ಕಾಗದದ ಬ್ಯಾಟರಿ
(ಇ-ಲೋಕ-36)(21/8/2007)
ಕಿರುಗಾತ್ರದ ಸಾಧನಗಳಿಗೆ ಕಿರುಗಾತ್ರದ, ಆದರೆ ಭೀಮಬಲದ ಬ್ಯಾಟರಿ ತಯಾರಿಸುವ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿದೆ.ನ್ಯೂಯಾರ್ಕಿನ ರೆನ್ಸೆಲರ್ ಪಾಲಿಟೆಕ್ನಿಕ್‍ನ ಸಂಶೋಧಕರು ಸುರುಳಿ ಸುತ್ತಬಲ್ಲ,ಮಡಚಬಲ್ಲ ಬ್ಯಾಟರಿಯನ್ನು ಸಂಶೋಧಿಸಿದ್ದಾರೆ.ಅದನ್ನವರು ಸೆಲ್ಯುಲೋಸ್ ಅಂಶದಿಂದ ತಯಾರಿಸಿದ್ದಾರೆ.ಸೆಲ್ಯುಲೋಸ್ ಕಾಗದದಲ್ಲೂ ಇದೆ. ಹಾಗಾಗಿ ಬ್ಯಾಟರಿಯನ್ನೂ ಕಾಗದದಿಂದ ತಯಾರಾದದ್ದು ಎಂದರೆ ತಪ್ಪಿಲ್ಲ.ಇದು ಮುನ್ನೂರು ಡಿಗ್ರಿ ಫ್ಯಾರನ್‍ಹೀಟ್ ಉಷ್ಣತೆಯಿಂದ ಹಿಡಿದು ಸೊನ್ನೆಗಿಂತಲೂ ನೂರು ಫ್ಯಾರನ್‍ಹೀಟ್ ಕೆಳಗಿನ ಉಷ್ಣತೆಯ ವರೆಗೂ ಕಾರ್ಯನಿರ್ವಹಿಸಬಲ್ಲುದು.ಕಾಗದದಲ್ಲಿ ಬ್ಯಾಟರಿಯನ್ನು ಮುದ್ರಿಸಬಹುದು.ಹಾಗಾಗಿ ತಯಾರಿಕೆಯೂ ಸುಲಭ.ವಿದ್ಯುದ್ರಾವಕವಾಗಿ ಅಯೋನಿಕ್ ಉಪ್ಪನ್ನು ಬಳಸಲಾಗಿದೆ.ನ್ಯಾನೋಟ್ಯೂಬುಗಳು ಇದರ ಧ್ರುವಗಳಾಗಿ ಕೆಲಸ ಮಾಡುತ್ತವೆ. ಇದು ಪರಿಸರ ಸ್ನೇಹಿ ಬ್ಯಾಟರಿ ಎನ್ನುವುದಕ್ಕೆ ಇದು ಕಾಗದದಿಂದ ತಯಾರಿಸಿದ್ದು ಎನ್ನುವ ಸಮರ್ಥನೆ ಸಂಶೋಧಕರದ್ದು.ವಿಷವಸ್ತುಗಳನ್ನು ಇದರ ತಯಾರಿಕೆಗೆ ಬಳಸಿಲ್ಲ.ಈ ಸಂಶೋಧನೆಯಲ್ಲಿ ಪುಲಿಕ್ಕೆಲ್ ಅಜಯನ್,ಓಂಕಾರಮ್ ನಲಮಾಸು,ಅಶವಾನಿ ಕುಮಾರ್,ಶರವಣಬಾಬು ಮುರುಗೇಶನ್ ಮುಂತಾದ ಭಾರತೀಯ ಹೆಸರಿನ ವ್ಯಕ್ತಿಗಳಿರುವುದು ವಿಶೇಷ.
ಮೇಷ್ಟ್ರು ಬಾಹ್ಯಾಕಾಶಕ್ಕೆ
ಸ್ಪೇಸ್ ಶಟಲ್ ಎಂಡೇವರ್‌ನ ಮುಂದಿನ ಉಡ್ಡಯಣದ ಓರ್ವ ಬಾಹ್ಯಾಕಾಶಯಾನಿ ವೃತ್ತಿಯಿಂದ ಶಿಕ್ಷಕನಾಗಿದ್ದಾತ.ಹಲವಾರು ಶಿಕ್ಷಕರ ನಡುವೆ ನಡೆದ ಸ್ಪರ್ಧೆಯಲ್ಲಿ ಜಯಶಾಲಿಯಾಗಿ ಬರ್ಬರಾ ಮೋರ್ಗನ್ ಎನ್ನುವಾತ ಎಂಡೇವರ್‌ನಲ್ಲಿ ಯಾತ್ರೆ ಮಾಡಲಿದ್ದಾರೆ.ಚಾಲೆಂಜರ್ ಸ್ಪೇಸ್ ಶಟಲ್ ಅಪಫಾತಕ್ಕೀಡಾದಾಗ ಅದರಲ್ಲಿದ್ದ ಕ್ರಿಸ್ಟಾ ಮೆಕುಲ್ಲಿಫೆ ಬಾಹ್ಯಾಕಾಶಯಾನ ಮಾಡಿದ ಮೊದಲ ಶಿಕ್ಷಕನೆಂದು ನಿಮಗೆ ಗೊತ್ತಿರಬಹುದು.ನೂರಿಪ್ಪತ್ತು ಸ್ಪರ್ಧಿಗಳ ಪೈಕಿ ಬರ್ಬರಾ ಆಯ್ಕೆಯಾಗಿದ್ದಾರೆ.ಇವರ ಉಡ್ಡಯನವನ್ನು ವೀಕ್ಷಿಸಲು ಸೋತ ಹಲವಾರು ಶಿಕ್ಷಕರು ಬಯಸಿದ್ದಾರೆ.ತಮ್ಮವನೋರ್ವ ಬಾಹ್ಯಾಕಾಶಯಾತ್ರೆ ಮಾಡುವ ಅದೃಷ್ಟ ಪಡೆದಿರುವುದು ಅವರಿಗೆ ಖುಷಿ ತಂದಿದೆ.ಸ್ಪರ್ಧಿಗಳ ಪೈಕಿ ಕೇವಲ ಹತ್ತು ಜನ ಮಾತ್ರಾ ವಿಜ್ಞಾನ ಶಿಕ್ಷಕರೇ ಅಂತೆ.ಈ ಯಾನ ಶಿಕ್ಷಕರ ದಿನಾಚರಣೆಯ ಸಮೀಪವೇ ನಡೆಯಲಿರುವುದು ಕಾಕತಾಳೀಯ!
ಚಿಪ್ ತಣಿಸಲು ಗಾಳಿಯಂತ್ರ
ವಿದ್ಯುತ್ ಮಂಡಲಗಳನ್ನು ಕಿರುಗಾತ್ರದಲ್ಲಿ ಸಾಕ್ಷಾತ್ಕರಿಸುವ ಇಂಟೆಗ್ರೇಟೆಡ್ ಸರ್ಕ್ಯೂಟ್(ಐ.ಸಿ.) ತಂತ್ರಜ್ಞಾನ ಅದ್ಭುತ ಪ್ರಗತಿ ಸಾಧಿಸುತ್ತಿದೆ.ಮೂರ್ ಎನ್ನುವ ವಿಜ್ಞಾನಿ ಊಹಿಸಿದಂತೆ,ಕಡಿಮೆ ಜಾಗದಲ್ಲಿ ದೊಡ್ಡ ವಿದ್ಯುತ್ ಮಂಡಲಗಳನ್ನು ರೂಪಿಸಲು ಸಾಧ್ಯವಾಗುತ್ತಿದೆ. ಆದರೆ ಐ.ಸಿ.ಗಳ ಗಾತ್ರ ಕುಗ್ಗಿದಂತೆ,ಅವುಗಳ ತಾಪ ಏರುತ್ತದೆ.ಐ.ಸಿ.ಗಳನ್ನು ತಂಪಾಗಿರಿಸುವುದೇ ಒಂದು ಸವಾಲು.ಸಾಮಾನ್ಯ ಫ್ಯಾನ್‍ಗಳನ್ನು ಇದಕ್ಕೆ ಬಳಸಿದರೆ,ಐ.ಸಿಗಳ ಮೂಲಕ ಗಾಳಿಯ ಅಣುಗಳು ಚಲಿಸುವಾಗ,ಅವುಗಳು ಸಿಕ್ಕಿ ಹಾಕಿಕೊಂಡು,ಗಾಳಿಯ ಪ್ರವಾಹಕ್ಕೆ ತಡೆ ಉಂಟಾಗುವುದು ಒಂದು ದೊಡ್ಡ ಸಮಸ್ಯೆ.ಈಗ ಪುರ್ಡ್ಯೂ ವಿಶ್ವವಿದ್ಯಾಲಯದವರು ಕಂಡು ಹಿಡಿದಿರುವ ಹೊಸ ವಿಧಾನದ ಪ್ರಕಾರ,ಐ.ಸಿ.ಗಳ ಅಡ್ಡಲಾಗಿ ವಿದ್ಯುತ್ ವಿಭವಾಂತರ ಉಂಟುಮಾಡಿ,ವಿದ್ಯುದಾವೇಶ ಉಳ್ಳ ಅಯಾನುಗಳ ಪ್ರವಾಹ ಉಂಟಾಗುವಂತೆ ಮಾಡಿ,ಆ ಮೂಲಕ,ಐ.ಸಿ.ಗಳ ತಾಪವನ್ನು ಇಳಿಸುವ ಗಾಳಿಯಂತ್ರ ವಿಧಾನವನ್ನು ಪ್ರಕಟಿಸಿದ್ದಾರೆ.ಸಾಮಾನ್ಯ ವಿಧಾನಕ್ಕಿಂತ ಶೇಕಡಾ ಇನ್ನೂರೈವತ್ತು ಪಟ್ಟು ಪ್ರಭಾವಶಾಲಿಯಾಗಿರುವುದು ಹೊಸ ವಿಧಾನದ ಅನುಕೂಲವಾಗಿದೆ.ತಮ್ಮ ಸಂಶೋಧನೆಯನ್ನು ಪರೀಕ್ಷಿಸಲು ಈಗಾಗಲೇ ಮಾದರಿಯೊಂದನ್ನು ಸಿದ್ಧ ಪಡಿಸಲು ಸಂಶೋಧಕರಾದ ಸುರೇಶ್ ಗರಿಮೆಲ್ಲಾ ಅವರಿಗೆ ಸಾಧ್ಯವಾಗಿದೆ.ಇದರ ಗಾತ್ರವನ್ನು ನೂರು ಪಟ್ಟು ಇಳಿಸುವ ಸವಾಲು ಅವರ ಮುಂದಿದೆ.
ದೇವರ ಸಂಖ್ಯೆಯೆಷ್ಟು?
ಇದೇನು ದೇವರ ಸಂಖ್ಯೆ ಎಂದು ಆಶ್ಚರ್ಯವಾಯಿತೇ?ಹಳೆಕಾಲದ ಆಟಿಕೆ "ರೂಬಿಕ್ ಕ್ಯೂಬ್" ಗೊತ್ತು ತಾನೇ?ರೂಬಿಕ್ ಕ್ಯೂಬಿನ ಮುಖದಲ್ಲಿ ಒಂದೇ ಬಣ್ಣ ಬರುವಂತೆ ಮಾಡುವುದು ಕಠಿನ ಸವಾಲೇ ಸರಿ.ಅಭ್ಯಾಸ ಬಲದಿಂದ ಹಲವರು ರೂಬಿಕ್ ಕ್ಯೂಬ್ ಸಮಸ್ಯೆಯನ್ನು ಶರವೇಗದಲ್ಲಿ ಪರಿಹರಿಸಬಲ್ಲರು.ಯಾವುದೇ ಸ್ಥಿತಿಯಲ್ಲಿರುವ ರೂಬಿಕ್ ಕ್ಯೂಬನ್ನು ಒಂದೇ ಬಣ್ಣದ ಮುಖ ಹೊಂದಿರುವಂತೆ ಮಾಡಲು ಎಷ್ಟು ಹೆಜ್ಜೆಗಳು ಬೇಕು ಎನ್ನುವುದನ್ನು ವಿಜ್ಞಾನಿಗಳ ತಲೆ ತಿನುತ್ತಿರುವ ಪ್ರಶ್ನೆ.ರೂಬಿಕ್ ಕ್ಯೂಬ್ ಸಮಸ್ಯೆಯನ್ನು ಪರಿಹರಿಸಲು ತಗಲುವ ಅತ್ಯಂತ ಕಡಿಮೆ ಸಂಖ್ಯೆಯ ಹೆಜ್ಜೆಗಳನ್ನು ದೇವರ ಸಂಖ್ಯೆ ಎನುತ್ತಾರೆ.ಬಾಸ್ಟನ್‍ನ ನಾರ್ತೀಸ್ಟರ್ನ್ ವಿಶ್ವವಿದ್ಯಾಲಯದ ಡೇನಿಯಲ್ ಎನ್ನುವ ವಿದ್ಯಾರ್ಥಿ ಸೂಪರ್ ಕಂಪ್ಯೂಟರ್ ಬಳಸಿ,ರೂಬಿಕ್ ಕ್ಯೂಬ್ ಸಮಸ್ಯೆ ಬಗೆಹರಿಸಲು ಸಫಲನಾಗಿದ್ದಾನೆ.ಅವನ ಹೆಗ್ಗಳಿಕೆಯೆಂದರೆ,ಹೆಚ್ಚೆಂದರೆ ಇಪತ್ತಾರು ಹೆಜ್ಜೆಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ತಂತ್ರಾಂಶ ರೂಪಿಸಿದ್ದಾನೆ.ಸೈದ್ಧಾಂತಿಕವಾಗಿ ಇಪ್ಪತ್ತು ಅಥವಾ ಕಡಿಮೆ ಹೆಜ್ಜೆಗಳಲ್ಲಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಬೇಕಿದೆ. ಭಾರತ:ಹನ್ನೆರಡು ತುಂಬಿದ ಆಂತರ್ಜಾಲ ಭಾರತದಲ್ಲಿ ಅಂತರ್ಜಾಲ ಲಭ್ಯವಾಗಲು ಶುರುವಾಗಿ ಹನ್ನೆರಡು ವರ್ಷಗಳು ಸಂದುವು. ಈ ಹನ್ನೆರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕ ಹೊಂದಿದವರ ಸಂಖ್ಯೆ ಐದು ದಶಲಕ್ಷವನ್ನು ಮುಟ್ಟಿದೆ.ಮೊದಲು ಟೆಲಿಫೋನ್ ಸಂಪರ್ಕದ ಮೂಲಕ ಲಭ್ಯವಾಗಿದ್ದ ಅಂತರ್ಜಾಲ ಆಮೆಗತಿಯದ್ದಾದರೆ,ಈಗ ಬ್ರಾಡ್‌ಬ್ಯಾಂಡ್ ಸೇವೆಯ ಮೂಲಕ ಶರವೇಗದಲ್ಲೂ ಲಭ್ಯ.ಇನೂರೈವತ್ತು ಮಾಸಿಕ ದರದಲ್ಲೂ ಲಭ್ಯವಾಗುತ್ತಿರುವ ಅಂತರ್ಜಾಲ ಸೇವೆ ಈಗ ಜನರಿಗೆ ಅತ್ಯಗತ್ಯ ಸೇವೆ ಅನಿಸುತ್ತಿದೆ.
*ಅಶೋಕ್‍ಕುಮಾರ್ ಎ