ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

ಇದೇನು ಓದುಗರನ್ನು ಏಪ್ರಿಲ್ ಫೂಲ್ ಮಾಡುವ ಹೊಸವಿಧಾನವೇ? ಆದರೆ, ಈಗ ಇನ್ನೂ ಆಗಸ್ಟ್ ತಾನೇ? :( :(

ವಿಜಯಕರ್ನಾಟಕದಲ್ಲಿ ಈ ಸುದ್ದಿ ಪ್ರಕಟವಾಗಿದೆ:

ಆಗಸ್ಟ್ ನಲ್ಲಿ ಏಪ್ರಿಲ್ ಫೂಲ್?

ಜೆಪೆಗ್ ಕೃಪೆ: http://budubudike.blogspot.com/

ಇದೇ ರೀತಿಯ ಅಭಾಸದ ಸುದ್ದಿಯನ್ನು ದಟ್ಸ್ ಕನ್ನಡದಲ್ಲೂ ಓದಿದೆ.

http://thatskannada.oneindia.in/news/2007/08/09/news_bytes.html

ಈ ರೀತಿಯ (ಅ)ವೈಜ್ಞಾನಿಕ ಬರಹಗಳನ್ನು ಏಕಾದರೂ ಬರೆಯುತ್ತಾರೋ ಎನ್ನಿಸಿತು. ಇಂಗ್ಲಿಷ್ ನಿಂದ ಕನ್ನಡಕ್ಕೆ ತರುವಾಗ, ಮೂಲ ಅರ್ಥವನ್ನೇ ನೋಡದೆ ಇದ್ದರೆ ಇಂತಹ ಅನರ್ಥಗಳು ಆಗೇ ಆಗುತ್ತವೆ.

ಮೊದಲು ವಿ.ಕ. ದ ಸುದ್ದಿಯಲ್ಲಿರುವ ಕೆಲವು ತಪ್ಪುಗಳನ್ನು ನೋಡೋಣ:

೧. ಸೌರಮಂಡಲದಲ್ಲಿ ಭೂಮಿಗೆ ೨೦ರಷ್ಟು ದೊಡ್ಡ ಮತ್ತು ಮಂಗಳನ ೧.೭ ರಷ್ಟು ಅತಿ ದೊಡ್ಡ ಗ್ರಹವನ್ನು ಪತ್ತೆ ಮಾಡಲಾಗಿದೆ

ಮಂಗಳ ಭೂಮಿಯ ಸುಮಾರು ಅರ್ಧದಷ್ಟು ದೊಡ್ಡದು - ಅದರ ೧.೭ ಇರುವ ಗ್ರಹ ಭೂಮಿಯ ೨೦ ಪಟ್ಟು ದೊಡ್ಡದು ಹೇಗಾಗುತ್ತೆ?

Jupiter (ಗುರು) ಅನ್ನು ಮಂಗಳ ಮಾಡಿದ ಅನುವಾದಕರಿಗೆ ಏನೆನ್ನೋಣ? ದಟ್ಸ್ ಕನ್ನಡ ದಲ್ಲಿ ಮಂಗಳನ ಪ್ರಸ್ತಾಪ ಇರಲಿಲ್ಲ ಸದ್ಯ ;)

ಸೌರಮಂಡಲ ಎನ್ನುವುದು ಸಾಧಾರಣವಾಗಿ (ನಮ್ಮ) ಸೂರ್ಯನ ಗ್ರಹಗಳ ಕುಟುಂಬಕ್ಕೆ. ಈ ಹೊಸ ಗ್ರಹ ಪತ್ತೆಯಾಗಿರುವುದು ಬೇರೊಂದು ೧೪೦೦ ಬೆಳಕಿನ ವರ್ಷ ದೂರದ ಒಂದು ನಕ್ಷತ್ರದ ಗ್ರಹಪರಿವಾರದಲ್ಲಿ! ಅದು ಯಾವಾಗ ನಮ್ಮ ಸೂರ್ಯನ ಪರಿವಾರ ಅಷ್ಟು ದೂರಕ್ಕೆ ಹಬ್ಬಿತೋ ನಾನರಿಯೆ :(

೨. ಈ ಗ್ರಹ ನಕ್ಷತ್ರವೊಂದನ್ನು ಹರ್ಕುಲಿಸ್ ಪುಂಜದಲ್ಲಿ ಸುತ್ತುವರೆದಿರುವುದು ಪತ್ತೆಯಾಗಿದೆ

This planet is found revolving around a star in the constellation of Hercules ಎಂಬುದರ ಅನುವಾದವಿರಬೇಕು ಇದು; ಹರ್ಕ್ಯುಲಿಸ್ ಪುಂಜದಲ್ಲಿ ಕಾಣುವ ನಕ್ಷತ್ರವೊಂದನ್ನು ಈ ಗ್ರಹ ಸುತ್ತುತ್ತಿರುವುದು ಪತ್ತೆಯಾಗಿದೆ ಎಂದು ಬರೆದಿದ್ದರೆ ಸ್ವಲ್ಪವಾದರೂ ಅರ್ಥವಾಗುತ್ತಿತ್ತೇನೋ.

ಈ ಗ್ರಹವೇನು ಬಟ್ಟೆಯೇ ಸುತ್ತುವರೆಯುವುದಕ್ಕೆ?

೩. ಪ್ಲೂಟೊ ತನ್ನ ಗ್ರಹದ ಸ್ಥಾನಮಾನವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾದ ೧೯೩೦ರ ಸಂಶೋಧನೆಗೆ ಲೊವೆಲ್ ಖ್ಯಾತಿಹೊಂದಿದ್ದಾರೆ.

Lowell, famous for the 1930 discovery of Pluto, which recently lost its planet status ಎನ್ನುವುದರ ಅನುವಾದವಿರಬಹುದೆ?

೧೯೩೦ ರಲ್ಲಿ ಲೊವೆಲ್ ವೀಕ್ಷಣಾಲಯದಲ್ಲಿ ಪ್ಲುಟೋ ಪತ್ತೆಯಾಯ್ತು. ಅದು ಗ್ರಹದ ಸ್ಥಾನಮಾನ ಕಳೆದುಕೊಂಡಿದ್ದು ೨೦೦೬ರಲ್ಲಿ! ಅದನ್ನು ಪತ್ತೆಮಾಡಿದ್ದು ಲೊವೆಲ್ ಎಂಬ ವ್ಯಕ್ತಿ ಅಲ್ಲ (ಆ ಹೆಸರಿನ ಖಗೋಳಶಾಸ್ತ್ರಜ್ಞನೂ ಇದ್ದ; ಅವದು ನೆಪ್ಚೂನ್ ಗಿಂತ ಹೊರಗೆ ಇನ್ನೊಂದು ಗ್ರಹ ಇರಬೇಕೆಂಬ ಊಹೆ ಮಾಡಿದ್ದ)

ಹೀಗೆ ಬರೆಯುವುದಕ್ಕಿಂತ, ಬರೆಯದಿರುವುದೇ ಲೇಸು ಎನಿಸುತ್ತೆ.

-ಹಂಸಾನಂದಿ

Rating
No votes yet

Comments