ತಮಸಾ ನದೀ ತೀರದಲ್ಲಿ - ವಾಲ್ಮೀಕಿ
ರಾಮಾಯಣಕ್ಕೆ ಕಾರಣವಾದ ಘಟನೆ ನಿಮಗೆಲ್ಲ ಗೊತ್ತೇ ಇದೆ . ಅದೇ , ಹಕ್ಕಿ ಜೋಡಿ , ಬೇಡ ಒಂದನ್ನು ಕೊಲ್ಲುವದು , ಇನ್ನೊಂದರ ವಿರಹವೇದನೆಯಿಂದ ವಿಚಲಿತನಾದ ವಾಲ್ಮೀಕಿ ಮಹರ್ಷಿ ಆ ಬೇಡನನ್ನು ಶಪಿಸುವದು .ಇದೆಲ್ಲ ಸರಿ , ಆದರೆ ಆ ಶಾಪಕ್ಕೂ ರಾಮಾಯಣ ರಚನೆಗೂ ಸಂಬಂಧ ಸ್ಪಷ್ಟವಾಗಿ ನಿಮಗೆ ತಿಳಿದಿರಲಿಕ್ಕಿಲ್ಲ ಅಲ್ಲವೇ ? ನಾನು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದನ್ನು ಇಲ್ಲಿ ಬರೆಯುತ್ತಿರುವೆ.
ಹಕ್ಕಿಯನ್ನು ಕೊಂದು ಇನ್ನೊಂದರ ನೋವಿಗೆ ಕಾರಣವಾದ ಬೇಡನನ್ನು ನೀನೆಂದೂ ಉದ್ಧಾರ ಆಗೋದು ಬೇಡ ( ಮಾ ನಿಷಾದ ... ) ಎಂದು ಛಂದೋಬದ್ಧವಾಗಿ ಶಪಿಸಿದ ವಾಲ್ಮೀಕಿ ನಂತರ ತಾನು ಶಾಪ ಕೊಟ್ಟಿದ್ದಕ್ಕೆ ನೊಂದುಕೊಳ್ಳುತ್ತಾನೆ. ತಾನು ಮಾಡಿದ್ದು ಸರಿಯೇ ? ಹಕ್ಕಿಯ ಕೊಲ್ಲುವಿಕೆ , ಇನ್ನೊಂದು ಹಕ್ಕಿಗೆ ಅಗಲಿಕೆಯನ್ನುಂಟು ಮಾಡಿದ್ದು ತನ್ನನ್ನು ವಿಚಲಿತಗೊಳಿಸಿದ್ದು ನಿಜ .. ಆದರೆ ತಾನು ಇದೇನು ಮಾಡಿಬಿಟ್ಟೆ ?
ಅವನಿಗೆ ಹಕ್ಕಿ , ಬೇಡ , ತಾನು ಬೇರೆ ಬೇರೆ ಅಲ್ಲ ; ಹಕ್ಕಿಯ ನೋವು ಅವನ ನೋವೂ ಕೂಡ ; ಇಂಥ ಸೂಕ್ಷ್ಮ ಮನಸ್ಸಿನ ಆತನಿಗೆ ನಂತರ ಭೆಟ್ಟಿಯಾದ ಬ್ರಹ್ಮನು ನೀನು ಮಾನವ ಸ್ವಭಾವವನ್ನು , ಸಂಸಾರದ ಆಗುಹೋಗುಗಳನ್ನು ಅರಿತುಕೊಳ್ಳಬಲ್ಲವನಾದ್ದರಿಂದ , ಆದರ್ಶಪುರುಷ ಶ್ರೀ ರಾಮಚಂದ್ರನ ಕುರಿತು ನೀನೇ ಕಾವ್ಯವನ್ನು ರಚಿಸು . ಈ ಶಾಪವು ಕಾವ್ಯವಾಗಲಿ ಹೊರತು ಅನ್ಯಥಾ ಆಗದಿರಲಿ. ನಿನ್ನ ಸ್ವಭಾವದಿಂದಾಗಿ ಈ ರಾಮಾಯಣದ ಕಥೆಯನ್ನು ಅಂಗೈಯಲ್ಲಿನ ನೆಲ್ಲಿಯ ಹಾಗೆ - ಅದರಲ್ಲಿನ ಎಳೆಗಳು ಕಣ್ಣಿಗೆ ಕಾಣುವ ಹಾಗೆ - ಸ್ಪಷ್ಟವಾಗಿ ಊಹಿಸಬಲ್ಲೆ ಎಂದು ಒಪ್ಪಿಸುತ್ತಾನೆ.
ಎಷ್ಟು ಜನ ಇಂಥ ಘಟನೆಗಳನ್ನು ನೋಡಿರಲಿಕ್ಕಿಲ್ಲ ; ನಮಗೇನು ಸಂಬಂಧ ? ಎಂದು ಸುಮ್ಮನೆ ಮುಂದಕ್ಕೆ ಹೋಗಿರಲಿಕ್ಕಿಲ್ಲ ?
ಇಲ್ಲಿ ಒಂದು ಹಿಂದಿ ಹಾಡಿನ ಸಾಲು ನೆನಪಾಗುವದು
- ಹಜಾರೋ ಗಂ ಹೈ ಇಸ್ ದುನಿಯಾಮೆ , ಅಪನೇ ಭೀ , ಪರಾಯೇ ಭೀ ...
( ಈ ಜಗತ್ತಿನಲ್ಲಿ ಸಾವಿರಾರು ದುಃಖಗಳಿವೆ , ಕೆಲವು ನಮ್ಮವು , ಕೆಲವು ಬೇರೆಯವರವು )