ಸ್ವಾತಂತ್ರ್ಯ ದಿನ, ಸ್ನೇಹಿತನ ನಿಶ್ಚಿತಾರ್ಥ ಹಾಗೂ ಅಸ್ಸೆಂಬಲ್ಡ್ ಕಂಪ್ಯೂಟರ್...
ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದು ಎಲ್ಲರೂ ಹೇಳುತ್ತಿರುವ ಈಗ ನಾವು ಸ್ವತಂತ್ರರು ಹೌದೆ? ಎಂದೆಲ್ಲ ತಲೆ ಬಿಸಿ ಮಾಡಿಕೊಂಡು ಬೆಳಬೆಳಗ್ಗಿನ ಚಳಿಯನೆದುರಿಸಿ ಸ್ನೇಹಿತನ ನಿಶ್ಚಿತಾರ್ಥ ಅಟೆಂಡ್ ಮಾಡೋದಕ್ಕೆಂದು ಗಾಡಿ ಸ್ಟಾರ್ಟ್ ಮಾಡಿ ಹೊರಟಾಗ ಅವತ್ತು ನನ್ನಿಂದ "ಮಾಡಿಸಲ್ಪಡಲಾಗುವ" ಗುಡ್ ಡೀಡ್ ಬಗ್ಗೆ ನನಗೆ ಖಂಡಿತ ಅರಿವಿರಲಿಲ್ಲ. ದಿನದ ಕೊನೆಗೆ ಮಾತ್ರ ಮತ್ತೊಬ್ಬ ಸ್ನೇಹಿತರ ಸ್ನೇಹಿತರೊಬ್ಬರಿಗೆ ಕಂಪ್ಯೂಟರ್ ಒಂದನ್ನು ಅಸ್ಸೆಂಬಲ್ ಮಾಡಿಸಿಕೊಡುವ ಘನಕಾರ್ಯಕ್ಕೆ ಕೈಹಾಕುವ ಸಾಹಸ ಮಾಡಿದ್ದೆ, ಹಲವು ವರ್ಷಗಳ ನಂತರ ಮತ್ತೊಮ್ಮೆ.
*******
ಬೆಳಗ್ಗಿನ ಜಾವ ರಾತ್ರಿಯಾದ್ದರಿಂದ ನನಗೆ ಬೆಳಗು ಬೆಳಗಿನ ಜಾವದಂತನಿಸಿದ್ದರಲ್ಲಿ ಅಚ್ಚರಿಯಿಲ್ಲ. ಆಕಳಿಸುತ್ತಾ ಗೇರ್ ಹಾಕಿ ನಿಧಾನಗತಿಯಲ್ಲಿ ಸ್ನೇಹಿತ ಮತ್ತವನ ಭಾವೀ ಪತ್ನಿಗೆ ನೀಡಲೆಂದು ಬೊಕೆ ಹುಡುಕಿ ಹೊರಟ ವೇಗ ಯಾವ ಜಟಕಾಗಾಡಿಯನ್ನೂ ನಾಚಿಸುವಂತಿತ್ತು. ಅಲ್ಲಿಲ್ಲಿ ಪಟಾಕಿ ಹೊಡೆದು ಸ್ವತಂತ್ರ ಭಾರತದ ಸಮೃದ್ಧವಾದ ಗುಂಡಿ ಗಟರುಗಳ ಟಾರ್ ರೋಡನ್ನು ಮತ್ತಷ್ಟು ಸ್ವಚ್ಛಗೊಳಿಸುತ್ತಿದ್ದರು, ಬೆಳಬೆಳಿಗ್ಗೆ ಅಲ್ಲಿಲ್ಲಿ ಫ್ರೆಶ್ಶಾದ ಸೆಗಣಿಯನ್ನು ಕಂಡ ರೋಡು ಆಗಲೇ ಸ್ವಚ್ಛವಿಲ್ಲವೇನೋ ಎಂಬಂತೆ. ಅಲ್ಲಲ್ಲಿ ಬೈಕಿನ ತುದಿಗೆ, ಕಾರಿನ ಮುಡಿಗೆ, ಆಟೋ ಬದಿಗೆ ಭಾರತ ಮಾತೆಯ (ಪರಿ)ಸ್ಥಿತಿಯನ್ನು ಸಾರಿ ಹೇಳುವ ಪ್ಲಾಸ್ಟಿಕ್ ಧ್ವಜಗಳು ಕಂಗೊಳಿಸುತ್ತಿದ್ದವು. ಅವರವರ ಟೆರಿಟರಿ ಮಾರ್ಕ್ ಮಾಡುತ್ತಿರುವರೆಂಬಂತೆ ಅಲ್ಯಾವುದೋ ದಾರಿಯಲ್ಲಿರುವ ಸ್ಕೂಲಿಗೆ ಪುಢಾರಿಯೊಬ್ಬನ ಆಗಮನದ ಸಿದ್ಧತೆ ನಡೆದಿತ್ತು. ಅತ್ತಿತ್ತ ಅಂಬಾಸಡರ್ರು ಕಾರುಗಳಲ್ಲಿ ಮಾತ್ರ ತ್ರಿವರ್ಣ ಖಾದಿಯ ಧ್ವಜ ಕಣ್ಸೆಳೆದಿತ್ತು.
ಬೆಂಗಳೂರಲ್ಲಿ ಸ್ವಾತಂತ್ರ್ಯ ನೆತ್ತಿಗೇರಿತ್ತು; ಬೊಕೆ ಮಾತ್ರ ಸಿಗಲಿಲ್ಲ.
ಲೆಫ್ಟಿಸ್ಟ್ ಗುರುಗಳ ಸೆಂಟ್ರಿಸ್ಟ್ ಶಿಷ್ಯನಾದರೂ ಗುರುಗಳನ್ನು ಸ್ವಾತಂತ್ರ್ಯ ದಿನವಾದರೂ ಅನುಕರಿಸೋಣವೆಂದುಕೊಂಡು ಖಾದಿ ಜುಬ್ಬಾ ಹಾಕಿ ಅದರೊಡನೆ ಜೀನ್ಸ್ ಹಾಕಿಕೊಂಡು ಹೊರಬಂದಿದ್ದೆ. ಮನಸ್ಸಿನಲ್ಲಿ ಸ್ನೇಹಿತನೊಬ್ಬನ "ಆಫೀಸಿಗೆ ಪಂಚೆ" ಹಾಕಿಕೊಂಡು ಹೋಗುವ ಪ್ರಯೋಗದ ಕಲ್ಪನೆ, ವಿಶ್ಯುಯಲೈಸೇಶನ್ ಇನ್ನೂ ತಲೆಯಲ್ಲಿ ಮನೆ ಮಾಡಿತ್ತು.
ನಿಶ್ಛಿತಾರ್ಥದ ಪ್ರೊಸೀಜರ್ (procedure) ಹೇಗಿರುತ್ತದೆಂಬುದರ ಅರಿವೇ ನನಗಿರಲ್ಲಿಲ್ಲ - ಈಗಲೂ ಇಲ್ಲ. ರಾಘವೇಂದ್ರ ಸ್ವಾಮಿ ಮಠದ ಹೊರಗೆ ಹೊಂಚು ಹಾಕಿ, ಎಷ್ಟೋ ವರ್ಷಗಳ ನಂತರ ಬಹಳ ಅಳುಕಿನಿಂದ ಮೊದಲ ಬಾರಿಗೆ ಅದನ್ನು ಮತ್ತೆ ಪ್ರವೇಶಿಸಿ, ನಿಶ್ಚಿತಾರ್ಥ ಇಲ್ಲಿ ನಡೆಯಬಹುದೋ? ಇಲ್ಲೇ ಮೂಲೆಯಲ್ಲಿ ಎಲ್ಲಾದರೂ ನಡೆಸಿದ್ದಾರೋ ಎಂದೆಲ್ಲ ಆಲೋಚಿಸುತ್ತಿರುವಂತೆ ನನಗೆ ತಟ್ಟನೆ ಎಚ್ಚರವಾಗಿತ್ತು. ಹಿಂದಿನ ದಿನ ಸ್ನೇಹಿತ ಫೋನಿನಲ್ಲಿ ಹೇಳಿದ್ದನ್ನು ಮತ್ತೆ ನೆನಪು ಮಾಡಿಕೊಂಡು ರಾಮಮಂದಿರದ ಕಡೆ ಓಡಿದ್ದೆ. ಅಲ್ಲಿ ಸಿಕ್ಕರು ಸ್ನೇಹಿತರು - ಕಂಪ್ಯೂಟರ್ ತೆಗೆದುಕೊಳ್ಳಬೇಕಿದೆಯೆಂದು ಜೊತೆಗೆ ಕರೆದಿದ್ದರು. ನಿಶ್ಚಿತಾರ್ಥ ನಡೆಯುತ್ತಿದ್ದ ಚೌಲ್ಟರಿ ಹೊಕ್ಕು ಅಲ್ಲಿ ಪರಕೀಯನಂತೆ ಪಿಳಿ ಪಿಳಿ ಕಣ್ಣು ಬಿಟ್ಟು ಸ್ನೇಹಿತನ ಮುಖ ಮಂಟಪದ ಮೇಲೆ ಎಲ್ಲೂ ಕಾಣದೆ ಬಂದ ವೇಗದಲ್ಲೇ ಹೊರನಡೆದು ಕಂಪ್ಯೂಟರ್ ಅಸ್ಸೆಂಬಲ್ ಮಾಡಿಸಲೆಂದೇ ಹೊರಟುಬಿಟ್ಟಿದ್ದೆ.
ಕಂಪ್ಯೂಟರ್ ಅಸ್ಸೆಂಬಲ್ ಮಾಡಿಸಿಕೊಡುವಷ್ಟು ಮೂರ್ಖತನದ ಕೆಲಸ ಬೇರೊಂದಿಲ್ಲ - ಅಸೆಂಬಲ್ ಮಾಡಿಸಿದ ಮೇಲೆ ಕಂಪ್ಯೂಟರು ಕೆಟ್ಟು ಹೋದರೆ ಮಾರಿದವನ ಬದಲು ಬರುವುದು ಕೊಡಿಸಲು ಹೋದವನ ತಲೆಗೆ! ಅಲ್ಲದೆ ಈ ಸಾಹಸಕ್ಕೆ ಕೈಹಾಕಿದರೆ ವಿವಿಧ ಸಾಫ್ಟ್ವೇರ್ ಬಳಸೋದು ಹೇಗೆ ಎಂಬುದರ ಟ್ರೇಯ್ನಿಂಗ್ ಕೊಡಬೇಕಾದುದು ಕೂಡ ಅದರೊಂದಿಗಿನ ಪ್ಯಾಕೇಜ್. ಅದರೊಂದಿಗೆ ಕಳೆದುಹೋಗುವ ಸಮಯಕ್ಕಂತೂ ಲೆಕ್ಕವೇ ಇಲ್ಲ.
ಇದೇ ಕಾರಣವಾಗಿ ನಾನು ಕಳೆದೆರಡು ವರ್ಷಗಳ ಕಾಲ ಈ ವಿಷಯವಾಗಿ ಯಾರು ಸಹಾಯ ಕೇಳಿದರೂ"ಅದೆಲ್ಲ ಉಸಾಬರಿ ಯಾಕೆ? ಬ್ರಾಂಡೆಡ್ ತಗೊಂಡು ಬಿಡಿ" ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಕಂಪ್ಯೂಟರಿನಲ್ಲೇ ಕೆಲಸ ಮಾಡೋರು ಅಂತ ಗೊತ್ತಾದರೆ ಸಾಕು "ನನಗೊಂದು ಕಂಪ್ಯೂಟರ್ ಬೇಕು, ಒಳ್ಳೇದು ನೋಡಿ ತೆಗೆಸಿಕೊಡ್ತೀಯಾ?" ಎಂದು ಕೇಳುವುದು ವಾಡಿಕೆಯಂತಾಗಿಬಿಟ್ಟಿದೆ.
ಹಾಗಾಗಿಯೇ ತೀರ ಹತ್ತಿರದ ಸ್ನೇಹಿತರಿಗೆ ಮಾತ್ರ "ಅಸ್ಸೆಂಬಲ್ಡ್ ತಗೊಳ್ಳಿ, ಉಳಿತಾಯ ಆಗುತ್ತದೆ. ಜೊತೆಗೆ ನಿಮಗೆ ಚಾಯ್ಸ್ ಕೂಡ ಇರತ್ತೆ" ಎಂದುಕೊಂಡು ಪರೋಪಕಾರಿಯಾಗೋದು. ಕಂಪ್ಯೂಟರಿನ ವಿವಿಧ accessoryಗಳನ್ನ ಕೊಳ್ಳುವಾಗ ನಾವು ಹಾಕಿಸಿಕೊಂಡ ಟೋಪಿಯ ಅನುಭವಗಳನ್ನು ಮೆಲುಕು ಹಾಕಿ ಸ್ನೇಹಿತರ ಜೇಬಿನ ಹಣವನ್ನು ಉಳಿಸೋದು. ಈ ನಡುವೆ ಸ್ನೇಹಿತನ ಮನೆಯ ಸದಸ್ಯರು ಯಾರಾದರೂ "ಅವನೇನಾದರೂ ಕಮೀಶನ್ ತೆಗೆದುಕೊಳ್ಳುತ್ತಾನೇನೋ?" ಎಂದು ಕೇಳಿಸುವಂತೆ ಮಾತನಾಡಿಕೊಂಡಾಗ - ಮೂರ್ಖರಾಗಿಸಿಕೊಂದು, ಟೋಪಿ ಹಾಕಿಸಿಕೊಂಡು ಕಲೆತದ್ದನ್ನ ಮೂರ್ಖರಾಗಿ ಹಂಚಿಕೊಂಡು ಪರೋಪಕಾರಿಗಳಾಗಿಯೂ ಪಾಪಿಗಳಂತೆ ಆಗುವುದಿದೆ. ಅಥವ ಏನೋ ದೋಷದಿಂದ ಏನಾದರೂ ಸರಿಯಾಗಿ ಕೆಲಸ ಮಾಡದಿದ್ದಾಗ "ನೋಡಿದೆಯಾ, ಬ್ರಾಂಡೆಡ್ ತಗೋಬೇಕಿತ್ತು." ಎಂದುಬಿಡೋದನ್ನ ಕೇಳಿ "ಈ ಸಾಹಸ ಯಾಕೆ ಬೇಕಿತ್ತು" ಅನ್ನಿಸಿಬಿಡೋದಿದೆ. ಆದರೆ ಸ್ವತಃ ತಮಗೆ ಸಿಗದ ಉತ್ತಮ ಕಂಪ್ಯೂಟರನ್ನು ಸ್ನೇಹಿತರೊಬ್ಬರಿಗೆ ಅಸ್ಸೆಂಬಲ್ ಮಾಡಿಸಿಕೊಟ್ಟು ಭೇಷ್ ಎನ್ನಿಸಿಕೊಳ್ಳೋದರಲ್ಲೂ ಖುಷಿಯಿದೆ.
ಸಾಯಂಕಾಲದವರೆಗೂ ನಡೆದ ಅಸ್ಸೆಂಬ್ಲಿಂಗ್ ಸಾಹಸ ಮುಗಿಸಿಕೊಂಡು ಮನೆ ತಲುಪುವ ಹೊತ್ತಿಗೆ ಸ್ವಾತಂತ್ರ್ಯದಿನ ಮುಗಿದಿತ್ತು. ಸ್ವಾತಂತ್ರ್ಯದಿನದಂದು ಸ್ನೇಹಿತನೊಬ್ಬ ಸ್ವಾತಂತ್ರ್ಯ ಕಳೆದುಕೊಂಡ ಜೋಕುಗಳು ಗೂಗಲ್ ಚ್ಯಾಟಿನಲ್ಲಿ ಹರಿದಿದ್ದವು.
(ಹದಿನಾರನೇ ತಾರೀಖು ಬೆಳಗಿನ ಜಾವ ಕುಳಿತು ನಿದ್ರೆಗಣ್ಣಿನಲ್ಲಿ ಬರೆದದ್ದು. ಬೋರು ಹೊಡೆಸಿದ್ದರೆ ಕ್ಷಮೆ ಇರಲಿ)