸೊರಗಿದ ಸೋರೆಕಾಯಿ, ಅಲ್ಲಲ್ಲ, ನಿವುಟಿದ ನಿಂಬೆಕಾಯಷ್ಟಾಗಿಬಿಟ್ಟಿರೋವಾಗ, ಈ ನೆಟ್ಟಿನಲ್ಲಿ ಸಿಕ್ಕಿಹಾಕಿಕೊಂಡವರು ಬಡನಿಂಬೆಯನ್ನೂ ಬಿಡದಂತೆ ಉಂಡಿದ್ದು ಹೂಸಿದ್ದರ ಬಗ್ಗೆಯೆಲ್ಲ -ನಾನಲ್ಲ ಹೇಳಿದ್ದು,ನಮ್ಮ ಊರಲ್ಲಿ ಹೀಗೆ ಹೇಳ್ತಾರೆ- ಬುದುಬುದು ಬರೆದು ಗುಡ್ಡೆ ಹಾಕುತ್ತಿರುವಾಗ ನಾನ್ಯಾಕೆ ಈ ಪರಕೀಯ ಪರವಲ್ಲಿನ ಬಗ್ಗೆ ಬರೆಯಬಾರದು, ಬರೆದು ನೆಟ್ಟಿನಲ್ಲಾಗುತ್ತಿರೋ ಕನ್ನಡದ ಗದ್ದೆಬೇಸಾಯಕ್ಕೆ ಒಂದು ಟೀಸ್ಪೂನಷ್ಟಾದರೂ ನೀರನ್ನು ಯಾಕೆ ಮೊಗೆದು ಹಾಕಬಾರದು ಅನಿಸಿ ಬರೆಯೋಕೆ ಶುರು ಮಾಡಿಯೇ ಬಿಟ್ಟೆ)

ಪರವಲ್ ನನಗೇನೂ ಪರಕೀಯ ಅಲ್ಲ. ಬಿಹಾರಕ್ಕೂ ನನಗೂ ನಂಟಿನ ಗಂಟಿರುವುದರಿಂದ ಸೀಜನಲ್ಲಿ ವಾರಕ್ಕೆ ಮೂರು ದಿನ ಪರವಲ್ಲೇ. ಬಿಹಾರದಲ್ಲಾದರೆ ಸೀಜನ್ನಲ್ಲಿ ವಾರಕ್ಕೆ ಏಳುದಿನವೂ ಅದೇ. ಆದರೆ ನನ್ನ ಕನ್ನಡದ ಖೂನು ನನ್ನ ಮನೆಯಲ್ಲಿ ಹೀಗಾಗೋಕೆ ಬಿಡೋಲ್ಲ. ಇರಲಿ. ಬಿಹಾರಿಗಳು ಪರವಲ್ಲನ್ನು ಸುಮ್ಮನೆ ಹುರಿದು 'ಭುಜಿಯಾ' ಮಾಡ್ತಾರೆ, ಇಲ್ಲಾ, ಅದರೊಳಗೆ ಏನನ್ನಾದರೂ ತುಂಬಿಸಿ 'ಭರುವಾ' ಮಾಡ್ತಾರೆ. ಚಟ್ನಿಚೋಖಾ ಅಂತ ಇನ್ನೂ ಏನೇನೋ ಮಾಡ್ತಾರೆ. ಆದರೆ ನನ್ನ ಮನೆಗೆ ಬರ್ತಿರೋ ಕನ್ನಡದವರಿಗೂ ಹಿಂದಿಯವರಿಗೂ ಇದು ತರವಾಗಬೇಕಲ್ಲ. ಹಾಗಾಗಿ ಅವರಿಗೂ ತರವಾಗುವ ಹಾಗೆ ಅದರ ಘನತೆಗೂ ಕುಂದು ಬರದ ಹಾಗೆ ಹೊಸದೇನನ್ನೋ ಮಾಡಬೇಕೀಗ. ಭುಜಿಯಾ ದಿನನಿತ್ಯ ಮಾಡುವಂಥದ್ದು. ನಾವು ಅನ್ನ-ಸಾರು ಅನ್ನೋ ಹಾಗೆ ಅವರು ದಾಲ್-ಭಾತ್-ಭುಜಿಯಾ ಅಂತಾರೆ. ಮನೆಗೆ ಬಂದವರಿಗೆ ಮಾಡಿ ಹಾಕುವ ಹಾಗಿಲ್ಲ ಅದರ ಸ್ಟೇಟಸ್. ಆದರೆ ಭರುವಾದ ತೊಟ್ಟಿಲು ಮೇಲೆ ಕಟ್ಟಿದೆ. ಎಂತಾರೂ ವಿಶೇಷಕಟ್ಲೆಯಿದ್ದಾಗ, ದೊಡ್ಡಸ್ತಿಕೆ ನೆಂಟರು ಬಂದಾಗ ಮಾಡ್ತಾರೆ. ಇದನ್ನೇ ಈವತ್ತು ಮಾಡಬಹುದು. ಅದರೊಳಗೆ ಏನು ತುಂಬಿಸಿ ಮಾಡ್ತಾರೋ ನಾನು ಕೇಳಿಲ್ಲ, ಕಲಿತಿಲ್ಲ. ಏನೇ ಇರಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆ ಅದರ ಹೂರಣ ತಯಾರಾಗುವುದು ಸಾಧ್ಯವಿಲ್ಲ. ಆದರೆ ದೆಹಲಿಯವರು ಜೈನರು. ಈರುಳ್ಳಿ ಬೆಳ್ಳುಳ್ಳಿ ಅಂದರೆ ದೆಹಲಿಗೇ ಓಡಿಹೋಗಿ ಹೊಕ್ಕೊಂಡುಬಿಡುತ್ತಾರೆ. ಏನು ಮಾಡೋದು? ಮತ್ತೊಮ್ಮೆ ಫ್ರಿಜ್ಜಿನ ಮೊರೆ ಹೋದೆ. ಧನಿಯಾ -ಜೀರಿಗೆ ಪುಡಿ, ಗರಂ ಮಸಾಲೆ ಪುಡಿ. ಇವೆಲ್ಲಾ ಮಾಮೂಲಿ. ಫ್ರೀಜರಲ್ಲಿ ಸಾಕ್ಷಾತ್ ಪಂಜಾಬಿನಿಂದ ತರಿಸಿದ್ದ ಛೋಲೆ ಮಸಾಲೆ ಕಂಡಿತು. ಹೊರಕ್ಕೆ ತೆಗೆದು ಫ್ರೀಜರ್ ಬಾಗಿಲು ಮುಚ್ಚಿದೆ. ಕಣ್ಣೆದುರಿಗೆ ಬುಟ್ಟಿಯಲ್ಲಿ ಮಹಾರಾಷ್ಟ್ರದ ಆಲೂಗಡ್ಡೆ ಕಂಡಿತು. ಯುರೇಕಾ! ಬಿಹಾರಿನ ಪರವಲ್ಲಿನೊಳಗೆ ಮಹಾರಾಷ್ಟ್ರದ ಆಲೂಗಡ್ಡೆ, ಪಂಜಾಬಿನ ಮಸಾಲೆ! ಹೀಗೆ ಕಲಸುಮೇಲೋಗರ ಮಾಡೋದಂದ್ರೆ ನನಗೆ ಬಲು ಮಜಾ. ಛೋಲೆ ಮಸಾಲೆ ಛೋಲೆಗೆ ಹಾಕಿದರೆ ಹೊಸತನ ಏನು ಬಂತು ಅಲ್ವಾ?

ಆಲೂಗಡ್ಡೆಯನ್ನ ಕುಕ್ಕರಲ್ಲಿ ಎರಡು ಸಲ ಕೂಗಿಸಿದೆ. ಪರವಲ್ಲಿನ ಚೊಟ್ಟು ಕತ್ತರಿಸಿ ಉದ್ದಕ್ಕೆ ಸೀಳಿ ಎರಡು ಹೋಳು ಮಾಡಿದೆ. ಹಾಗಲಕಾಯಲ್ಲಿ ಇರೋ ಹಾಗೆ ಮಧ್ಯೆ ಚಿರುಳಿನ ಜೊತೆ ಕಾಕಿಹಣ್ಣಿನಂತೆ ಕಾಣುವ ಗಟ್ಟಿಬೀಜ ಇರುತ್ತದೆ. ಅದನ್ನ ಸಿಪ್ಪೆ ಸುಲಿಯುವುದರ ಮ್+ಊಂಜಿನಿಂದ ತೆಗೆದೆ. ಹೊರತೆಗೆದದ್ದನ್ನ ಬಿಸಾಡಲಿಲ್ಲ. ಇದನ್ನೆಲ್ಲ ಬಿಸಾಡೋಕೆ ನನಗೆ ಆಸೆ ಆಗತ್ತೆ (ಹಾಗಾದ್ರೆ ಯಾಕೆ ಬಿಸಾಡಲಿಲ್ಲ ಅಂತ ಕೇಳಬೇಡಿ. ಹೀಗಂದ್ರೆ ಆ ವಸ್ತುವಿನ ಮೇಲಿನ ಆಸೆ, ಮೋಹದಿಂದ ಅದನ್ನ ಬಿಸಾಡೋಕೆ ಮನಸ್ಸಿಲ್ಲ ಅಂತರ್ಥ!) ಅದರೊಳಗೂ ಸತ್ವ ಇದೆ, ಬಿಸಾಟರೆ ದಂಡ ಆಗತ್ತೆ, ಅದನ್ನ ಫ್ರಿಜ್ಜೊಳಗೆ ಇಟ್ಟುಬಿಟ್ಟರೆ ಇನ್ಯಾವತ್ತೋ ಏನಾದರೂ ಮಾಡೋಕೆ ಬರತ್ತೆ ಅಂತೆಲ್ಲ. ಹೀಗೆ ಟೊಳ್ಳಾದ ಪರವಲ್ ಈಗ ಒಳಲೆ ಥರ ಕಾಣಿಸ್ತು! ಹೀಗಿದ್ದರೆ ಒಳಗೆ ತುಂಬಿಸೋಕೆ ಲಾಯ್ಕ್ ಆಗತ್ತೆ. ಇಷ್ಟರೊಳಗೆ ಕುಕ್ಕರು ಉಸಿರುಬಿಟ್ಟು ತಣ್ಣಗಾಗಿತ್ತು. ಆಲೂಗಡ್ಡೆ ಸಿಪ್ಪೆ ತೆಗೆದು ಗಿಮಿಚಿದೆ. ಸಣ್ಣ ಬಾಣಲೆ ಒಲೆಮೇಲಿಟ್ಟು ಉರಿಹಾಕಿ ಎಣ್ಣೆ ಹಾಕಿದೆ. ಹಸಿಮೆಣಸು ಸಣ್ಣಕೆ ಕತ್ತರಿಸಿ ಹಾಕಿದೆ. ಛೋಲೆ ಮಸಾಲೆ ತುಂಬ ಖಾರ ಇದೆ. ಆದರೂ ಹಸಿಮೆಣಸು ಇರಲಿ ಅಂತ ಧೈರ್ಯ ಮಾಡಿದೆ. ಬೆಳ್ಳುಳ್ಳಿಯ ಬದಲಿಗೆ ಇಂಗು ಹಾಕಿದೆ, ಅರಿಶಿನ, ಛೋಲೆ ಮಸಾಲೆ ಹಾಕಿ ಗಿಮಿಚಿದ ಆಲೂಗಡ್ಡೆ ಹಾಕಿ ಮೊಗಚಿದೆ. ಒಂದು ಚೂರು ಜೀರಿಗೆ ಪುಡಿಯೂ ಹಾಕಿಬಿಟ್ಟೆ. ರುಚಿನೋಡಿದೆ, ಸರಿಯಿತ್ತು. ನಾಲಿಗೆಗೆ ಸರಿ ಅನಿಸಿದ್ದು ಕಣ್ಣಿಗೆ ಯಾಕೋ ಸರಿ ಅನಿಸಲಿಲ್ಲ. ಸ್ವಲ್ಪ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿದ ಮೇಲೆ ಬೋಳು ಮೈ ಸೀರೆಗೆ ಬುಟ್ಟ ಬಂದಹಾಗೆ ಕಂಡು ಸೀರೆ ಉಟ್ಟು ಮೆರೆದಷ್ಟೇ ಖುಷಿಯಾಯಿತು.

ಹೀಗೆ ಪಂಜಾಬಿ ಹೂರಣವನ್ನ ಬಿಹಾರಿ ಪರವಲ್ಲಿಗೆ ತುಂಬಿಸಿದಾಗ ಹಸಿರು ಅಂಚು, ಕೆನೆಬಣ್ಣದ ಒಳ ಅಂಚು, ಹಸಿರುಬುಟ್ಟದ ಹಳದಿ ಮೈಯ ಹೂರಣ ತುಂಬ ಸುಂದರವಾಗಿ ಕಂಡಿತು. ಇದರ ಇಷ್ಟು ಸುಂದರ ರೂಪ ನಾನು ನೋಡೋದು ಇದೇ ಕೊನೆಯೇನೋ ಅಂತ ಮನಸ್ಸು ಸ್ವಲ್ಪ ಅಳುಕಿತು. ಬಾಣಲೆಗೆ ಬಿದ್ದಮೇಲೆ ಏನಾಗುವುದೋ ಪರಮಾತ್ಮನೇ ಬಲ್ಲ! ಪರವಲ್ಲಿನ ಜಾಯಮಾನ ಗೊತ್ತಿದ್ದರೂ ನೇರವಾಗಿ ಹೂರಣ ತುಂಬಿಸಿ ಬಾಣಲೆಗೆ ಹಾಕಲೋ ಅಥವಾ ತುಂಬಿಸುವ ಮುಂಚೆ ಒಂದು ಕುದಿ ಬೇಯಿಸಿಕೊಳ್ಳಲೋ ಅಂತ ಸ್ವಲ್ಪ ಈ ಮುಂಚೆಯೇ ತಾಕಲಾಟವಾಗಿತ್ತು. ಒಂದು ಉಬ್ಬೆ ನೇರವಾಗಿ ಮಾಡಿ ನೋಡೋಣ ಅಂತ ಸ್ವಲ್ಪ ಹೋಳೊಳಗೆ ತುಂಬಿಸಿ ಬಾಣಲೆಗೆ ಸ್ವಲ್ಪವೇ ಎಣ್ಣೆ ಹಾಕಿ ಪರವಲ್ಲಿನ ಅಂಡು ಬಾಣಲೆಗೆ ತಗಲುವಂತೆ ಒಂದೊಂದೇ ಇಟ್ಟು ಉರಿ ಸಣ್ಣದು ಮಾಡಿದೆ. ಇಷ್ಟರವರೆಗೆ ಸುಖನಿದ್ದೆಯಲ್ಲಿ ಇದ್ದಂತಿದ್ದ ಪರವಲ್ ಬಾಣಲೆಯ ಬಿಸಿಮುಟ್ಟಿದ ಸ್ವಲ್ಪ ಹೊತ್ತಿಗೇ ಎದ್ದು ಮುರಿತೆಗೆಯುವಂತೆ ಮೈ ಸುರುಟೋಕೆ ಶುರುಮಾಡಿತು. ಇದರ ಸುರುಟಾಟ ತಾಳಲಾರದೆ ಒಳಗಿದ್ದ ಪಂಜಾಬ್ ದ ಪುತ್ತರ್ ಹೊರಗೆ ಉಳುಚಲು ಶುರುಮಾಡಿದ! ಅಯ್ಯೋ, ಕತೆ ಲಾಯ್ಕಾಯ್ತು! ಗಡವಾದಂತಿದ್ದ ಇನ್ನು ಕೆಲವು ಹೋಳುಗಳು ನಾವು ಇಷ್ಟಕ್ಕೆಲ್ಲ ಹೆದರುವವರಲ್ಲ ಅಂತ ಎದೆ ಸೆಟೆದು ನಿಂತಿದ್ದವು. ಅವನ್ನು ನೋಡಿ ಹೋದ ಜೀವ ಬಂದ ಹಾಗಾಯ್ತು. ಆದರೆ ಸ್ವಲ್ಪ ಹೊತ್ತಿನ ಮೇಲೆ ಧಗೆ ತಾಳಲಾರದೆ ಅವೂ ಸಹ ಮೆಲ್ಲ ಮೆಲ್ಲ ಸುರುಟೋಕೆ ಶುರುಮಾಡಿದವು. ಇಷ್ಟು ಹೊತ್ತಿಗಾಗಲೇ ಹಸಿರು ಬಣ್ಣ ಮಾಸಿ ಯಾವುದೋ ಬಣ್ಣಕ್ಕೆ ತಿರುಗಿತ್ತು, ಗುಂಡಾಗಿ ಒಳಲೆಯಂತಿದ್ದ ಆಕಾರ ಈಗ ಗಾಳಿಮಳೆಗೆ ಸಿಕ್ಕಿ ಹಪ್ಪಾದ ದೋಣಿಯಂತಾಗಿತ್ತು. ಅಂಡು ಪೂರ ಸುಡುವ ಮುಂಚೆ ಅವನ್ನೆಲ್ಲ ಕೌಂಚಿ ಹಾಕಿದೆ. ತುಂಬಿಸೋ ಮುಂಚೆ ಒಂದು ಕುದಿ ಬರಿಸೋದೆ ಒಳ್ಳೆಯದು ಎಂದೆಣೆಸಿ ಇನ್ನೊಂದು ಒಲೆಯ ಮೇಲೆ ಸ್ವಲ್ಪ ನೀರಿಟ್ಟು ಕುದಿಬಂದ ಮೇಲೆ ಸ್ವಲ್ಪ ಉಪ್ಪು ಅರಿಶಿನ ಹಾಕಿ ಉಳಿದ ಹೋಳುಗಳನ್ನು ಹಾಕಿದೆ. ಹಸಿರು ಹೊರಮೈ ಇನ್ನಷ್ಟು ಹಸಿರಾಯಿತು. ಸಾಕೆನಿಸಿ
ಪಕ್ಕ ಹೊರತೆಗೆದೆ. ಸ್ವಲ್ಪ ತಣಿದ ಮೇಲೆ ತುಂಬಿಸಿ ಬಾಣಲೆಗೆ ಹಾಕಿದೆ. ಬಿಸಿನೀರಿಗೆ ಬಿದ್ದು ಸುಖನಿದ್ರೆಯಿಂದ ಜಗ್ಗನೆ ಈಗಾಗಲೇ ಎಚ್ಚರವಾಗಿಬಿಟ್ಟಿದ್ದರಿಂದ ಬಾಣಲೆಗೆ ಬಿದ್ದಾಗ ಈ ಉಬ್ಬೆಯ ಪರವಲ್ ಮುರಿತೆಗೆಯಲಿಲ್ಲ. ಇದರ ತೂರು ಬೇಗವೇ ಕೆಂಪಾಯಿತು. ಸುಮ್ಮನೆ ಕೌಂಚಿದ ಹಾಗೆ ಮಾಡಿ ಬಾಣಲೆಯಿಂದ ತೆಗೆದುಬಿಟ್ಟೆ. ಮೊದಲನೆ ಉಬ್ಬೆಯದು ಒಂದು ಅವತಾರವಾದರೆ ಎರಡನೆಯದು ಮತ್ತೊಂದು ಅವತಾರವಾಗಿತ್ತು. ಆದರೆ ಊಟಕ್ಕೆ ಮುಂಚೆ ಪರಮಾತ್ಮ ಎರಡು ಮೂರು ಸುತ್ತು ಸುತ್ತುತಾನೆ. ಅವನು ಹೊಟ್ಟೆಗಿಳಿದು ವಿರಾಟರೂಪದರ್ಶನವಾದಮೇಲೆ ಎಲ್ಲ ಅವತಾರಗಳೂ ಒಂದೇ ಆಗಿ ಕಾಣುತ್ತವೆಂಬ ಧೈರ್ಯದ ಮೇಲೆ ಪಾತ್ರೆಗೆ ಸೌಂಚಿದೆ.

ಈ ನಳನಿರ್ದೇಶಕರು ಮಜ್ಜಿಗೆಹುಳಿ ಬುಕ್ಕರು. ಅದೊಂದಿದ್ದರೆ ಸೈ. ಆದರೆ ಅವರ ಕೈಯಲ್ಲಿ ಹೊಗಳಿಸಿಕೊಳ್ಳಬೇಕು ಅನ್ನೋ ಆಸೆಬುರುಕತನದಿಂದ ಕೆಲವು ಸಲ ಇಂಟರ್ನೆಟ್, ತಲೆ, ಅನುಭವ ಎಲ್ಲಾ ಜಾಲಾಡಿಸಿ ಈವತ್ತು ಏನಾದರೊಂದು ಹೊಸದು ಮಾಡೋಣ ಅಂತ ಸೈಕಲ್ ಹೊಡೆದು ಮಾಡಿರ್ತೀನಿ ಅಂತಿಟ್ಕೊಳ್ಳಿ. ಅವರು ಬಂದು ಮಾತುಕತೆಗಿತೆ ಎಲ್ಲ ಆಗಿ ಊಟಕ್ಕೇಳಿ ಅಂದಾಗ, 'ಏನ್ ಅಡ್ಗೆ ಮಾಡಿದ್ಯಾ? ಮಜ್ಜಿಗೆ ಹುಳೀನಾ?' ಅಂದುಬಿಟ್ಟರೆ ಮೆಟ್ಟುಕತ್ತಿ ಮೆಟ್ಟಿದ ಹಾಗೆ ಆಗಿಬಿಡತ್ತೆ. ಇಂವ ಹುಳಿ ಉಂಡ ಅಂತ ಮನಸ್ಸಲ್ಲೇ ಅಂದುಕೊಳ್ತೀನಿ. 'ಕಳೆದ ಸಲ ನೀವು ಬಂದಾಗ ಅದನ್ನೇ ಮಾಡಿದ್ನಲ್ಲ ಅಂತ ಈವತ್ತು ಮಾಡಲಿಲ್ಲ' ಅಂದರೆ 'ಓ ಹೌದಾ,ನನಗೆ ಜ್ಞಾಪಕವೇ ಇಲ್ಲ ನೋಡು' ಅಂದುಬಿಟ್ಟರಂತೂ ಅವರನ್ನು ಸುಟ್ಟು ಬದನೆಕಾಯಿ ಮಾಡಿಬಿಡುವಷ್ಟು ಸಿಟ್ಟು ಬರತ್ತೆ. ಬಾಯಿಚಪ್ಪರಿಸಿಕೊಂಡು ಉಂಡವರಿಗೆ ಮಾರನೆದಿನ ಬೆಳಗ್ಗೆ ರಾತ್ರಿ ಉಂಡದ್ದು ನೆನಪಿರೋದಿಲ್ಲ. ಎಲ್ಲ ಆ ಪರಮಾತ್ಮನ ಮಹಿಮೆ. ಅದಕ್ಕೆ ಒಂದು ಸಲ 'ನಾ ಮಾಡಿದ್ದನ್ನೆಲ್ಲ ಒಂದು ಚೀಟಿಯಲ್ಲಿ ಬರೆದು ನಿಮ್ಮ ಜುಬ್ಬದ ಜೇಬಿನಲ್ಲಿ ಇಟ್ಟಿರ್ತೀನಿ, ಬೆಳಗಾಗೆದ್ದು ನೋಡಿಕೊಳ್ಳಿ' ಅಂತ ತಮಾಷೆ ಮಾಡ್ದೆ.' ಹಾಗಾದ್ರೆ, ಮಾಡದೇ ಇರೋದೂ ಒಂದೆರಡು ಐಟಮ್ ಸೇರಿಸಿಬಿಡು ಆ ಲಿಸ್ಟಲ್ಲಿ' ಅಂದ ಗಂಡ, ಉಂಡಾಡಿಗುಂಡ! ಈ ಎಲ್ಲ ಅಪಾಯದಿಂದ ಪಾರಾಗೋಕೆ ಅಂತ ಆ ಅರ್ಧ ಸೋರೆಕಾಯೂ ಆ ನಾಲ್ಕು ಅಲಸಂದೆಕೋಡೂ ಒಟ್ಟುಹಾಕಿ ಒಂದು ಮಜ್ಜಿಗೆಹುಳಿ ಮಾಡಿಯೇಬಿಟ್ಟೆ. ಫುಲ್ಕದ ಜೊತೆ ಪರವಲ್ಲಾಯ್ತು, ಅನ್ನಕ್ಕೆ ಮಜ್ಜಿಗೆ ಹುಳಿಯಾಯ್ತು.

ಇಷ್ಟೆಲ್ಲಾ ಆಗಿ ಅವರು ಬಂದು ಪರಮಾತ್ಮನ ಧ್ಯಾನ ಮಾಡ್ತಾ ಮಾತುಗೀತುನಗೆಗಿಗೆಕಾನೂನುಕೊಯ್ದದ್ದೆಲ್ಲ ಆಗಿ ಊಟಕ್ಕೆ ಕೂತಾಗ ಪರವಲ್ ಕಂಡು 'ಅರೆ ಜೈನ್,ತುಮ್ಹಾರಿ ಫೇವರೆಟ್ ಸಬ್ಜಿ ಪರವಲ್ ಬನಾಈ ಹೆ' ಅಂತ ತಮ್ಮ ಸ್ನೇಹಿತ ಜೈನ ತೀರ್ಥಂಕರನಿಗೆ ಹೇಳಿದಾಗ ಮೇಲಿರೋ ಪರಮಾತ್ಮನಿಗೆ ನಂಬದಿದ್ದರೂ ಕಾಪಾಡಿದ್ಯಪ್ಪಾ ಅಂದೆ!

****

Disclaimer: ಇಲ್ಲಿ ಬಂದಿರುವ ಪಾತ್ರ (ಗುಂಬಳಕಾಯಿ, ನಿಂಬೆಕಾಯಿಯೂ ಸೇರಿದಂತೆ), ಘಟನೆಗಳು ನನ್ನ ಮನಸ್ಸಿನ ಅಡಿಗೆಮನೆಯೊಳಗೆ ಹುಟ್ಟಿಬೆಳೆದವು. ನಿಮ್ಮ ಅಡಿಗೆಮನೆಯೊಳಗಿರಬಹುದಾದ ಅಥವಾ ನಿಮ್ಮ ಹೊಟ್ಟೆ ಸೇರಿ ಮೋಕ್ಷ ಕಂಡ ಇಂಥದೇ ಪಾತ್ರ/ಪಾತ್ರೆಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಒಂದುವೇಳೆ ಇದ್ದರೆ ಅದಕ್ಕೆ ನಾನು ಹೊಣೆಯಲ್ಲ!

Rating
No votes yet