ಝೆನ್ ಕತೆ: ೨೭ ಬದಲಾವಣೆ

ಝೆನ್ ಕತೆ: ೨೭ ಬದಲಾವಣೆ

ಬರಹ

ಗುರು ರ್ಯೋಕಾನ್ ತನ್ನ ಇಡೀ ಜೀವಿತವನ್ನು ಝೆನ್ ಅಭ್ಯಾಸದಲ್ಲಿ ಕಳೆದಿದ್ದ. ಒಂದು ದಿನ ತನ್ನ ಸೋದರಳಿಯ ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದಿದ್ದಾನೆ, ಸಂಪತ್ತನ್ನೆಲ್ಲ ಹಾಳು ಮಾಡುತ್ತಿದ್ದಾನೆ ಎಂದು ತಿಳಿಯಿತು. ಬಂಧುಗಳೆಲ್ಲ ಬಂದು ರ್ಯೋಕಾನ್ ತನ್ನ ಸೋದರಳಿಯನಿಗೆ ಬುದ್ಧಿ ಹೇಳದಿದ್ದರೆ ಕುಟುಂಬದ ಸಂಪತ್ತೆಲ್ಲ ನಾಶವಾಗುತ್ತದೆ ಎಂದು ಗೋಳಾಡಿದರು.
ಸೋದರಳಿಯನನ್ನು ಕಂಡು ಅನೇಕ ವರ್ಷಗಳೇ ಕಳೆದಿದ್ದವು. ಅವನ ಊರಿಗೆ ಹೋಗಲು ರ್ಯೋಕಾನ್ ಬಹಳ ದೂರ ನಡೆಯಬೇಕಿತ್ತು. ಆದರೂ ಹೊರಟ.
ಅವನನ್ನು ಕಂಡು ಸೋದರಳಿಯನಿಗೆ ಬಹಳ ಸಂತೋಷವಾಯಿತು. ತನ್ನೊಡನೆ ಒಂದು ದಿನ ಇರುವಂತೆ ಕೇಳಿದ. ಗುರು ಒಪ್ಪಿದ.
ಇಡೀ ದಿನ ಧ್ಯಾನಮಾಡುತ್ತ ಕಳೆದ ರ್ಯೋಕಾನ್. ಮರುದಿನ ಬೆಳಗ್ಗೆ ಹೊರಡುವ ಮುನ್ನ ಸೋದರಳಿಯನನ್ನು ಕರೆದು ಹೇಳಿದ. “ನನಗೆ ವಯಸ್ಸಾಯಿತು ಎಂದು ಕಾಣುತ್ತದೆ. ಮುಂದಕ್ಕೆ ಬಗ್ಗಿ ಹಾವುಗೆಯ ಪಟ್ಟಿ ಕಟ್ಟಿಕೊಳ್ಳಲು ಆಗುತ್ತಿಲ್ಲ. ಕೈ ನಡುಗುತ್ತಿದೆ. ದಯವಿಟ್ಟು ಸ್ವಲ್ಪ ಸಹಾಯ ಮಾಡುತ್ತೀಯಾ?”
“ಅದಕ್ಕೇನಂತೆ” ಎಂದು ಸೋದರಳಿಯ ಗುರುವಿನ ಪಾದುಕೆಯ ಪಟ್ಟಿ ಬಿಗಿದ. “ತುಂಬ ಒಳ್ಳೆಯದಪ್ಪಾ! ನೋಡು ದಿನ ಕಳೆದಂತೆ ಮನುಷ್ಯನಿಗೆ ವಯಸ್ಸಾಗುತ್ತದೆ. ಮುದಿಯನಾಗುತ್ತಾನೆ. ಶಕ್ತಿ ಕುಂದುತ್ತದೆ. ನಿನ್ನ ಆರೋಗ್ಯ ನೀನು ಚೆನ್ನಾಗಿ ನೋಡಿಕೊಳ್ಳಪ್ಪಾ” ಎಂದು ಹೇಳಿ ಹೊರಟುಬಿಟ್ಟ. ವೇಶ್ಯೆಯ ಬಗೆಗಾಗಲೀ, ನಂಟರಿಷ್ಟರು ಮಾಡಿದ್ದ ಆಪಾದನೆಗಳ ಬಗೆಗಾಗಲೀ ಒಂದೂ ಮಾತನಾಡಲೇ ಇಲ್ಲ. ಆದರೂ ಅಂದಿನಿಂದ ಸೋದರಳಿಯನ ದುರಭ್ಯಾಸಗಳೆಲ್ಲ ನಿಂತೇ ಹೋದವು.

[ಬೈದು, ಆರೋಪಿಸಿ ಯಾರನ್ನು ತಾನೇ ಬದಲಾಯಿಸಲು ಸಾಧ್ಯ?]