ಚಿಂಟು: ನಂಗೇನಿಷ್ಟ ಅಂದ್ರೆ...

ಚಿಂಟು: ನಂಗೇನಿಷ್ಟ ಅಂದ್ರೆ...

[Please refer : ನಾ ಮೆಚ್ಚಿದ ಕಥೆ ಕನ್ನಡದಲ್ಲಿ..]

ಅಪ್ಪನ ಕಾಲಿಗೆ ಜೋತು ಬಿದ್ದು 'ಬೊರ್-ಬೊರ್-ಅಂಗಿ' ಆಡೋದು. ಚೆಸ್ ಆಟ ಇಷ್ಟ. ನಾನು ಗೆದ್ರೆ ಮಾತ್ರ! ಗೆಲ್ಲಲಿಲ್ಲಾ ಅಂದ್ರೆ ಖಂಡಿತಾ ಇಷ್ಟ ಇಲ್ಲ.

ಜೀರುಂಡೆ ಹಿಡಿದು ಖಾಲಿ ಬೆಂಕಿಪೊಟ್ಟಣದೊಳಗೆ ಹಾಕಿದಾಗ ಅದು ಮಾಡೊ ಕರ-ಕರ ಸದ್ದು. ಭಾನುವಾರ ಬೆಳಗ್ಗೆ ಅಮ್ಮ ಬೈಯುತ್ತಾ ಇದ್ದರೂ ಏಳದೇನೆ, ಅಪ್ಪನ ಮಗ್ಗುಲಲ್ಲಿ ಗುಬ್ಬಚ್ಚಿ ಥರ ಅವಿತುಕೊಂಡು ಟೀಪುವಿನ ಕಥೆ ಕೇಳೋದು. ನಾವು ದೊಡ್ಡ ಮನೆಗೆ ಹೋದ ತಕ್ಷಣ ಒಂದು ನಾಯಿ ತಗೋಳಲೇ ಬೇಕು. ಅದು ಚೂಟಿ ನಾಯಿ ಆಗಿರಬೇಕು. ನಾನು ಹೇಳಿಕೊಟ್ಟೀದ್ದೆಲ್ಲಾ ಕಲಿಬೇಕು. 'ಪೇಪರ್ ತಗೊಂಡು ಬಾರೋ ಟೀಪು’ ಅಂದ್ರೆ ಪೇಪರ್ ತರಬೇಕು. ನಾನು ಹೇಳಿದ್ದೆಲ್ಲಾ ಕೇಳ್ಕೊಂಡು ನನ್ನ ಹಿಂದೆ-ಮುಂದೆ ಬಾಲ ಅಲ್ಲಾಡಿಸ್ಕೊಂಡು ತಿರುಗಬೇಕು.

ನಂಗೆ ಟಿವಿ ನೋಡೋದು ಅಂದ್ರೂ ಇಷ್ಟಾನೇ. ಏನೇ ಪ್ರೊಗ್ರಮ್ ಇದ್ರೂ ಸರಿಯೇ.

ಅಮ್ಮನ ಕಿವೀಲಿ, ಅಮ್ಮಂಗೆ ಗೊತ್ತಾಗದ ಹಂಗೆ 'ಭುಸ್’ ಅಂತ ಗಾಳಿ ಊದೋದು. ಎಲ್ಲಕ್ಕಿಂತ ಹೆಚ್ಚಾಗಿ, ಹಾಡು ಹೇಳೋದು. ಯಾಕೆ ಅಂದ್ರೆ ನಂಗೆ ತುಂಬಾ ಜೋರಾಗಿ ಹಾಡೋಕೆ ಬರುತ್ತೆ. ಯಾವಾಗ್ಲೂ ಯುಧ್ಧದಲ್ಲಿ ಗೆಲ್ಲುವ ಸೈನಿಕರ ಕಥೆ ಕೇಳೋದು. ಕನ್ನಡಿ ಎದುರುಗಡೆ ನಿಂತುಕೊಂಡು ಉಲ್ಟಾ-ಪಲ್ಟಾ ಮುಖ ತಿರುಚಿ ಸರ್ಕಸ್ ಜೋಕರ್ ಥರ ನಗೋದು. ನನಗೆ ಜಿಂಕೆ ಮರಿ ಕಥೆ ಓದೋದು ಅಂದ್ರೆ ಇಷ್ಟ. ಅದರ ಕೊಂಬು, ಪಿಳಿ-ಪಿಳಿ ಕಣ್ಣು, ಪುಟ್ಟ ಪುಟ್ಟ ಕಾಲು ಎಲ್ಲಾ ಇಷ್ಟ. ನಾವು ದೊಡ್ಡ ಮನೆಗೆ ಹೋದ ತಕ್ಷಣ ಜಿಂಕೆ ಮರಿ ಸಾಕ್ತೀವಿ. ನಮ್ಮ ಬಚ್ಚಲು ಮನೇಲಿ ಕಟ್ಟಿ ಹಾಕ್ತೀನಿ ಅದನ್ನ.

ಹೊಳೆಲ ಈಜೋದು, ಆಳ ಇಲ್ಲದೇ ಇರೋ ಕಡೆ. ಕಂಡ ಕಂಡವರಿಗೆಲ್ಲಾ phone ಮಾಡೋದು. ಸುತ್ತಿಗೆ ಉಳಿ ತಗೊಂಡು ಕುಟ್ಟೋದು. ಓದುವಾಗ ಏನಾದ್ರೂ ತಿನ್ನೋದು.
ಹಸಿರು ಹಾವು, ಓತಿಕ್ಯಾತ, ಕಪ್ಪೆ. ಎಷ್ಟು ಚುರುಕು ಇವು. ಒಂದಾದರೂ ಯಾವಗಲೂ ನನ್ನ ಜೇಬಿನಲ್ಲಿ ಇರಬೇಕು ಅಂತ ನಂಗೆ ಆಸೆ. ಆಹಾ! ಊಟ ಮಾಡುವಾಗ ಎದುರುಗಡೆ ಹಸಿರು ಹಾವು ಇದ್ದರೆ ಎಷ್ಟು ಚೆನ್ನ. 'ಛೀ! ಅದೇನದು ಹಾವು! ಅಡಿಗೆ ಮನೇಲಿ!’ ಅಂತ ಅಜ್ಜಿ ಹೆದರಿ ಕಿರುಚುತ್ತಿರಬೇಕು.

ನಗು. ಒಮ್ಮೊಮ್ಮೆ ನಂಗೆ ನಗಬೇಕು ಅಂತಾನೆ ಅನ್ನಿಸೋಲ್ಲ, ಆದ್ರೆ ನಾನು ನನ್ನನ್ನೇ ನಗಿಸ್ಕೋತೀನಿ. ಯಾಕೆ ಅಂದ್ರೆ ನನಗೆ ನಗು ಬಹಳ ಇಷ್ಟ.
ನಂಗೆ ಈ ಕಡೆ ಇಂದ ಆ ಕಡೆ ಝಿಂಗ್-ಝಾಂಗನೆ ನೆಗೆದಾಡುವುದು ತುಂಬಾ ಇಷ್ಟ, ಆದ್ರೆ ನಂಗೆ ತುಂಬಾ ಖುಷಿಯಾಗಿರಬೇಕು ಅಷ್ಟೆ. ಒಂದು ದಿನ ನಾನು, ಅಪ್ಪ zoo ಗೆ ಹೋಗಿದ್ವಿ, ನಾನು ಝಿಂಗ್-ಝಾಂಗ್ ಅಂತ ಬೀದೀಲೆಲ್ಲಾ ಕುಣಿದಾಡ್ತಿದ್ದೆ.
"ಏನಪ್ಪಾ ಏನು ವಿಷಯ?" ಕೇಳಿದ್ರು ಅಪ್ಪ.
"ನಾನು ನೆಗೆದಾಡುತಾ ಇದೀನಿ. ಯಾಕೆ ಅಂದ್ರೆ ನೀನು ನನ್ನ ಅಪ್ಪ!"
ಅಪ್ಪಂಗೆ ಅರ್ಥ ಆಯಿತು.

ನಂಗೆ zoo ಗೆ ಹೋಗೋದು ಅಂದ್ರೆ ಇಷ್ಟ. ಅಲ್ಲಿ ಸಖತ್ ಆಗಿರೋ ಆನೆಗಳು ಇರುತ್ತವೆ. ಅಲ್ಲೊಂದು ಆನೆ ಮರಿನೂ ಇದೆ. ನಾವು ದೊಡ್ಡ ಮನೆಗೆ ಹೊದ ತಕ್ಷಣ ಆನೆ ಮರಿ ತೊಗೋತೀವಿ. ನಾನು ನಮ್ಮ ಆನೆ ಮರಿಗೆ ಒಂದು ಗ್ಯಾರೇಜು ಕಟ್ಟುತ್ತೀನಿ.
ಕಾರು ಮುಂದೆ ಹೋಗೋವಾಗ ಹಿಂದಿನ ಸೀಟಿನಲ್ಲಿ ಕುಳಿತು ರೋಡ್ ನೋಡೋಕೆ ಇಷ್ಟ. ಪೆಟ್ರೋಲ್ ವಾಸನೆ ನಂಗೆ ಇಷ್ಟ. ಐಸ್-ಕ್ರೀಮ್ ಗಾಡಿಯವನ ಹತ್ತಿರ ಐಸ್-ಕ್ರೀಮ್ ತಿನ್ನೋಕೆ ಇಷ್ಟ. ಸೋಡಾ ಕುಡಿದಾಗ ಕಣ್ಣು ಕಿವಿ ಮೂಗಿನಲ್ಲಿ ಬಿಸಿ ಗಾಳಿ ಬರುತ್ತಲ್ಲಾ, ಅದು ಭಾರಿ ಮಜಾ.
ನಂಗೆ ಕುದುರೆ ಅಂದ್ರೆ ಇಷ್ಟ. ಅದರಲ್ಲೂ ಬಿಳಿ ಕುದುರೆ. ನಾವು ದೊಡ್ಡ ಮನೆಗೆ ಹೋದಾಗ....

Rating
No votes yet

Comments