ಹನೀಫ್ ಎಂಬ ಮೂಡಿಗೆರೆ ಹುಡುಗ
ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ 'ದ ಆಸ್ಟ್ರೇಲಿಯನ್' ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ 'ಲೀಕ್, ಲೀಕ್' ಎಂದು ಬೊಬ್ಬೆ ಹೊಡೆಯಿತು. ಹನೀಫ್ ಬಗ್ಗೆ ಜಡ್ಚಮೆಂಟಲ್ಲಾಗಿ ಮೊದಲಿಂದಲೂ ಮಾಧ್ಯಮದ ಜತೆ ಮಾತಾಡುತ್ತಲೇ ಬಂದಿದ್ದ ಪ್ರಧಾನಿಯಾದಿಯಾಗಿ ಎಲ್ಲರೂ ಈಗ ಕೂಗಲು ತೊಡಗಿದ್ದು ವಿಪರ್ಯಾಸವೆಂದು ಎಲ್ಲರಿಗೂ ತೋರಿತು. ಆಗ ಹನೀಫ್ ಲಾಯೆರ್ ಮುಂದೆ ಬಂದು "ನಾನೇ ಮಾಧ್ಯಮಕ್ಕೆ ಕೊಟ್ಟಿದ್ದು. ಆ ಸಂದರ್ಶನ ಪೋಲೀಸರ ಆಸ್ತಿಯಾಗಿರುವಷ್ಟೇ ತನ್ನ ಕ್ಲೈಂಟಿಗೂ ಸೇರಿದ್ದು. ನಾನು ತಪ್ಪು ಮಾಡಿದ್ದರೆ, ಬಂದು ಹಿಡಿದುಕೊಂಡು ಹೋಗಿ" ಎಂದು ಪ್ರಧಾನಿ, ಅಟರ್ನಿ-ಜನರಲ್ ಆದಿಯಾಗಿ ಎಲ್ಲರನ್ನೂ ಹೆಸರಿಸಿ ಸವಾಲೆಸದ. ಗಪ್‌ಚಿಪ್.
12 ದಿನಗಳ ಕಾಲ ಚಾರ್ಜ್ ಮಾಡದೆ ಬಂಧಿಸಿಟ್ಟುಕೊಂಡು, ಕಡೆಗೆ ಕೋರ್ಟಿನಲ್ಲಿ ನಿಲ್ಲಿಸಿದಾಗ, ಕೇವಲ ಹತ್ತು ಸಾವಿರದ ಶೂರಿಟಿ ಮೇಲೆ ಹನೀಫ ಬಿಡುಗಡೆಯಾದಾಗ, ಆಸ್ಟ್ರೇಲಿಯಾದ ಸರ್ಕಾರ ತಲೆಯಿಂದ ಕಾಲವರೆಗೆ ಕಂಪಿಸಿತು. ಸಿಟ್ಟಿನಿಂದ, ಹನೀಫ್‌ನ ವರ್ಕ್-ವೀಸಾ ರದ್ದು ಮಾಡಿತು. ಆಧಾರವಿಲ್ಲದ ಬಂಧನ, ಆರೋಪ ಸಾಬೀತಾದಾಗ ಹನೀಫ ಆಸ್ಟ್ರೇಲಿಯಾದಲ್ಲಿದ್ದರೆ ತಮ್ಮನ್ನು ಸೂ ಮಾಡಬಹುದು ಎಂದು ಹೆದರಿದರು ಅಂದುಕೊಂಡೆ. ಆದರೆ, ಅದಕ್ಕಿಂತ ನೀಚತನವಿದು ಎಂದು ಗೊತ್ತಾಗಿದ್ದು ಆನಂತರ. ಕೋರ್ಟ್ ಬಿಡುಗಡೆ ಮಾಡಿದರೂ, ಹನೀಫ್ ವೀಸ ರದ್ದಾದ ಕಾರಣ ಸಿಡ್ನಿಯಲ್ಲಿ ಡಿಟೆಂಶನ್‌ಗೆ ಹೋಗಬೇಕಾಗುತ್ತದೆ. ಬ್ರಿಸ್ಬೆನಿನಿಂದ ಲಾಯರ್ ಪದೇ ಪದೇ ಸಿಡ್ನಿಗೆ ಬಂದು ಹೋಗುವುದು ಹೆಚ್ಚು ಖರ್ಚು ತಗುಲುವಂಥ ವಿಚಾರ. ಮೇಲಾಗಿ, ಹನೀಫ್ ಸಜ್ಜನ ಎಂದು ಜನತೆ ಅಂದುಕೊಂಡಾರು ಎಂಬ ಆತಂಕ ಕೂಡ. ಜನರಿಗೆ ಗೊತ್ತಾಗಲಿ ಎಂದೇ ಹನೀಫ್‌ನ ಲಾಯರ್ ಅವನ ಸಂದರ್ಶವನ್ನು ಹೊರಹಾಕಿದ್ದು ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ.
ಹನೀಫ್ ಶೂರಿಟಿ ಹಣ ಕೊಡದೆ ಪೋಲೀಸರ ಸುಪರ್ದಿಯಲ್ಲೇ ಇರಲು ನಿರ್ಧರಿಸಿದಾಗ ಅವನನ್ನು ದಿನಕ್ಕೆ 23 ಗಂಟೆಗಳ ಕಾಲ ಸಾಲಿಟೆರಿ ಕನ್‌ಫೈನ್‌ಮೆಂಟಿನಲ್ಲಿ ಇಟ್ಟಿದ್ದಾರೆ. ಕೋರ್ಟು ಹನೀಫ್‌ನನ್ನು ಬಿಡುಗಡೆ ಮಾಡಿ ಸಮಾಜದಲ್ಲಿ ಅವನು ವಾಸವಾಗಿರುವುದು ಅಪಾಯವಲ್ಲ ಎಂದಿದ್ದರೂ ಜೈಲಿನ ಈ ಕಠೋರತೆಗೆ ಕಾರಣ ಮತ್ತು ಹಿನ್ನೆಲೆ ರಾಜಕೀಯವಲ್ಲದೆ ಬೇರೇನೂ ಇಲ್ಲ ಎಂಬುದು ಈಗ ಜನಜನಿತವಾಗಿದೆ.
ಹೊರಬಿದ್ದಿರುವ 142 ಪುಟಗಳ ಸಂದರ್ಶನವನ್ನು ಓದುತ್ತಾ ಹೋದಂತೆ ಬೋರಾಗುವಷ್ಟು ಅವರಿವರ ಹೆಸರು, ಹೆಸರಿನ ಸ್ಪೆಲಿಂಗ್, ಕಾಲೇಜಿನ ಹೆಸರು, ಅದರ ಸ್ಪೆಲ್ಲಿಂಗ್, ಅಡ್ರೆಸ್‌ಗಳು ಅವುಗಳ ಸ್ಪೆಲಿಂಗ್‌ಗಳು ತುಂಬಿದ್ದು, ಅದೆಲ್ಲದರ ನಡುವೆ ಮುಖ್ಯವಾದ ವಿಷಯಗಳಿಗೆ ಹನೀಫ್ ನೀಡಿದ ಉತ್ತರಗಳು ಹುಡುಕಿ ತೆಗೆಯುವುದು ಪ್ರಾಯಾಸದ ಕೆಲಸವೇ. ಆದರೂ ಪೂರ್ತಿ ಓದಿದಾಗ ಏನು ಹುಚ್ಚು ಅನಿಸಿತು.
ಕಾಲೇಜು ಮುಗಿಸಿ ಲಂಡನ್‌ಗೆ ಹೋದಾಗಿನಿಂದ ಶುರುವಾಗಿ ಪೋಲೀಸರ ಪ್ರಶ್ನೆಗಳಿಗೆ ಸರಳವಾಗಿ, ನಾವು ನೀವು ಕೊಡುವಂತೆ ಉತ್ತರ ಕೊಟ್ಟಿರುವುದು ಕಾಣುತ್ತದೆ. ಮೊದಲಿಂದ ಕಡೆಯವರೆಗೂ "ಈ ಸಂದರ್ಶನಕ್ಕೆ ಲಾಯರ್ ಸಹಾಯ ಬೇಡ, ನೀವು ಕೇಳುತ್ತಿರುವುದಕ್ಕೆ ಸಮಂಜಸ ಉತ್ತರ ಕೊಟ್ಟುಬಿಡುತ್ತೇನೆ" ಎಂಬ ಮುಗ್ಧತೆ ಕಾಣುತ್ತದೆ. ಪ್ರತಿ ಪ್ರಶ್ನೆಗೂ ಉತ್ತರಗಳು ಸಮಂಜಸವಾಗಿರುವುದನ್ನು ಪೋಲೀಸರೇ ಒಪ್ಪಿಕೊಳ್ಳುತ್ತಾ ಹೋಗಿದ್ದಾರೆ. ಹಾಗೆ ನೋಡಿದರೆ, ಪೋಲೀಸರು ತುಂಬಾ ಸಜ್ಜನರಾಗಿಯೇ ನಡೆದು ಕೊಂಡಿದ್ದಾರೆ ಅನಿಸಿತು.
ಒಂದು ಕಡೆ, ಹನೀಫನ ಡೈರಿಯಿಂದ ಒಂದು ಕಾಗದದ ಹಾಳೆ ತೆಗೆದು "ಇದನ್ನು ನೀನು ಬರೆದಿದ್ದ?" ಎಂದು ಕೇಳುತ್ತಾರೆ. ಹನೀಫ "ಇದು ನನ್ನ ಕೈಬರಹ ಅಲ್ಲ" ಎಂದು ಮತ್ತೆ ಮತ್ತೆ ಹೇಳುತ್ತಾನೆ. ಪೋಲೀಸರು "ಇದು ನಿನ್ನ ಡೈರಿಯಲ್ಲಿ ಇದ್ದದ್ದು. ಬೇರೆಯವರದು ಆಗಿರಲು ಹೇಗೆ ಸಾಧ್ಯ" ಎಂದು ಜಬರದಸ್ತು ಮಾಡುತ್ತಾರೆ. ಕ್ಷಣ ತಡೆದು, ಪೋಲೀಸ್ ಒಬ್ಬ ಹೊರಗೆ ಹೋಗಿ ಬಂದು "ಕ್ಷಮಿಸು, ಆ ಹಾಳೆಯ ಬರವಣಿಗೆ ನಿನ್ನ ಕೈಬರಹ ಅಲ್ಲ ಎಂದುದು ಸರಿಯೇ. ಅದನ್ನು ಒಬ್ಬ ಪೇದೆ ಬರೆದುದು ಎಂದು ಈಗ ಹೇಳಿದರು" ಎಂದು ಹೇಳುತ್ತಾನೆ. ಎಂಥ ಕ್ಷುಲ್ಲಕ ತಪ್ಪು ಮಾಡುತ್ತಾರೆ ಎಂದು ನಗು ಬಂದರೂ, ಕೂಡಲೇ ತಮ್ಮ ತಪ್ಪೊಪ್ಪಿಕೊಂಡು ಅದನ್ನು ದಾಖಲಿಸಿದ್ದರ ಬಗ್ಗೆ ಕಿಂಚಿತ್ತು ಒಳ್ಳೆಯದೆನಿಸಿತು. (ಇದು ನೋಡಿ: ಜನರ ಜತೆ ದಿನವಹಿ ವ್ಯವಹರಿಸುವ ಪೋಲೀಸರು, ಪತ್ರಕರ್ತರು ಸಜ್ಜನರಾಗಿಯೇ ಇರುತ್ತಾರೆ, ಅವರ ಮೇಲೆ ಪ್ರಭಾವ ತರುವ ಮೇಲೆ ಕೂತ ಮಂದಿ ದೌರ್ಜನ್ಯದ ಪ್ರತಿರೂಪಗಳಾಗಿರುತ್ತಾರೆ ಎಂಬ ಕಹಿ ಸತ್ಯ)
ಈ ವರ್ಷ ಆಸ್ಟ್ರೇಲಿಯಾದಲ್ಲಿ ಫೆಡರಲ್ ಚುನಾವಣೆ. ಸೋಲಬೇಕಾಗಿದ್ದ ಹಿಂದಿನ ಎರಡು ಚುನಾವಣೆ ಸಮಯದಲ್ಲಿ ಇದೇ ಧೂರ್ತ ಪ್ರಧಾನಿ ನಾಚಿಕೆಬಿಟ್ಟು ಸುಳ್ಳು ಮೋಸ ತಟವಟಗಳ ಮೂಲಕ ಅಧಿಕಾರಕ್ಕೆ ಬಂದ. ಇರಾಖ್ ಮತ್ತು ಆಫ್ಘಾನಿಸ್ತಾನದ ರೆಫ್ಯೂಜೀಸ್ ಬಗ್ಗೆ ನೀಚವಾಗಿ ಮಾತಾಡಿ ಅವರನ್ನು ಪ್ರಾಣಿಗಳಂತೆ ಚಿತ್ರಿಸಿ ಜನರ ಕಣ್ಣಿಗೆ ಮಣ್ಣೆರಚಿದ. ಮುಂದಿನ ಚುನಾವಣೆಯಲ್ಲಿ ಇಂಟೆರೆಸ್ಟ್ ರೇಟ್ ಬಗ್ಗೆ ಗಾಬರಿ ಹುಟ್ಟಿಸಿ, ಜನರನ್ನು ಆತಂಕಗೊಳಿಸಿ ಅಧಿಕಾರಕ್ಕೆ ಬಂದ. ಈಗಲೂ ಸೋಲುವ ಹಾಗೆ ಕಾಣುತ್ತಿದ್ದಾನೆ. ಹನೀಫನನ್ನು ತನ್ನ ರಾಜಕೀಯ ಉಳಿವಿನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಹಾಗೇನಾದರೂ ಆದರೆ, ಆಸ್ಟ್ರೇಲಿಯಾದ ಜನತೆ ತಾವು ಇಂಥ ನೀಚ ದರಿದ್ರ ಜನಗಳಿಂದ ಆಳಿಸಿಕೊಳ್ಳಲು ತಕ್ಕವರು ಎಂದು ಲೋಕಕ್ಕೇ ಸಾರುತ್ತಿದ್ದಾರೆ ಎಂದು ಮನಸ್ಸು ಕಹಿಯಾಗುತ್ತದೆ.
ಆಸ್ಟ್ರೇಲಿಯಾದ ರಾಜಕೀಯವಷ್ಟೇ ಅಲ್ಲದೆ, ಜಾಗತಿಕವಾಗಿ ಯೋಚಿಸಿದಾಗ: ಗುಹೆಯಲ್ಲೋ, ಅರಮನೆಯಲ್ಲೋ ಕೂತ ಬಿನ್-ಲಾದಿನ್‌ನಂಥ ನೀಚರು ಗೆದ್ದನಗೆ ನಗುತ್ತಿರುತ್ತಾರೆ. ಬಿಳಿಯರ ಸೇವೆ ಮಾಡಲು ಹೋಗಿರುವ ಹನೀಫನಂತವರಿಗೆ ಹೀಗಾಗುವುದು ಅವರಿಗೆ ಖುಷಿಯ ಸಂಗತಿಯೇ. ಇವನಿಗಾದುದನ್ನು ನೋಡಿಯಾದರೂ ಉಳಿದವರು ಬಿಳಿಯರ ಕ್ರೂರತೆಯ ಬಗ್ಗೆ ಅರಿತುಕೊಳ್ಳಲಿ, ಬಂದೂಕು ಬಾಂಬು ಎತ್ತಿ ಹುಚ್ಚರಂತೆ ಹೊಡೆದಾಡಲಿ ಎಂದು ಸಾರುತ್ತಾರೆ. ಅಲ್ಲದೆ, ಇಷ್ಟು ದಿನ ದತ್ತವಾಗಿದ್ದ- ಪಾಶ್ಚಿಮಾತ್ಯ ಪ್ರಭುತ್ವಗಳಿಗೆ ಕಂಟಕವಾಗಿದ್ದ ಅಭಿವ್ಯಕ್ತಿ ಸ್ವಾತಂತ್ಯ್ರದಂಥ ಹಲವಾರು ಸ್ವಾತಂತ್ಯ್ರಗಳು ಈಗ ಗಂಟುಮೂಟೆ ಕಟ್ಟಿ ಮೋರಿಗೆಸೆಯುವ ಮಟ್ಟಕ್ಕೆ ಬಂದು ನಿಂತಿರುವುದು ಯಾರಿಂದಾದ ತಪ್ಪು ಎಂದು ಯೋಚನೆಗೀಡಾಗುತ್ತೇನೆ. ಹನೀಫನ ಸಂದರ್ಶನದ ಈ ಕಡೆಯ ಮಾತುಗಳು ಕಿವಿಯಲ್ಲಿ ಹಾಗೇ ಉಳಿಯುತ್ತದೆ-
"Just want to let you know. And I, I don't want to spoil my name and my profession. That's the main thing. And I've been a professionalist until now and I haven't been involved in any kind of extra activities,.. And I want, just want to live in life as a professinalist in the medical profession. That's what I want"