ಉಪಾಹಾರ ದರ್ಶಿನಿ

ಉಪಾಹಾರ ದರ್ಶಿನಿ

ಓಡು ದೋಸೆ:

ಮಾಡುವ ವಿಧಾನ

ಒಂದು ಪಾವು ಅಕ್ಕಿ, ಒಂದು ಹಿಡಿ ಮೆಂತ್ಯ (ಎರಡು ಗಂಟೆ ನೆನಸಿದ್ದು) ಎರಡನ್ನೂ ನುಣ್ಣಗೆ ಮಾಮೂಲಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಬೇಕು ನಂತರ ಉಪ್ಪು ಹಾಕಿ ಮಣ್ಣಿನ ತವೆಯಲ್ಲಿ (ಸ್ವಲ್ಪ ಆಳ ಇರುವ ತವೆ - ನಮ್ಮ ಕಡೆ ಓಡು ಅಂತಾರೆ) ಎಣ್ಣೆ ಹಾಕದೆ ದಪ್ಪವಾಗಿ ಹೊಯಿದು ಸಣ್ಣ ಉರಿಯಲ್ಲಿ ಬೇಯಿಸಬೇಕು ಮತ್ತು ಬಿಸಿ ಬಿಸಿಯಾಗೇ ತಿನ್ನಬೇಕು.(ತುಪ್ಪ, ಕಾಯಿ ಚಟ್ನಿಯೊಂದಿಗೆ ತಿಂದರೆ ಬಲುರುಚಿ)

ಸೂಚನೆ: ಹಿಟ್ಟು ರುಬ್ಬಿದ ಕೂಡಲೇ ಅಥವಾ ಮರುದಿನ ಎರಡೂ ದಿನವೂ ಮಾಡಬಹುದು. ದೋಸೆಯ ರುಚಿ ಬೇರೆ ಬೇರೆ ಇರುತ್ತದೆ. ಹದ ಸರಿಯಾದಲ್ಲಿ ದೋಸೆ ತುಂಬಾ ತೂತು ತೂತಾಗಿ ಮೃದುವಾಗಿರುತ್ತದೆ.

ಕಾಯಿ ದೋಸೆ:

ಒಂದು ಪಾವು ಅಕ್ಕಿ ಎರಡು ಗಂಟೆ ನೆನಸಿದ್ದು (ದಪ್ಪ ತಿಂಡಿ ಅಕ್ಕಿಯಾದರೆ ಒಳ್ಳೆಯದು)ಅರ್ದ ಕಪ್ ಕಾಯಿತುರಿ ಎರಡನ್ನೂ ನುಣ್ಣಗೆ ನೀರ ದೋಸೆ ಹದಕ್ಕೆ ರುಬ್ಬಿ ಉಪ್ಪುಹಾಕಿಕೊಂಡು ಕೂಡಲೇ ದೋಸೆ ತವೆಯಲ್ಲಿ (ಎರಚಿದಂತೆ ಹಾಕಿ) ತೆಳುವಾಗಿ ಹರಡಿ ಬೇಯಿಸಿ ಕೂಡಲೇ ತಿನ್ನಬೇಕು. (ಜೇನು, ತುಪ್ಪ, ಬೆಣ್ಣೆ, ಕಾಯಿ- ಸಂಬಾರ ಸೊಪ್ಪಿನ ಚಟ್ನಿ, ಮೊಸರಿನೊಂದಿಗೆ ತಿಂದರೆ ತುಂಬಾ ರುಚಿ)

ಸೂಚನೆ: ಹಿಟ್ಟು ರುಬ್ಬಿದ ಕೂಡಲೇ ದೋಸೆ ಮಾಡಬೇಕು.

 ಕಾರಾ ದೋಸೆ:

ಒಂದು ಪಾವು ಅಕ್ಕಿ ಎರಡು ಗಂಟೆ ನೆನಸಿದ್ದು (ದಪ್ಪ ತಿಂಡಿ ಅಕ್ಕಿಯಾದರೆ ಒಳ್ಳೆಯದು)ಅರ್ದ ಕಪ್ ಕಾಯಿತುರಿ, ಒಂದು ಚಮಚ ಸಂಬಾರ(ಧನಿಯಾ), ಕಾಲು ಚಮಚ ಜೀರಿಗೆ, ಆರು ಒಣ ಮೆಣಸಿನ ಕಾಯಿ, ಸ್ವಲ್ಪ ಹುಣಿಸೇ ಹಣ್ಣು, ಸ್ವಲ್ಪ ಬೆಲ್ಲ ಎಲ್ಲಾ ಹಾಕಿ ನಯವಾಗಿ ರುಬ್ಬಿ (ನೀರಾಗಿರಬೇಕು), ಉಪ್ಪು, ಒಂದು ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ ಕೂಡಲೇ ತವೆಯಲ್ಲಿ ತೆಳುವಾಗಿ (ಎರಚಿದಂತೆ) ಹೊಯ್ದು ಬೇಯಿಸಿ ತುಪ್ಪ ಅಥವಾ ಬೆಣ್ಣೆಯೊಂದಿಗೆ ಸವಿದರೆ ರುಚಿ. (ಚಟ್ನಿ ಅವಶ್ಯಕತೆ ಇಲ್ಲ) ಮೊಸರ ಜೊತೆ ತಿಂದರೆ ಅದರ ರುಚಿಯೂ ಸೊಗಸು.

ನೀವೂ ಮಾಡಿ, ತಿಂದು ಚೆನ್ನಾಗಿತ್ತು ಅಂತ ಬರೆಯಿರಿ :-) 

 

Rating
No votes yet