ಪಚ್ಚೆಕಲ್ಲು ಪಾಣಿ ಪೀಠ...

ಪಚ್ಚೆಕಲ್ಲು ಪಾಣಿ ಪೀಠ...

ನಾವಿಬ್ಬರೂ ಶಾಲೆ ಮುಗಿಸಿ ಬಂದು ಪಾಟಿ ಚೀಲ ಬಿಸಾಕಿ, ಕೈ ಕಾಲು ತೊಳ್ಕೊಂಡು, ಅಮ್ಮ ಕೊಟ್ಟ 'ಬಾಯಿಬಡಿಗೆ' ಗುಳುಂ ಮಾಡಿ, ಹಾಲುಟೀ ಕುಡಿದು ಓಟ ಹೊರಗೆ.. ಅಲ್ಲಿ ರಸ್ತೆಬದಿಯ ಅಂಗಳದಲ್ಲಿ, ರೇಣುಕ,ಶಿವು,ತಾರ,ಶಾಯಿನಾ,ಲಕ್ಷ್ಮಣ,ದುರ್ಗಪ್ಪ ಎಲ್ಲ ಸೇರಿ ಕತ್ತಲು ಕವಿಯುವವರೆಗೆ ಬಾಯಿಗೆ ಬಂದ ಆಟ ಆಡಿ ಮಣ್ಣಧೂಳಿನ ತೆರೆಹೊದ್ದು ಗೋಧೂಳಿಯಲ್ಲಿ ಮನೆಗೆ ಬರುವ ಪುಟ್ಟ ಕರುಗಳಂತೆ ಬಂದ ಮೇಲೆ.. ಮತ್ತೆ ಕೈಕಾಲು ತೊಳೆದು.. ಈ ಸಲ ಹಿಮ್ಮಡಿ ನೆನೆಯುವ ಹಾಗೆ ಎಚ್ಚರಿಕೆಯಿಂದ ಕಾಲು ತೊಳೆಯಬೇಕು ಇಲ್ಲದಿದ್ದರೆ ಬಚ್ಚಲ ಒಲೆಯ ಬುಡದಲ್ಲೆಲ್ಲೋ ಬೆಚ್ಚಗೆ ಕುಳಿತ ಶನಿಮಹಾತ್ಮ ನಳನ ಹಿಮ್ಮಡಿ ಕಚ್ಚಿಹಿಡಿದಹಾಗೆ ಹಿಡಕೊಂಡು ಬಿಡುತ್ತಾನೆ.. ಆಮೇಲೆ ಅಷ್ಟೆ..!

ಇಬ್ಬರೂ ಗೋಣಿಚೀಲಕ್ಕೆ ಕಾಲು ಒರೆಸುತ್ತಾ ಒಳಗೆ ಬಂದರೆ ಅಮ್ಮ ಆಗಷ್ಟೇ ದೀಪಕ್ಕೆ ಎಣ್ಣೆತುಂಬುತ್ತಾ ಹತ್ತಿಸುತ್ತಿದ್ದಾಳೆ. ಒಂದು ಊದುಬತ್ತಿ ಬೇರೆ. ಈಗ ಅಮ್ಮನದ್ದು ಮಾತಿಲ್ಲ ಸಂಜ್ಞೆ. ನಾವಿಬ್ಬರೂ ಸಿಕ್ಕಾಪಟ್ಟೆ ಒಳ್ಳೆಯವರ ಹಾಗೆ ಕೈ ಮುಗಿದು ಅಮ್ಮನ ಮುಖದ ಮೇಲೆ ಬೆಳಕಿನಾಟ ಹಚ್ಚಿರುವ ದೀಪದ ಪುಟ್ಟ ಉರಿಯನ್ನೇ ನೋಡುತ್ತಾ ನೋಡುತ್ತಾ ನಿಜವಾಗಲೂ ತುಂಬ ಒಳ್ಳೆಯವರಾಗಿಬಿಡುತ್ತಿದ್ದೆವು. ಅಮ್ಮನ ಅಹವಾಲು ಮುಗಿದು ನಮ್ಮ ಕಡೆ ತಿರುಗಿದ ಕೂಡಲೆ, ನಮ್ಮ ಬಾಯಿ ತಾನೆತಾನಾಗಿ ಬೆನಕ ಬೆನಕಾ ಏಕದಂತಾ ಪಚ್ಚೆಕಲ್ಲು ಪಾಣಿಪೀಠ.. .ಎಂದು ಒಪ್ಪುವಾ ವಿಘ್ನೇಶ್ವರನಿಗೆ ನಮಸ್ಕರಿಸಿ, ಪಾರ್ವತಿ, ಶಾರದೆ, ಅನ್ನಪೂರ್ಣೆ, ಗುರುರಾಯರನ್ನೆಲ್ಲ ಓಲೈಸಿ ಮುಗಿಸುವಾಗ ನಾವು ಶಿರಬಾಗಿ ನಮಿಸಿ ಎದ್ದವರು ಮತ್ತೆ ವಾಪಸ್ ಕಿರಾತರಾಗಿ ಬಿಡುತ್ತಿದ್ದೆವು. ಗೂಡಿನಲ್ಲಿದ್ದ ಇಡಗುಂಜಿ ಗಣಪತಿಯಂತೂ ನಮ್ಮನ್ನು ನೋಡಿದಾಗಲೆಲ್ಲ ಕಿರುನಗು..

ಬೇಸಿಗೆ ರಜೆಯ ಆಟೋಟ್ಟಹಾಸದ ಸಂಜೆಗಳಲ್ಲಿ, ಊರಲ್ಲಿ, ಸಂಜೆಯ ಆಟ ಮುಗಿದು ಮನೆಗೆ ಬಂದು ಕಾಲ್ತೊಳೆದು ದೇವರ ಮನೆಯ ಮುಂದೆ ಅಕ್ಕನ ಜೊತೆ ತಾಳ ಹಿಡಿಯಲು ನಾವಿಬ್ಬರೂ ಕುಸ್ತಿ ಮಾಡಿ ಕೂರುವಷ್ಟರಲ್ಲಿ ಅವಳು ಒಪ್ಪಾಗಿ ಬಂದು ಕೂತು -ಶ್ರೀರಾಮ ಚಂದಿರನೆ ಶ್ರೀಲೋಲ ಸುಂದರನೆ ಅಂತ ಶುರುಮಾಡುತ್ತಿದ್ದಂತೆ ನಾವು ನಮ್ಮ ಕಿತಾಪತಿ ಮರೆತು ಆ ಹಾಡಿನ ಎಳೆಯನ್ನೇ ಹಿಡಿದು ರಾಮ ಪಟ್ಟಾಭಿಷೇಕದಲ್ಲಿ ನಲಿಯುತ್ತಾ, ನಮ್ಮ ಮನೆಗಳಲ್ಲಿ ಪರಿಚಿತವಿರುವ ಎಲ್ಲ ದೇವರನ್ನೂ ಓಲೈಸಲು ವಿಧವಿಧದ ಭಜನೆಗಳನ್ನು ಗುನುಗುತ್ತಾ ಇದ್ದರೆ ಅಲ್ಲಿ ಪೀಠದ ಮೇಲೆ ದೀಪದ ಸಣ್ಣ ಬೆಳಕಿನಲ್ಲಿ ಹೊಳೆಯುವ ಎಲ್ಲ ದೇವಾನುದೇವತೆಗಳೂ, ಮನೆಯಲ್ಲಿ ಅಲ್ಲಲ್ಲಿ ಅವರವರ ಕೆಲಸದಲ್ಲಿರುವ ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಅಮ್ಮಮ್ಮ ಎಲ್ಲರೂ ಸುಪ್ರಸನ್ನರಾಗಿ ಎಂತಹ ಬಂಗಾರದ ಮಕ್ಕಳಾಗುತ್ತಿದ್ದೆವು.

ಎಲ್ಲ ಕಿರಾತಬುದ್ಢಿ, ತುಂಟತನ, ಹೊಟ್ಟೆಯುರಿ, ಎಲ್ಲ ಸಂಜೆಯ ಕತ್ತಲಲ್ಲಿ ಕರಗಿ, ಬೆಳಕಿನ ಪುಟ್ಟ ಹಾಡಿನೆಳೆ ಹಿಡಿದು ಕಿನ್ನರಲೋಕದ ದಾರಿಯಲ್ಲಿ ದೇವರ ದೇವ ವಾಸುದೇವನ ಕೊಳಲ ನೆನಪಿನಲ್ಲಿ ನಮ್ಮ ಪಯಣ.

ಮೊನ್ನೆ ಅಲ್ಲಿ ರಾಮಮಂದಿರದಲ್ಲಿ (ಇದು ಭಜರಂಗೀ ರಾಮನಲ್ಲ..! ಬಾಪೂಜೀಯ ರಾಮ) ಎಲ್ಲ ದೊಡ್ಡಮಕ್ಕಳು ಅವರವರ ಮಕ್ಕಳು ಮೊಮ್ಮಕ್ಕಳೊಂದಿಗೆ ಕೂತು ಕಮಲನಯನ ಮಾಧವಾ ಕಮಲಾನಯನ ಮಾಧವಾ.. ಅಂತ ಹಾಡುತ್ತಿದ್ದರು. ಸುತ್ತಲ ಶಬ್ಧಮಯ ಬದುಕಿನ ಅಗಾಧ ಕತ್ತಲೆಯು ನಾದಮಯ ಬದುಕಿನ ಪುಟ್ಟ ಬೆಳಕೊಳಗೆ ಕರಗುತ್ತಿತ್ತು. ದೊಡ್ಡವರ ಸಣ್ಣತನಗಳೆಲ್ಲಾ ಆ ಪುಟ್ಟಬೆಳಕಿನ ಆಪ್ತತೆ, ಸುನಾದದ ಇಂಪಿನ ಮುಂದೆ ನಾಚಿ ಹಿಂದೆಸರಿದು ಮಗುಮನಸ್ಸಿನ ವಿಶಾಲತೆಗೆ ಜಾಗಬಿಟ್ಟಿದ್ದವು. ಒಬ್ಬರು ಧರೆಯೊಳಗೆ ನಾರದ ಹಂಚಿದ ಹರಿನಾಮವನ್ನು ಉಲಿದರೆ, ಇನ್ನೊಬ್ಬರು ಹರಿನಾಮದ ಸುಧೆಯ ಹಂಚುತ್ತಿದ್ದರು, ಪುರಂದರವಿಠಲನ ಅವತಾರ ವರ್ಣಿಸುವ ಸವಿ ಉಲಿಯ ಕೊಳಲಿತ್ತು, ಎಲ್ಲರ ಮೃದು ಉಲಿಯ ದನಿಗೆ ಸಾಥಿಯಾಗಿ ತಾಳವಿತ್ತು. ಅವರು 'ತಂಬೂರಿ ಮೀಟಿದವ ಭವಾಬ್ಧಿ ದಾಟಿದವ..' ಅಂತ ಹಾಡುತ್ತಾ ಪುಟ್ಟ ಪುಟ್ಟ ನೋವಿನ ಹೊಳೆಗಳನ್ನ ಮೆದುದನಿಯ ಹಾಡು ಹೆಜ್ಜೆಗಳಲ್ಲಿ ದಾಟುತ್ತ ಹೋಗುತ್ತಿದ್ದರು.

ನಾನು, ಓದಿದ ಎಲ್ಲ ಶಾಸ್ತ್ರಗಳ ತರ್ಕ ಲೆಕ್ಕ ಹಾಕುತ್ತಾ ಮಗುವಾಗಲಾಗದೆ ಇಲ್ಲೆ ನಿಂತಿದೀನಿ. ಪುಟ್ಟ ಹೊಳೆದಾಟಲು ಹಾಡಿನ ಹರಿಗೋಲಿಲ್ಲ. ನಂಬಿಕೆಯ ದೋಣಿಗೆ ತಳವೇ ಇಲ್ಲ. ಭವಾಭ್ಧಿ ದಾಟುವುದು ಹೇಗೆ?! ಅಬ್ಧಿ ಇದೆಯೋ ಇಲ್ಲವೋ, ದಿನದಿನದ ಬದುಕಿನ ಪುಟ್ಟ ಪುಟ್ಟ ಹೊಡೆತಗಳನ್ನು ತಾಳಿಕೊಂಡು ಮುಂದೆಹೋಗಲು ಆ ಎರಡು ಪುಟ್ಟ ತಾಳಗಳು, ಎಂದೋ ಯಾರೋ ಭಾವೋದ್ದೀಪನೆಯಲ್ಲಿ ಬರೆದಿಟ್ಟ ಸರಳಸಾಲುಗಳು ಎಷ್ಟು ಗಟ್ಟಿ ಸೇತುವೆಯಾಗುತ್ತವೆಯಲ್ಲವೆ?

ಮನಸ್ಸಿನ ಕಿರಾತತನದ ಕತ್ತಲನ್ನು ಓಡಿಸಲು, ಅಮ್ಮನ ಹಾಗೆ ಬೆಚ್ಚಗೆ ಅರಳಿರುವ ಪುಟ್ಟ ದೀಪದ ಬೆಳಕಿಗೆ ಮಾತ್ರ ಸಾಧ್ಯವಲ್ಲವೇ?

ನನಗೆ ಗೊತ್ತಿಲ್ಲ. ಕತ್ತಲು ಬೆಳಕಿನ ಮಧ್ಯದಲ್ಲಿ ನಾನು ಬೆಳಕಿಗಾಗಿ ಕಾದಿದ್ದೇನೆ. ಕೈ ಹಿಡಿದು ನಡೆಸುವ ಬೆಳಕೋ, ನಾನೇ ಹುಡುಕಿಕೊಂಡು ಹೋಗಿ ಹಚ್ಚಬೇಕಿರುವ ಸ್ವಿಚ್ಚೋ ಕಾಲವೇ ಹೇಳಬೇಕು.

ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ...

ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?

Rating
Average: 5 (1 vote)

Comments