ಮೇಘರಾಜನೂರಿಗೆ ಮಳೆಗಾಲದ ಚಾರಣ

ಮೇಘರಾಜನೂರಿಗೆ ಮಳೆಗಾಲದ ಚಾರಣ

ಬರಹ

ಕಲ್ಲುಗುಂಡಿನಂತೆ ಮೈಗೆ ಬಡಿಯೋ ಮಳೆ ಹನಿಗಳನ್ನ ಸುರಿಸುವ ಮೋಡ ತಲೆ ಮೇಲೆ ಕಾಣಿಸದು. ಮೋಡದ ನಡುವೆಯೇ ನಡೆಯುವಾಗ ಎರಡು ಮೂರು ಮಾರು ದೂರದ ಹೊರಗಿನದು ಏನೂ ತಿಳಿಯದು. ಹಬ್ಬಿದ ಮಂಜಿನ ನಡುವೆಯೇ ಜೀವ ಜೋಲಿ ತಪ್ಪುವಂತೆ ಬೀಸುವ ಗಾಳಿಯ ಬಿರುಸೇ ಹೇಳಬೇಕು ನಾವೆಷ್ಟು ಎತ್ತರದಲ್ಲಿ ನಿಂತಿದ್ದೇವೆಂದು. ಪಕ್ಕದಲ್ಲೇ ಇರುವ ಸಾವಿರಾರು ಅಡಿಗಳ ಕಂದಕ ಕಾಣದ ಕುರುಡು ಕಣ್ಣಿಗೆ ಕಾಲಿನ ರಕ್ತ ಸವಿಯುತ್ತಿರುವ ಜಿಗಣೆ ಮಾತ್ರ ಸ್ಪಷ್ಟವಾಗಿ ಕಂಡೀತು. ಎಲ್ಲವನ್ನೂ ಮುಚ್ಚಿಹಾಕಿಬಿಟ್ಟಿರುವ ಮೋಡ-ಮಂಜನ್ನು ಬಾಯಿ ಪಾಪಿ ಎಂದು ಶಪಿಸಿದರೂ ಸ್ವರ್ಗ ಸದ್ರಶ ಆಷಾಢದ ಕೊಡಚಾದ್ರಿಯನ್ನು ಬಿಟ್ಟುಬರಲು ಮನಸ್ಸಿಗೆ ಮನಸ್ಸಾಗದು.
ಜುಲೈ ತಿಂಗಳ ಮಧ್ಯಭಾಗದ ಒಂದು ದಿನ ಬೆಂಗಳೂರಿಂದ ಬಂದ ಸ್ನೇಹಿತರನ್ನು ಶಿವಮೊಗ್ಗದಲ್ಲಿ ಸೇರಿಕೊಂಡು ಮಳೆಯಲ್ಲಿ ನೆನೆಯುತ್ತಾ ಬೈಕ್ ಓಡಿಸಿಕೊಂಡು ನಗರದ ಕೋಟೆಯನ್ನೊಮ್ಮೆ ಇಣುಕಿ ನೋಡಿ ಸಂಪೇಕಟ್ಟೆ ಸೇರುವಷ್ಟರಲ್ಲಿ ಮಧ್ಯಾಹ್ನ ಒಂದು ಗಂಟೆ. ಮಳೆಗಾಲದಲ್ಲಿ ಕೊಡಚಾದ್ರಿಗೆ ಹೋಗಬೇಡ್ರೋ , ಸಿಕ್ಕಪಟ್ಟೆ ಉಂಬುಳ, ಜೀಪ್ ಬೇರೆ ಹೋಗೋದಿಲ್ಲ ಅನ್ನೋ ಸಲಹೆಗಳನ್ನೆಲ್ಲ ನಿರ್ಲಕ್ಷಿಸಿ 9 ಕಿಲೋ ಮೀಟರ್ಗಳ ಮಳೆಗಾಲದ ಚಾರಣವನ್ನು ಆರಂಭಿಸಿಯೇ ಬಿಟ್ಟಿದ್ದೆವು. ನಮ್ಮ ಪಾಲಿಗೆ ಬಹುಶಃ ಕೊಡಚಾದ್ರಿಗೆ ಇದೇ ಮಳೆಗಾಲದ ಕೊನೇ ಚಾರಣವೇನೊ ಎಂಬ ಕಳವಳವೂ ಇತ್ತಲ್ಲ . ಮಳೆ ಮುಗೀತಿದ್ದಂಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೊಡಚಾದ್ರಿಗೆ ಒಂದು ಒಳ್ಳೇ ರಸ್ತೆ ಆಗುತ್ತದೆ. ಗಾಡಿ ಹೋಗೋವಾಗ ನಡ್ಕೊಂಡು ಹೋಗೋ ತಿಕ್ಕಲುತನ ಇರ್ತದಾ? ಮುಂದಿನ ಮಳೆಗಾಲದ ಹೊತ್ತಿಗೆ ಮೋಡಗಳಷ್ಟೇ ಮಲಗುವ ಗುಡ್ಡದ ನೆತ್ತಿಯ ಮೇಲೆ 'ಐ ಜಸ್ಟ್ ಕಾಂಟ್ ಬಿಲೀವ್ ದಿಸ್' ಅನ್ನೋ ಪ್ರವಾಸಿಗರ ಧ್ವನಿ ಮೊಳಗುತ್ತಿರುತ್ತದಾ? ಯೋಗರಾಜ ಭಟ್ಟರ 'ಗಾಳಿಪಟ' ಚಿತ್ರ ನೋಡಿ ಇಲ್ಲಿಗೆ ಬರುವವರ ಸಂಖ್ಯೆ ಎಷ್ಟು ಹೆಚ್ಚಾಗಬಹುದು? ಬೆಟ್ಟದ ಮೇಲೊಂದು ರೆಸಾರ್ಟ್ ಆದ್ರೂ ಆಶ್ಚರ್ಯವಿಲ್ಲವಲ್ಲ? ಎಂದೆಲ್ಲ ಯೋಚಿಸುತ್ತ, ಉಂಬುಳಗಳಿಗೆ ರಕ್ತ ದಾನ ಮಾಡುತ್ತ ಕಟ್ಟಿನಹೊಳೆಯಿಂದ ಕೊರಕಲು ದಾರಿ ಹಿಡಿದು ನಡೆಯಲಾರಂಭಿಸಿದ್ದೆವು.

ಆಸುಪಾಸಿನಲ್ಲಿ ಧುಮುಕುವ ಅಸಂಖ್ಯ ಅನಾಮಿಕ ಬೆಳ್ದೊರೆಗಳೊಂದಿಗೆ ಫೋಟೊ ತೆಗೆಸಿಕೊಳ್ಳಲು ಮಳೆರಾಯನ ಅಪ್ಪಣೆ ಇರಲಿಲ್ಲ. ಮಳೆಗಾಳಿಗೆ ಕರುಣೆ ಎನ್ನುವುದೇ ಇರಲಿಲ್ಲ. ಸೂರ್ಯನಂತೂ ತಲೆಮರೆಸಿಕೊಂಡುಬಿಟ್ಟಿದ್ದ. ಗಾಳಿಗುಡಿಯಲ್ಲೊಮ್ಮೆ ನಿಂತು ಮುಂದುವರಿಯುವಷ್ಟರಲ್ಲಿ ಕೊಡಚಾದ್ರಿ ದೇಗುಲವೊಂದರ ಅರ್ಚಕ ಶ್ರೀಧರ ಜೋಗಿ ಜೊತೆಯಾದರು. ವಾರಕ್ಕೊಮ್ಮೆ ಕೆಳಗೆ ಹೋಗಿ ಮನೆಗೆ ಬೇಕಾದ ಸಾಮಾನನ್ನೆಲ್ಲ ತರುವ ಅವರು, ರಸ್ತೆ ಆದ್ರೆ ಈ ತ್ರಾಸು ತಪ್ತದೆ, ದೇವಸ್ಥಾನದ ಆದಾಯವೂ ಹೆಚ್ಚಾಗುತ್ತದೆ ಅಂದರು.
ಸಾಧ್ಯವಾದದ್ದನ್ನೆಲ್ಲ ಕಣ್ಣೊಳಗೆ ತುಂಬಿಕೊಳ್ಳುತ್ತ ಎರಡುವರೆ ತಾಸು ನಡೆದು ಪಿಡಬ್ಲುಡಿಯ ವಿಶ್ರಾಂತಿ ಧಾಮ ತಲುಪಿದರೆ ಅಲ್ಲಿ ಕರುಣಾಧರ ಎಂಬ ಹುಡುಗನ ಸ್ವಾಗತ. ಆ ದಿನಕ್ಕೆಲ್ಲ ನಾವಷ್ಟೇ ಅತಿಥಿಗಳು. ಎರಡೇ ನಿಮಿಷಗಳಲ್ಲಿ ತಣ್ಣಗಾಗುವ ಕಾಫಿ, ಕರುಣಾಧರ ಬೇಯಿಸಿದ ಕೋಳಿಮೊಟ್ಟೆ (ಅದರ ಗಾತ್ರ ನೋಡಿ, ಇದು ನವಿಲಿಂದಿರಬಹುದಾ ಅಂತ ಅನುಮಾನವಾಗಿತ್ತು), ಒಳ್ಳೆ ಊಟ, ಸರ್ವಜ್ನ ಪೀಠ, ಶಂಕರರು ತಪಸ್ಸು ಮಾಡಿದ ಜಾಗ, ಪರಮೇಶ್ವರ ಭಟ್ಟರ ಮನೆಯ ಪಕ್ಕದ ಹೊಗೆಯುಗುಳುವ ಕೆರೆ, ಪಕ್ಕದಲ್ಲೇ ಸಿಡಿಲು ಬಿತ್ತೇನೋ ಎಂಬಂತೆ ಹೆದರಿಸುವ ಗುಡುಗು-ಮಿಂಚು, ವಿಚಿತ್ರ ಶಬ್ದ ಹೊರಡಿಸುವ ಗಾಳಿ ಮತ್ತು ಎಲ್ಲವನ್ನೂ ಮುಚ್ಚಿ ಮೆರೆಯುವ ಮೋಡವೋ ಮಂಜೋ.....ಎಲ್ಲವೂ ನನಗೀಗ ಕನಸಿನಂತೆ ಕಾಡುತ್ತವೆ. ಆದರೆ ಅಷ್ಟೆತ್ತರದಲ್ಲಿ ಮಲಗಿದ ರಾತ್ರಿ ಕನಸಿಲ್ಲದ ನಿದ್ರೆ.
ಬೆಳಿಗ್ಗೆ ಎಂಟಕ್ಕೆ ಆ ಕರುಣಾಧರನಿಗೊಂದು ಥಾಂಕ್ಸ್ ಹೇಳಿ, ಮರಳಿ ಬರುವ ಹಾದಿಯಲ್ಲಿ ಮಳೆ ಜಾಸ್ತಿಯಾಗಿದ್ದರೂ ಮಾತು ಕಡಿಮೆಯಾದದ್ದಂತೂ ನಿಜ. `Journey itself is the destination', `ನಡೆಯುವುದು ಬೆಳೆಯುವ ಲಕ್ಷಣ' ಎಂಬ ಮಾತುಗಳನ್ನು ಕೇಳಿದ್ದೆ, ಶಬ್ದಾರ್ಥವೂ ಗೊತ್ತಿತ್ತು. ಆದರೆ ಅನುಭವ? ಅದನ್ನು ಮಳೆಗಾಲದ ಕೊಡಚಾದ್ರಿ ಚಾರಣ ನೀಡಿತ್ತು.