ನನ್ನ ಅಂಕಣ ಬರಹಾಧಾರಿತ ಮೊದಲ ವಿಡಿಯೊ ಬ್ಲಾಗ್
ಸ್ನೇಹಿತರೆ,
ಇವತ್ತು ತಾನೆ CNN ಮತ್ತು ಯೂಟ್ಯೂಬ್ ಸಹಯೋಗದಲ್ಲಿ ಅಮೇರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರೈಮರಿ ಸ್ಪರ್ಧಾಳುಗಳ ಚರ್ಚೆ ನಡೆದಿದೆ. ವಿಡಿಯೋ ತಂತ್ರಜ್ಞಾನಕ್ಕೆ ಒಗ್ಗಿಹೋಗಿರುವ ಯುವ ಜನತೆಯನ್ನು ರಾಜಕೀಯ ಚರ್ಚೆಗಳಿಗೆ ಆಹ್ವಾನಿಸುವ ಪ್ರಯತ್ನ ಇದು. ಬರವಣಿಗೆ ಬೋರಾದ ಅಥವ ಬೇಡವಾದ ಜನ ಪಾಶ್ಚಾತ್ಯ ದೇಶಗಳಲ್ಲಿ ಇಂದು ಯೂಟ್ಯೂಬ್ನಿಂದಾಗಿ ವಿಡಿಯೋ ಬ್ಲಾಗ್ಗಳಿಗೆ ಇಳಿದಿದ್ದಾರೆ. ಅನೇಕ ವಿಷಯಗಳ ಬಗ್ಗೆ ತಮ್ಮ ವಿಡಿಯೋ ಕಾಮೆಂಟ್ಗಳನ್ನು, ಪ್ರತ್ಯುತ್ತರಗಳನ್ನು ನೀಡುತ್ತಿದ್ದಾರೆ.
ಉದಾ:
News & Politics ವಿಭಾಗ: http://youtube.com/categories_portal?c=25&e=1
ಇವನ್ನೆಲ್ಲ ಗಮನಿಸುವಾಗ, ನನಗೆ ಕನ್ನಡದಲ್ಲಿ ಯಾವುದೇ ವಿಡಿಯೋ ಬ್ಲಾಗಿಂಗ್, ಕಾಮೆಂಟ್ ಕಾಣಿಸಲಿಲ್ಲ. ನಾನು ಪ್ರತಿ ವಾರ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಬರೆಯುವ "ಅಮೇರಿಕದಿಂದ ರವಿ" ಅಂಕಣವನ್ನೆ ಯಾಕೆ ಇಲ್ಲಿ ವಾಚಿಸಬಾರದು ಎಂದುಕೊಂಡು ಇಂದು ಒಂದು ವಿಡಿಯೊ ಅಪ್ಲೋಡ್ ಮಾಡಿದ್ದೇನೆ. ಇದು ಇನ್ನೂ ಪರಿಣಾಮಕಾರಿಯಾಗಿ ಬರಬೇಕಾದರೆ ನಾನು ಇನ್ನೂ ಅನೇಕ ಎಡಿಟಿಂಗ್ ತಂತ್ರಗಳನ್ನು ಕಲಿಯಬೇಕು. ಬಹುಶಃ ಕಲಿಯುತ್ತಾ ಕಲಿಯುತ್ತಾ ಆಗಬಹುದೇನೊ.
http://www.youtube.com/watch?v=_xh6cfD-XYs
ಇದಕ್ಕಾಗಿಯೆ http://amerikadimdaravi.blogspot.com ಶುರು ಮಾಡಿ, ಅಲ್ಲಿ ಲಿಂಕ್ ಕೊಟ್ಟಿದ್ದೇನೆ. ವಾರವಾರವೂ ಅದನ್ನು ಅಪ್ಡೇಟ್ ಮಾಡುವ ಇರಾದೆ ಸದ್ಯದ್ದು.
ಧನ್ಯವಾದಗಳು,
ರವಿ...
ಅಲ್ಲಿಯ ಲೇಖನ ಇಲ್ಲಿ ತಮ್ಮ ಅವಗಾಹನೆಗೆ:
ಇತ್ತೀಚಿನ ದಿನಗಳಲ್ಲಿ ಆಫ್ರಿಕಾ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಅಲ್ಲಿಯ ಏಡ್ಸ್ ರೋಗ ಮತ್ತು ಅಂತಃಕಲಹಗಳು; AK-47 ಹಿಡಿದು ಓಡಾಡುತ್ತಿರುವ ಕಪ್ಪು ಹುಡುಗರ ಚಿತ್ರ. ಅನ್ಯ ಬುಡಕಟ್ಟುಗಳಿಗೆ, ಅನ್ಯ ಮತಕ್ಕೆ ಸೇರಿದವರ ಸಂತತಿ ನಿರ್ನಾಮವೆ (Ethnic Cleansing) ಅಲ್ಲಿ ಬಂದೂಕು ಕೈಗೆತ್ತಿಕೊಂಡಿರುವವರ ಪರಮ ಗುರಿ. ಬೋಸ್ನಿಯಾ, ಚೆಚೆನ್ಯ, ಇಸ್ರೇಲ್-ಪ್ಯಾಲೆಸ್ಟೈನ್, ಇಲ್ಲೆಲ್ಲ ಆಗುತ್ತಿರುವುದೂ ಇದೆ. ಪ್ಯಾಲೆಸ್ಟೈನ್ನಲ್ಲಿ ಈ ನಡುವೆ ಮುಸ್ಲಿಮ್ ಗುಂಪುಗಳ ಮಧ್ಯೆಯೇ ಹೊಡೆದಾಟ ಆರಂಭವಾಗಿದೆ. ನಮ್ಮ ಪಕ್ಕದ ಶ್ರೀಲಂಕಾದಲ್ಲಿಯೂ ಇಂತಹದೇ ಅಂತಃಕಲಹ; ಭಾಷೆಯ ಹೆಸರಿನಲ್ಲಿ. ದೇಶ ಒಡೆದ ಸಮಯದಲ್ಲಿ ಅತ್ತಲಿನಿಂದ ಹಿಂದೂಗಳು, ಇತ್ತಲಿನಿಂದ ಮುಸ್ಲಿಮರು ಗುಳೆ ಹೋಗಿದ್ದು ನಮ್ಮದೇ ಇತಿಹಾಸವಾಗಿದ್ದರೆ, ಕಾಶ್ಮೀರದಲ್ಲಿ ಮುಸ್ಲಿಮ್ ಮತಾಂಧರ ಬೆದರಿಕೆ, ಕೊಲೆ, ಕಿರುಕುಳ ತಾಳಲಾರದೆ ಅಲ್ಲಿನ ಪಂಡಿತರು ಜಮ್ಮು ಮತ್ತು ದೆಹಲಿಗಳಿಗೆ ವಲಸೆ ಬಂದದ್ದು ನಮ್ಮದೇ ವರ್ತಮಾನ. ಅನೇಕ ದೇಶಗಳಲ್ಲಿ ಶತಶತಮಾನಗಳಿಂದ ಒಂದು ಕಡೆ ನೆಲಸಿದ್ದ ಜನಾಂಗಗಳು ಇಂದು ಬಂದೂಕಿನ ಗುಂಡುಗಳಿಂದ ನಾಶವಾಗುತ್ತಿವೆ, ಇಲ್ಲವೆ ತಮಗೆ ಗೊತ್ತಿಲ್ಲದ ಇನ್ನೊಂದು ಜಾಗಕ್ಕೆ ವಲಸೆ ಹೋಗುತ್ತಿವೆ. ವಲಸೆಗಾರರು ಹೊಸ ಸ್ಥಳದಲ್ಲಿ ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾದದ್ದು ಶೂನ್ಯದಿಂದಲೆ; ಬಡತನದಿಂದಲೆ; ಅಂದಿನ ಅನ್ನವನ್ನು ಅಂದೇ ಹುಡುಕಿಕೊಳ್ಳಬೇಕಾದ ತುರ್ತಿನಿಂದಲೆ.
ಇದೇನೊ ತನ್ನ ಭಾಷೆ, ಮತ, ಜಾಗ, ಬಣ್ಣವೆ ಶ್ರೇಷ್ಠ ಎನ್ನುವ ಅಂಧರಿಂದ, ಕ್ಷುದ್ರಮನಸ್ಸಿನ ಮಾನಸಿಕ ರೋಗಿಗಳಿಂದ ಉದ್ಭವಿಸುವ ಸಮಸ್ಯೆ. ಆದರೆ ವಿಶ್ವದ ಅನೇಕ ಕಡೆ ಅಲ್ಲಿಯ ಸರ್ಕಾರಗಳೆ ಜನರನ್ನು ತಮ್ಮ ನೆಲದಿಂದ ಮೂಲೋತ್ಪಾಟನೆ ಮಾಡುತ್ತಿವೆಯಲ್ಲ, ಅದೂ ಕಾನೂನುಬದ್ಧವಾಗಿ. ಅದಕ್ಕೇನನ್ನುವುದು? ಮಿಲೂನ್ ಕೊಥಾರಿ ಎನ್ನುವ ಭಾರತೀಯರೊಬ್ಬರು ಕಳೆದ ಆರು ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ "ಸಾಕಾಗುವಷ್ಟು ವಸತಿ" ವಿಷಯದ ಮೇಲೆ "ವಿಶೇಷ ತನಿಖಾವರದಿಗಾರ" ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ತಕಾರ, ಇಂದು ಪ್ರಪಂಚದಾದ್ಯಂತ ಸರ್ಕಾರಗಳೆ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸುತ್ತಿವೆ. ಇದು ಕೇವಲ ಸರ್ವಾಧಿಕಾರಿಗಳ, ನಿರಂಕುಶಪ್ರಭುತ್ವಗಳ ದೇಶಗಳಲ್ಲಷ್ಟೆ ಅಲ್ಲ, ಜವಾಬ್ದಾರಿಯುತ ಪ್ರಜಾಪ್ರಭುತ್ವಗಳಲ್ಲಿಯೂ ಆಗುತ್ತಿದೆ. ಈ ಬಹುಪಾಲು ಒಕ್ಕಲೆಬ್ಬಿಸುವ ಕೆಲಸಗಳೆಲ್ಲ ಆಗುತ್ತಿರುವುದು ಅಭಿವೃದ್ಧಿಯ, ಜನೋಪಯೋಗಿ ಯೋಜನೆಗಳ ಹೆಸರಿನಲ್ಲಿ. ಇಂತಹ ಕಾನೂನುಬದ್ದ ಒಕ್ಕಲೆಬ್ಬಿಸುವಿಕೆಯಿಂದ ಮನೆಮಠಗಳನ್ನು ಕಳೆದುಕೊಳ್ಳುತಿರುವ ಜನರ ಪ್ರಮಾಣ ಯುದ್ಧ ಮತ್ತು ಅಂತಃಕಲಹಗಳಿಂದ ವಲಸೆ ಹೋಗುತ್ತಿರುವ ಜನರ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದು, ಎನ್ನುತ್ತಾರೆ ಕೊಥಾರಿ!
ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಈ ಬಲಾತ್ಕಾರದ ವಲಸೆ ಬೇರೆ ಬೇರೆ ದೇಶಗಳಲ್ಲಿ ಹೇಗೆ ಆಗುತ್ತಿದೆ ಎಂದು ಮಿಲೂನ್ ಕೊಥಾರಿ ಬಹಳ ಅಧ್ಯಯನ ಮಾಡಿದ್ದಾರೆ. ಜಿಂಬಾಬ್ವೆಯಲ್ಲಿನ ಆಪರೇಷನ್ ರೆಸ್ಟೋರ್ ಆರ್ಡರ್ ನಿಂದಾಗಿ 7 ಲಕ್ಷ ಜನ ತಮ್ಮ ಮನೆಗಳನ್ನು, ಜೀವನೋಪಾಯಗಳನ್ನು ಕಳೆದುಕೊಂಡರು. ಈಗಲೂ ಅವರಲ್ಲಿ ಬಹಳಷ್ಟು ಜನಗಳಿಗೆ ತಲೆಯ ಮೇಲೆ ಸೂರಿಲ್ಲ. ಕೇವಲ ೧೬ ಕಿ.ಮೀ.ಗಳ ಲ್ಯಾರಿ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಪಾಕಿಸ್ತಾನದಲ್ಲಿ ಮನೆಮಠ ಕಳೆದುಕೊಂಡವರ ಸಂಖ್ಯೆ ಸುಮಾರು ಎರಡೂವರೆ ಲಕ್ಷ. ಮುಂಬಯಿಯಲ್ಲಿ ಸ್ಲಮ್ಮುಗಳಲ್ಲಿ ವಾಸಿಸುತ್ತಿದ್ದ 4 ಲಕ್ಷಕ್ಕೂ ಹೆಚ್ಚು ಜನರ 92000 ಮನೆಗಳನ್ನು ಕೆಡವಲಾಗಿದೆ. ಕಾಂಬೋಡಿಯಾದ ಹಳ್ಳಿಯೊಂದರಿಂದ ಎರಡು ಸಾವಿರ ಕುಟುಂಬಗಳನ್ನು ಸೈನ್ಯದ ನೆರವಿನಿಂದ ಅಲ್ಲಿನ ಸರ್ಕಾರ ಬಲಾತ್ಕಾರವಾಗಿ ಖಾಲಿ ಮಾಡಿಸಿದೆ. ನೈಜೀರಿಯಾದಲ್ಲಿನ ರಾಜಧಾನಿಯನ್ನು ಸುಂದರಗೊಳಿಸುವ ಯೋಜನೆಗೆ ಹಾಗು ಇತರ ಕಾರಣಗಳಿಗಾಗಿ ಅಲ್ಲಿನ ವಸತಿಹೀನರ ಸಂಖ್ಯೆ 8 ಲಕ್ಷಕ್ಕೆ ತಲುಪಿದೆ. ಮೆಕ್ಸಿಕೊದಲ್ಲಿಯ ಲಾ ಪರೋಟ ಡ್ಯಾಮ್ನಿಂದಾಗಿ ಸುಮಾರು ಇಪ್ಪತ್ತೈದು ಸಾವಿರ ಬಡ ರೈತರು ಗುಳೆ ಹೋಗಬೇಕಾಗಿದೆ.
ಹೀಗೆ ಬಲಾತ್ಕಾರವಾಗಿ ಒಕ್ಕಲೆಬ್ಬಿಸುವುದರಿಂದ ಎಂತೆಂತಹ ಪರಿಣಾಮಗಳಾಗುತ್ತವೆ ಎಂದು ಕೊಥಾರಿ ಹೀಗೆ ಬರೆಯುತ್ತಾರೆ: "ಈ ಒಕ್ಕಲೆಬ್ಬಿಸುವಿಕೆ ಎಲ್ಲೇ ಆಗಲಿ, ಅಲ್ಲೆಲ್ಲ ತಾರತಮ್ಯ ಮ?ಭಾವ ಬಹಳ ಮುಖ್ಯ ಪಾತ್ರ ವಹಿಸಿರುತ್ತದೆ. ಒಂದು ನಿರ್ದಿಷ್ಟ ಜನಾಂಗ/ಮತ/ಕೋಮಿಗೆ ಸೇರಿದ ಅಲ್ಪಸಂಖ್ಯಾತ ಜನ ಇಲ್ಲವೆ ಮೂಲನಿವಾಸಿಗಳಾದ ಜನರೆ ಇಂತಹ ಬಲಾತ್ಕಾರಕ್ಕೆ ಗುರಿಯಾಗುವ ಸಂಭವ ಹೆಚ್ಚು. ಎಲ್ಲರಿಗಿಂತ ಹೆಚ್ಚಿನ ಯಾತನೆ ಅನುಭವಿಸುವವರೆಂದರೆ ಹೆಂಗಸರೆ. ಮನೆ ಕಳೆದುಕೊಂಡದ್ದಷ್ಟೆ ಅಲ್ಲದೆ ತಮ್ಮ ಜೀವನೋಪಾಯಗಳನ್ನು, ಕೆಲಸಗಳನ್ನು, ಸಂಬಂಧಗಳನ್ನು, ತಮಗಿದ್ದ ಯಾವುದೊ ಒಂದು ತರಹದ ಬೆಂಬಲ ವ್ಯವಸ್ಥೆಗಳನ್ನು ಅವರು ಕಳೆದುಕೊಳ್ಳುತ್ತಾರೆ. ಆಪ್ತವಾದ ರಕ್ತಸಂಬಂಧಗಳು ಮುರಿದುಬೀಳುತ್ತವೆ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಲ್ಬಣಗೊಳ್ಳುವುದಲ್ಲದೆ ಸಾವುನೋವುಗಳ ಸಂಖ್ಯೆಯೂ ಹೆಚ್ಚಾಗುತ್ತದೆ."
ಈಗ ಕರ್ನಾಟಕದ ವಿಷಯಕ್ಕೆ ಬರೋಣ. ಇತ್ತೀಚೆಗೆ ತಾನೆ 12500 ಸಾವಿರ ಎಕರೆ (5000 ಹೆಕ್ಟೇರ್) ಪ್ರದೇಶದಲ್ಲಿನ ನಂದಗುಡಿ ವಿಶೇಷ ಆರ್ಥಿಕ ವಲಯಕ್ಕೆ ಕೇಂದ್ರದ ಒಪ್ಪಿಗೆಯೂ ಸಿಕ್ಕಿದೆ. ಇದರಲ್ಲಿ ಒಂದು ವಿಷಯದ ಬಗ್ಗೆ ಹೆಚ್ಚಿಗೆ ಅಷ್ಟೇನೂ ಮಾಹಿತಿ ಸಿಗಲಿಲ್ಲ. ೩೬ ಹಳ್ಳಿಗಳ ಈ ವಲಯದಲ್ಲಿ ಈಗಿರುವ ಊರು ಮತ್ತು ಮ?ಗಳು ಕೃಷಿಭೂಮಿಯ ಸಹಿತವಾಗಿ ವಿಶೇಷ ವಲಯಕ್ಕೆ ಸೇರುತ್ತದೊ, ಅಥವ ಕೇವಲ ಕೃಷಿಭೂಮಿಯನ್ನು ಮಾತ್ರ ಸ್ವಾಧೀನ ಪಡಿಸಿಕೊಂಡು ಹಳ್ಳಿಮನೆಗಳನ್ನು ಹಾಗೆಯೆ ಬಿಡಲಾಗುತ್ತದೊ, ಎಂದು. ಹೇಗಾದರೂ ಸರಿ, ಹತ್ತಾರು ಸಾವಿರ ಕುಟುಂಬಗಳು ಈ ಊರುಗಳಿಂದ 15 ಕಿ.ಮಿ. ದೂರದ ಹೊಸಕೊಟೆಗೊ, ಇಲ್ಲವೆ 40 ಕಿ.ಮಿ. ದೂರದ ಬೆಂಗಳೂರಿಗೊ, ಇಲ್ಲವೆ ಇನ್ನೆಲ್ಲಿಗೊ ವಲಸೆ ಹೋಗಬೇಕಾಗುತ್ತದೆ. ಜಮೀನು ಕಳೆದುಕೊಂಡವರಿಗೆ ಅಷ್ಟೊಇಷ್ಟೊ ದುಡ್ಡಾದರೂ ಸಿಗಬಹುದು. ಆದರೆ, ಈ ಊರುಗಳಲ್ಲಿಯ ಭೂಮಾಲೀಕರಲ್ಲದ, ಕೃಷಿಕಾರ್ಮಿಕರಾದ ಬಡವರ ಗತಿಯಂತೂ ಸ್ಯಾಡಿಸ್ಟ್ಗಳಿಗೇ ಪ್ರೀತಿ!
ಇದೇ ಸಮಯದಲ್ಲಿ, ರೈತರಲ್ಲದವರಿಗೆ, ವಿದ್ಯಾವಂತರಿಗೆ, ಉದ್ಯೋಗಗಳನ್ನು ಸೃಷ್ಟಿಸಲಿರುವ ಈ ವಿಶೇಷ ವಲಯಗಳನ್ನು ಬೇಡವೇ ಬೇಡ ಎಂದು ನಿರಾಕರಿಸಿ ಬಿಟ್ಟರೆ ಅದು ಹೊಟ್ಟೆಪಾಡಿಗಾಗಿ ಯಾವುದೊ ಒಂದು ಉದ್ಯೋಗಕ್ಕೆ ಕಾತರಿಸುತ್ತಿರುವ ಜನತೆಗೆ ಜೀವನ ನಿರಾಕರಿಸುವಂತಾಗುವ ಸ್ಯಾಡಿಸ್ಟಿಕ್ ಕೆಲಸವಾಗಿ ಬಿಡುತ್ತದೆ. ಹಾಗಾಗಿ ಉದ್ಯೋಗ ಸೃಷ್ಟಿಸುವ ವಿಶೇಷ ವಲಯಗಳು ಬೇಕು. ಅದರೆ ಎಲ್ಲಿ? ಜನನಿಬಿಢವಾಗಿರುವ, ಯೋಗ್ಯ ಕೃಷಿಭೂಮಿಯಾಗಿದ್ದು ಸ್ಥಳೀಯರಿಗೆ ಜೀವ? ಕೊಡುತ್ತಿರುವ ಜಾಗದಲ್ಲಿಯೊ, ಅಥವ ಕೃಷಿಗೆ ಯೋಗ್ಯವಲ್ಲದ, ಸರ್ಕಾರಿ ಭೂಮಿ ಹೆಚ್ಚಿರುವ, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಕ್ಕಲೆಬ್ಬಿಸುವ ಅವಶ್ಯಕತೆ?ಲ್ಲದ ಜಾಗದಲ್ಲಿಯೊ? ಹಣ ಮಾಡುವ ಸ್ವಾರ್ಥಕ್ಕೆ ಭ್ರಷ್ಟ ಅಧಿಕಾರಸ್ಥರು ಯೋಗ್ಯವಲ್ಲದ ಸ್ಥಳದಲ್ಲಿ ಮುಗ್ಧರ ಜೀವನದೊಂದಿಗೆ ಚೆಲ್ಲಾಟವಾಡಬಾರದು.
ಆದರೆ, ಹಾಗೆ ಆಗದಂತೆ ತಡೆಯುವವರು ಯಾರು?
(ವಿಕ್ರಾಂತ ಕರ್ನಾಟಕ - ಜುಲೈ ೨೭, ೨೦೦೭ರ ಸಂಚಿಕೆಯಲ್ಲಿನ ಬರಹ)
Comments
ಉ: ನನ್ನ ಅಂಕಣ ಬರಹಾಧಾರಿತ ಮೊದಲ ವಿಡಿಯೊ ಬ್ಲಾಗ್
ಉ: ನನ್ನ ಅಂಕಣ ಬರಹಾಧಾರಿತ ಮೊದಲ ವಿಡಿಯೊ ಬ್ಲಾಗ್